ಗುರುವಾರ , ಜೂನ್ 24, 2021
28 °C
ಕಠಿಣ ಪರಿಶ್ರಮ ಯಶಸ್ಸಿನ ಗುಟ್ಟು, ವಿಜಯ ಹಜಾರೆ ಟ್ರೋಫಿ ಗೆಲ್ಲುವ ವಿಶ್ವಾಸವಿತ್ತು: ರಾಬಿನ್‌ ಉತ್ತಪ್ಪ

‘ನಮ್ಮ ಸಾಧನೆ ಅಭಿಮಾನಿಗಳಿಗೆ ಅರ್ಪಣೆ’

ಪ್ರಜಾವಾಣಿ ವಾರ್ತೆ/ ಪ್ರಮೋದ್‌ ಜಿ.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರತಿ ಪಂದ್ಯದಲ್ಲೂ ಕರ್ನಾಟಕ ತಂಡವೇ ಗೆಲ್ಲಬೇಕು ಎಂದು  ಅಭಿಮಾನಿಗಳು ಹಾರೈಸುತ್ತಿದ್ದರು. ಅವರ ಹಾರೈಕೆಯ ಫಲ ಮತ್ತು ಆಟಗಾರರ ಶ್ರಮದಿಂದ ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು. ಎಲ್ಲಾ ಸಾಧನೆಗೆ ಬೆಂಬಲವಾಗಿ ನಿಂತ ಕ್ರಿಕೆಟ್‌ ಪ್ರೇಮಿಗಳಿಗೆ ನಮ್ಮ ತಂಡದ ಸಾಧನೆ ಅರ್ಪಣೆ...’ಕರ್ನಾಟಕ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ ಸ್ಪಷ್ಟ ಮಾತಿದು.ಕೋಲ್ಕತ್ತದಲ್ಲಿ ಭಾನುವಾರ ನಡೆದ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ತಂಡ ರೈಲ್ವೇಸ್‌ ಎದುರು ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.  ಇದಕ್ಕೂ ಮೊದಲು ರಣಜಿ ಮತ್ತು ಇರಾನಿ ಕಪ್‌ನಲ್ಲೂ ಚಾಂಪಿಯನ್‌ ಆಗಿತ್ತು. ವಿಜಯ ಹಜಾರೆಯಲ್ಲಿ ಪ್ರಶಸ್ತಿ ಜಯಿಸಿದ್ದು ಇದೇ ಮೊದಲು.ಕರ್ನಾಟಕ ತಂಡ ಈ ಟೂರ್ನಿಯಲ್ಲಿ ಹಿಂದೆ ಐದು ಸಲ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿತ್ತು.   ಆರಂಭಿಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಈ ಸಲ ಕ್ವಾರ್ಟರ್‌ ಫೈನಲ್‌ ಮತ್ತು ಸೆಮಿಫೈನಲ್‌ ಪಂದ್ಯಗಳಲ್ಲಿ ಶತಕ ಗಳಿಸಿ ತಂಡ ಫೈನಲ್‌ ಪ್ರವೇಶಿಸಲು ಕಾರಣರಾಗಿದ್ದರು. ಈ ಟೂರ್ನಿಯ ಹಿಂದಿನ ಎಂಟು ಪಂದ್ಯಗಳಿಂದ ಅವರು ಮೂರು ಶತಕ ಸೇರಿದಂತೆ 536 ರನ್‌ ಕಲೆ ಹಾಕಿದ್ದಾರೆ. ಅವರು ಪತ್ರಿಕೆಗೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.* ಕರ್ನಾಟಕ ತಂಡ ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಗೆದ್ದಿದೆ. ಈ ಬಗ್ಗೆ ಹೇಳಿ?

ಆಟಗಾರರು  ಅರ್ಪಣಾ ಮನೋಭಾವದಿಂದ ಆಡಿದ್ದರಿಂದ ಮೂರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು. ಇಂಥದ್ದೊಂದು ಸಾಧನೆ ಮಾಡುವ  ವಿಶ್ವಾಸವಿತ್ತು. ಏಕೆಂದರೆ, ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ.* ಕರ್ನಾಟಕದ ಈ ಎಲ್ಲಾ ಸಾಧನೆಗೆ ಕಾರಣವೇನೆಂದು ವಿಶ್ಲೇಷಿಸುತ್ತೀರಿ?

ಹಿಂದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರೆ ಅದರೆ ಬಗ್ಗೆ ಹೆಚ್ಚು ಚಿಂತಿಸಲು ಹೋಗುತ್ತಿರಲಿಲ್ಲ. ಏಕೆಂದರೆ, ಹಿಂದಿನ ವೈಫಲ್ಯ ನೆನಪಿಸಿಕೊಂಡು ಮುಂದಿನ ಪಂದ್ಯದಲ್ಲಿಯೂ ನಿರಾಸೆ ಕಾಣುವುದು ಬೇಡ ಎನ್ನುವುದು ಎಲ್ಲಾ ಆಟಗಾರರ ತೀರ್ಮಾನವಾಗಿತ್ತು. ಪ್ರತಿ ಪಂದ್ಯದಲ್ಲಿಯೂ ಗೆಲುವಿಗಾಗಿಯೇ ಆಡಬೇಕೆನ್ನುವ ಗುರಿ ಹೊಂದಿದ್ದು ಯಶಸ್ಸಿಗೆ ಕಾರಣ.* ಈ ಸಲದ ದೇಶಿಯ ಟೂರ್ನಿಯಲ್ಲಿ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲು ಸಾಧ್ಯವಾಗಿದ್ದು ಹೇಗೆ?

ತುಂಬಾ ವರ್ಷ ರಣಜಿ ಟೂರ್ನಿ ಆಡಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ ನಿರಾಸೆ ಸಾಕಷ್ಟು ಕಾಡುತ್ತಿತ್ತು. ಆದ್ದರಿಂದ ಮುಂದಿನ ಋತುಗಳಲ್ಲಿ ರಣಜಿ ಚಾಂಪಿಯನ್‌ ಆಗಲೇಬೇಕು ಎನ್ನುವ ಛಲವಿತ್ತು. ಅದಕ್ಕಾಗಿ ಎರಡು ವರ್ಷಗಳಿಂದ  ಅಭ್ಯಾಸ ನಡೆಸುತ್ತಿದ್ದೆ.  ಸಾಕಷ್ಟು ಸಮಯ ಅಭ್ಯಾಸದಲ್ಲಿ ಕಳೆದ ಕಾರಣ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು. ಈ ಬಗ್ಗೆ ನನಗೆ ಹೆಚ್ಚು ಖುಷಿಯೇನಿಲ್ಲ. ಏಕೆಂದರೆ, ತಂಡದ ಹಿರಿಯ ಆಟಗಾರನಾಗಿ ನನ್ನ ಜವಾಬ್ದಾರಿ  ನಿಭಾಯಿಸಿದ್ದೇನೆ ಅಷ್ಟೇ.* ತಂಡದ ಯುವ ಆಟಗಾರರ ಪ್ರದರ್ಶನದ ಬಗ್ಗೆ ಅಭಿಪ್ರಾಯವೇನು?

ಯುವ ಆಟಗಾರರೇ ನಮ್ಮ ತಂಡದ ಶಕ್ತಿ. ಕರುಣ್‌ ನಾಯರ್, ಕೆ.ಎಲ್. ರಾಹುಲ್‌ ತುಂಬಾ ಚೆನ್ನಾಗಿ ಆಡಿದರು. ಹಿರಿಯ, ಕಿರಿಯ ಎನ್ನುವ ಯಾವ ಭೇದವಿಲ್ಲದೆ ಒಳ್ಳೆಯ ಸ್ನೇಹಿತರಂತೆ ಇದ್ದೇವೆ. ಡ್ರೆಸ್ಸಿಂಗ್‌ ಕೊಠಡಿಯ ವಾತಾವರಣವೂ ಸ್ನೇಹಮಯವಾಗಿದೆ.* ವಿಜಯ ಹಜಾರೆ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ನೀವು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದದ್ದಕ್ಕೆ ಕಾರಣವೇನು?

ಫೈನಲ್‌ಪಂದ್ಯದಲ್ಲಿ ಚೆನ್ನಾಗಿ  ಆಡಿ ಗೆಲುವು ತಂದುಕೊಡಬೇಕು ಎನ್ನುವ ಆಸೆ ಹೊತ್ತು  ಕ್ರೀಸ್‌ಗೆ ಬಂದಿದ್ದೆ. ಆದರೆ, ಈಡನ್ ಗಾರ್ಡನ್ಸ್‌ ಅಂಗಳದ ಪಿಚ್‌ನಲ್ಲಿ ಚೆಂಡು ಹೆಚ್ಚು ಪುಟಿಯುತ್ತಿದ್ದ ಕಾರಣ ನಿಖರವಾಗಿ ಚೆಂಡನ್ನು ಅಂದಾಜಿಸಲು ಸಾಧ್ಯವಾಗಲಿಲ್ಲ.  ಕೊಂಚ ತಾಳ್ಮೆ ವಹಿಸಿದ್ದರೆ ಚೆನ್ನಾಗಿಯೇ ಆಡಬಹುದಿತ್ತು ಎಂದು ನಂತರ ಅನಿಸಿತು.* ರಣಜಿ, ಇರಾನಿ ಹಾಗೂ ವಿಜಯ ಹಜಾರೆ ಟ್ರೋಫಿ ಗೆದ್ದ ಸಾಧನೆಯನ್ನು ಯಾರಿಗೆ ಅರ್ಪಿಸಲು ಇಷ್ಟಪಡುತ್ತೀರಿ?

ನಮ್ಮ ಸಾಧನೆಗೆ ಬೆಂಬಲವಾಗಿ ನಿಂತ ಕರ್ನಾಟಕ ತಂಡದ ಅಭಿಮಾನಿಗಳಿಗೆ ಹಾಗೂ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಎಲ್ಲಾ ಸಾಧನೆಯ ಗೌರವ ಅರ್ಪಣೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.