ಶನಿವಾರ, ಜನವರಿ 25, 2020
16 °C

‘ಕತ್ತಿಗೆ ರಾಜ್ಯದ ಇತಿಹಾಸ ಗೊತ್ತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಮಾಜಿ ಸಚಿವ ಉಮೇಶ ಕತ್ತಿ ಅವರಿಗೆ ರಾಜ್ಯದ ಇತಿಹಾಸ ಗೊತ್ತಿಲ್ಲ. ತಮ್ಮ ಸ್ವಾರ್ಥಕ್ಕೋಸ್ಕರ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಇಲ್ಲಿನ ಅಳ್ನಾವರ ರಸ್ತೆಯಲ್ಲಿರುವ ಶಾಸಕ ಬಸವರಾಜ ರಾಯರಡ್ಡಿ ಅವರ ಫಾರ್ಮ್‌ಹೌಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.‘ಕರ್ನಾಟಕ ಒಂದು, ಕನ್ನಡಿಗರೆಲ್ಲ ಒಂದಾಗಿ ಬಾಳುವ ಹಾಗೂ ಆಡಳಿತದಲ್ಲಿ ಇರಬೇಕು ಎಂಬುದರ ಬಗ್ಗೆ ಕತ್ತಿ ಅವರಿಗೆ ಗೊತ್ತಿಲ್ಲ. ಅವರ ತಮ್ಮ ಸ್ವಾರ್ಥಕ್ಕೋಸ್ಕರ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದರು.‘ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ₨ 2500 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಈ ಕುರಿತಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಮಂಗಳವಾರ ಮಾತನಾಡಲು ಬಂದಿದ್ದರು. ಆದರೆ, ಇದೇ 9 ರಂದು ಈ ಕುರಿತಂತೆ ಅವರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದರು.ನಿಮಗೆಲ್ಲ ಒಳ್ಳೇದಾಗ್ಲಿ ನಡೀರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಾರ್ಮ್‌ಹೌಸ್‌ಗೆ ಬರುತ್ತಿದ್ದಂತೆ, ಮಾಧ್ಯಮದವರು ಅವರನ್ನು ಮಾತನಾಡಿಸಲು ಮುಂದಾದಾಗ, ನಾನು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ರಾಯರಡ್ಡಿ ಅವರು ಊಟಕ್ಕೆ ಬನ್ನಿ ಎಂದು ನನಗೆ ಆಹ್ವಾನ ನೀಡಿದ್ದರು. ಆದ್ದರಿಂದ ಬಂದಿದ್ದೇನೆ ನಾನು ಏನನ್ನೂ ಮಾತನಾಡಲು ಬಯಸುವುದಿಲ್ಲ. ನಿಮಗೆಲ್ಲ ಒಳ್ಳೆಯದಾಗಲಿ ನಡೀರಿ ಎಂದು ಹೇಳಿದರು. ಆದರೂ ಪಟ್ಟು ಬಿಡದ ಮಾಧ್ಯಮದವರು ಕೇಳಿದ ಮೇಲಿನ ಎರಡು ಪ್ರಶ್ನೆಗಳಿಗೆ ಮಾತ್ರ ಸಿದ್ದರಾಮಯ್ಯ ಉತ್ತರಿಸಿದರು.ಸ್ಪೀಕರ್‌ ಕಾಗೋಡು ತಿಮ್ಮಪ್ಪ, ಸಚಿವರಾದ ಕೆ.ಜೆ.ಜಾರ್ಜ್‌, ಟಿ.ಬಿ. ಜಯಚಂದ್ರ, ಎಚ್‌.ಸಿ.ಮಹಾದೇವಪ್ಪ, ರಾಮಲಿಂಗಾ ರೆಡ್ಡಿ, ಎಚ್‌.ಆರ್.ಮಹಾದೇವ ಪ್ರಸಾದ್‌, ಶಾಸಕರಾದ ಜಿ.ಎಸ್.ಪಾಟೀಲ, ಬಿ.ಆರ್‌.ಯಾವಗಲ್‌ ಹಾಗೂ ಹಿರಿಯ ಅಧಿಕಾರಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)