ಭಾನುವಾರ, ಜನವರಿ 19, 2020
27 °C

‘ಅಡ್ಡಪಲ್ಲಕ್ಕಿ ಉತ್ಸವ ಇಷ್ಟವಿಲ್ಲ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಡ್ಡಪಲ್ಲಕ್ಕಿ ಉತ್ಸವ ಇಷ್ಟವಿಲ್ಲ’

ಬೆಂಗಳೂರು: ‘ಜ್ಞಾನಪೀಠ ಪ್ರಶಸ್ತಿಯ ಹೆಸರಿನಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ವಿಚಾರ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಲು ಬರಲಿಲ್ಲ’ ಎಂದು ನಾಟಕಕಾರ ಗಿರೀಶ್‌ ಕಾರ್ನಾಡ್‌ ತಿಳಿಸಿದರು.ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಈ ಬಗ್ಗೆ ಕಾರ್ಯಕ್ರಮದ ಆಯೋಜಕರಿಗೆ ಮೊದಲೇ ತಿಳಿಸಿದ್ದೆ. ಆದರೂ ಅವರು ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ದಾರೆ’ ಎಂದರು.‘ನನಗೆ ಜ್ಞಾನಪೀಠ ಪ್ರಶಸ್ತಿ ಬಂದು 13 ವರ್ಷ ಕಳೆದಿದೆ. ಈ ಪ್ರಶಸ್ತಿಯ ಕಾರಣಕ್ಕೆ ಸಾಹಿತಿಗಳನ್ನು ಮೆರೆಸುವುದನ್ನು ಕಂಡು ನನಗೆ ಸಾಕಾಗಿದೆ. ಸನ್ಮಾನ ಎನ್ನುವುದು ಸರ್ಕಸ್‌ನಂತಾಗಿದೆ. ಉಳಿದ ಸಾಹಿತಿಗಳಿಗೆ ಹೇಗೋ ಏನೋ ನನಗಂತೂ ಸನ್ಮಾನ ಸಾಕಾಗಿದೆ’ ಎಂದರು.‘ಜ್ಞಾನಪೀಠ ಪ್ರಶಸ್ತಿಯಿಂದಲೇ ಸಾಹಿತ್ಯದ ಮೌಲ್ಯಮಾಪನ ಮಾಡುವುದು ತಪ್ಪು. ಗೋಪಾಲಕೃಷ್ಣ ಅಡಿಗ, ಎಸ್‌.ಎಲ್‌.ಭೈರಪ್ಪ, ಯಶವಂತ ಚಿತ್ತಾಲ ಸೇರಿದಂತೆ ಅನೇಕ ಉತ್ತಮ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ಆದರೂ ಈ ಪ್ರಶಸ್ತಿ ಪುರಸ್ಕೃತರ ಬಗ್ಗೆ ಯಾಕಿಷ್ಟು ವಿಜೃಂಭಣೆಯೋ ಗೊತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.ಈ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಕಾರ್ನಾಡರು ಮೊದಲೇ ಹೇಳಿದ್ದರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದರೆ ಬರಬಹುದೇನೋ ಎಂಬ ಕಾರಣಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿದೆವು. ಆ ನಂತರವೂ ಅವರು ಬರಲು ಒಪ್ಪಲಿಲ್ಲ. ಅವರು ಬೇಡ ಎಂದಾಗಲೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ದು ನಮ್ಮ ತಪ್ಪು. ಈ ಬಗ್ಗೆ ಕಾರ್ನಾಡರಲ್ಲಿ ಕ್ಷಮೆ ಕೇಳಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)