ಮಂಗಳವಾರ, ಜನವರಿ 21, 2020
19 °C

‘ತಿಳಿವಳಿಕೆಯಿಂದ ಆನೆಕಾಲು ರೋಗ ನಿವಾರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್‌: ‘ಆನೆಕಾಲು ರೋಗ ಒಮ್ಮೆ ಬಂದರೆ ಅದನ್ನು ಹೋಗ­ಲಾಡಿ­ಸಲು ಸಾಧ್ಯವಿಲ್ಲ. ರೋಗ ಬರುವ ಮುನ್ನ ಮುಂಜಾಗೃತಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರೋಗದ ನಿಯಂತ್ರಣ ಸಾಧ್ಯ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯ­ಪ್ರಕಾಶ ಎಂ. ಕಂದಕೂರ ಹೇಳಿದರು.ಪಟ್ಟಣದ ಆಂಜನೇಯ ದೇವಸ್ಥಾನ­ದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಆನೆಕಾಲು ರೋಗ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.‘ಆನೆಕಾಲು ರೋಗ ಕ್ಯುಲೆಕ್ಸ್‌ ಎಂಬ ಸೊಳ್ಳೆಯ ಕಡಿತದಿಂದ ಬರುತ್ತದೆ. ಈ ಸೊಳ್ಳೆ ಕಡಿದ ನಂತರ ಸುಮಾರು ಎಂಟು ವರ್ಷಗಳ ವರೆಗೆ ತನ್ನ ಪ್ರಭಾವ­ವನ್ನು ತೋರದೇ ದೇಹದಲ್ಲಿ ಅಡಗಿ­ಕೊಂಡಿರುತ್ತದೆ. ನಂತರ ದೇಹದಲ್ಲಿ ಚುಚ್ಚಿದ ಅನುಭವ, ಚಳಿ, ಜ್ವರ ಬರುವುದರ ಮೂಲಕ ಅದು ತನ್ನ ಜೀವಂತಿಕೆಯನ್ನು ಸೂಚಿಸುತ್ತದೆ.ಇದು ರಾತ್ರಿ ವೇಳೆಯಲ್ಲಿ ಮತ್ತು ವ್ಯಕ್ತಿ ನಿದ್ದೆಯಲ್ಲಿರುವಾಗ ಹುಳು ಜಾಗೃತವಾಗುತ್ತದೆ. ದೇಹದಲ್ಲಿ ಅದು ಸಾವಿರಾರು ಮೊಟ್ಟೆಗಳನ್ನು ಇಡುವು­ದರ ಮೂಲಕ ಅದು ಕಾಲು ಬಾವು ಕಾಣಲು ಕಾರಣವಾಗುತ್ತದೆ ಎಂದರು.ಒಮ್ಮೆ ಕಾಲು ಬಾವು ಬಂದರೆ ದೇಹದಲ್ಲಿರುವ ಹುಳುವನ್ನು ಜಾಗೃತ ಗೊಳ್ಳದಂತೆ ಮಾತ್ರೆಗಳಿಂದ ಮಾಡ­ಬಹುದೇ ಹೊರತು ಅದನ್ನು ನಿರ್ಮೂಲನೆ ಮಾಡಲು ಸಾಧ್ಯ­ವಾಗಿಲ್ಲ. ಕಾರಣ ರೋಗದ ಇರುವಿಕೆ­ಯನ್ನು ರಕ್ತ ಪರೀಕ್ಷೆಯ ಮೂಲಕ ತಿಳಿದು ಮತ್ತು ರೋಗ ಇಲ್ಲದವರು ಕೂಡ ಸರ್ಕಾರ ನೀಡುವ ಉಚಿತ ಡಿಇಸಿ ಮಾತ್ರೆಗಳನ್ನು ಸೇವಿಸುವುದರ ಮೂಲಕ ರೋಗವನ್ನು ನಿರ್ಮೂಲನೆ ಮಾಡಬೇಕು ಎಂದರು.ಆರೋಗ್ಯ ಸಹಾಯಕ ಪರಮಾರೆಡ್ಡಿ, ವೈದ್ಯಾಧಿಕಾರಿ ಡಾ.­ರವೀಂದ್ರ ಬನ್ನೆರ್‌ ಮಾತನಾಡಿದರು. ಪಟ್ಟಣದ ವಿವಿಧ ಬಡಾವಣೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರು. ಆರೋಗ್ಯ ಸಹಾಯಕ ಸಿದ್ರಾಮರೆಡ್ಡಿ ಇದ್ದರು.

ಪ್ರತಿಕ್ರಿಯಿಸಿ (+)