ಸೋಮವಾರ, ಜೂನ್ 14, 2021
26 °C

‘ಗೆಳೆಯ ಕೇಳು; ಬಣ್ಣಗೆಡದಿರಲಿ ಬಾಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ‘ರಾಸಾಯನಿಕ ಮಿಶ್ರಿತ ಬಣ್ಣಗಳ ಓಕುಳಿ ಆಟವಾಡಿ ಚರ್ಮ, ಕೂದಲು, ಉಸಿರಾಟಕ್ಕೆ ತೊಂದರೆ ಮಾಡಿಕೊಳ್ಳುವ ಬದಲು ನೈಸರ್ಗಿಕ ಬಣ್ಣಗಳೊಂದಿಗೆ ಓಕುಳಿ ಆಟವಾಡಿ ನೈಜ ಹಬ್ಬದ ಸವಿಯನ್ನು ಪ್ರತಿಯೊಬ್ಬರೂ ಅನುಭವಿಸಬೇಕು’ ಎಂದು ಆಯುರ್ವೇದ ವೈದ್ಯ ಮಹಾಂತಸ್ವಾಮಿ ಹಿರೇಮಠ ಸಲಹೆ ನೀಡಿದರು.ಇಲ್ಲಿಯ ಸೋಮವಾರ ಪೇಟೆಯ ಗೌಡರ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿ­ರುವ ಕಾಮನ ಮೂರ್ತಿ ಮಂಟಪದಲ್ಲಿ ಭಾನುವಾರ ನೈಸರ್ಗಿಕ ಬಣ್ಣಗಳ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು.‘ಹೊಳೆಯುವ ಹಸಿರು, ಬೆಳ್ಳಿ, ಚಿನ್ನ ಹೋಲುವ ಬಣ್ಣಗಳಲ್ಲಿ ರಾಸಾಯನಿಕ ಅಂಶಗಳಿರುತ್ತವೆ. ಇಂಥ ಬಣ್ಣ ಬದುಕಿನ ಬಣ್ಣವನ್ನೂ ಅಂದಗೆಡಿಸೀತು’ ಎಂದು ಎಚ್ಚರಿಸಿದ ಅವರು ‘ತರಕಾರಿ, ಸೊಪ್ಪು­ಗಳಿಂದ ಸಿದ್ಧಪಡಿಸಿದ ಬಣ್ಣಗಳನ್ನು ಉಪಯೋಗಿಸಿ ಹೋಳಿಯ ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ’ ಎಂದು ಹೇಳಿದರು.‘ಕೋತಂಬರಿ, ಪಾಲಕ ಸೊಪ್ಪು, ಬೀಟ್‌ರೂಟ್‌, ಟೊಮೆಟೊ, ಕಲ್ಲಂಗಡಿ ಹಣ್ಣು, ದಾಸವಾಳ, ಚೆಂಡು ಹೂವು, ಹಳದಿ ಅರಿಷಿಣ ಪುಡಿಯ ಬಣ್ಣ ಅಥವಾ ಪೇಸ್ಟ್‌ ಬಳಸಿ ಬಣ್ಣದಾಟ ಆಡುಬೇಕು’ ಎಂದು ಅವರು ನೆರೆದ ಯುವಕರಲ್ಲಿ ಮನವಿ ಮಾಡಿಕೊಂಡರು.‘ರಾಸಾಯನಯುಕ್ತ ಕೆಲವು ಬಣ್ಣಗಳಲ್ಲಿ ಅಲ್ಯೂಮಿನಿಯಂ, ಅಯೋಡಿನ್‌, ಸೀಸ್‌ ಅಂಶಗಳು ಇರುತ್ತವೆ. ಇಂಥ ಬಣ್ಣಗಳಿಂದ ಮೊದಲು ಹಾನಿಯಾಗುವುದೇ ನಮ್ಮ ಚರ್ಮ ಮತ್ತು ಕೂದಲಿಗೆ. ಅನಂತರ ಕಣ್ಣುಗಳಲ್ಲಿ ಅಥವಾ ಮೂಗಿನ ಹೊಳ್ಳೆಗಳಲ್ಲೂ ಹೋಗಬಹುದು. ಇದರಿಂದ ಆಸ್ತಮಾದಂತಹ ಅಪಾಯವೂ ಆಗುವ ಆತಂಕವಿರುತ್ತದೆ. ಇವುಗಳನ್ನು ವರ್ಜಿಸಬೇಕು’ ಎಂದು ಅವರು ಒತ್ತಿ ಹೇಳಿದರು.ಚನಬಸಯ್ಯಾ ಹಿರೇಮಠ, ಶಕುಂತಲಾ ಈಶ್ವರಯ್ಯಾ ಹಿರೇಮಠ, ರಾಚಯ್ಯ ಹಿರೇಮಠ ಹಾಗೂ ಯುವಕರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.