ಮಂಗಳವಾರ, ಜುಲೈ 5, 2022
22 °C
ಮೈಸೂರು ಕಾಗದ ಕಾರ್ಖಾನೆ ಪ್ರಹಸನ – 1

‘ನ್ಯೂಸ್ ಪ್ರಿಂಟ್’ ರಾಜನ ಅಂತ್ಯದ ಕಥೆ

ಪ್ರಜಾವಾಣಿ ವಾರ್ತೆ \ಕೆ.ಎನ್. ಶ್ರೀಹರ್ಷ Updated:

ಅಕ್ಷರ ಗಾತ್ರ : | |

ಭದ್ರಾವತಿ: ರಾಷ್ಟ್ರದ ಜಾನ್ಯೂಸ್ ಪ್ರಿಂಟ್ ಕ್ಷೇತ್ರದಲ್ಲೇ ರಾಜನಂತೆ ಮೆರೆದು ಹೊಸ ಇತಿಹಾಸ ಸೃಷ್ಟಿಸಿದ್ದ ಮೈಸೂರು ಕಾಗದ ಕಾರ್ಖಾನೆ ಉತ್ಕೃಷ್ಟ ಗುಣಮಟ್ಟದ ‘ಪತ್ರಿಕಾ ಕಾಗದ’ ಉತ್ಪಾದನೆ ಸ್ಥಗಿತ ಮಾಡುವ ಮೂಲಕ ಇತಿಹಾಸದ ಪುಟ ಸೇರಿದೆ.

ಹೌದು! ಕಳೆದ ಮೂರು ದಶಕದಿಂದ ಉತ್ಪಾದನೆಯಲ್ಲಿ ದಾಖಲೆ ಗುಣಮಟ್ಟ ಮತ್ತು ಉತ್ತಮ ಸ್ಥಾನದಲ್ಲಿದ್ದ ಎಂಪಿಎಂ ನ್ಯೂಸ್ ಪ್ರಿಂಟ್ ‘ಪೇಪರ್ ಮೆಷಿನ್ – 4’ ತನ್ನ ಉತ್ಪನ್ನ ಈ ತಿಂಗಳ ಆರಂಭದಿಂದ ಸಂಪೂರ್ಣ ಸ್ಥಗಿತಗೊಂಡಿದೆ.ಏಳು ದಶಕದ ಕಾರ್ಖಾನೆ: 1937 ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಬಲದಿಂದ ಆರಂಭವಾದ ಎಂಪಿಎಂ ಕಾರ್ಖಾನೆ 25ಮೆಟ್ರಿಕ್ ಟನ್‌ ಕ್ರಾಫ್ಟ್ ಕಾಗದ ಉತ್ಪಾದನೆ ಮಾಡುವ ಪೇಪರ್ ಮೆಷಿನ್ – 1 ಸ್ಥಾಪಿಸಿತು. ಇದಾದ 15 ವರ್ಷದ ನಂತರ ಬರವಣಿಗೆ ಮತ್ತು ಮುದ್ರಣ ಕಾಗದ ಕ್ಷೇತ್ರಕ್ಕೂ ತನ್ನ ಉತ್ಪನ್ನ ತಲುಪಿಸುವ ಭಾಗವಾಗಿ ಪೇಪರ್ ಮೆಷಿನ್ – 2 ಆರಂಭಿಸಿದ ಕಾರ್ಖಾನೆ 25 ಮೆಟ್ರಿಕ್ ಟನ್‌ ಸಾಮರ್ಥ್ಯದ ಉತ್ಪಾದನೆ ಆರಂಭಿಸಿತು.ಕಾರ್ಖಾನೆಯ ‘ಬೈಸನ್’ ಬ್ರಾಂಡ್ ಉತ್ಪನ್ನದ ಕಾಗದಕ್ಕೆ ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ಉತ್ತರದ ಹಲವು ರಾಜ್ಯದಲ್ಲಿ ಬೇಡಿಕೆಯ ಮಹಾಪೂರ ಹರಿದು ಬಂದ ಕಾರಣ ಮತ್ತೊಂದು ದಿಟ್ಟ ಹೆಜ್ಜೆಯತ್ತ ಕಾರ್ಖಾನೆ ಮುನ್ನುಗ್ಗಿತು.

ಇದರ ಪರಿಣಾಮ 1964 ರಲ್ಲಿ 60 ಮೆಟ್ರಿಕ್ ಟನ್‌ ಸಾಮರ್ಥ್ಯದ ಬರವಣಿಗೆ ಮತ್ತು ಮುದ್ರಣ ಕಾಗದ ಉತ್ಪಾದನೆ ಆರಂಭಿಸಲು ಮುಂದಾಯಿತು. ಆಗ ‘ಬೈಸನ್’ ಬ್ರಾಂಡ್ ನೋಟ್ ಪುಸ್ತಕ, ಲಾಂಗ್ ಬುಕ್, ಕಟ್ ಶಿಟ್... ಹೀಗೆ ಹಲವು ವಿಧದ ಉತ್ಪನ್ನಗಳನ್ನು ಎಂಪಿಎಂ ಆರಂಭಿಸಿತು.70ರ ದಶಕದ ಸುಮಾರಿಗೆ ಕಾಗದ ಉತ್ಪಾದನೆ ಮಾಡುವ ಮತ್ತಷ್ಟು ಕಾರ್ಖಾನೆಗಳು ಆರಂಭವಾದ ಕಾರಣ ಸಹಜವಾಗಿ ಕಾರ್ಖಾನೆ ಬೇರೊಂದು ಪ್ರಯೋಗಕ್ಕೆ ಮುಂದಾಗುವ ಅಗತ್ಯವಿತ್ತು. ಇದನ್ನು ಮನಗಂಡ ಅಂದಿನ ವ್ಯವಸ್ಥಾಪಕ ನಿರ್ದೇಶಕ ದಿವಂಗತ ಜಾಫರ್ ಸೈಫುಲ್ಲಾ ‘ನ್ಯೂಸ್ ಪ್ರಿಂಟ್’ ಉತ್ಪಾದನೆಯತ್ತ ಮುಂದಾದರು.ಪಿಎಂ–4 ಆರಂಭ: 1977 ರ ಅವಧಿಯಲ್ಲಿ ಜಾಫರ್ ಸೈಫುಲ್ಲಾ ‘ನ್ಯೂಸ್ ಪ್ರಿಂಟ್’ ಅಗತ್ಯ ಮನಗಂಡು, ಜತೆಗೆ ಇದರ ಆಮದಿಗೆ ಇರುವ ಕಟ್ಟುಪಾಡು ಅರಿತ ಅವರು ಇಲ್ಲಿ ಇದರ ಉತ್ಪಾದನೆ ಆರಂಭಿಸಿದರೆ ಕಾರ್ಖಾನೆ ಮತ್ತಷ್ಟು ಯಶಸ್ಸು ಪಡೆಯಲಿದೆ ಎಂಬುದನ್ನು ನಿರ್ಧರಿಸಿಯೇ ಈ ಯೋಜನೆಗೆ ಮುಂದಾದರು.

ಇವರ ಪ್ರಯತ್ನ ಫಲವಾಗಿ 1981 ರ ಸುಮಾರಿಗೆ ಪೇಪರ್ ಮೆಷಿನ್ – 4 ಕಾರ್ಖಾನೆಯಲ್ಲಿ ತಳವೂರಿ 250 ಮೆಟ್ರಿಕ್ ಟನ್ ಸಾಮರ್ಥ್ಯದ ನ್ಯೂಸ್ ಪ್ರಿಂಟ್ ಕಾಗದ ಉತ್ಪಾದನೆಗೆ ಮುಂದಾಗಿ ಸರಿ ಸುಮಾರು ಮೂರು ದಶಕದ ಕಾಲ ಕಾರ್ಖಾನೆಯ ಆರ್ಥಿಕ ಶಕ್ತಿಯ ಭಾಗವಾಗಿ ತನ್ನ ವೈಭವ ಮೆರೆಯಿತು.ಹೊಸ ಬದಲಾವಣೆ: ಜಾಗತಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಕಷ್ಟು ಹೊಸ ಬದಲಾವಣೆ ಗಾಳಿ, ಆರ್ಥಿಕ ವೈಪರೀತ್ಯ ಸಂಭವಿಸಿದ ಪರಿಣಾಮ ನ್ಯೂಸ್ ಪ್ರಿಂಟ್ ಕ್ಷೇತ್ರದಲ್ಲೂ ಹೊಸ ವಾತವಣ ಸೃಷ್ಟಿಯಾಗಿ, ವಿದೇಶಿ ಕಾಗದ ಮಾರುಕಟ್ಟೆ ಪ್ರವೇಶಿಸಿತು. ಇಲ್ಲಿನ ಉತ್ಪಾದನಾ ವೆಚ್ವಕ್ಕೆ ಆ ದರವನ್ನು ತೂಗಿಸಲು ಸಾಧ್ಯವಾಗದ ಸ್ಥಿತಿಯಿಂದಾಗಿ ಸಂಕಷ್ಟ ಹೆಚ್ಚಾಗಲು ಆರಂಭವಾಯಿತು. ಇದರಿಂದ ಕಂಗಾಲಾದ ರಾಷ್ಟ್ರದ ಅನೇಕ ಕಾರ್ಖಾನೆಗಳು ನ್ಯೂಸ್ ಪ್ರಿಂಟ್‌ ಉತ್ಪನ್ನಕ್ಕೆ ದಶಕದ ಹಿಂದೆಯೇ ತಿಲಾಂಜಲಿ ಇಟ್ಟವು.ಎಂಪಿಎಂ ಮಾತ್ರ ಮುದ್ರಣ ಕಾಗದ ಗುಣಮಟ್ಟ ಕಾಯ್ದುಕೊಂಡು ಇಲ್ಲಿ ತನಕ ಮಾರುಕಟ್ಟೆ ಏರುಪೇರನ್ನು ಲೆಕ್ಕಿಸದೆ ಮುನ್ನುಗಿತ್ತು. ಆದರೆ, ಬರಬರುತ್ತಾ ಒಂದು ಟನ್ ಉತ್ಪಾದನೆಗೆ ₨12,000ದಷ್ಟು ನಷ್ಟವನ್ನು ಅನುಭವಿಸುತ್ತಾ ಬಂದ ಪಿ.ಎಂ.– 4 ಯಂತ್ರ, ಉತ್ಪಾದನಾ ವೆಚ್ಚ ತಗ್ಗಿಸುವಲ್ಲಿ ವೈಫಲ್ಯ ಕಂಡಿತು. ಇದು ದರ ಪ್ರಮಾಣದ ಹೊಂದಾಣಿಕೆಯಲ್ಲೂ ವಿಫಲವಾಯಿತು.ಒಟ್ಟಿನಲ್ಲಿ ಕಾರ್ಖಾನೆಯ ಒಟ್ಟು ಉತ್ಪಾದನೆಯಲ್ಲಿ ಶೇ55 ರಷ್ಟು ಪ್ರಮಾಣವನ್ನು ತೂಗಿಸಿಕೊಂಡು ಹೋಗುತ್ತಿದ್ದ ‘ನ್ಯೂಸ್ ಪ್ರಿಂಟ್’ ಎಂಬ ಮಾಯಾ ಕಾಗದ ಈಗ ಇತಿಹಾಸವನ್ನು ಸೇರುವ ಮೂಲಕ ಕಾರ್ಖಾನೆ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿ ನಿಲ್ಲಿಸಿದೆ.   

                 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.