ಶುಕ್ರವಾರ, ಫೆಬ್ರವರಿ 26, 2021
29 °C

‘ಕುವೆಂಪು ಅವರ ಅಪ್ಪಟ ಶಿಷ್ಯ ಜಿಎಸ್‌ಎಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕುವೆಂಪು ಅವರ ಅಪ್ಪಟ ಶಿಷ್ಯ ಜಿಎಸ್‌ಎಸ್‌’

ಬೆಂಗಳೂರು: ‘ಕುವೆಂಪು ಅವರನ್ನು ಮುಂದಿಟ್ಟುಕೊಂಡು ಸಾಹಿತಿ ದೇ. ಜವರೇಗೌಡ ಅವರು ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ. ಆದರೆ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರು ಕುವೆಂಪು ಅವರ ಅಪ್ಪಟ ಶಿಷ್ಯರಾಗಿಯೇ ಇದ್ದರು’ ಎಂದು ಸಾಹಿತಿ ಪ್ರೊ. ಎಲ್‌.ಎನ್‌.ಮುಕುಂದರಾಜ್‌ ಹೇಳಿದರು.ರಂಗಮಂಡಲ ಸಾಂಸ್ಕೃತಿಕ ಸಂಘ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವು... ಜಿ.ಎಸ್‌.ಶಿವರುದ್ರಪ್ಪ (ಜಿಎಸ್‌ಎಸ್‌) ಅವರ ನೆನಪು, ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲಿಂಗಾಯತರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಒಕ್ಕಲಿಗರ ಪ್ರಾಬಲ್ಯದ ನಡುವೆ ಕನ್ನಡ ಅಧ್ಯಯನ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಯಾವುದೇ ಜಾತಿ ಸುಳಿದಿರಲಿಲ್ಲ. ಇದಕ್ಕೆ ಜಿಎಸ್‌ಎಸ್‌ ಅವರ ಜಾತ್ಯತೀತ ನಿಲುವು ಕಾರಣವಾಗಿತ್ತು’ ಎಂದರು.‘ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಲ್ಲ ಜಾತಿಗಳಿಗೆ ಸೇರಿದ ಪ್ರಾಧ್ಯಾಪಕರನ್ನು ಜಿಎಸ್‌ಎಸ್‌ ನೇಮಿಸಿಕೊಂಡಿದ್ದರು.  ಆದರೆ ಇಂದು ಅಲ್ಲಿ ಜಾತಿ ನೋಡಿ ಅಂಕ ನೀಡುವ ಪರಿಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.ಕವಯತ್ರಿ ಎಚ್‌.ಎಲ್‌.ಪುಷ್ಪಾ ಮಾತನಾಡಿ, ‘ನನ್ನ ಗುರುಪರಂಪರೆಯಲ್ಲಿ ಜಿಎಸ್‌ಎಸ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಜತೆಗಿನ ಒಡನಾಟ ಸುಂದರ ಸ್ವಪ್ನಗಳು’ ಎಂದು ಹೇಳಿದರು.ಜಿಎಸ್‌ಎಸ್‌ ಅವರ ಮೊಮ್ಮಗ, ಚಲನಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ, ‘ತಾತನಿಂದ ಶಿಸ್ತು, ಪ್ರಾಮಾಣಿಕತೆಯನ್ನು ಕಲಿತಿದ್ದೇನೆ. ಅವರು ಸಿನಿಮಾ, ಸಾಕ್ಷ್ಯಚಿತ್ರ ವೀಕ್ಷಣೆಗೆ ಕರೆದೊಯ್ಯುತ್ತಿದ್ದರು. ಈ ಬಗ್ಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು’ ಎಂದರು.‘ತಾತ ಪ್ರವಾಸವನ್ನು ಇಷ್ಟಪಡುತ್ತಿದ್ದರು. ಅವರೊಂದಿಗೆ ನಾನೂ ಪ್ರವಾಸ ಮಾಡಿದ್ದೇನೆ. ಆ ವೇಳೆ ಸಮಯ ಪಾಲನೆ ಮಾಡುತ್ತಿದ್ದರು. ಅವರು ನಿಧನರಾಗುವ ಕೆಲ ತಿಂಗಳ ಹಿಂದೆ ಶಿವನಸಮುದ್ರ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರಿಂದ ಅಲ್ಲಿಗೆ ಅವರನ್ನು ಕರೆದುಕೊಂಡು ಹೋಗಿದ್ದೆವು’ ಎಂದರು.‘ಪ್ರವಾಸ, ಸಾಹಿತ್ಯದಷ್ಟೇ ಊಟವನ್ನು ತಾತ ಇಷ್ಟಪಡುತ್ತಿದ್ದರು. ಆರೋಗ್ಯಕರ ಪಥ್ಯ ಇರುತ್ತಿದ್ದರು. ಕೊನೆಯ ದಿನಗಳಲ್ಲೂ 2–3 ಒಬ್ಬಟ್ಟು ತಿನ್ನುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.