ಶನಿವಾರ, ಜನವರಿ 18, 2020
21 °C

‘ಒಗ್ಗಟ್ಟಿನ ಹೋರಾಟದಿಂದ ಯಶಸ್ಸು ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಾಗೂ ಈಗಾಗಲೇ ಘೋಷಿತವಾದ ಹಲವು ತೀರ್ಮಾನಗಳನ್ನು ಮತ್ತು ಭರವಸೆಗಳನ್ನು ಶೀಘ್ರವಾಗಿ ಗಳಿಸಿ­ಕೊಳ್ಳಲು ಆಶಾ ಕಾರ್ಯಕರ್ತೆಯರ ಒಗ್ಗಟ್ಟು ಇನ್ನಷ್ಟು ಬಲ ಆಗಬೇಕು. ಹೋರಾಟದ ಮಾರ್ಗ­ದಿಂದ ಮಾತ್ರ ಸೌಲಭ್ಯಗಳನ್ನು ದಕ್ಕಿಸಿಕೊಳ್ಳಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅಭಿಪ್ರಾಯಪಟ್ಟರು,

ನಗರದ ಎಚ್‌ಡಿಎಂಸಿ ನೌಕರರ ಸಂಘದ ಸಭಾಭವನದಲ್ಲಿ ಶುಕ್ರವಾರ ಜರುಗಿದ ಆಶಾ ಕಾರ್ಯಕರ್ತೆಯರ ಧಾರವಾಡ ಜಿಲ್ಲಾ ಎರಡನೇ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ‘ನಿರಂತರ ಹೋರಾಟದ ಪರಿಣಾಮ ಹಲವು ನ್ಯಾಯಯುತ ಹಕ್ಕು, ಸೌಲಭ್ಯಗಳನ್ನು ಕೇಂದ್ರ– ರಾಜ್ಯ ಸರ್ಕಾರಗಳಿಂದ ಪಡೆದುಕೊಳ್ಳಲು ಸಾಧ್ಯವಾಗಿದೆ. ಆದರೆ ಪರಿಹಾರವಾಗದ ಸಮಸ್ಯೆಗಳು ಇನ್ನೂ ಸಾಕಷ್ಟಿವೆ.ಕೇಂದ್ರ ಸರ್ಕಾರದ ಪ್ರೋತ್ಸಾಹಧನದ ಜೊತೆಗೆ ರಾಜ್ಯ ಸರ್ಕಾರ ಅಷ್ಟೇ ಮೊತ್ತವನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ಆಗಿ ನೀಡಲಿದೆ. ರಾಜ್ಯದ ಎಲ್ಲ 35 ಸಾವಿರ ಆಶಾ ಕಾರ್ಯಕರ್ತೆಯರಿಗೂ ಉಚಿತ ಮೊಬೈಲ್‌ ಮತ್ತು ಸಿಮ್‌ ಕಾರ್ಡ್‌ ಸೌಲಭ್ಯವನ್ನು ಎರಡು ತಿಂಗಳಲ್ಲಿ ಹಂತ ಹಂತವಾಗಿ ನೀಡಲಾಗುವುದು. ಪಿಯುಸಿ ಆದ ಆಶಾ ಕಾರ್ಯಕರ್ತೆಯರಿಗೆ ಪ್ರತಿ ವರ್ಷ ನರ್ಸ್‌ ತರಬೇತಿಯಲ್ಲಿ ಶೇ 10ರಷ್ಟು ಕೋಟಾದಡಿ ಉಚಿತ ತರಬೇತಿ ಮತ್ತು ಉನ್ನತ ವ್ಯಾಸಂಗಕ್ಕೆ ಸಹಾಯಧನ ನೀಡಲಾಗುವುದು. ಸಂಘದ ಸಮಿತಿ ಇತ್ತೀಚೆಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್‌ ಗೋಪಾಲ್‌ ಅವರನ್ನು ಭೇಟಿಯಾದಾಗ ಭರವಸೆ ಸಿಕ್ಕಿದೆ’ ಎಂದರು.‘ಸಾಂಸ್ಥಿಕ ಹೆರಿಗೆ ಹೆಚ್ಚಳಗೊಂಡು ಶಿಶು ಮರಣ ಮತ್ತು ತಾಯಂದಿರ ಮರಣ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಆಶಾ ಕಾರ್ಯಕರ್ತೆಯರು ಕಾರಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 90ರಷ್ಟು ಸಾಂಸ್ಥಿಕ ಹೆರಿಗೆಗಳು ಆಗಲು ಕಾರ್ಯಕರ್ತಯರ ಕೊಡುಗೆ ಅಪಾರ. ತಾಯಿ, ಮಗುವಿನ ಸುರಕ್ಷತೆ­ಗಾಗಿ ಸಾಂಸ್ಥಿಕ ಹೆರಿಗೆಗೆ ಮನವೊಲಿಸಿದರೆ ಪ್ರೋತ್ಸಾಹಧನ ನೀಡಬೇಕಿದೆ. ಆದರೆ ದೃಢೀಕರಣದ ಅಗತ್ಯ ಇಲ್ಲದೆ ಪ್ರೋತ್ಸಾಹಧನ ನೀಡಬಹುದು ಎಂಬ ಆದೇಶವನ್ನು ಕಡೆಗಣಿಸಿ ಹಲವು ಕಡೆಗಳಲ್ಲಿ ದೃಢೀಕರಣ ಪತ್ರಕ್ಕಾಗಿ ಕಾರ್ಯಕರ್ತೆಯರನ್ನು ಅಲೆದಾಡಿಸಲಾಗುತ್ತಿದೆ. ಅನೇಕ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರು, ಶೌಚಾಲಯ ಇರುವ ವಿಶ್ರಾಂತಿ ಕೊಠಡಿ ವ್ಯವಸ್ಥೆ ಇಲ್ಲ’ ಎಂದರು.ಸಮಾವೇಶ ಉದ್ಘಾಟಿಸಿದ ಲೇಖಕಿ ಸುನಂದಾ ಕಡಮೆ, ‘ಸಮಾಜದಲ್ಲಿ ಆರೋಗ್ಯ ಸಮಸ್ಯೆ ಪರಿಹರಿಸುವುದು ಆಶಾ ಕಾರ್ಯಕರ್ತೆಯರ ಕರ್ತವ್ಯ, ಅವರ ನ್ಯಾಯಯುತ ಹಕ್ಕುಗಳನ್ನು ಪರಿಹರಿಸುವುದು ಸರ್ಕಾರ ಹಕ್ಕು’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್‌ಯುಸಿಐ (ಸಿ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ‘ಆಳುವ ವರ್ಗದ ನೀತಿಗಳು ಯಾವಾಗಲೂ ಬಡವರ ಪರವಾಗಿ ಇರುವುದಿಲ್ಲ. ಘೋಷಣೆಗಳು ಮಾತ್ರ ಪರವಾಗಿ ಇರುತ್ತದೆ.ಹೀಗಾಗಿ ಹಕ್ಕುಗಳಿಗೆ ಹೋರಾಟ ನಡೆಸುವುದು ಅನಿವಾರ್ಯ. ಆದರೆ ಸರ್ಕಾರ ಎಸ್ಮಾ ಕಾಯ್ದೆ ಜಾರಿಗೆ ತರಲು ಮುಂದಾಗುವ ಮೂಲಕ ಹೋರಾಟದ ಹಕ್ಕನ್ನೇ ಕಸಿದುಕೊಳ್ಳಲು ಹೊರಟಿದೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ. ದೇಸಾಯಿ, ಮುಖಂಡರಾದ ಗಂಗಾಧರ ಬಡಿಗೇರ, ಜಯಶ್ರೀ ಹಿರೇಮಠ, ಭಾರತಿ ಮಳಗಿ, ಸುಶೀಲಾ ಮುರಳಿ, ಸುನಿತಾ ಚಲವಾದಿ ಮತ್ತಿತರರಿದ್ದರು.

ಪ್ರತಿಕ್ರಿಯಿಸಿ (+)