ಗುರುವಾರ , ಫೆಬ್ರವರಿ 25, 2021
19 °C

‘ಅಯೋಗ್ಯ ಎನ್ನಲು ಜೋಶಿಗೆಷ್ಟು ಧೈರ್ಯ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಯೋಗ್ಯ ಎನ್ನಲು ಜೋಶಿಗೆಷ್ಟು ಧೈರ್ಯ?’

ಬೆಂಗಳೂರು: ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನ್ನಂಥವರನ್ನು ಕಂಡರೆ ಬಿಜೆಪಿಯವರಿಗೆ ಕಣ್ಣುರಿ. ರಾಜ್ಯದ ಗೃಹ ಸಚಿವ ಅಯೋಗ್ಯ ಎಂದು ಹೇಳಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ಅದೆಷ್ಟು ಧೈರ್ಯ’ ಎಂದು ಕೆ.ಜೆ. ಜಾರ್ಜ್‌ ಕಿಡಿಕಾರಿದರು.ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಮುಗಲಭೆಗಳ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸುವ ಮೂಲಕ ನಮ್ಮ ಸರ್ಕಾರ ಯಾವುದೇ ಸಮುದಾಯವನ್ನು ತುಷ್ಟೀಕರಿಸುವ ಯತ್ನ ನಡೆಸಿಲ್ಲ’ ಎಂದರು.

‘ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‌ಡಿ) ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಮೊಕದ್ದಮೆ ಹಿಂಪಡೆಯುವುದು ರಾಜ್ಯ ಸರ್ಕಾರ ಎಸಗಿದ ರಾಷ್ಟ್ರದ್ರೋಹದ ಕೆಲಸ, ಜಾರ್ಜ್‌ ಅಯೋಗ್ಯ ಗೃಹ ಸಚಿವ’ ಎಂದು ಜೋಶಿ ಆರೋಪಿಸಿದ್ದರು.‘ಜೋಶಿಯವರು ನನ್ನ ಮೇಲೆ ವೈಯಕ್ತಿಕವಾಗಿ ಆರೋಪ ಮಾಡಲಿ. ಆದರೆ ನಾನಿರುವ ಸಾಂವಿಧಾನಿಕ ಹುದ್ದೆಯ ಬಗ್ಗೆ ಅವರು ಲಘುವಾಗಿ ಮಾತನಾಡಬಾರದು. ಬಿಜೆಪಿ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಒಬ್ಬರು ಜೈಲಿಗೆ ಹೋಗಿದ್ದರಲ್ಲವೇ? ಬಿಜೆಪಿಯವ

ರೆಲ್ಲರೂ ಯೋಗ್ಯರೇ?’ ಎಂದು ಜಾರ್ಜ್‌ ಪ್ರಶ್ನಿಸಿದರು.ಪ್ರಹ್ಲಾದ ಜೋಶಿ ಸಹೋದರನ ವಿರುದ್ಧ ಬ್ಯಾಂಕಿಗೆ ವಂಚನೆ ಮಾಡಿದ ಆರೋಪ ಇತ್ತು. ಸಿಬಿಐ ತನಿಖೆ ನಡೆಸುತ್ತಿತ್ತು. ಆದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಆ ಪ್ರಕರಣ ಬಿದ್ದುಹೋಯಿತು ಎಂದು ಜಾರ್ಜ್‌ ನೆನಪಿಸಿದರು.ಜಯಚಂದ್ರ ತಿರುಗೇಟು

‘ಬಳ್ಳಾರಿಯ ಸುಗ್ಗಲಮ್ಮ ದೇವಸ್ಥಾನ ಧ್ವಂಸಗೊಳಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಬಿಜೆಪಿ ಸರ್ಕಾರ ಇದನ್ನು ಹಿಂಪಡೆಯಿತು. ಆದರೆ ನಾವು ಇಂಥ ಕೆಲಸ ಮಾಡಿಲ್ಲ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿರುಗೇಟು ನೀಡಿದರು.

‘ಅರಣ್ಯ ಇಲಾಖೆಯು ಗಡಿ ಗುರುತನ್ನು ಅಳಿಸಿದ ಪ್ರಕರಣ ರೆಡ್ಡಿ ಅವರ ಮೇಲಿತ್ತು. ಅದನ್ನೂ ಬಿಜೆಪಿ ಸರ್ಕಾರ ಹಿಂಪಡೆಯಿತು. ಆದರೆ ನಾವು ಹಿಂಪಡೆದಿರುವ ಬಹುತೇಕ ಪ್ರಕರಣಗಳು ರೈತರ ಮೇಲೆ, ಕನ್ನಡಪರ ಸಂಘಟನೆಗಳ ಮೇಲೆ ದಾಖಲಿಸಿದ್ದು’ ಎಂದು ವಿವರಿಸಿದರು.

******

ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಬಹುದು. ಆದರೆ ಆ ತೀರ್ಮಾನ ಕೋರ್ಟ್‌ ಪರಿಶೀಲನೆಗೆ ಒಳಪಡುತ್ತದೆ. ಕೋರ್ಟ್‌ ಸಮ್ಮತಿಸಿದರೆ ಮಾತ್ರ ಪ್ರಕರಣ ರದ್ದಾಗುತ್ತದೆ.

ಟಿ.ಬಿ. ಜಯಚಂದ್ರ,
ಕಾನೂನು ಸಚಿವ

ಬಿಜೆಪಿ ಅವಧಿಯಲ್ಲಿ ‘ಖಾನ್‌’, ‘ಇಸ್ಮಾಯಿಲ್‌’ ಎಂಬ ಹೆಸರಿದ್ದವರ ಮೇಲೆ ಕೋಮುಗಲಭೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಎಫ್‌ಐಆರ್‌ನಲ್ಲಿ ಇವರ ವಿಳಾಸವೇ ಇರಲಿಲ್ಲ.

ಕೆ.ಜೆ. ಜಾರ್ಜ್‌,
ಗೃಹ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.