ಬುಧವಾರ, ಜನವರಿ 22, 2020
22 °C

‘ಜಾತಿ ವ್ಯವಸ್ಥೆಯಿಂದ ಸಮಾಜ ಸ್ವಾಸ್ಥ್ಯಕ್ಕೆ ಧಕ್ಕೆ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಾತಿ ವ್ಯವಸ್ಥೆಯಿಂದ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬರುತ್ತಿದೆ. ಹೀಗಾಗಿ ಸರ್ವಧರ್ಮೀಯರು ಜಾತಿ ವ್ಯವಸ್ಥೆಯಿಂದ ಹೊರಬರುವ ಅಗತ್ಯ ವಿದೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಚ್‌. ಮಹೇಶಪ್ಪ ಅಭಿಪ್ರಾಯಪಟ್ಟರು.ಇಲ್ಲಿನ ಶಿವಬಸವ ನಗರದ ನಾಗ ನೂರು ರುದ್ರಾಕ್ಷಿಮಠದಲ್ಲಿ ಭಾನುವಾರ ನಡೆದ ಡಾ. ಶಿವಬಸವ ಸ್ವಾಮೀಜಿ ಯವರ 124ನೇ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ವಾಗುತ್ತಿದೆ. ಪರಸ್ಪರರ ಭಾವನೆಗಳಿಗೆ ಧಕ್ಕೆ ಬರುತ್ತಿದೆ. ಹೀಗಾಗಿ ಎಲ್ಲರೂ ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ಪರಸ್ಪರರು ಸಹಬಾಳ್ವೆಯಿಂದ    ಬಾಳುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ತಿಳಿಸಿದರು.‘ನಮ್ಮ ದೇಶವು ಆಧ್ಯಾತ್ಮಿಕ ಶ್ರೀಮಂತಿಕೆಯ ಮೇಲೆ ನೆಲೆ ನಿಂತಿದೆ. ಆಧ್ಯಾತ್ಮಿಕತೆಯು ಮಾನಸಿಕ ಹಾಗೂ ದೈಹಿಕ ಕ್ಷಮತೆ ವೃದ್ಧಿಸುವಲ್ಲಿ ಸಹಕಾರಿ ಯಾಗಿದೆ. ಹೀಗಾಗಿ ಧಾರ್ಮಿಕ ಆಚರಣೆಗಳಿಗಾಗಿ ಕೆಲ ಸಮಯವನ್ನು ಮೀಸಲೀಡಬೇಕು’ ಎಂದರು.‘ಆತ್ಮಸ್ವಾಸ್ಥ್ಯ ಶ್ರೀ’ ಪ್ರಶಸ್ತಿ ಸ್ವೀಕರಿಸಿದ ಹಿಮಾಚಲ ಪ್ರದೇಶದ ಭಾರತೀಯ ತಾಂತ್ರಿಕ ಮಹಾವಿದ್ಯಾಲಯದ ಕುಲ ಸಚಿವ ಡಾ. ರಮೇಶಚಂದ ಸಾಹನಿ, ‘ಇಂದು ವರ್ಷಕ್ಕೆ 50 ಲಕ್ಷ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಪೈಕಿ 25ರಿಂದ 30 ವರ್ಷದೊಳಗಿ ನವರು ಮುಂಚೂಣಿಯಲ್ಲಿದ್ದಾರೆ, ಇದರಲ್ಲಿ ಶೇ. 33ರಷ್ಟು ಆಸ್ಪತ್ರೆ ಸೇರುವ ಮೊದಲೇ ಮರಣ ಹೊಂದುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಜೀವನಶೈಲಿ ಬದಲಿಸಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.‘ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ದುಶ್ಚಟಗಳನ್ನು ತ್ಯಜಿಸಬೇಕು. ಇಂದಿನ ಒತ್ತಡದ ಜೀವನದಲ್ಲೂ ಯೋಗ, ವ್ಯಾಯಾಮ, ಧ್ಯಾನ ಹಾಗೂ ಆಧ್ಯಾತ್ಮ ಚಟುವಟಿಕೆಗಳಿಗಾಗಿ ಕೆಲ ಸಮಯ ಮೀಸಲೀಡಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಸದೃಢ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು’ ಎಂದು ತಿಳಿಸಿದರು.ಡಾ. ಎಚ್‌.ಬಿ. ರಾಜಶೇಖರ, ‘ಜಗಜ್ಜ್ಯೋತಿ ಬಸವಣ್ಣನವರು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಅವರು ದೀನ ದಲಿತರು, ಬಡವರು, ಶೋಷಿತರ ಪರವಾಗಿ ಧ್ವನಿ ಎತ್ತಿದ್ದಾರೆ. ಎಲ್ಲ ವರ್ಗಗಳ ಏಳ್ಗೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬರು ಬಸವೇಶ್ವರರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಸಾರ್ಥಕತೆ ಪಡೆದುಕೊಳ್ಳಬೇಕು’ ಎಂದರು.ಈ ಸಂದರ್ಭದಲ್ಲಿ ಡಾ. ರಮೇಶ ಚಂದ ಸಾಹನಿ ಅವರಿಗೆ ‘ಆತ್ಮಸ್ವಾಸ್ಥ್ಯ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಶಿವಾನಂದ ಕೌಜಲಗಿ, ಡಾ. ಆರ್‌.ಶಿವಣ್ಣ, ಪ್ರೊ. ಸರೋಜಿನಿ ಶಿಂತ್ರಿ, ಜಲತ್ಕುಮಾರ ಪುಣಜಗೌಡ, ವಿ.ಎಸ್‌.ಬಾಗಿ ಹಾಗೂ ವಿ.ಎಸ್‌. ಗಣಾಚಾರಿ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ ಹಾಗೂ ಆದಿ ಚುಂಚನಗಿರಿಯ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರಂಜಿಮಠದ ಗುರುಸಿದ್ಧ     ಸ್ವಾಮೀಜಿ, ಪ್ರೊ. ಸಿ.ಜಿ. ಮಠಪತಿ ಉಪಸ್ಥಿತರಿದ್ದರು. ಡಾ. ಎಚ್‌.ಬಿ. ರಾಜಶೇಖರ ಸ್ವಾಗತಿಸಿ ದರು. ಬಿ.ಎಸ್‌. ತೋರಣಗಟ್ಟಿ ವಂದಿಸಿ ದರು. ಮಹಾಂತ ದೇವರು ಹಾಗೂ ಕುಮಾರ ದೇವರು ನಿರೂಪಿಸಿದರು.

ಪ್ರತಿಕ್ರಿಯಿಸಿ (+)