ಶನಿವಾರ, ಜನವರಿ 25, 2020
27 °C

‘ಅಂಗವಿಕಲರು ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಂಗವಿಕಲರು ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಿ’

ಬಳ್ಳಾರಿ: ಅಂಗವಿಕಲರು ಆತ್ಮಸ್ಥೈರ್ಯ ವೃದ್ಧಿಸಿ­ಕೊಳ್ಳುವ ಮೂಲಕ ಉನ್ನತ ಗುರಿ ಇರಿಸಿಕೊಂಡು ಅದರ ಸಾಕಾರಕ್ಕೆ ಯತ್ನಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಸಲಹೆ ನೀಡಿದರು.ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗ­ದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಂಗವಿಕಲರನ್ನು ಸಮಾಜದ ಮುಖ್ಯ­ವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ  ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗಕ್ಕೆ ಶ್ರಮಿಸಬೇಕು. ಮಾನಸಿಕವಾಗಿ ಸಬಲರಾಗುವ ಮೂಲಕ ದೈಹಿಕ ನ್ಯೂನತೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು ಎಂದು ಅವರು ಹೇಳಿದರು.ಅಂಗವಿಕಲರಲ್ಲೂ ಅನೇಕ ಪ್ರತಿಭಾವಂತರಿದ್ದು, ಅವರಂತೆಯೇ ಇತರರೂ ಆತ್ಮಸ್ಥೈರ್ಯ­ದೊಂದಿಗೆ ಗುರಿ ಸಾಧಿಸಬೇಕು ಎಂದು ಜಿ.ಪಂ. ಸಿಇಒ ಮಂಜುನಾಥ ನಾಯ್ಕ ತಿಳಿಸಿದರು.ಅಂಗವಿಕಲರನ್ನು ವಿಶಾಲ ಮನೋಭಾವದಿಂದ ನೋಡುತ್ತ ಅವರ ಅಭ್ಯುದಯಕ್ಕೆ ಸಮಾಜದ ಪ್ರತಿಯೊಬ್ಬರೂ ಸಹಾಯಹಸ್ತ ನೀಡಬೇಕು. ಅವರಲ್ಲಿ ಮನೋಸ್ಥೈರ್ಯ ತುಂಬಿ ಇತರರಂತೆ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಅನುದಾನಿತ ಶಿಕ್ಷಣ ಸಂಸ್ಥೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಹನುಮಂತಪ್ಪ ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೀರಣ್ಣ ಜತ್ತಿ, ರಾಜ್ಯ ಅಂಗವಿಕಲರ ಪರಿಷತ್ ಸದಸ್ಯ ಸುಬ್ಬಾರಾವ್, ತಮನ್ನಾ ಸಂಸ್ಥೆಯ ಆರತಿ, ಆನಂದ ನಾಯ್ಕ, ಅಂಗವಿಕಲರ ಕಲ್ಯಾಣಾಧಿಕಾರಿ ಮೆಹಬೂಬ್ ಷರೀಫ್, ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಸ್ವಾಗತಿಸಿದರು. ಕೆ. ಕೊಟ್ರಪ್ಪ ಕಾರ್ಯಕ್ರಮ ನಿರೂಪಸಿದರು. ಅಂಗವಿಕಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ್ ವಂದಿಸಿದರು.ಇದೇ ಸಂದರ್ಭ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಊರುಗೋಲು, ಶ್ರವಣ ಸಾಧನ, ಗಾಲಿ ಕುರ್ಚಿ ವಿತರಿಸಲಾಯಿತು. ಅಂತರಾಷ್ಟ್ರೀಯ ಕುಬ್ಜ ಕ್ರೀಡಾಪಟು ಹೊಸಪೇಟೆಯ ಎ. ಸಿದ್ದಲಿಂಗಪ್ಪ ಹಾಗೂ ರಾಷ್ಟ್ರ ಮಟ್ಟದ ಕಿಶೋರ ವಿಭಾಗದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕಂಪ್ಲಿಯ ರುದ್ರೇಶ್ ಅವರನ್ನು ಸನ್ಮಾನಿಸಲಾಯಿತು.‘ಅಂಗವಿಕಲರೊಂದಿಗೆ ಸಹಾನುಭೂತಿ ಇರಲಿ’

ಹೊಸಪೇಟೆ: ‘
ಅಂಗವಿಕಲರೊಂದಿಗೆ ಸಾರ್ವಜನಿಕರು ಸಹಾನುಭೂತಿಯಿಂದ ವರ್ತಿಸಬೇಕು’ ಎಂದು 3ನೇ ಹೆಚ್ಚುವರಿ ಸೆಷನ್ಸ್‌ ಮತ್ತು ಜಿಲ್ಲಾ ನ್ಯಾಯಾಧೀಶ ಶಿವಣ್ಣ ಸಲಹೆ ಮಾಡಿದರು.ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಂಗವಿಕಲರ ಸಂಘ, ನಗರ ಘಟಕ, ಜನನಿ ಅಂಗವಿಕಲರ ಪಾಲಕರ ಸಂಘ, ತಾಲ್ಲೂಕು ಗ್ರಾಮೀಣ ಅಂಗವಿಕಲರ ಸಂಘಗಳ ಆಶ್ರಯದಲ್ಲಿ ಅಂಗವಿಕಲ ದಿನಾಚರಣೆ ಅಂಗವಾಗಿ ನಗರದಲ್ಲಿ ನಾಲ್ಕನೇ ಅಂಗವಿಕಲ ಮಕ್ಕಳ ಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.‘ಅಂಗವಿಕಲರಿಗೆ ಸರ್ಕಾರ ಹಲವು ಯೋಜನೆಗಳ ಅಡಿಯಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅಂಗವಿಕಲರು ಸ್ವಾವಲಂಭಿಯಾಗಿ ಬದುಕಲು ಮುಂದಾಗಬೇಕು. ಅಂಗ ವೈಕಲ್ಯ ಶಾಪವಲ್ಲ. ಅದೊಂದು ಸವಾಲು ಎಂದು ಸ್ವೀಕರಿಸಿ ಜೀವನ ನಡೆಸಬೇಕು’ ಎಂದು ಹೇಳಿದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್ ಮಾತನಾಡಿ, ‘ಅಂಗವಿಕಲರಿಗೆ ಸರ್ಕಾರ ಸೌಲಭ್ಯ ನೀಡಬೇಕೆ ಹೊರತು ಅನುಕಂಪವಲ್ಲ. ಅಂಗವಿಕಲರಿಗಾಗಿ ಇರುವ ಸರ್ಕಾರದ ಯೋಜನೆಗಳು ಇನ್ನೂ ಕೇವಲ ಕಾಗದದಲ್ಲಿಯೇ ಉಳಿದುಕೊಂಡಿವೆ. ಅವು ಅರ್ಹ ಅಂಗವಿಕಲರಿಗೆ ತಲುಪಬೇಕು’ ಎಂದು ಹೇಳಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಹತ್ತಿಕಾಳು ಪ್ರಭು ಸಿದ್ದಪ್ಪ, ವಕೀಲರ ಸಂಘದ ಅಧ್ಯಕ್ಷ ಕೆ.ರತ್ನಾಕರ ರಾವ್, ಕಾರ್ಯದರ್ಶಿ ಕೊಟ್ರೇಶ್ ಹಿರೇಮಠ, ಡಿವೈಎಸ್ಪಿ ಡಿ.ಡಿ. ಮಾಳಗಿ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಮತ್ತಿತರರು ಭಾಗವಹಿಸಿದ್ದರು.ಅಂಗವಿಕಲರ ಸಂಘದ ನಗರ ಘಟಕದ ಅಧ್ಯಕ್ಷ ಜಿ.ಮುಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಅವರು ಅಂಗವಿಕಲರೊಬ್ಬರಿಗೆ ತ್ರಿಚಕ್ರವಾಹನ ಹಾಗೂ ಅಂಗವಿಕಲೆಯೊಬ್ಬಳಿಗೆ ಉಚಿತ ಹೊಲಿಗೆಯಂತ್ರ ನೀಡಿದರು.ಶಮೀನಾ ಕೌಸರ್ ಸ್ವಾಗತಿಸಿದರು. ಹುಲಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ್ ನಿರೂಪಿಸಿದರು.

ಪ್ರತಿಕ್ರಿಯಿಸಿ (+)