ಬುಧವಾರ, ಜನವರಿ 22, 2020
21 °C

‘ಏಡ್ಸ್‌ ರೋಗಿಗಳನ್ನು ವಿಶ್ವಾಸದಿಂದ ಕಾಣಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಏಡ್ಸ್‌ರೋಗ ಪೀಡಿತರ ಬಗ್ಗೆ ಅಸಡ್ಡೆ ಭಾವನೆ ತೋರುವ ಬದಲು, ಅವರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎಂದು ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ ಹೇಳಿದರು.ಜಿಲ್ಲಾಡಳಿತ, ವಿವಿಧ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಏಡ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಏಡ್ಸ್‌ ರೋಗಿಗಳಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೋಗಿಗಳು ಈ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಶುಚಿತ್ವದ ಸಮಸ್ಯೆಯಿಂದಾಗಿ ನಾನಾ ರೋಗಗಳು ಹರಡುತ್ತವೆ. ಹೀಗಾಗಿ ಎಲ್ಲರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆರತಿ ಬಾನಾವಳಿ ಮಾತನಾಡಿ, ಸ್ವಚ್ಛತೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಸಾರ್ವಜನಿಕರು ಆರೋಗ್ಯದ ಬಗ್ಗೆ ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಇಲಾಖೆಗಳಿಗೆ ಸಹಕರಿಸಬೇಕು ಎಂದು ಹೇಳಿದರು.ನಗರಸಭೆ ಉಪಾಧ್ಯಕ್ಷೆ ಛಾಯಾ ಜಾಂವಕರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ್‌, ಡಾ. ರಮೇಶ, ರೆಡ್‌ಕ್ರಾಸ್‌ ಸಂಸ್ಥೆಯ ನಜೀರ್‌ ಶೇಖ್‌, ಸಮೂಹ ಸಂರಕ್ಷದ ರಮೇಶ ಬಂಡಾರಿ, ಕೂರ್‌ ಸಂಸ್ಥೆಯ ಶಾರದ ಪೂಜಾರಿ, ಏಡ್ಸ್‌ ನಿಯಂತ್ರಣಾಧಿಕಾರಿ ಗಣೇಶ, ಖೈರುನ್ನಿಸಾ ಶೇಖ್‌ ಮತ್ತಿತರರು ಉಪಸ್ಥಿತರಿದ್ದರು.ಯಕ್ಷಗಾನ: ಸಭಾ ಕಾರ್ಯಕ್ರಮದ ನಂತರ ಹೊನ್ನಾವರದ ಗೋಡೆ ನಾರಾಯಣ ತಂಡದವರಿಂದ ಏಡ್ಸ್‌ ಜಾಗೃತಿ ಕುರಿತು ಯಕ್ಷಗಾನ ಪ್ರದರ್ಶನ ನಡೆಯಿತು.ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.ಏಡ್ಸ್‌ ವಿರುದ್ಧ ಜಾಗೃತಿ ಜಾಥಾ

ಶಿರಸಿ:
‘ಏಡ್ಸ್‌ ಅಳಿಸಿ ದೇಶ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಏಡ್ಸ್‌ ವಿರುದ್ಧ ಜಾಗೃತಿ ಮೂಡಿಸುವ ಜಾಥಾ ನಗರದಲ್ಲಿ ನಡೆಯಿತು.

ವಿಶ್ವ ಏಡ್ಸ್‌ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಜಾಥಾಕ್ಕೆ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದರು. ಮಾರಿಕಾಂಬಾ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಏಡ್ಸ್ ಜಾಗೃತಿ ಕುರಿತ ಘೋಷಣಾ ಫಲಕಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.ನಂತರ ಮಾರಿಕಾಂಬಾ ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ, ಪಂಡಿತ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಮಾ ಹೆಗಡೆ, ಡಾ.ಎಚ್.ಎಫ್‌.ಇಂಗಳೆ, ಮಾರಿಕಾಂಬಾ ಕಾಲೇಜಿನ ಪ್ರಾಚಾರ್ಯ ಡಿ.ಎನ್‌.ಭಟ್, ಜೀವನಧಾರಾ ಸಂಸ್ಥೆಯ ರಾಜೇಂದ್ರಕುಮಾರ್‌ ಮಿರಾಂಡಾ ಉಪಸ್ಥಿತರಿದ್ದರು. ಈಶ್ವರ ನಾಯ್ಕ ಸ್ವಾಗತಿಸಿದರು. ಸಿ.ಟಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಉಚಿತ ಆರೋಗ್ಯ ತಪಾಸಣೆ

ಸಿದ್ದಾಪುರ:
‘ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಎಲ್ಲ ಕಡೆ ನಡೆಯಬೇಕು. ಇದರಿಂದ ಹೆಚ್ಚಿನ ಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ’ ಎಂದು ಬೆಂಗಳೂರಿನ ಆಳ್ವ ಫೌಂಡೇಶನ್ ಸಂಚಾಲಕ ನಿವೇದಿತ್ ಆಳ್ವ ನುಡಿದರು.ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ರಾಘವೇಂದ್ರ ಮಠದ ಸಭಾಭವನದಲ್ಲಿ ಆಳ್ವ ಫೌಂಡೇಶನ್ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.‘ಎಲ್ಲ ಕಡೆ ಆರೋಗ್ಯದ ಸಮಸ್ಯೆ ಇರುತ್ತದೆ. ಇಂತಹ ಶಿಬಿರಗಳಿಂತ  ಆರೋಗ್ಯದ ಸಮಸ್ಯೆ ಇರುವ ಜನರಿಗೆ ಉಪಯೋಗವಾಗುತ್ತದೆ’ ಎಂದರು.ಐಎಂಎ ಸಿದ್ದಾಪುರ ಘಟಕದ ಅಧ್ಯಕ್ಷ ಡಾ.ಎಸ್.ಆರ್‌.ಹೆಗಡೆ, ಶಿರಸಿ ಘಟಕದ ಅಧ್ಯಕ್ಷ ಡಾ.ರಾಘವೇಂದ್ರ ಭಟ್ಟ, ಡಾ.ಕೃಷ್ಣಮೂರ್ತಿ ರಾಯ್ಸದ್‌ ಮಾತನಾಡಿದರು. ಸ್ಥಳೀಯ ಲಯನ್ಸ್ ಕ್ಲಬ್ ಘಟಕದ  ಅಧ್ಯಕ್ಷ ನಾಗರಾಜ ಪಾಟೀಲ, ರೋಟರಿ ಕ್ಲಬ್ ಶಿರಸಿ ಘಟಕದ ಅಧ್ಯಕ್ಷ ಶಿವಾನಂದ ಶಿವನಂಚಿ, ಡಾ.ಎಂ.ಪಿ.ಶೆಟ್ಟಿ, ಡಾ.ಶ್ರೀಧರ ವೈದ್ಯ, ಡಾ.ರಾಜು ಭಟ್ಟ, ಡಾ.ವಿ.ಟಿ.ನಾಯ್ಕ, ಡಾ,ಮಹೇಶ ಹೆಗಡೆ, ಪಟ್ಟಣದ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು. ಜಿ.ಪಿ.ಭಾಗವತ್ ಸ್ವಾಗತಿಸಿದರು.ಶಿಬಿರದಲ್ಲಿ ಎಲುಬು, ಕೀಲು, ಮಕ್ಕಳ ಕಾಯಿಲೆಗಳು, ದಂತ ಸಮಸ್ಯೆ, ಚರ್ಮ ರೋಗ, ಅಸ್ತಮಾ, ರಕ್ತದೊತ್ತಡ, ಡಯಾಬಿಟಿಸ್ ಮೊದಲಾದ ಎಲ್ಲ ರೀತಿಯ ರೋಗಗಳ ತಪಾಸಣೆ ನಡೆಸಲಾಯಿತು.

ಪ್ರತಿಕ್ರಿಯಿಸಿ (+)