‘ದೇವದಾಸಿ ಮಕ್ಕಳಿಗೆ ಸೌಲಭ್ಯ ನೀಡಿ’

ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಿಲ್ಲಾಘಟಕದ ಕಾರ್ಯಕರ್ತರು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಿದರು.
ಸಮಿತಿ ಗೌರವಾಧ್ಯಕ್ಷ ಜಿ. ನಾಗರಾಜ ಮಾತನಾಡಿ, ‘ರಾಜ್ಯದಲ್ಲಿ ದೇವದಾಸಿ ಪದ್ಧತಿಗೆ ತುತ್ತಾದ ಶೋಷಿತ ಮಹಿಳೆಯರ ಕುಟುಂಬಗಳು ಸುಮಾರು ಒಂದು ಲಕ್ಷದಷ್ಟಿವೆ. ಅವರ ಕುಟುಂಬದ ಸದಸ್ಯರು 10 ಲಕ್ಷಕ್ಕಿಂತ ಹೆಚ್ಚಾಗಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ದೇವದಾಸಿ ತಾಯಂದಿರ ಸಂಕಷ್ಟಗಳು ಸಾಕಷ್ಟಿವೆ. ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಯಿಂದ ಹೊರಬರಲು ಸರ್ಕಾರದ ಸಹಕಾರ ಅಗತ್ಯ. ಸಮಾಜದಲ್ಲಿ ನಮಗೊಂದು ಗೌರವದ ಬದುಕನ್ನು ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯಕ್ಕೊಳಗಾದ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರಿಗೆ ಪುನರ್ವಸತಿ ಕಲ್ಪಿಸಿ ಕೊಡಬೇಕು. ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು. ದೌರ್ಜನ್ಯಕ್ಕೆ ತುತ್ತಾದ ಕುಟುಂಬಗಳ ಮಕ್ಕಳಿಗೆ ಅವರ ತಂದೆಯ ಆಸ್ತಿಗಳಲ್ಲಿ ಪಾಲುಕೊಡಿಸಬೇಕು. ದೇವದಾಸಿ ಮಹಿಳೆಯ ಮಕ್ಕಳನ್ನು ದತ್ತುಪಡೆದು ಅಗತ್ಯ ವಿದ್ಯಾಭ್ಯಾಸ ಮತ್ತು ಕಡ್ಡಾಯ ಉದ್ಯೋಗ ನೀಡಬೇಕು. ಶೋಷಿತ ಮಹಿಳೆಯ ಹೆಣ್ಣುಮಕ್ಕಳ ಮದುವೆಗೆ ₹ 2 ಲಕ್ಷ ನೆರವು ನೀಡಬೇಕು.
ಕೇಂದ್ರ ಸರ್ಕಾರವೂ ದೇವದಾಸಿ ಮಹಿಳೆಯರಿಗೆ ತಲಾ ₹ 1 ಸಾವಿರ ಮಾಸಿಕ ಸಹಾಯಧನ ನೀಡಬೇಕು. ದಲಿತ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಬೇಕು. ಹಳ್ಳಿಗಳಲ್ಲಿ ಉಳಿದಿರುವ ಅಸ್ಪೃಶ್ಯತೆಗೆ ಕಡಿವಾಣ ಹಾಕಬೇಕು. ಎಫ್‌ಸಿಎಫ್‌ಟಿ/ಟಿಎಸ್‌ಪಿ ಕಾಯ್ದೆಯಲ್ಲಿನ ಲೋಪದೋಷಗಳು ತಿದ್ದುಪಡಿ ನಿಯಮಗಳನ್ನು ತುರ್ತಾಗಿ ರಚಿಸಿ ಜಾರಿಗೆ ತರಬೇಕು. ದೇವದಾಸಿ ಪದ್ಧತಿಗೆ ಒಳಗಾದ ಮಹಿಳೆಯರಿಗೆ ಪ್ಯಾಕೇಜ್ ರೂಪಿಸಿ ಸಬಲರನ್ನಾಗಿ ಮಾಡಬೇಕು ಎಂದರು.
ಬಸವರಾಜ ಗೋನಾಳ, ಜಿ. ಹುಲಿಗೆಮ್ಮ, ನಿಂಗಪ್ಪ, ಮಲ್ಲಮ್ಮ ಬಿಸರಳ್ಳಿ, ಶಿವಗಂಗಮ್ಮ ಕವಲೂರು, ಹುಚ್ಚಮ್ಮ ಹೊಸಳ್ಳಿ, ಕಾಳಮ್ಮ ಹಿಟ್ನಾಳ, ಶಿವರಾಂ ಪೂಜಾರಿ, ಫಕೀರಮ್ಮ ಪೂಜಾರ, ಮರಿಯಮ್ಮ ಹೊಸಮನಿ, ಕನಕರಾಯ ಹೊಸಳ್ಳಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.