ಸೋಮವಾರ, ಜೂನ್ 14, 2021
27 °C

‘ಅನ್ನ ಭಾಗ್ಯದಂತೆ ಮೇವು ಭಾಗ್ಯ ಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ಅಕಾಲಿಕವಾಗಿ ಸುರಿದ ಮಳೆ­ಯಿಂದಾಗಿ ಹಿಂಗಾರಿ ಹಂಗಾಮಿಗೆ ಬಿತ್ತನೆ ಮಾಡಿದ ಬೀಜದಷ್ಟು ಕೂಡಾ ಧಾನ್ಯ ಬೆಳೆಗಾರರ ಕೈಗೆಟುಕದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಮೇವು ಕೊಳೆತು ಹೋಗಿ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇಯಿಸಲು ಮೇವಿನ ಕೊರತೆ­ಯಾಗಿದೆ. ಬಡವರಿಗೆ ಸರ್ಕಾರ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಂತೆ ಜಾನುವಾರುಗಳಿಗೆ ‘ಮೇವು ಭಾಗ್ಯ’ ಯೋಜನೆ ರೂಪಿಸುವಂತೆ ಇಲ್ಲಿನ ರೈತರು ಸರ್ಕಾರವನ್ನು ಒತ್ತಾಯಿಸಿದರು.ಬುಧವಾರ ಪಟ್ಟಣದ ಬಸವ ವೃತ್ತದಿಂದ ಮಳೆಗೆ ಕೊಳೆತು ಹೋದ ಬಿಳಿ ಜೋಳ, ಕಡಲೆ, ಗೋದಿ, ಕುಸುಬೆ, ಅಗಸೆಯ ಬೆಳೆಗಳನ್ನು ತಲೆಯ ಮೇಲೆ, ಭುಜದ ಮೇಲೆ ಹೊತ್ತುಕೊಂಡು ಹಲಗೆ ಬಾರಿಸುತ್ತ ‘ಬೇಕೇ ಬೇಕು, ನ್ಯಾಯ ಬೇಕು’ ಎಂದು ಕೂಗುತ್ತ ಮಿನಿ ವಿಧಾನ ಸೌಧಕ್ಕೆ ಬಂದು ಹೊರಾಂಗಣ­ದಲ್ಲಿ ಸಭೆ ನಡೆಸಿದರು.ಸಭೆಯಲ್ಲಿ ಹಾನಿಗೊಳಗಾದ ಬೆಳೆಗಾರರು ಮಾತನಾಡಿ, ಈ ಹಿಂದೆ ನಾಲ್ಕು ವರ್ಷಗಳ ಕೆಳಗೆ ಅತಿ ವೃಷ್ಟಿಯಿಂದ ಆದ ಅನುಭವವೇ ಇಂದೂ ಕೂಡ ಅಕಾಲಿಕ ಮಳೆಯಿಂದ ನಡೆದು ರೈತರು ಪುನಾ ಅಸಹಾಯಕ ಸ್ಥಿತಿಗೆ ತಲುಪುವಂತಾಗಿದೆ ಎಂದು ಹೇಳಿದರು.

ಚುನಾವಣೆ ನೀತಿ ಸಂಹಿತೆಯನ್ನು ಮುಂದಿಟ್ಟು­ಕೊಂಡು ಸರ್ಕಾರ ರೈತರ ನೆರವಿಗೆ ಧಾವಿಸದೇ ಇರುವುದು ಸಮಂಜಸ­ವಾಗಲಾರದು.ನೀತಿ ಸಂಹಿತೆ ತೆರವುಗೊಳ್ಳುವುದರೊಳಗಾಗಿ ಇಲ್ಲಿನ ಪರಿಸ್ಥಿತಿ ತೀರ ಹದಗೆಟ್ಟು ಹೋಗಿರು­ತ್ತದೆ. ಬೇಕಿದ್ದರೆ ಚುನಾವಣಾ ಆಯೋಗಕ್ಕೆ ರಾಜ್ಯದಲ್ಲಿಯ ಪರಿಸ್ಥಿತಿ­ಯನ್ನು ವಿವರಿಸಿ ಚುನಾವಣೆಯನ್ನೇ ಮುಂದೂಡುವಂತೆ ಸೂಚಿಸಬೇಕು. ರಾಜ್ಯಪಾಲರು ಈ ನಿಟ್ಟಿನಲ್ಲಿ ಮಧ್ಯೆ ಪ್ರವೇಶಿಸಿ ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡಬೇಕಲ್ಲದೇ ಹಾನಿಗೊಳಗಾಗಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.ರೈತರಿಗೆ ಪರಿಹಾರ ನೀಡಬೇಕಲ್ಲದೇ ಸಾಲ ಮನ್ನಾ ಮಾಡಬೇಕು. ಜೊತೆಗೆ ದಕ್ಷಿಣ ಕರ್ನಾಟಕದಲ್ಲಿ ರೇಷ್ಮೆ ಬೆಳೆಗಾರರ ಸಾಲ ಮನ್ನಾ ಮಾಡಿದಂತೆ ಉತ್ತರ ಕರ್ನಾಟಕದ ರೈತರ ಸಾಲವನ್ನು ಮನ್ನಾ ಮಾಡಿ ಪ್ರಾದೇಶಿಕ ಅಸಮಾನತೆ­ಯನ್ನು ಹೋಗಲಾಡಿಸ­ಬೇಕೆಂದು ಒತ್ತಾಯಿಸಿದ ರೈತರು, ಕೈಗೆ ಬಂದದ್ದು ಬಾಯಿಗೆ ಬರದಂತಾದ ಈ ಸಂದರ್ಭ­ದಲ್ಲಿ ರೈತರ ನೆರವಿಗೆ ಧಾವಿಸಲು ಸರ್ಕಾರ ಹಿಂದೇಟು ಹಾಕಕೂಡ­ದು ಎಂದು ಹೇಳಿದರು.ತಹಶೀಲ್ದಾರ್‌ ಎಸ್.ಬಿ. ಕೂಡಲಗಿಯವರ ಮುಖಾಂತರ  ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಆರ್.ಎಚ್. ಜಕ್ಕನಗೌಡ್ರ, ವಿ.ಜಿ. ರೇವಡಿಗಾರ, ಶ್ರೀಶೈಲಯ್ಯ ಯಂಕಂಚಿ, ಶಿವಪ್ಪ ಆವಟಿ, ಸಿದ್ದು ಗಡ್ಡದವರ, ಸಿದ್ಧರಾಮಪ್ಪ ದಳವಾಯಿ, ವಿವೇಕಾನಂದ ಕೊಲ್ಹಾರ, ಮುತ್ತು ಪಾಲಂಕಮಠ, ಸಂಗಣ್ಣ ಕಂದಗಲ್ಲ, ಸಿದ್ದು ಮೇಟಿ, ಪಟ್ಟಣ ಪಂಚಾಯ್ತಿ ಸದಸ್ಯ ದಯಾನಂದ ಶಂಭೋಜಿ, ಚಂದ್ರಶೇಖರ ಕೋಟಿ, ಯಲ್ಲಪ್ಪ ಮೇಟಿ, ಶಿವಾನಂದ ಸಾರಾವರಿ, ಬಸವರಾಜ ಗೋಕಾಕ, ಯಲ್ಲಪ್ಪ ಮೇಟಿ, ನೂರಲಿ ಬಾಗವಾನ್, ಎಂ.ಎಂ. ಶಂಭೋಜಿ ಮುಂದಾಳತ್ವ ವಹಿಸಿದ್ದರು.‘ಪರಿಹಾರಧನ ನೀಡಿಕೆ ಸೂತ್ರ ಬದಲಾಗಲಿ’

ಜಮಖಂಡಿ: ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಗೆ ಬೆಳೆಹಾನಿ ಅನುಭವಿಸಿ­ರುವ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಪಡೆಯ ಜಿಲ್ಲಾ ಘಟಕದ ಪದಾಧಿಕಾರಿ­ಗಳು ರಾಜ್ಯ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.ನಾಶವಾಗಿರುವ ಪ್ರತಿ ಹೆಕ್ಟೇರ್‌ ವಾರ್ಷಿಕ ಬೆಳೆಗೆ ₨ 12 ಸಾವಿರ, ನೀರಾವರಿ ಬೆಳೆಗೆ ₨ 8 ಸಾವಿರ ಹಾಗೂ ಮಳೆಯಾಶ್ರಿತ ಬೆಳೆಗೆ ₨ 4.5 ಸಾವಿರ ಪರಿಹಾರಧನ ನೀಡುವ ಸೂತ್ರವನ್ನು ಸರ್ಕಾರ ರಚಿಸಿದೆ. ಆದರೆ ಅದರಿಂದ ರೈತರಿಗೆ ಏನೂ ಪ್ರಯೋಜನ ಅಗುವು­ದಿಲ್ಲ. ಕಾರಣ ಪರಿಹಾರಧನ ನೀಡಿಕೆ ಸೂತ್ರವನ್ನು ಬದಲಾಯಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸ­ಲಾಗಿದೆ.ತಮ್ಮ ಮಕ್ಕಳಿಗೆ, ಬಂಧುಗಳಿಗೆ ಟಿಕೆಟ್‌ ಕೊಡಿಸುವ ತವಕದಲ್ಲಿರುವ ರಾಜಕಾರಣಿಗಳಿಗೆ ರೈತರಿಗೆ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ಕೂಡ ಇಲ್ಲ. ಲೋಕಸಭಾ ಚುನಾ­ವಣೆಯ ಸಿದ್ಧತೆಯಲ್ಲಿ ಮುಳುಗಿ­ರುವ ರಾಜಕಾರಣಿಗಳಿಗೆ ರೈತರ ಕಣ್ಣೀರು ಕಾಣಿಸುತ್ತಿಲ್ಲ ಎಂದು ಮನವಿಯಲ್ಲಿ ಟೀಕಿಸಲಾಗಿದೆ.ಬೆಳೆಹಾನಿ ಅನುಭವಿಸಿ ಸಂಕಷ್ಟ­ದಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಬರಬೇಕು. ಇಲ್ಲದಿದ್ದರೆ ಕರ್ನಾಟಕ ನವನಿರ್ಮಾಣ ಪಡೆಯ ಕಾರ್ಯಕರ್ತರು ಇಡೀ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ­ಯಲ್ಲಿ ಎಚ್ಚರಿಸಲಾಗಿದೆ.

ಎಸಿ ಕಚೇರಿಯ ಉಪತಹಶಿಲ್ದಾರ್‌ ಎಸ್‌.ಬಿ. ಅನ್ಸಾರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಕರ್ನಾಟಕ ನವ­ನಿರ್ಮಾಣ ಪಡೆಯ ಜಿಲ್ಲಾ ಘಟಕದ ಸಂಚಾಲಕ ಶಿವಾನಂದ ಪೂಜಾರಿ, ಗ್ರಾಮೀಣ ಘಟಕದ ಅಧ್ಯಕ್ಷ ಅಪ್ಪಾಸಾಬ ಕೋರಿ, ಸಂತೋಷ ಮೋರೆ, ಅನಿಲ ದಳವಾಯಿ, ಹನಮಂತ ಬಾಡಗಿ, ಸಂಜು ಪಾನಕನವರ, ಸುನೀಲ ಜೋಗದಂಡೆ, ಯಮನಪ್ಪ ಮೇತ್ರಿ ಇದ್ದರು.‘ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಲಿ’

ಜಮಖಂಡಿ: ಅಕಾಲಿಕ ಮಳೆಯಿಂದ ಬೆಳೆಹಾನಿ ಅನುಭವಿಸಿ ನೊಂದಿರುವ ರೈತರಿಗೆ ಸರಿಯಾದ ಪರಿಹಾರಧನ ದೊರೆಯಬೇಕಾದರೆ ಅಧಿಕಾರಿ­ಗಳು ಪ್ರತಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ರಾಜುಗೌಡ ಪಾಟೀಲ ಒತ್ತಾಯಿಸಿದ್ದಾರೆ.ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಕುಳಿತು ಬೆಳೆಹಾನಿ ಕುರಿತು ವರದಿ ಸಿದ್ಧಪಡಿಸಬಾರದು. ಬದಲಾಗಿ ಸಾಕ್ಷಾತ್‌ ಸಮೀಕ್ಷೆ ಕೈಗೊಳ್ಳಬೇಕು. ಅಂದಾಗ ಮಾತ್ರ ರೈತರಿಗೆ ನ್ಯಾಯ ದೊರೆಯುತ್ತದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.