ಗುರುವಾರ , ಮೇ 6, 2021
25 °C

‘ಕಾಂಗ್ರೆಸ್‌ ಮುಕ್ತಗೊಳಿಸುತ್ತೇವೆ ಎಂದವರು ಕಣ್ಮರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾಂಗ್ರೆಸ್‌ ಮುಕ್ತಗೊಳಿಸುತ್ತೇವೆ ಎಂದವರು ಕಣ್ಮರೆ’

ಕುಂದಾಪುರ: 129 ವರ್ಷದ ಇತಿಹಾಸ­ವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ­ವನ್ನು ಈ ದೇಶದಿಂದ ಮುಕ್ತಗೊಳಿ­ಸುತ್ತೇವೆ ಎನ್ನುವ ಬಿಜೆಪಿ ಮುಖಂಡರು ಹಗಲು ಕನಸನ್ನು ಕಾಣುತ್ತಿದ್ದಾರೆ. ಈ ರೀತಿ ನುಡಿದ ಹಲವು ಮಂದಿ ಕಣ್ಮರೆ­ಯಾಗಿದ್ದರೂ, ಕಾಂಗ್ರೆಸ್ ಮಾತ್ರ ಈ ದೇಶದ ಜನರ ಮನದಲ್ಲಿ ಸ್ಥಿರಸ್ಥಾಯಿ­ಯಾಗಿ ಉಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನುಡಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ದೊಡ್ಡ ಪ್ರಜಾತಂತ್ರ ವ್ಯವಸ್ಥೆಗೆ ಪೂರಕ­ವಾಗಿ ಜಾತ್ಯತೀತ ನೆಲೆಯಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶದ ಭದ್ರತೆ, ಸ್ಥಿರತೆ ಹಾಗೂ ಸಮಗ್ರತೆಯನ್ನು ಕಾಪಾಡಿ­ಕೊಳ್ಳು­­ವುದರೊಂದಿಗೆ ಶಿಕ್ಷಣ, ಮಾಹಿತಿ, ಉದ್ಯೋಗದಂತಹ ಮಹ­ತ್ವದ ಹಕ್ಕುಗಳ ರಕ್ಷಣೆಗಾಗಿ ಕಾನೂನು ರೂಪಿಸಿದೆ. ಭೂಸ್ವಾಧೀನ ಪ್ರಕ್ರಿಯೆ­ಯಲ್ಲಿ ದೇಶವಾಸಿಗಳಿಗೆ ಅನೂಕೂಲ­ವಾಗುವಂತಹ ನಿಯಮಾವಳಿಯನ್ನು ಜಾರಿಗೆ ತಂದಿದೆ.ಪ್ರಣಾಳಿಕೆಯ ಭರವಸೆ-­ಯಂತೆ ದೇಶದ ಅಭಿವೃದ್ದಿಯ ದಿಕ್ಕನ್ನು ಬದಲಾಯಿಸಬಲ್ಲ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಆರೋಗ್ಯ ಹಕ್ಕು ಸೇರಿ­ದಂತೆ ದೇಶವನ್ನು ದೂರಗಾಮಿ ಅಭಿವೃದ್ದಿಯ ದಿಸೆಯಲ್ಲಿ ಮುನ್ನೆಡೆ­ಸಲಿಕ್ಕಾಗಿ ಕೇಂದ್ರದಲ್ಲಿ ಯುಪಿಐ ಸರ್ಕಾರ  ಇನ್ನೊಂದು ಅವಧಿಗೆ ಬರ­ಬೇಕಾದ ಅವಶ್ಯಕತೆ ಇರುವುದಾಗಿ ಅವರು ಪ್ರತಿಪಾದಿಸಿದರು.ಯುಪಿಎ ಸರ್ಕಾರದ ಅವಧಿಯ­ಲ್ಲಿಯೂ ಒಂದಷ್ಟು ತಪ್ಪುಗಳು ನಡೆ­ದಿವೆ. ಈ ತಪ್ಪುಗಳು ಗಮನಕ್ಕೆ ಬಂದ ಕೂಡಲೇ ಕಾರಣರಾದವರ ವಿರುದ್ಧ ಕಾನೂನು ಹಾಗೂ ಪಕ್ಷದ ನೆಲೆಯಲ್ಲಿ ಕ್ರಮಗಳನ್ನು ಕೈಗೊಂಡು ಈ ತಪ್ಪು­ಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾ­ಣಿಕ ಪ್ರಯತ್ನ ಮಾಡಲಾಗಿದೆ. ಆದರೆ ಬಿಜೆಪಿಯಲ್ಲಿ ತಪ್ಪುಗಳು ನಡೆದಾಗ ಅವಗಳನ್ನು ಒಪ್ಪಿಕೊಂಡು ಸಮರ್ಥನೆ ಮಾಡುವ ಪ್ರಯತ್ನಗಳು ನಡೆಯು­ತ್ತಿವೆ. ಮಹಾರಾಷ್ಟ್ರ ಹಾಗೂ ಗುಜ­ರಾತ್ ರಾಜ್ಯಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಹತ್ತಿರ­ದಿಂದ ನೋಡಿದಾಗ ಮಾತ್ರ ನಿಜವಾದ ಅಭಿವೃದ್ದಿ ಎಲ್ಲಿ ನಡೆದಿದೆ ಎನ್ನುವ ವಾಸ್ತಾವ ಗೊತ್ತಾಗುತ್ತದೆ ಎಂದರು.ಬೆಂಗಳೂರು ದಕ್ಷಿಣದಲ್ಲಿ ಟಿಕೆಟ್‌ ಕೇಳಿದ್ದ ನನಗೆ ಹೈಕಮಾಂಡ್ ಇಲ್ಲ ಎಂದಾಗ ನಾನು ಪಕ್ಷದ ತೀರ್ಮಾನ­ವನ್ನು ಒಪ್ಪಿಕೊಂಡಿದ್ದೆ. ಅದೇ ರೀತಿಯ ಬೆಳವಣಿಗೆಗಳು ನಡೆದಾಗ ಕಾಂಗ್ರೆಸಿ­ಗರು ಪಕ್ಷದ ತೀರ್ಮಾನಗಳನ್ನು ಒಪ್ಪಿ­ಕೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಮಂಡ್ಯ ಕಾಂಗ್ರೆಸ್ ಮುಖಂಡರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ರಮ್ಯಾರನ್ನು ಗೆಲ್ಲಿಸಲು ಪಕ್ಷ ಈಗಾಗಲೆ ಕ್ರಮ ಕೈಗೊಂಡಿದೆ.ಹಿಂದೆ ಹಲವು ಬಾರಿ ಬಂದಿರುವ ಸಮೀಕ್ಷೆಗಳು ಸುಳ್ಳಾಗಿರುವುದರಿಂದ ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ತನಗೆ ನಂಬಿಕೆಯಿಲ್ಲ ಎಂದು ಹೇಳಿದ ಅವರು, ಬಿಜೆಪಿಯವರು ಪ್ರತಿ ಬಾರಿಯೂ ಪ್ರಣಾಳಿಕೆಯಲ್ಲಿ ರಾಮ ಮಂದಿರದ ವಿಷಯವನ್ನು ಪ್ರಾಸ್ತಾಪ ಮಾಡುತ್ತಾರೆ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮರೆತು ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು. ಸಚಿವ ವಿನಯಕುಮಾರ ಸೊರಕೆ, ಶಾಸಕ ಕೆ.ಗೋಪಾಲ ಪೂಜಾರಿ, ಕೆಪಿ­ಸಿಸಿ ಕಾರ್ಯದರ್ಶಿ ಎಂ.ಎ ಗಫೂರ್, ಪಕ್ಷದ ಪ್ರಮುಖರಾದ ಮಲ್ಯಾಡಿ ಶಿವ­ರಾಮ ಶೆಟ್ಟಿ, ಎಸ್.­ರಾಜು ಪೂಜಾರಿ, ವಿಕಾಸ ಹೆಗ್ಡೆ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.