ಭಾನುವಾರ, ಜನವರಿ 26, 2020
18 °C
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾ.ಡಿಸೋಜ ಆಯ್ಕೆಗೆ ಗಣ್ಯರ ಸಂತಸ

‘ನಾಡಿ’ಗೆ ಅಧ್ಯಕ್ಷ ಸ್ಥಾನ; ಮಲೆನಾಡಿಗೆ ಗೌರವ

ಪ್ರಜಾವಾಣಿ ವಾರ್ತೆ/ –ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

ಸಾಗರ: ವರ್ತಮಾನ ಆಗುಹೋಗುಗಳಿಗೆ, ತಲ್ಲಣಗಳಿಗೆ ಲೇಖಕನಾದವನು ವಿವಿಧ ರೀತಿಗಳಲ್ಲಿ ಮುಖಾಮುಖಿಯಾಗುತ್ತಾನೆ. ತನ್ನ ಕೃತಿಗಳ ಮೂಲಕ ಅಭಿವ್ಯಕ್ತಿಸುವುದಕ್ಕೆ ಸೀಮಿತವಾಗುವುದು ಒಂದು ಬಗೆಯ ಪ್ರತಿಕ್ರಿಯೆಯಾದರೆ ಅದನ್ನು ಮೀರಿ ಬೀದಿಗೂ ಇಳಿಯಲು ಸಿದ್ದನಾಗುವ ಹೋರಾಟಗಾರನ ಮನಸ್ಥಿತಿ ಮತ್ತೊಂದು ಬಗೆಯದ್ದು. ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಈ ಬಗೆಯ ಮನಸ್ಥಿತಿಯವರು.ಮೇಲ್ನೊಟಕ್ಕೆ ಅತ್ಯಂತ ತಣ್ಣನೆಯ ವ್ಯಕ್ತಿಯಂತೆ ಕಾಣುವ ‘ನಾಡಿ’ ಅವರು  ವ್ಯವಸ್ಥೆಯ ವಿರುದ್ದ ಮಾತನಾಡುವ ಸಂದರ್ಭ ಬಂದಾಗ ಯಾವುದೇ ನಯ ನಾಜುಕು ತೋರದೆ ನಿರ್ಭಿಡೆಯಿಂದ ಪ್ರತಿಕ್ರಿಯಿಸುತ್ತಾರೆ. ಈ ಮಾತು ಅವರ ಕೃತಿ, ಭಾಷಣ, ಹೋರಾಟ ಇವೆಲ್ಲದಕ್ಕೂ ಅನ್ವಯಿಸುತ್ತದೆ.ಹಾಗೆ ನೋಡಿದರೆ ಡಿಸೋಜ ಅವರನ್ನು ಲೇಖಕರನ್ನಾಗಿ ರೂಪಿಸಿದ್ದೆ ಅವರ ಸುತ್ತಲಿನ ಸಮುದಾಯ ಎಂಬುದನ್ನು ಅವರೆ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ನೌಕರನಾಗಿ ಕಣ್ಣಾರೆ ಕಂಡ ಅಧಿಕಾರಶಾಹಿಯ ಜಡತ್ವ, ಭ್ರಷ್ಟತೆ, ಜಲ ವಿದ್ಯುತ್‌ ಯೋಜನೆಗಾಗಿ ಉಂಟಾದ ಮುಳುಗಡೆಯಿಂದ ಈ ಭಾಗದ ಜನ ತಮ್ಮ ಬದುಕನ್ನೆ ಕಳೆದುಕೊಂಡ ದುರಂತ, ಧರ್ಮ ಎನ್ನುವುದು ಸಾಂಸ್ಥಿಕ ರೂಪ ಪಡೆದಾಗ ಉಂಟಾಗುವ ಅವಾಂತರಗಳು, ಆಧುನಿಕತೆ, ಅಭಿವೃದ್ದಿ ಹೆಸರಿನಲ್ಲಿ ರೂಪಾಂತರಗೊಳ್ಳುವ ಜೀವನ ಕ್ರಮ... ಹೀಗೆ ಹತ್ತು ಹಲವು ಸಮುದಾಯದ ಸಂಗತಿಗಳೆ ಡಿಸೋಜ ಅವರ ಸಾಹಿತ್ಯ ಭಾವಕೋಶದಲ್ಲಿ ದಾಖಲಾಗಿದೆ.ಭೂ ಮಾಲೀಕರ ದಬ್ಬಾಳಿಕೆಯ ವಿರುದ್ದ ಸಿಡಿದೆದ್ದು ನಡೆದ ಕಾಗೋಡು ಸತ್ಯಾಗ್ರಹ ಡಿಸೋಜ ಅವರ ಕಥೆಗಳಿಗೆ ವಸ್ತುವಾದದ್ದು ಅವರು ಸಮುದಾಯದ ಭಾಗವಾದ ಲೇಖಕನಾಗಿರುವುದರಿಂದ ಸಹಜವಾಗಿಯೆ ಇದೆ. ಅಂತೆಯೆ ಮಲೆನಾಡಿನ ದೀವರ ಹಸೆ ಚಿತ್ತಾರ ಸೇರಿದಂತೆ ಹಲವು ಸಾಂಪ್ರದಾಯಿಕ ಆಚರಣೆಗಳು ಅವರನ್ನು ಸೆಳೆದದ್ದು ಡಿಸೋಜರೊಳಗೊಬ್ಬ ಕಲಾವಿದ ಇದ್ದಾನೆ ಎನ್ನುವುದಕ್ಕೆ ಸಾಕ್ಷಿಯಂತಿದೆ.

ಮುಖ್ಯವಾಹಿನಿಯಿಂದ ದೂರವಿರುವ ಹಸಲರಂತಹ ಬುಡಕಟ್ಟು ಜನಾಂಗದವರ ಬಗ್ಗೆಯೂ ಆಸಕ್ತಿ ತೋರಿದ್ದು ಡಿಸೋಜ ಅವರ ಜೀವನ ದೃಷ್ಟಿಯ ಧ್ಯೋತಕವಾಗಿದೆ. ದಲಿತ, ಬಂಡಾಯ ಹೀಗೆ ಯಾವುದೇ ಪಂಥಕ್ಕೆ ಸೇರದ ಲೇಖಕರಾದರೂ ಕ್ರಿಶ್ಚಿಯನ್‌ ಸಮುದಾಯದ ಕುರಿತ ಅವರ ಕೃತಿಗಳಲ್ಲಿ ಘೋಷಿತ ಧಾರ್ಮಿಕ ನಡಾವಳಿಗಳ ಹಿಂದಿನ ಸ್ವಾರ್ಥ, ಹಿಂಸೆ ಅನಾವರಣ ಗೊಂಡಿರುವುದನ್ನು ಅಲ್ಲಗಳೆಯುವಂತಿಲ್ಲ.ಡಿಸೋಜ ಅವರ ಬದುಕು ಮತ್ತು ಬರಹ ಬೇರೆ ಬೇರೆಯಲ್ಲಾ ಎನ್ನುವ ಮಟ್ಟಿಗೆ ಅವರ ಬದುಕು ಸಾಗಿದೆ. ಇಂದಿಗೂ ಸಾಗರ ನಗರದ ನೆಹರೂ ಬಡಾವಣೆಯ ಸಣ್ಣ ಹಂಚಿನ ಮನೆಯಲ್ಲಿ ವಾಸವಾಗಿರುವ ‘ನಾಡಿ’ ಅವರು ತಮ್ಮ ಈ ಪುಟ್ಟ ಮನೆಯ ಮಹಡಿಯಲ್ಲಿರುವ ಕೊಠಡಿಯಲ್ಲಿ ಕಂಪ್ಯೂಟರ್‌ನ ಮೂಲಕ ಸಾಹಿತ್ಯದೊಂದಿಗೆ ಒಡನಾಡುತ್ತಲೇ ಇದ್ದಾರೆ.ಸಾಮಾನ್ಯವಾಗಿ ಸಾಹಿತಿಗಳು ಊರಿನ ಸಮಸ್ಯೆಗಳಿಗೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುವುದುಂಟು. ಈ ಮಾತಿಗೆ ನಾ.ಡಿಸೋಜ ತದ್ವಿರುದ್ದ. ಶಿವಮೊಗ್ಗ–ತಾಳಗುಪ್ಪ ರೈಲ್ವೆ ಹೋರಾಟ ಸಮಿತಿಯ ಹೋರಾಟದಲ್ಲಿ ನಾಡಿ ಪ್ರಮುಖ ಪಾತ್ರ ವಹಿಸಿದವರು. ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಲಾಗುತ್ತಿದೆ ಎಂದು ಸುದ್ದಿ ಹೊರಟಾಗ ಅದರ ವಿರುದ್ಧ ನಡೆದ ಚಳವಳಿಯಲ್ಲೂ ಬೀದಿಗಿಳಿದವರು.ಸರಳತೆ ಹಾಗೂ ಸಜ್ಜನಿಕೆ ಡಿಸೋಜ ಅವರ ಮಟ್ಟಿಗೆ ಬೂಟಾಟಿಕೆಯಲ್ಲ. ಈ ಊರಿನ ಶಾಲೆಯ ವಾರ್ಷಿಕೋತ್ಸವದಿಂದ ಹಿಡಿದು ಉತ್ಸವ, ವಿಚಾರ ಸಂಕಿರಣಗಳಿಗೆಲ್ಲಾ ಡಿಸೋಜರನ್ನು ಕರೆದರೆ ಅವರು ಇಲ್ಲ ಎಂದವರಲ್ಲ. ಪ್ರತಿಯೊಂದು ಕಾರ್ಯಕ್ರಮಕ್ಕೂ ಅಷ್ಟೆ ಶ್ರದ್ದೆಯಿಂದ ಅಚ್ಚುಕಟ್ಟಾದ ಸಿದ್ದ ಭಾಷಣವನ್ನು ಪ್ರಸ್ತುತಪಡಿಸುವುದು ಅವರ ವಿಶಿಷ್ಟತೆ.ಸದ್ಯ 76ರ ಅಂಚಿನಲ್ಲಿರುವ ನಾ.ಡಿಸೋಜ ಎಂದಿಗೂ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಾವುದೆ ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನಗಳಿಗಾಗಿ ಲಾಬಿ ಮಾಡಿದವರಲ್ಲ. ರಾಜಕಾರಣಿಗಳ ಎದುರು ಶಿಫಾರಸ್ಸಿಗಾಗಿ ಡೊಗ್ಗು ಸಲಾಮು ಹೊಡೆದವರಲ್ಲ. ಆದರೂ ಹಲವು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವೂ ಇದೇ ರೀತಿ ಬಂದಿದೆ. ಒಟ್ಟಾರೆಯಾಗಿ ಮಲೆನಾಡು ಪ್ರದೇಶಕ್ಕೆ ದೊರಕಿರುವ ಗೌರವವಾಗಿದೆ.ಬದ್ಧತೆಯ ಸಾಹಿತಿ

ಡಿಸೋಜ ಕೇವಲ ಸಾಹಿತಿ ಅಲ್ಲ; ಒಬ್ಬ ಹೋರಾಟಗಾರ. ಯಾವುದನ್ನೂ ಅವರು ಬದ್ಧತೆಯಿಂದ ಮಾಡುತ್ತಾರೆ. ಇಂದಿಗೂ ಅವರು ಸರಳವಾಗಿದ್ದು, ಸಮಾಜದ ಬಗ್ಗೆ ತುಡಿತ ಇಟ್ಟುಕೊಂಡಿದ್ದಾರೆ. ಅವರ ಆಯ್ಕೆ ಈಗಿನ ಕನ್ನಡದ ಸಂದರ್ಭಕ್ಕೆ ಸೂಕ್ತ ಮತ್ತು ಸಕಾಲಿಕ.

– ಟಿ.ಆರ್‌.ಕೃಷ್ಣಪ್ಪ, ಜನಪರ ಹೋರಾಟಗಾರಸಂತೋಷದ ಸಂಗತಿ


ಅನೇಕ ಪ್ರತಿಷ್ಠಿತರ ಪೈಪೋಟಿಯಲ್ಲಿ ಡಿಸೋಜ ಅವರು ಆಯ್ಕೆಯಾಗಿರುವುದು ಸಂತೋಷದ ಸುದ್ದಿ. ತುಂಬಾ ಸಾಮಾನ್ಯವಾದ ಸರ್ಕಾರಿ ವೃತ್ತಿಯಲ್ಲಿದ್ದು ಸಾಹಿತ್ಯದ ಪಯಣವನ್ನು ಬಹಳ ದೊಡ್ಡದಾಗಿ ಮಾಡಿದ ಮಲೆನಾಡಿನ ಸಾಹಿತಿ ಅವರು. ಸಣ್ಣಕಥೆ, ಪರಿಸರ ಪ್ರೇಮಿ, ಸಾಹಿತ್ಯ, ಹೋರಾಟ–ಚಳವಳಿಗಳ ನೇತೃತ್ವ, ಜತೆಗೆ ಮಕ್ಕಳ ಸಾಹಿತ್ಯ ಅವರ ಕೊಡುಗೆ. ಭಾಷಾ ಅಲ್ಪಸಂಖ್ಯಾತರನ್ನು ಆಯ್ಕೆ ಸಮಿತಿ ಗುರುತಿಸಿರುವುದು ಶಿವಮೊಗ್ಗದ ಹೆಮ್ಮೆಗಳಲ್ಲೊಂದು. ಡಿಸೋಜ ಅವರಿಗೆ ಅಭಿನಂದನೆ.

–ಡಾ.ಶ್ರೀಕಂಠ ಕೂಡಿಗೆ, ಸಾಹಿತಿಅರ್ಹರ ಆಯ್ಕೆ


ಬಹಳ ಸಂತೋಷವಾಗಿದೆ. ಅವರು ವ್ಯಕ್ತಿಯಾಗಿಷ್ಟೇ ಅಲ್ಲ; ಸಾಹಿತಿಯಾಗಿಯೂ ನನಗೆ ತುಂಬಾ ಇಷ್ಟ. ಅವರ ಸಾಹಿತ್ಯವನ್ನೆಲ್ಲವೂ ಓದಿದ್ದೇನೆ. ಅವರು ಆ ಸ್ಥಾನಕ್ಕೆ ಅರ್ಹರು.

–ಕಡಿದಾಳು ಶಾಮಣ್ಣ, ರೈತ ಮುಖಂಡ.ಮಲೆನಾಡಿಗೆ ಸಂದ ಗೌರವ


ಡಿಸೋಜ ಅವರ ಆಯ್ಕೆ ಮಲೆನಾಡಿಗೆ ಸಂದ ಗೌರವ. ಗೇಣಿ ರೈತರ ಸಮಸ್ಯೆಗಳನ್ನು ಆಳವಾಗಿ ಅಭ್ಯಸಿಸಿ, ಅದನ್ನು ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದ ಅವರಿಗೆ ಅಧ್ಯಕ್ಷೀಯ ಗೌರವ ಸಿಕ್ಕಿರುವುದು ಅತ್ಯಂತ ಸ್ವಾಗರ್ಹ.

–ಕಲ್ಲೂರು ಮೇಘರಾಜ್, ಜನಪರ ಹೋರಾಟಗಾರಉತ್ತಮ ಸಂದೇಶ


ನಾ.ಡಿಸೋಜ ಅವರು ಸಾಹಿತಿಯಾಗಿ ಎಂದಿಗೂ ತಮ್ಮ ಜವಾಬ್ದಾರಿ ಮರೆತವರಲ್ಲ; ಅವರ ಕೃತಿಗಳು ಎಷ್ಟು ಸರಳವೋ; ಅವರ ಮಾತು ಕೂಡ ಅಷ್ಟೇ ಸರಳ ಮತ್ತು ಸುಂದರ. ಸಮ್ಮೇಳನದ ಅಧ್ಯಕ್ಷ ಸ್ಥಾನ ಅರ್ಹ ವ್ಯಕ್ತಿಗೆ ಸಿಕ್ಕಿದೆ. ಅವರಿಂದ ಸಮಾಜಕ್ಕೆ ಇನ್ನಷ್ಟು ಉತ್ತಮ ಸಂದೇಶ ಸಿಗುತ್ತದೆಂಬುದರಲ್ಲಿ ಅನುಮಾನ ಇಲ್ಲ.

–ಡಾ.ಗಣಪತಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ನವಿಲೆ, ಶಿವಮೊಗ್ಗ. 

ಪ್ರತಿಕ್ರಿಯಿಸಿ (+)