‘ನಂ 174/ಎ ಕಮಲಾನಗರ’ ವಿಳಾಸದ ಮಹಿಮೆ!

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಗೆ ‘ನಂ.174/ಎ, 1ನೇ ಮುಖ್ಯ ರಸ್ತೆ, ಕಮಲಾನಗರ ಬೆಂಗಳೂರು–79’ ಎಂಬ ವಿಳಾಸದ ಬಗ್ಗೆ ಅಪಾರ ಪ್ರೀತಿ. ಯಾಕೆಂದರೆ ಈ ವಿಳಾಸದ ಹಲವಾರು ಮಂದಿಗೆ ವಿವೇಚನಾ ಕೋಟಾದಲ್ಲಿ ಅದು ನಿವೇಶನಗಳನ್ನು ಮಂಜೂರು ಮಾಡಿದೆ.
ಈ ನಿವೇಶನಗಳನ್ನು ನೋಂದಣಿ ಮಾಡಿಸುವಾಗ ವಿಳಾಸದ ದೃಢೀಕರಣಕ್ಕೆ ಮತದಾರರ ಗುರುತಿನ ಚೀಟಿ, ಡಿಎಲ್, ಪ್ಯಾನ್ಕಾರ್ಡ್ ಹಾಜರುಪಡಿಸಲಾಗಿದೆ. ಬೇರೆ ಬೇರೆ ಹೆಸರಿದ್ದರೂ ವಿಳಾಸ ಮಾತ್ರ ಒಂದೆ! ಅಂದರೆ ವಿಳಾಸದ ದಾಖಲೆಗಳೂ ನಕಲಿಯಾಗಿರುವ ಶಂಕೆಯಿದೆ.
ವಿಳಾಸ ಒಂದೆ: ಈ ವಿಳಾಸದಲ್ಲಿರುವ ಎಚ್.ಆರ್.ದೇಸಾಯಿ ಅವರಿಗೆ ಕೆಂಗೇರಿ ಬಂಡೆಮಠ ಬಡಾವಣೆಯಲ್ಲಿ ಎಲ್ಐಜಿ ನಿವೇಶನ ಸಂಖ್ಯೆ 177ನ್ನು ಮಂಜೂರು ಮಾಡಲಾಗಿದೆ. ಇದೇ ವಿಳಾಸದಲ್ಲಿರುವ ಕೆಂಪಶೆಟ್ಟಿ ಎನ್ನುವವರಿಗೆ ಸೂರ್ಯನಗರದಲ್ಲಿ ನಿವೇಶನ ಸಂಖ್ಯೆ 193ರನ್ನು ಮಂಜೂರು ಮಾಡಲಾಗಿದೆ.
ರಾಜಣ್ಣ ಅವರಿಗೆ ಸೂರ್ಯನಗರದಲ್ಲಿರುವ ಎಂಐಜಿ ಮನೆ ನಂ. 291ನ್ನು ನೀಡಲಾಗಿದೆ. ಮೋಹನ್ ಎನ್ನುವವರಿಗೆ ಕೆಂಗೇರಿ ಬಂಡೇಮಠದ ಎಲ್ಐಜಿ ಮನೆ ನಂ 201ನ್ನು ಮಂಜೂರು ಮಾಡಲಾಗಿದೆ.
ಇದೇ ವಿಳಾಸವನ್ನು ಬಳಸಿಕೊಂಡು ಸೋಮಣ್ಣ ಎಂಬುವವರಿಗೆ ಸೂರ್ಯನಗರದಲ್ಲಿ ಎಚ್ಐಜಿ ಮನೆ ನಂ 970ನ್ನು ಮಂಜೂರು ಮಾಡಲಾಗಿದೆ. ಈ ಮನೆಯನ್ನು ಬಸವನಗುಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗೃಹ ಮಂಡಳಿ ಎಇಇ ಅವರು 11–11–2013ರಂದು ನೋಂದಣಿಯನ್ನೂ ಮಾಡಿಕೊಟ್ಟಿದ್ದಾರೆ.
ಮನೆಯನ್ನು ಪಡೆಯಲು ಸೋಮಣ್ಣ ಅವರು ಕಾರ್ಪೋರೇಷನ್ ಬ್ಯಾಂಕ್ನಿಂದ ಸಾಲವನ್ನೂ ಪಡೆದುಕೊಂಡಿದ್ದಾರೆ. ಸೋಮಣ್ಣ ಅವರಿಗೆ ಇದೇ ವಿಳಾಸದ ಮತದಾರರ ಗುರುತಿನ ಚೀಟಿಯೂ ಇದೆ. ಪ್ಯಾನ್ ಕಾರ್ಡ್ ಕೂಡ ಇದೆ.
ಈ ವಿಳಾಸದಲ್ಲಿಯೇ ಇದ್ದಾರೆ ಎನ್ನಲಾದ ರವಿ. ಎಚ್. ಅವರಿಗೆ ಸೂರ್ಯನಗರದ ನಿವೇಶನ ಸಂಖ್ಯೆ 1566 ಎಂಐಜಿ–2 ಮಂಜೂರಾಗಿದೆ. ಇದು 30–9–2013ರಂದು ಆನೆಕಲ್ ತಾಲ್ಲೂಕು ಅತ್ತಿಬೆಲೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. ಇಲ್ಲಿಯೂ ವಿಳಾಸ ದೃಢೀಕರಣವನ್ನು ಬಳಸಲಾಗಿದೆ.
ಬದಲಾದ ವಿಳಾಸ: ಗೃಹ ಮಂಡಳಿಯ ಆಯುಕ್ತರ ಪರವಾಗಿ ಮಂಡಳಿ ಅಧಿಕಾರಿಗಳು 16–4–2013ರಂದು ಶಾಂತಿ, ವೈಫ್ ಆಫ್ ಸ್ವಾಮಿಗೌಡ, 66, ಮೊದಲ ಮಹಡಿ, ಮುಝಲ್ ಮಂಜಿಲ್, ಕರೆಕಲ್ಲು, ಬೆಂಗಳೂರು–79 ಅವರಿಗೆ ಪತ್ರ ಬರೆದು ವಸತಿ ಇಲಾಖೆ ಕಾರ್ಯದರ್ಶಿ ಆದೇಶದ ಮೇರೆಗೆ ಗೃಹ ಮಂಡಳಿಯ ವಿವೇಚನಾ ಕೋಟಾದಲ್ಲಿ ತಮಗೆ ಸೂರ್ಯನಗರ ಒಂದನೇ ಹಂತದಲ್ಲಿ ಎಂಐಜಿ–2 ಸ್ವತ್ತಿನ ಸಂಖ್ಯೆ 925ನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸುತ್ತಾರೆ. ಇದರ ಬೆಲೆ ₨ 17,26,330. ಆರಂಭಿಕ ಠೇವಣಿ 71 ಸಾವಿರ ರೂಪಾಯಿಯನ್ನು ಪಾವತಿ ಮಾಡುವಂತೆ ಸೂಚಿಸುತ್ತಾರೆ.
ಇದಾಗಿ ಕೆಲವೇ ದಿನಗಳಲ್ಲಿ ಅಂದರೆ 20–5–2013ರಂದು ಆಯುಕ್ತರ ಪರವಾಗಿ ಅಧಿಕಾರಿಗಳು ಶಾಂತಿ ಅವರಿಗೆ ಮತ್ತೊಂದು ಪತ್ರ ಬರೆಯುತ್ತಾರೆ. ಈ ಪತ್ರ ಬರೆಯುವ ವೇಳೆಗೆ ಶಾಂತಿ ಅವರ ವಿಳಾಸ ಬದಲಾಗಿರುತ್ತದೆ.
ಈ ಪತ್ರದಲ್ಲಿ ಶಾಂತಿ ಅವರ ವಿಳಾಸ ನಂ 174/ಎ, ಮೊದಲ ಮುಖ್ಯ ರಸ್ತೆ, ಕಮಲಾನಗರ, ಬೆಂಗಳೂರು ಎಂದು ಇದೆ. ಈ ಪತ್ರದಲ್ಲಿ ನಿವೇಶನದ ಸಂಖ್ಯೆ, ಜಾಗ ಎಲ್ಲವೂ ಮೊದಲ ಪತ್ರದಂತೆಯೇ ಇದೆ. ಆದರೆ ‘ಪೂರ್ಣ ಬೆಲೆ’ ಆಧಾರದ ಮೇಲೆ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿ ₨ 4,14,083 ರಂತೆ ನಾಲ್ಕು ಕಂತಿನಲ್ಲಿ ಹಣ ನೀಡುವಂತೆ ಸೂಚಿಸಲಾಗಿದೆ.
ಇದಲ್ಲದೆ ಶಾಂತಿ ಅವರಿಗೆ ಬ್ಯಾಂಕ್ನಿಂದ ಸಾಲ ಪಡೆಯಲು ಅನುಕೂಲವಾಗುವಂತೆ ಗೃಹ ಮಂಡಳಿ ಆಯುಕ್ತರು ನಿರಾಕ್ಷೇಪಣಾ ಪತ್ರವೊಂದನ್ನೂ ನೀಡಿದ್ದಾರೆ. ಅದರಲ್ಲಿಯೂ 174/ಎ ಕಮಲಾನಗರದ ವಿಳಾಸವೇ ಇದೆ. ಶಾಂತಿ ಅವರು ನೋಟರಿ ಅವರ ಮುಂದೆ ಪ್ರಮಾಣ ಮಾಡಿ ತಾವು ಇದೇ ವಿಳಾಸದಲ್ಲಿ ಇರುವುದಾಗಿ ಹೇಳಿದ್ದಾರೆ. ಈ ಪ್ರಮಾಣ ಪತ್ರವನ್ನೂ ಗೃಹ ಮಂಡಳಿಗೆ ಸಲ್ಲಿಸಲಾಗಿದೆ.
ಇನ್ನೊಂದು ವಿಳಾಸ: ಒಂದೇ ವಿಳಾಸದ ವ್ಯಕ್ತಿಗಳಿಗೆ ಮನೆ ಅಥವಾ ನಿವೇಶನವನ್ನು ಹಂಚಿದ್ದು ಇದೊಂದು ನಿದರ್ಶನ ಅಲ್ಲ. ‘ನಂ.233, ಮೊದಲನೇ ಜಿ ಅಡ್ಡ ರಸ್ತೆ, 3ನೇ ಹಂತ, 4ನೇ ಬ್ಲಾಕ್, ಬಸವೇಶ್ವರನಗರ’ ಈ ವಿಳಾಸದ ಹಲವರಿಗೆ ನಿವೇಶನವನ್ನು ಮಂಜೂರು ಮಾಡಲಾಗಿದೆ.
ಈ ವಿಳಾಸದಲ್ಲಿರುವ ಸಿದ್ದೇಗೌಡ ಎನ್ನುವವರಿಗೆ ಸೂರ್ಯನಗರದ ಎಚ್ಐಜಿ ನಿವೇಶನ ಸಂಖ್ಯೆ 360ನ್ನು ಮಂಜೂರು ಮಾಡಲಾಗಿದೆ. ಗೃಹ ಮಂಡಳಿ ಆಯುಕ್ತರ ಪರವಾಗಿ ಅಧಿಕಾರಿಗಳು 27–6–2012ರಂದು ಸಿದ್ದೇಗೌಡ ಅವರಿಗೆ ಪತ್ರ ಬರೆದು ಮಂಜೂರಾತಿಯ ವಿಷಯ ತಿಳಿಸಿದ್ದಾರೆ.
ಈ ನಿವೇಶನದ ಬೆಲೆ ₨ 27, 12, 528. ಈ ಹಣವನ್ನು ₨6,65,644ರಂತೆ ನಾಲ್ಕು ಕಂತಿನಲ್ಲಿ ನೀಡಲು ತಿಳಿಸಲಾಗಿದೆ. ಇವರಿಗೂ ಕೂಡ ಬ್ಯಾಂಕ್ಗಳಿಂದ ಸಾಲ ಪಡೆಯಲು ಆಯುಕ್ತರು ನಿರಾಕ್ಷೇಪಣಾ ಪತ್ರ ನೀಡಿದ್ದಾರೆ. ಸಿದ್ದೇಗೌಡ ಈ ವಿಳಾಸದಲ್ಲಿಯೇ ಇದ್ದಾರೆ ಎನ್ನುವುದಕ್ಕೆ ಮತದಾರರ ಗುರುತಿನ ಚೀಟಿಯೂ ಇದೆ.
ಇದೇ ವಿಳಾಸದಲ್ಲಿರುವ ಮಹದೇವ ಎನ್ನುವವರಿಗೂ ಸೂರ್ಯನಗರದ ಎಚ್ಐಜಿ ನಿವೇಶನ ಸಂಖ್ಯೆ 969ನ್ನು ಮಂಜೂರು ಮಾಡಲಾಗಿದೆ. ಈ ನಿವೇಶನ ಬಸವನಗುಡಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 11–11–2013ರಂದು ನೋಂದಣಿಯೂ ಆಗಿದೆ. ಮಹದೇವ ಈ ವಿಳಾಸದಲ್ಲಿಯೇ ಇದ್ದಾರೆ ಎನ್ನುವುದಕ್ಕೆ ಮತದಾರರ ಗುರುತಿನ ಚೀಟಿಯನ್ನೂ ನೀಡಲಾಗಿದೆ.
ಹೀಗೆ ಒಂದೇ ವಿಳಾಸದ ಮತದಾರರ ಚೀಟಿ, ಡಿಎಲ್, ಪ್ಯಾನ್ ಕಾರ್ಡ್ ಗಳನ್ನು ನೀಡಿ ನಿವೇಶನಗಳನ್ನು ನೋಂದಣಿ ಮಾಡಿಸಲಾಗಿದೆ. ಗೃಹ ಮಂಡಳಿ ಒಂದೇ ವಿಳಾಸದಲ್ಲಿರುವ ಹಲವರಿಗೆ ಮಂಜೂರು ಮಾಡಿದೆ. ಇಂತಹ ಚಮತ್ಕಾರ ನಡೆದಿದ್ದು ಹೇಗೆ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.