ಭಾನುವಾರ, ಜೂನ್ 20, 2021
24 °C

‘ದೀನರ ಧಾರ್ಮಿಕ ಯೋಧ’ನ ಐತಿಹಾಸಿಕ ವಿಜಯ

ಪ್ರಜಾವಾಣಿ ವಾರ್ತೆ/ ಸುರೇಶ್‌ ಎಡನಾಡು Updated:

ಅಕ್ಷರ ಗಾತ್ರ : | |

ಕಾಸರಗೋಡು: 60ರ ದಶಕದಲ್ಲಿ ಕಮ್ಯೂನಿಸ್ಟ್‌ ಪಕ್ಷದಲ್ಲಿ ಆಂತರಿಕ ಬಿರುಕು ಮೂಡಿತ್ತು. ಇದಕ್ಕೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಹುಳಿ ಹಿಂಡಿ ಆಟ ನೋಡುತ್ತಿತ್ತು. ರಷ್ಯಾ ಮತ್ತು ಚೀನಾ ಬೆಂಬಲದ ವಿಚಾರದಲ್ಲಿ ಭಾರತೀಯ ಕಮ್ಯೂನಿಸ್ಟ್‌ ಪಕ್ಷದಲ್ಲಿ ಉದ್ಭವಿಸಿದ ಈ ಭಿನ್ನಾಭಿಪ್ರಾಯ ಸಿಪಿಎಂ ಪಕ್ಷದ ಉದಯಕ್ಕೆ ಕಾರಣವಾಯಿತು.‘ದೀನರ ಧಾರ್ಮಿಕ ಯೋಧ’(Crusader of the downtrodden) ನೆಂದೇ ಖ್ಯಾತರಾಗಿದ್ದ ಎ.ಕೆ.ಜಿ. 1964 ರಲ್ಲಿ 32 ಸದಸ್ಯರೊಂದಿಗೆ ಸಿಪಿಐ ರಾಷ್ಟ್ರೀಯ ಮಂಡಳಿಯಿಂದ ಹೊರಬಂದರು. ಸಿಪಿಐ–ಸಿಪಿಎಂ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ಇಲ್ಲಿನ 4ನೇ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದವು. ಅದು ವರೆಗೆ ಸಿಪಿಐಯಿಂದ ಸ್ಪರ್ಧಿಸಿದ್ದ ಎ.ಕೆ.ಗೋಪಾಲನ್‌ ಸಿಪಿಎಂನಿಂದ ಅಖಾಡಕ್ಕಿಳಿದಿದ್ದರು. ಆದರೆ ಈ ಬಿರುಕು ಕಮ್ಯೂನಿಸ್ಟ್ ಪಕ್ಷದ ಭವಿಷ್ಯದ ಅಧಃಪತನದ ಪ್ರಥಮ ಅಧ್ಯಾಯವೂ ಆಗಿತ್ತು ಎನ್ನುವುದು ಗಮನಾರ್ಹ. ಆದರೆ ಇದೇ ಚುನಾವಣೆಯಲ್ಲಿ ಎ.ಕೆ.ಗೋಪಾಲನ್‌ ತಮ್ಮ ಜನಪ್ರಿಯತೆಯ ಬಂಡವಾಳ ಮತ್ತು ‘ಸಪ್ತ ಕಕ್ಷಿ ಮುನ್ನಣಿ’(ಸಪ್ತ ಪಕ್ಷ ಮೈತ್ರಿ)ಯ ಹಿನ್ನೆಲೆಯಲ್ಲಿ ದಾಖಲೆ ಅಂತರದಲ್ಲಿ ಗೆದ್ದು ಅಚ್ಚರಿ ಮೂಡಿಸಿದರು.ಗರಿಗೆದರಿದ ಮತೀಯ ಭಾವನೆ: ಈ ಚುನಾವಣೆಗೆ 10 ವರ್ಷಗಳ ಹಿಂದೆ ಅಂದರೆ 1957ರಲ್ಲಿ ಕೇರಳದಲ್ಲಿ ಪ್ರಪ್ರಥಮವಾಗಿ ಇ.ಎಂ.ಎಸ್‌.ನಂಬೂದಿರಿಪ್ಪಾಡ್ ಸರ್ಕಾರ ಅಧಿಕಾರಕ್ಕೇರಿತ್ತು. ಈ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಆವಿಷ್ಕಾರ, ಶಿಕ್ಷಣ–ಆರೋಗ್ಯ ಮೊದಲಾದ ಜನಪರ ಅಭಿವೃದ್ಧಿ, ಅಧಿಕಾರ ವಿಕೇಂದ್ರೀಕರಣ ಮಹತ್ವದ ಕೊಡುಗೆಗಳನ್ನು ಜಾರಿಗೊಳಿಸಿತು. ಆದರೆ ‘ಜಮೀನ್ದಾರರ ಭೂಮಿ ಭೂಮಾಲೀಕರ ಜನ್ಮಸಿದ್ಧ ಹಕ್ಕು’ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಮುಸ್ಲಿಂ ಲೀಗ್, ಎನ್‌ಎಸ್‌ಎಸ್‌, ಎಸ್‌.ಎನ್.ಡಿ.ಪಿ. ಮೊದಲಾದ ಜಾತಿ–ಮತ ಶಕ್ತಿಗಳು ಇ.ಎಂ.ಎಸ್‌.ನೇತೃತ್ವದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ‘ವಿಮೋಚನಾ ಸಮರ’ ಸಾರಿದವು. ಇದರ ಪರಿಣಾಮ ಜವಾಹರಲಾಲ್‌ ನೆಹರೂ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ 356ನೇ ಕಾಯ್ದೆಯಡಿ ಕೇರಳ ಸರ್ಕಾರವನ್ನು ವಿಸರ್ಜಿಸಿತು.1960ರಲ್ಲಿ ಪುನಃ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ –ಮುಸ್ಲಿಂ ಲೀಗ್–ಪ್ರಜಾ ಸೋಶಿಯಲಿಸ್ಟ್ ಪಾರ್ಟಿ ಎಂಬ ‘ಮುಕ್ಕೂಟ ಮೈತ್ರಿ’ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ ವಿಧಾನಸಭೆಯಲ್ಲಿ ‘ಟೋಪಿ ಧರಿಸುವವರಿಗೆ’ ಸಚಿವ ಸ್ಥಾನ ನೀಡುವುದಿಲ್ಲ ಎಂದು ಕಾಂಗ್ರೆಸ್ ಪಟ್ಟು ಹಿಡಿಯಿತು. ಇದರಿಂದ ಮೈತ್ರಿಕೂಟದ ಮುಸ್ಲಿಂ ಲೀಗ್‌ಗೆ ಸಚಿವ ಸ್ಥಾನ ದಕ್ಕಲಿಲ್ಲ. ಇದು ವಿವಾದಕ್ಕೆ ಹೇತುವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು.ರಾಜಕೀಯ ಚದುರಂಗದಲ್ಲಿ ಸಿಪಿಎಂ–ಮುಸ್ಲಿಂ ಲೀಗ್: 1967ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ   ಮುಸ್ಲಿಂ ಲೀಗ್ ನಿರ್ಣಾಯಕ ಶಕ್ತಿಯಾಗಿ ರಾಜಕೀಯ ಚದುರಂಗವಾಡಲು ನಿರ್ಧರಿಸಿತು. ಅದು ಸಿಪಿಎಂ ಜತೆ ಮೈತ್ರಿ ಮಾಡಲು ಮುಂದಾಯಿತು. ‘ಟೋಪಿ ಹಾಕುವವರಿಗೂ’ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿತು! ಸಿಪಿಎಂಗೆ ಸರ್ಕಾರ ರಚಿಸಲು ಬೆಂಬಲವೂ ಅಗತ್ಯವಿತ್ತು. ಇದರ ಪರಿಣಾಮ ಕೇರಳದಲ್ಲಿ ‘ಸಪ್ತ ಪಕ್ಷ ಮೈತ್ರಿಕೂಟ’(ಸಿಪಿಎಂ–ಸಿಪಿಐ–ಮುಸ್ಲಿಂ ಲೀಗ್–ಕೇರಳ ಕಾಂಗ್ರೆಸ್–ಆರ್ಎಸ್‌ಪಿ–ಕೆಎಸ್‌ಪಿ–ಕೆಟಿಪಿ) ಅಸ್ತಿತ್ವಕ್ಕೆ ಬಂತು. ಕೇರಳದ ರಾಜಕೀಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು.ಈ ಮೈತ್ರಿ ಕೂಟದಲ್ಲಿ ಮುಸ್ಲಿಂ ಲೀಗ್‌ ನಿರ್ಣಾಯಕ ಪಾತ್ರ ವಹಿಸಿತ್ತು. ಕಾಸರಗೋಡು ವಿಲೀನೀಕರಣ ವಿವಾದ ಸಕ್ರಿಯವಾಗಿದ್ದರೂ ಈ ಪ್ರದೇಶದ ರೈತರು, ಕಾರ್ಮಿಕರು ಕೇರಳದ ಸವಲತ್ತುಗಳಿಂದ ಪ್ರಭಾವಿತರಾಗಿದ್ದರು. ಎಂ.ರಾಮಣ್ಣ ರೈ ಕರ್ನಾಟಕ ಸಮಿತಿಯಲ್ಲಿ ಸಕ್ರಿಯವಾಗಿದ್ದು, ಅವರ ಬೆಂಬಲಿಗರು ಸಿಪಿಎಂಗೆ ಮತ ಹಾಕಿದರು. ಈ ಎರಡು ಪ್ರಮುಖ ಕಾರಣದಿಂದ ಎ.ಕೆ.ಜಿ. ಕಾಸರಗೋಡು ಲೋಕ ಸಭಾ ಕ್ಷೇತ್ರದಲ್ಲಿ ಭಾರಿ ಬಹುಮತ ಪಡೆಯಲು ಸಾಧ್ಯವಾಯಿತು ಎಂದು ಕೃಷಿಕ ಸಂಘದ ಕೇರಳ ರಾಜ್ಯ ಸಮಿತಿಯ ಸದಸ್ಯರಾಗಿದ್ದ ಮುಳಿಯಾರು ಪೇರಡ್ಕದ ವಿ.ನಾರಾಯಣನ್ ಅಂದಿನ ಲೋಕಸಭಾ ಚರಿತ್ರೆಯನ್ನು ಸ್ಮರಿಸುತ್ತಾರೆ.ಎ.ಕೆ.ಜಿ. ಸಾಧನೆ: 1967ರಲ್ಲಿ ಜಾರಿಗೆ ತಂದ ಬೀಡಿ–ಸಿಗಾರ್ ಕಾಯ್ದೆ ಎ.ಕೆ.ಜಿ. ವಿರೋಧ ಪಕ್ಷದ ಸಂಸದರಾಗಿ ಅನುಷ್ಠಾನಕ್ಕೆ ತಂದ ಮಸೂದೆ. ಎ.ಕೆ.ಜಿ. ಅವರ ಈ ಮಹತ್ವದ ಮಸೂದೆಯನ್ನು ಸರ್ಕಾರ ಅನುಷ್ಠಾನಕ್ಕೆ ತರುವಾಗ ‘ ಅಗತ್ಯವಿರುವ ಪ್ರದೇಶದಲ್ಲಿ ಆಸಕ್ತಿಯಿರುವ ಸರ್ಕಾರ ಬೇಕಾದ ಸಂದರ್ಭದಲ್ಲಿ ಜಾರಿಗೆ ತರಬಹುದು’ ಎಂದು ವಾಕ್ಯ ಸೇರಿಸಿತು! ಇದು ಮಸೂದೆಯ ದುರ್ಬಳಕೆಗೆ ಕಾರಣವಾಯಿತು. ಆದರೆ ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು. ಇದರಿಂದ ಭಾರಿ ಖಾಸಗಿ ಬೀಡಿ ಉದ್ಯಮಿಗಳು ಕಾಸರಗೋಡಿನಿಂದ ಕಾಲ್ಕಿತ್ತರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯದಲ್ಲಿ ‘ದಿನೇಶ್ ಬೀಡಿ’ ಎಂಬ ಸಹಕಾರಿ ಕ್ಷೇತ್ರದ ಉದ್ಯಮ ಅಸ್ತಿತ್ವಕ್ಕೆ ಬಂತು.ಕೊಚ್ಚಿಯಲ್ಲಿ ಹಡಗು ನಿರ್ಮಾಣ ಕಾರ್ಖಾನೆ ಸ್ಥಾಪನೆಗೆ ಕಾರಣಕರ್ತರಾದರು. ಕೈಮಗ್ಗ–ಹುರಿಹಗ್ಗ ಕಾರ್ಮಿಕರಿಗೆ ಉತ್ತೇಜನ ನೀಡಿದರು.

ಬಾಕ್ರನಂಗಲ್ ಅಣೆಕಟ್ಟು ನೀರಾವರಿಯ ಹೆಸರಲ್ಲಿ ಬಡ ರೈತರಿಂದ ಹಣ ವಸೂಲು ಮಾಡುತ್ತಿರುವುದನ್ನು ಕೇಳಿ ಸ್ಥಳಕ್ಕೆ ತೆರಳಿ ಹೋರಾಟಕ್ಕೆ ಕಾವು ನೀಡಿ ಮುಂಚೂಣಿಯಲ್ಲಿ ನಿಂತರು. ಅವರ ಹೋರಾಟ ಕಾಸರಗೋಡು–ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ದೇಶದ ಯಾವುದೇ ರಾಜ್ಯದ ರೈತ–ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದ ‘ಕಾಲದ ನಾಯಕ’ರಾಗಿದ್ದರು.ಕಾನೂನು ವಿದ್ಯಾರ್ಥಿಗಳಿಗೆ ಪಠ್ಯವಾದ ಪ್ರಕರಣ: ‘ಮಲಬಾರ್ ಗೇಣಿ ಕಾಯ್ದೆ’ ಕಾಸರಗೋಡಿನಲ್ಲಿ ಪರ ವಿರೋಧ ಚಳವಳಿಗೆ ಕಾರಣವಾಯಿತು. ಭೂಮಸೂದೆ ಜಾರಿಗೊಳಿಸಬೇಕು ಎಂದು ರೈತಾಪಿ ಜನರನ್ನು ಕಮ್ಯೂನಿಸ್ಟ್ ನಾಯಕರು ಒಗ್ಗೂಡಿಸುತ್ತಿದ್ದರು. ಆದರೆ ಭೂಮಾಲೀಕರು ಇದನ್ನು ವಿರೋಧಿಸಿ ತಮ್ಮ ಗೇಣಿದಾರ ರೈತರ ಮೇಲೆ ಪ್ರಭಾವ ಬೀರಿದರು. ಅಂಗಡಿಮೊಗರಿನ ಕುಮಾರನ್ ಎಂಬವರು ಇಂಥ ಪ್ರಭಾವಕ್ಕೊಳಗಾಗಿ ನೂರಾರು ರೈತರನ್ನು ಒಗ್ಗೂಡಿಸಿ ‘ಭೂಮಾಲೀಕರ ನೆಲ ತಮಗೆ ಬೇಡ’ ಎಂದು ಕಾಸರಗೋಡಿನಲ್ಲಿ ಚಳವಳಿ ನಡೆಸಿದರು. ಎಡನೀರು ಶ್ರೀಗಳು ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ಇದನ್ನು ಪ್ರಶ್ನಿಸಿ ಎ.ಕೆ.ಜಿ. ಸುಪ್ರೀಂ ಕೋರ್ಟಿನಲ್ಲಿ ಗೆಲುವು ಪಡೆದರು. ಅಲ್ಲದೆ ಈ ಪ್ರಕರಣವನ್ನು ದೇಶದ ಕಾನೂನು ವಿದ್ಯಾರ್ಥಿಗಳು ತಮ್ಮ ಪಠ್ಯದಲ್ಲಿ ಅಭ್ಯಾಸ ಮಾಡುವಂತೆ ನ್ಯಾಯಾಲಯ ಅದೇಶಿಸುವಲ್ಲಿಯೂ  ಯಶಸ್ವಿಯಾದರು ಎಂದು ವಿ.ನಾರಾಯಣನ್‌ ಸ್ಮರಿಸುತ್ತಾರೆ.ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಎ.ಕೆ.ಜಿ. ಅವರ ‘ಇಂಡಿಯನ್‌ ಕಾಫಿ ಹೌಸ್’ ಕೇರಳದಲ್ಲಿ ಹೋಟೆಲ್ ಉದ್ಯಮದಲ್ಲಿ ಕ್ರಾಂತಿ ಮಾಡಿದೆ. ಮತ್ತೊಬ್ಬ ಮೂಡಿಬರಲಿಲ್ಲ!: ಎ.ಕೆ.ಜಿ. ಯಾವತ್ತೂ ಒಕ್ಕಲು–ಭೂಮಾಲೀಕರ ಬಾಂಧವ್ಯ ಮುರಿಯದಂತೆ ಧನಿಗಳ ಮನವೊಲಿಸುತ್ತಿದ್ದರು. ಜಬರ್‌ದಸ್ತು ಇದ್ದರೆ ಅದನ್ನು  ಹೋರಾಟದ ಮೂಲಕ ಬಗ್ಗು ಬಡಿಯುತ್ತಿದ್ದರು. ಇಂಥ ಮನೋಭಾವದ ಮತ್ತೊಬ್ಬ ರಾಜಕಾರಣಿ ಈ ನೆಲದಲ್ಲಿ ಮತ್ತೆ ಮೂಡಿಬರಲಿಲ್ಲ ಎನ್ನುತ್ತಾರೆ ಹಿರಿಯರಾದ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಗಟ್ಟಿ ಕುಂಬಳೆ.ಬೀಡಿ–ಹೆಂಚು–ಕೂಲಿ ಕಾರ್ಮಿಕರು ಮತ್ತು ಶಿಕ್ಷಕ–ರೈತ–ಜಾತಿ ಸಂಘಟನೆಗಳನ್ನು ರಾಷ್ಟ್ರೀಯ ನಾಯಕರು ಭೇಟಿ ಮಾಡಿ ಉದ್ದೇಶವನ್ನು ಮನದಟ್ಟು ಮಾಡಿ ಪಕ್ಷದ ಬಲವರ್ಧನೆಗೆ ನಿರಂತರ ಶ್ರಮಿಸುತ್ತಿದ್ದರು. ರೈತ ಹೋರಾಟ–ಕ್ರಾಂತಿ ನಡೆದ ಸ್ಥಳಗಳು ಪಕ್ಷದ ಬಲಾಢ್ಯ ಕೇಂದ್ರಗಳಾಗಿ ಗಮನಸೆಳೆಯಿತು. ಕಯ್ಯೂರು, ಪೈವಳಿಕೆ, ವರ್ಕಾಡಿ, ಬಾಡೂರು ಮೊದಲಾದ ಪ್ರದೇಶಗಳು ಪಕ್ಷದ ಕೆಂಪು ಕೋಟೆಗಳೆಂದೇ ಗಮನ ಸೆಳೆದಿತ್ತು ಎಂದು ‘ಗಟ್ಟಿ ಮಾಸ್ಟರ್’ ವಿಶ್ಲೇಷಿಸುತ್ತಾರೆ.ಕಳೆದ ಮೂರೂ ಚುನಾವಣೆಗಳಲ್ಲೂ ಕಮ್ಯೂನಿಸ್ಟ್‌ ಪಕ್ಷದ ಜನಾಂದೋಲನದ ಪ್ರವಾಹದಲ್ಲಿ ಈಜಲು ಧೈರ್ಯ ತೋರದಿದ್ದ ಕಾಂಗ್ರೆಸ್‌ ಪಕ್ಷವು ಪ್ರಜಾ ಸೋಶಿಯಲಿಸ್ಟ್‌ ಪಕ್ಷ ಅಥವಾ ಪಕ್ಷೇತರರನ್ನು ಬೆಂಬಲಿಸುತ್ತಾ ಬಂದಿತ್ತು. ಈ ಬಾರಿ ಪಿ.ಎಸ್‌ಪಿ. ಸ್ಪರ್ಧೆಗಿಳಿಯದೆ ಕಾಂಗ್ರೆಸ್‌ ಕಣಕ್ಕಿಳಿದಿತ್ತು. ಆದರೆ ಅದರಲ್ಲಿ ಸೋಲು ಕಂಡಿತು. ಈ ಚುನಾವಣೆ ಕಾಂಗ್ರೆಸ್‌ಗೆ ಮುಖಭಂಗ ಮತ್ತು ಛಲವನ್ನು ಮೂಡಿಸಿತ್ತು.4ನೇ ಲೋಕಸಭಾ ಚುನಾವಣೆ ಫಲಿತಾಂಶ

ಈ ಚುನಾವಣೆಯಲ್ಲಿ ಕಾಸರಗೋಡು ಲೋಕ ಸಭಾ ಕ್ಷೇತ್ರದಲ್ಲಿ 4,67,371 ಮತದಾರರಲ್ಲಿ 3,51,097(ಶೇ.75.12) ಮಂದಿ ಮತದಾನ ಮಾಡಿದ್ದರು. ಇದರಲ್ಲಿ 3,35,921 ಮತಗಳು ಸಿಂಧುವಾಗಿತ್ತು.ಎ.ಕೆ.ಗೋಪಾಲನ್(ಸಿಪಿಎಂ) 2,06,480(ಶೇ.61.47) ಮತ ಗಳಿಸಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಸೃಷ್ಟಿಸಿದರು. ಈಗಲೂ ಇದು ದಾಖಲೆಯಾಗಿಯೇ ಉಳಿದಿದೆ! ಇಂಡಿಯನ್‌ ನ್ಯಾಷನಲ್ ಕಾಂಗ್ರೆಸ್‌(ಐಎನ್‌ಸಿ)ನ ಟಿ.ವಿ.ಸಿ.­ನಾಯರ್ ಅವರನ್ನು 1,18,510 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.ನಾಯರ್‌ಗೆ ಕೇವಲ 87,970­(ಶೇ.26.19) ಮತಗಳಷ್ಟೇ ಸಿಕ್ಕಿತ್ತು. ಭಾರತೀಯ ಜನ ಸಂಘ್ (ಬಿ.ಜೆ.ಎಸ್)ನಿಂದ ಕಣಕ್ಕಿಳಿದಿದ್ದ ಎಂ.ಯು.ರಾವ್ ಅವರಿಗೆ 41,471(ಶೇ.12.35) ಮತಗಳು ಲಭಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.