ಶುಕ್ರವಾರ, ಜನವರಿ 24, 2020
17 °C

‘ನೈಜ ಅಂಗವಿಕಲರಿಗೆ ಸಿಗದ ಸೌಲಭ್ಯ’

ಪ್ರಜಾವಾಣಿ ವಾರ್ತೆ/ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಗದಗ: ‘ಸರ್ಕಾರದ ಸೌಲಭ್ಯ ಹೆಚ್ಚುತ್ತಿದ್ದಂತೆ ಅಂಗವಿಕಲರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನೈಜ ಅಂಗವಿಕಲರಿಗೆ ಸೌಲಭ್ಯ ದೊರಕುತ್ತಿಲ್ಲ. ನಕಲಿ ಅಂಗವಿಕಲರನ್ನು ಪತ್ತೆ ಹಚ್ಚಿದಾಗಲೇ ಅಂಗವಿಕಲರ ದಿನಾಚರಣೆಗೆ ನಿಜವಾದ ಅರ್ಥ ಬರುವುದು’..–ಇದು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎ.­ಬಣಗಾರ ಅವರ ಸ್ಪಷ್ಟ ನುಡಿ. ಅಂಗವಿಕಲರ ದಿನಾಚರಣೆ ಕುರಿತು ‘ಪ್ರಜಾವಾಣಿ’ ಜತೆ ಅಂಗವಿಕಲರ ನೋವು ಮತ್ತು ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.‘ಮೂರು ದಶಕಗಳ ಹಿಂದೆ ಅಂಗವಿಕಲ ಮಕ್ಕಳು ಜನಿಸಿದರೆ  ಯಾಕಾದರೂ ಹುಟ್ಟಿದರೂ ಎಂದು ಮನೆಯಲ್ಲಿ ಕೊರಗುತ್ತಿದ್ದರು. ಆಗ ಸೌಲಭ್ಯಗಳು ತೀರಾ ಕಡಿಮೆ. ವರ್ಷಗಳು ಉರುಳಿದಂತೆ ಅಂಗವಿಕಲರ ಕೂಗಿಗೆ ಸರ್ಕಾರ ಎಚ್ಚೆತ್ತುಕೊಂಡು ಅಲ್ಪ, ಸ್ವಲ್ಪ ಸೌಲಭ್ಯ ಒದಗಿಸಲು ಆರಂಭಿಸುತ್ತಿದ್ದಂತೆ ನಕಲಿ ಅಂಗವಿ­ಕರು ಹೆಚ್ಚಾಗ ತೊಡಗಿದರು. ಉದಾಹರಣೆಗೆ ಒಂದು ಕೈ ಬೆರಳು ಅಥವಾ ಕಾಲು ಬೆರಳು ಸ್ವಲ್ಪ ತುಂಡಾದರೆ ಅದನ್ನೇ ನೆಪವಾಗಿಕೊಟ್ಟಕೊಂಡು ವೈದ್ಯರಿಗೆ ಹಣದ ಆಮಿಷವೊಡ್ಡಿ ಪ್ರಮಾಣ ಪತ್ರ ಪಡೆದು­ಕೊಳ್ಳು­ತ್ತಾರೆ. ಎಲ್ಲರಂತೆ ಕೆಲಸ ಮಾಡಲು ಅವರು ಸಮರ್ಥರಾಗಿರುತ್ತಾರೆ. ಹೀಗಾಗಿ ನಿಜವಾದ ಅಂಗವಿಕಲರಿಗೆ ಸೌಲಭ್ಯ ದೊರಕುವುದೇ ಕಷ್ಟವಾಗಿದೆ.  ದೈಹಿಕ  ಅಸಮರ್ಥರು  ಎಲ್ಲಿಗೆ ಹೋಗಬೇಕು, ಯಾರ ಬಳಿ ಸಮಸ್ಯೆ  ಹೇಳಿಕೊಳ್ಳಬೇಕು’ ಎಂದು ಅಳಲು ತೋಡಿಕೊಂಡರು.‘ಅಂಗವಿಕಲತೆ ಪ್ರಮಾಣ ಶೇಕಡಾ 75ರಷ್ಟಿದ್ದರೆ ತಿಂಗಳಿಗೆ ರೂ. 1200, ಅದಕ್ಕಿಂತ ಕಡಿಮೆಯಿದ್ದರೆ ರೂ.  400 ಮಾಸಾ­ಶನ ನೀಡ­ಲಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ­ಯಿಂದಾಗಿ ಸರ್ಕಾರ ನೀಡುವ ಮಾಸಾಶನ ಯಾವು­ದಕ್ಕೂ ಸಾಲುವುದಿಲ್ಲ.  ಅಂಗವಿಕಲರ ಭತ್ಯೆ ನೀಡುವ ಬದಲು ಪದವೀಧರ ಅಂಗವಿ­ಕಲರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು. ದುಡಿಯಲು ಆಗದವರಿಗೆ ರೂ. 3 ಸಾವಿರ ಭತ್ಯೆ ನೀಡಲಿ’ ಎಂದು ಸಲಹೆ ನೀಡಿದರು. ಸ್ಥಳೀಯ ಸಂಸ್ಥೆ­ಗಳಲ್ಲಿ ಶೇ. 3ರಷ್ಟು ಅನುದಾನ ಮತ್ತು ಶಾಸಕ ನಿಧಿಯಿಂದ ಅಂಗವಿಕಲರ ಸಾಧನೆ, ಸಲಕರಣೆಗಾಗಿ ರೂ.10 ಲಕ್ಷ ಮೀಸಲಿ­ಡಬೇಕು ಎಂಬ ನಿಯಮವಿದ್ದರೂ ಸರಿಯಾಗಿ ಅನು­­ಷ್ಠಾನ­ಗೊಂಡಿಲ್ಲ ಎಂಬುದು ಅಂಗವಿಕಲರ ಆರೋಪ.ಇನ್ನೂ ಸರ್ಕಾರ ಅಂಗವಿಕಲರ ಉನ್ನತ ವ್ಯಾಸಂಗದ ಶುಲ್ಕ ಮರುಪಾವತಿಸುವುದರಿಂದ ಪ್ರಯೋಜನವಿಲ್ಲ. ವಾಸ್ತವವಾಗಿ ಎಷ್ಟೋ ಮಂದಿ ಅಂಗವಿಕಲರು ಹಣವಿಲ್ಲದೆ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಆದ್ದರಿಂದ ಶುಲ್ಕ ಮರುಪಾವತಿ ಮಾಡುವ ಬದಲು ವಿದ್ಯಾರ್ಥಿಯ ವ್ಯಾಸಂಗದ ವೆಚ್ಚವನ್ನು ಶಿಕ್ಷಣ ಸಂಸ್ಥೆಗೆ ನೇರವಾಗಿ ಪಾವ­­ತಿ­ಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.ಪ್ರಮುಖ ಬೇಡಿಕೆ

ಬಸ್‌ ಪಾಸ್‌ ಸೌಲಭ್ಯವನ್ನು 100 ಕಿ.ಮೀ. ಬದ­ಲಾಗಿ ರಾಜ್ಯದಾದ್ಯಂತ ವಿಸ್ತರಿಸಬೇಕು, ಖಾಸಗಿ ವಲಯದಲ್ಲೂ ಮೀಸಲಾತಿ, ಪ್ರತ್ಯೇಕ ಅಂಗವಿಕಲರ ಕಲ್ಯಾಣ ನಿಧಿ ಸ್ಥಾಪನೆ, ಸ್ವ ಉದ್ಯೋಗ ನಡೆಸಲು ಮಳಿಗೆ ನೀಡುವುದು, ಅಂಧರು ಮತ್ತು ಎರಡು ಕಾಲ ಊನವಿದ್ದವರಿಗೆ ರೂ. 3 ಸಾವಿರ ಭತ್ಯೆ, ಯಂತ್ರ ಚಾಲಿತ ವಾಹನ ವಿತ­ರಣೆ,  ಆಧಾರ ಯೋಜನೆಯಲ್ಲಿ ರೂ. 1ಲಕ್ಷದ­ವರೆಗೆ ಸಾಲ ನೀಡಬೇಕು ಎಂಬುದು  ಪ್ರಮುಖ ಬೇಡಿಕೆ.ಅಂಗವಿಕಲರ ಕಲ್ಯಾಣಕ್ಕೆ ಹೊಸ ಯೋಜನೆಗಳು

*ಪಿಯುಸಿಯಿಂದ ಉನ್ನತ ವ್ಯಾಸಂಗ ಮಾಡುವ ಅಂಗವಿಕಲ ವಿದ್ಯಾರ್ಥಿಯ ಶುಲ್ಕ ಮರು ಪಾವತಿ

* ಸಾಮಾನ್ಯ ವ್ಯಕ್ತಿ ಅಂಗವಿಕಲರನ್ನು ಮದುವೆಯಾದರೆ ರೂ. 50 ಸಾವಿರ ಪ್ರೋತ್ಸಾಹ ಧನ, ಐದು ವರ್ಷದವರಗೆ ಬಡ್ಡಿ, ನಂತರ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳಬಹುದು.

*ಅಂಧ ಮಹಿಳೆಗೆ ಶೇಕಡಾ 40ಕ್ಕಿಂತ ಪಾರ್ಶ್ವ ದೃಷ್ಟಿದೋಷ ಅಥವಾ ಸಂಪೂರ್ಣ ಅಂಧತ್ವ ಮಹಿಳೆಗೆ ಜನಿಸಿದ ಮೊದಲ ಮತ್ತು ಎರಡನೇ ಮಗುವಿಗೆ ಮಾಸಿಕ ಎರಡು ವರ್ಷದವರೆಗೆ ಮಗುವಿಗೆ ರೂ. 2 ಸಾವಿರ ಪೋಷಣಾ ಭತ್ಯೆಎರಡು ಜಿಲ್ಲೆಗೂ ಒಬ್ಬರೇ ಅಧಿಕಾರಿ

ಗದಗ ಮತ್ತು ಕೊಪ್ಪಳ ಜಿಲ್ಲೆಗೆ ಒಬ್ಬರೇ ಅಂಗವಿಕಲ ಅಧಿಕಾರಿ. ವಾರದಲ್ಲಿ ಮೂರು ದಿನ ಗದಗ ಮೂರು ದಿನ ಕೊಪ್ಪಳದಲ್ಲಿ ಕಾರ್ಯ ನಿರ್ವ­­ಹಿಸಬೇಕು. ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದರಲ್ಲೇ ಬ್ಯುಸಿ. ಅಂಗವಿಕಲರು ಸಮಸ್ಯೆ ಹೇಳಿಕೊಳ್ಳಲು ಬಂದರೆ ಅಧಿಕಾರಿ ಸಿಗುವುದಿಲ್ಲ.  ಅಧಿಕಾರಿ ಬರು­ವವರೆಗೂ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ.  ಕಾಯಂ ಆಗಿ ಅಧಿಕಾರಿ­ಯೊಬ್ಬ­ನ್ನು ನಿಯೋಜಿ­ಸಬೇಕು ಎಂಬುದು ಅಂಗವಿಕಲರ ಒತ್ತಾಯ.ಅಂಗವಿಕಲರ ಸೌಲಭ್ಯ ಕುರಿತು ‘ಪ್ರಜಾ­ವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಅಂಗವಿಕಲ ಅಧಿಕಾರಿ ಡಿ.ಎನ್‌.ಮೂಲಿಮನಿ, ಅಂಗವಿಕ­ಲರು ಗುರುತಿನ ಚೀಟಿ ಪಡೆಯಲು ಜಿಲ್ಲಾ ಆಸ್ಪತ್ರೆಗೆ ಬರುವ ಅವಶ್ಯಕತೆ ಇಲ್ಲ. ಗದಗ ತಾಲ್ಲೂಕು ಹೊರತುಪಡಿಸಿ ಮೊದಲನೆ ಮಂಗಳ­ವಾರ ರೋಣ, ಎರಡನೇ ಮಂಗಳವಾರ ನರಗುಂದ, ಹೀಗೆ ಶಿರಹಟ್ಟಿ, ಮುಂಡರಗಿಗೆ ತಜ್ಞ ವೈದ್ಯರು ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ತಪಸಾಣೆ ಮಾಡಲಾಗುತ್ತದೆ. ಗುರುತಿನ ಚೀಟಿಯನ್ನು ಮನೆಗೆ ತಲುಪಿಸ­ಲಾಗುತ್ತದೆ ಎಂದು ವಿವರಿಸಿದರು.ದೈಹಿಕ ಅಂಗವಿಕಲರು, ಬುದ್ಧಿಮಾಂದ್ಯರು, ಶ್ರವಣ ನ್ಯೂನತೆವುಳ್ಳವರು, ಅಂಧರು, ದೃಷ್ಟಿ­ದೋಷ­ವುಳ್ಳವರು, ಕುಷ್ಠರೋಗ ಹೀಗೆ ಆರು ಬಗೆಯ ಅಂಗವಿಲರನ್ನು ಗುರುತಿಸಲಾಗಿದೆ. ಬುದ್ಧಿಮಾಂದ್ಯರು, ಶ್ರವಣ ನ್ಯೂನತೆವುಳ್ಳವರು, ಅಂಧರಿಗೆ ವಿಶೇಷ ವಸತಿ ಶಾಲೆ ನಡೆ­ಸಲಾಗುತ್ತಿದೆ. ಉದ್ಯೋಗಸ್ಥ ಮಹಿಳೆಯರಿಗೆ ವಸಿತ ನಿಲಯ ಇದೆ. ಜಿಲ್ಲಾ ಪುನವರ್ಸತಿ ಕೇಂದ್ರದಲ್ಲಿ ಸಾಧನ, ಸಲಕರಣೆಗಳ ದುರಸ್ತಿ ಮತ್ತು ಕೃತಕ ಅಂಗಾಗಗಳನ್ನು ತಯಾರಿಸಿಕೊಡಲಾಗುತ್ತದೆ ಎಂದರು.

ಅಂಗವೈಕಲ್ಯ ಮೆಟ್ಟಿ ನಿಂತವರು

ಎರಡು ಕಾಲುಗಳು ಊನ. ಅಂಗವೈಕಲ್ಯ ಶಾಪವಲ್ಲ ಎಂದು ಭಾವಿಸಿ ಬದುಕಿನ ಬಂಡಿ ನಡೆಸುತ್ತಿದ್ದಾರೆ. ಯಾರ ಅನುಕಂಪ ಬೇಕಿಲ್ಲ. ಬದುಕು ಕಟ್ಟಿಕೊಳ್ಳಲು ಅವಕಾಶ ಬೇಕು. ಸಹಾಯ ಮಾಡುವ ಮನಸ್ಸುಗಳು ಬೇಕು ಎಂಬ ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿರುವ ಸಾಧಕರ ಕಿರು ಪರಿಚಯ...ಪಾನ್‌ ಅಂಗಡಿಯಲ್ಲಿ ಪದವೀಧರ

ಹುಟ್ಟಿದ ಎರಡು ವರ್ಷದಲ್ಲಿ ಪೋಲಿಯೊದಿಂದ ಯಲ್ಲಪ್ಪ ಒಗ್ಗರ ಎರಡು ಕಾಲು ಊನವಾಯಿತು. ಬಿ.ಎ. ವರೆಗೂ ವ್ಯಾಸಂಗ ಮಾಡಿ ಹೆತ್ತವರಿಗೆ ಹೊರೆಯಾಗದೆ  ಅಂಗವಿಕಲ ಇಲಾಖೆಯಿಂದ ರೂ. 20 ಸಾವಿರ ಸಾಲ ಪಡೆದು ನಗರದ ಕೋರ್ಟ್‌ ಪಕ್ಕ ಪಾನ್‌ ಶಾಪ್‌ ನಡೆಸುತ್ತಿದ್ದಾರೆ. ಪ್ರತಿದಿನ 22 ಕಿ.ಮೀ. ದೂರದ ತುಪ್ಪದ ಕುರಟ್ಟಿಯಿಂದ ತ್ರಿಚಕ್ರ ವಾಹನದಲ್ಲಿ ಅಂಗಡಿಗೆ ಬಂದು ಹೋಗುತ್ತಾರೆ. ದಿನಕ್ಕೆ ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.‘ಬಣ್ಣದ ಮನೆ’ಯ ಬದುಕು

ಗದಗ ನಗರದ ಕೃಷ್ಣ ಚಿತ್ರ ಮಂದಿರದ ಹಿಂದಿರುವ ‘ಬಣ್ಣದ ಮನೆ ಗ್ರಾಫಿಕ್ಸ್‌’ ಅಂಗವಿಕಲರಿಗೆ ಬದುಕು ನೀಡಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಚೇತನ್‌ ಅವರ ಎರಡೂ ಕಾಲು ಊನಗೊಂಡಿವೆ.ಬ್ಯಾನರ್‌, ವಿಸಿಟಿಂಗ್‌ ಕಾರ್ಡ್‌, ಫೋಟೊ ಲ್ಯಾಮಿನೇಷನ್‌, ಕವರ್‌ ಪೇಜ್‌, ಸ್ಟೇಜ್‌ ಡೆಕೋರೆಷನ್‌, ನೆನಪಿನ ಕಾಣಿಕೆಗೆ ಸಂಬಂಧಿಸಿದ ಕೆಲಸವನ್ನು ಕಂಪ್ಯೂಟರ್‌ನಲ್ಲಿ ಮಾಡುತ್ತಾರೆ. ಯಾರ ಹಂಗು ಇಲ್ಲದೆ ಜೀವನಕ್ಕೆ ಬೇಕಾದ ಹಣ ಸಂಪಾದಾನೆ ಮಾಡುತ್ತೇನೆ ಎಂಬ ತೃಪ್ತಿ ಚೇತನ್‌ ಅವರಲ್ಲಿದೆ.ಈ ಬಣ್ಣದ ಮನೆ ಚೇತನ್‌ರಂತಹ ಹಲವರಿಗೆ ಬದುಕು ನೀಡಿದ್ದು, ಅವರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಅಂಗವಿಕಲರಿಗೆ ಸ್ವ ಉದ್ಯೋಗ

ಗದಗ ನಗರದ ಸ್ವಯಂ ಉದ್ಯೋಗ ತರಬೇತಿ ಘಟಕದಲ್ಲಿ ಅಂಗವಿಕಲ ಮಹಿಳೆಯರಿಗೆ ಟೈಲರಿಂಗ್‌, ಕಸೂತಿ, ಬೇಸಿಕ್‌ ಕಂಪ್ಯೂಟರ್‌ ಕೋರ್ಸ್‌­ಗಳನ್ನು ಹೇಳಿಕೊಡಲಾ­ಗುತ್ತದೆ. ಇಲ್ಲಿ ತರಬೇತಿ ಪಡೆದ ಹಲವು ಮಹಿಳೆ­ಯರು ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ  ಕಂಪ್ಯೂಟರ್‌ ಕೆಲಸ ನಿರ್ವಹಿಸುತ್ತಿದ್ದಾರೆ. ತರಬೇತಿ ಪಡೆದವರು ಸ್ವ ಉದ್ಯೋಗ ಆರಂಭಿಸಿದ್ದಾರೆ. 

ಪ್ರತಿಕ್ರಿಯಿಸಿ (+)