ಸೋಮವಾರ, ಜೂನ್ 14, 2021
27 °C
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಹೇಳಿಕೆ

‘ಜನಪ್ರಿಯತೆ, ಹಣಬಲ ಆಧರಿಸಿ ಅಭ್ಯರ್ಥಿ ಆಯ್ಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಜನಪ್ರಿಯತೆ, ಹಣಬಲ ಹಾಗೂ ರಾಜಕೀಯ ಅನುಭವವನ್ನು ಆಧರಿಸಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡ ಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಹೇಳಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಚುನಾವಣೆಯಲ್ಲಿ ಕೇವಲ ಜನಪ್ರಿಯತೆ ಇದ್ದರೆ ಸಾಲದು ಹಣಬಲ ಅತ್ಯವಶ್ಯವಾಗಿದೆ. ಇದು ಎಲ್ಲರಿಗೂ, ಎಲ್ಲ ಪಕ್ಷಗಳಿಗೂ ಗೊತ್ತಿರುವ ಸಂಗತಿ. ಅದೇ ಕಾರಣಕ್ಕೆ ಜೆಡಿಎಸ್‌ ಹಣಬಲವನ್ನು ಆಭ್ಯರ್ಥಿ ಆಯ್ಕೆಯ ಮಾನದಂಡ ಮಾಡಿಕೊಂಡಿದೆ ಎಂದರು.ಚುನಾವಣೆಗೂ ಮುನ್ನವೇ ಬೇರೆ ಬೇರೆ ಪಕ್ಷದ ಮುಖಂಡರು ಪಕ್ಷಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಬೇರೆ ಬೇರೆ ಪಕ್ಷಗಳು ಹಲವರು ಪಕ್ಷದ ಸಂಪರ್ಕದಲ್ಲಿದ್ದು, ಮಾತುಕತೆ ನಂತರ ಅವರ ಹೆಸರನ್ನು ಬಹಿರಂಗಗೊಳಿಸಲಾಗುವುದು ಎಂದರು.ಈಗಾಗಲೇ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಪೈಪೋಟಿ ಇದ್ದು, ಸರಿಯಾದ ಅಭ್ಯರ್ಥಿಯನ್ನು ಗುರುತಿಸಿ ಪಕ್ಷ ಟಿಕೆಟ್‌ ನೀಡಲಿದೆ. ಮಾ. ೧೫ರೊಳಗೆ ಪಕ್ಷದ ೧೫ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಉತ್ತರ ಕರ್ನಾಟಕ ಭಾಗಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರೆ, ವಿರೋಧ ಪಕ್ಷಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನು ಉತ್ತರ ಕರ್ನಾಟಕದ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿದ್ದಾರೆ ಎಂದು ಹೇಳಿದರು.ಕೆಲ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಸಂಪೂರ್ಣ ನಿಷ್ಕ್ರೀಯೆಗೊಂಡಿದೆ. ಅಂತಹ ಜಿಲ್ಲೆಗಳಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಹೊಸ ಅಧ್ಯಕ್ಷರ ನೇಮಕ ಮಾಡಲಾಗುತ್ತಿದೆ. ಅದರ ಜತೆಗೆ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮಾಜಿಕ ನ್ಯಾಯದಡಿ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.ತೃತೀಯ ರಂಗ ಅಧಿಕಾರಕ್ಕೆ: ರಾಷ್ಟ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪರ್ಯಾಯವಾಗಿ ತೃತೀಯ ರಂಗ ರಚನೆಗೊಂಡಿದೆ. ಏಕ ವ್ಯಕ್ತಿ ವೈಭವೀಕರಣದ ಬಿಜೆಪಿ ಹಾಗೂ ಹಗರದಲ್ಲಿ ಹೂತು ಹೋಗಿರುವ ಕಾಂಗ್ರೆಸ್‌ನ್ನು ದೇಶದ ಜನರು ಸಾರಾಸಾಗಾಟವಾಗಿ ತಿರಸ್ಕರಿಸಲಿದ್ದು, ಕೇಂದ್ರದಲ್ಲಿ ತೃತೀಯ ರಂಗವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.ತೃತೀಯ ರಂಗದ ಕೆಲ ಪಕ್ಷಗಳ ರಾಜ್ಯದಲ್ಲಿ ಅಭ್ಯರ್ಥಿ ಹಾಕಲು ಬಯಸಿದರೆ, ಎರಡ್ಮೂರು ಕ್ಷೇತ್ರಗಳನ್ನು ಅವರಿಗೆ ಬಿಟ್ಟುಕೊಟ್ಟು ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದೆ. ಇಲ್ಲವಾದರೆ, ರಾಜ್ಯದ ೨೮ಕ್ಷೇತ್ರಗಳಿಗೂ ಜೆಡಿಎಸ್ ಸ್ಪರ್ಧಿಸಲಿದೆ. ರಾಜ್ಯದಿಂದ ಕನಿಷ್ಠ ೧೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಾತ್ಯತೀಯ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ.ಗಾಜೀಗೌಡರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಾಗ ಪಕ್ಷದ ಸಂಘಟನೆಗೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯ ನಾಯಕರು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಹೇಳಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಳೆದ ಏಳು ತಿಂಗಳಿನಿಂದ ಒಂದೂ ಕಾರ್ಯಕರ್ತರ ಸಭೆ ನಡೆಸಿಲ್ಲ. ಯಾವುದೇ ಹೋರಾಟ ರೂಪಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳದ ಗಾಜೀಗೌಡರು, ಪಕ್ಷದ ವಿರುದ್ಧ ಮಾತನಾಡಿರುವುದು ಕುಣಿಯಲು ಬಾರದವಳು ನೆಲ ಡೊಂಕು ಎಂದಂತಾಗಿದೆ ಎಂದು ವ್ಯಂಗ್ಯವಾಡಿದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಶೀಲಾ ನಾಯಕ, ಉಪಾಧ್ಯಕ್ಷೆ ಅಂಜಲಿ ರಾಮ, ಕಾರ್ಯದರ್ಶಿ ಕೃಷ್ಣಮೂರ್ತಿ, ಸಿದ್ದಬಸಪ್ಪ ಯಾದವ, ಪರಮೇಶ್ವರಪ್ಪ ಮೇಗಳಮನಿ, ಕಮಲಾ ನಾಯಕ, ಪ್ರೇಮಾ ಪಾಟೀಲ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.