ಶುಕ್ರವಾರ, ಮಾರ್ಚ್ 5, 2021
25 °C

‘ಪಾರ್ಕಿಂಗ್‌ ಸಮಸ್ಯೆಗೆ ದಾರಿ ಕಂಡುಕೊಳ್ಳಬೇಕು’

ನಿರೂಪಣೆ: ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

‘ಪಾರ್ಕಿಂಗ್‌ ಸಮಸ್ಯೆಗೆ ದಾರಿ ಕಂಡುಕೊಳ್ಳಬೇಕು’

ಎಂಟನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗುತ್ತಿರುವ ಚಿತ್ರೋತ್ಸವಕ್ಕೆ ಜಾಗತಿಕ ಸಿನಿಮಾ ನಿರ್ಮಾರ್ತೃಗಳು ಸಹ ಸಾಕ್ಷಿಯಾಗುತ್ತಿದ್ದಾರೆ. ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿ ಸಂಘಟಿಸುತ್ತಿರುವ ಉತ್ಸವಕ್ಕೆ ಅನೇಕರಲ್ಲಿ ಸಲಹೆ ಸೂಚನೆಗಳು ಇದ್ದೇ ಇರುತ್ತವೆ. ಅವುಗಳನ್ನು ಕೇಳಿಸುವುದು ‘ಮೆಟ್ರೊ’ ಉದ್ದೇಶ. ಚಿತ್ರೋತ್ಸವದ ಕುರಿತು ನಿರ್ದೇಶಕ ಬಿ.ಸುರೇಶ್‌ ಅಭಿಪ್ರಾಯ ಹಂಚಿಕೊಂಡಿದ್ದಾರೆ.

*****

ಪಾರ್ಕಿಂಗ್‌ ವಿಷಯ ಮುಖ್ಯವಾದದ್ದು. ನಿತ್ಯ ಕನಿಷ್ಠ ನಾಲ್ಕು ಸಾವಿರ ಜನ ಪ್ರತಿನಿಧಿಗಳು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಒರಾಯನ್ ಮಾಲ್‌ನಲ್ಲಿ ಸಿನಿಮಾ ಪ್ರದರ್ಶನದ ಜತೆ ಮಾರಾಟ ಮಳಿಗೆಗಳು ಇರುವುದರಿಂದ ಜನಸಂದಣಿ ಹೆಚ್ಚು. ವಾಹನ ನಿಲುಗಡೆಗೆ ಸಮಸ್ಯೆ ಎದುರಾಗುತ್ತದೆ. 

ಈ ವಿಷಯ ಚಿತ್ರೋತ್ಸವ ಸಂಘಟನಾ ಸಮಿತಿಯ ಮಿತಿಯೊಳಗೆ ಬರುವುದಿಲ್ಲ. ವಾರ್ತಾ ಇಲಾಖೆಯವರು ಮಾಲ್‌ನವರ ಮತ್ತು ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುವವರ ಜತೆ ಮಾತುಕತೆ ನಡೆಸಿ, ಸಿನಿಮೋತ್ಸವದ ಪ್ರತಿನಿಧಿಗಳಿಗೆ ಪಾರ್ಕಿಂಗ್ ಪಾಸ್ ನೀಡಬೇಕು. ಪ್ರತ್ಯೇಕ ಶುಲ್ಕ ನಿಗದಿಪಡಿಸಬೇಕು. ಆದ್ಯತೆಯ ಮೇರೆಗೆ ಪಾರ್ಕಿಂಗ್ ವ್ಯವಸ್ಥೆ ಆಗಬೇಕು. ವಾಹನ ನಿಲುಗಡೆಗೆ ಸ್ಥಳ ಹುಡುಕುವುದೇ ಸುಮಾರು ಹೊತ್ತಿನ ಕೆಲಸವಾಗುತ್ತದೆ. ಮತ್ತೊಂದು ಮುಖ್ಯ ಅಂಶ ಎಂದರೆ  ವಿದೇಶಿ–ಹೊರರಾಜ್ಯಗಳ ಅತಿಥಿಗಳ ಜತೆ ಸಂವಾದಗಳ ಸಂಖ್ಯೆ ಹೆಚ್ಚಾಗಬೇಕು. ಐದು ಐದೇ ಜನರು ಕುಳಿತುಕೊಳ್ಳುವ ಸಂವಾದವಾದರೂ ಸರಿ, ಹೊರನಾಡಿನ ಸಿನಿಮಾ ನಿರ್ಮಾತೃಗಳ ಜತೆ ಮಾತನಾಡುವ ಮೂಲಕ ನಮ್ಮ ನಡುವೆ ಸಿನಿಮಾ ತಯಾರಿಕೆಗೆ ಇರಬಹುದಾದ ಸಮಸ್ಯೆಗಳನ್ನು, ಕಥೆಯನ್ನು ಕಟ್ಟುವ ಕ್ರಮದಲ್ಲಿ ಇರಬೇಕಾದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಜಾಗವಾಗಬೇಕು. ಎಲ್ಲ ಸಿನಿಮಾ ಉತ್ಸವಗಳಿಂದ ಆಗುವ ಲಾಭ ಇದು.ಎರಡು ಚಲನಚಿತ್ರ ಸಂಸ್ಕೃತಿಗಳ ಜನ ಮುಖಾಮುಖಿಯಾಗುವುದರಿಂದ ಹೊಸ ಕಥೆಗಳನ್ನು ಆಲೋಚಿಸುವ ಕ್ರಮ ಸೇರಿದಂತೆ ಬೇರೆ ಬೇರೆ ವಿಷಯಗಳ ಕುರಿತು ಚಿಂತನ–ಮಂಥನಕ್ಕೆ ಕಾರಣವಾಗುತ್ತದೆ. ಯಾವುದೋ ವಿದೇಶಿ–ಹೊರರಾಜ್ಯದ ನಿರ್ದೇಶಕರ ಜತೆಗೆ ಒಂದು ಸಣ್ಣ ಚಹಾ ಪಾರ್ಟಿ ಸಂಘಟಿಸುವ ಮೂಲಕ ಸಣ್ಣ ಮಟ್ಟದ ಮಾತುಕತೆ ಸಾಧ್ಯವಾಗುವಂತೆ ಮಾಡಬೇಕು.

ಆ ಗುಂಪಿನಲ್ಲಿ ನಡೆಯುವ ಮಾತುಕತೆ ದೂರಗಾಮಿ ದೃಷ್ಟಿಯಿಂದ ಮುಖ್ಯವಾಗುತ್ತದೆ. ಇಂಥ ಚಟುವಟಿಕೆಗಳನ್ನು ಸಂಘಟಕರೇ ಗೊತ್ತುಪಡಿಸಬೇಕು. ನಾನು ಕಂಡಂತೆ ಏಳು ದಿನಗಳ ಸಿನಿಮೋತ್ಸವದಲ್ಲಿ ನಾಲ್ಕೈದು ಪಾರ್ಟಿಗಳು ನಡೆಯುತ್ತವೆ. ಅಲ್ಲಿ ಮುಕ್ತ ಮಾತುಕತೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಖಾಮುಖಿ ಸಂವಾದಗಳು ಅತಿ ಮುಖ್ಯ.ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಕನ್ನಡ ಸಿನಿಮಾ ನಿರ್ದೇಶಕ–ನಿರ್ಮಾಪಕರು ಮತ್ತು ಅತಿಥಿ ನಿರ್ದೇಶಕರ ಜತೆ ನಡೆಯುವ ಈ ಸಂವಾದ– ಚರ್ಚೆಗಳ ಮಾಹಿತಿಯನ್ನು ದೀರ್ಘವಾಗಿ ದಾಖಲಿಸಿ ಉತ್ಸವ ಪೂರ್ಣಗೊಂಡ ತರುವಾಯ ‘2016ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಕನ್ನಡ ಚಿತ್ರ ನಿರ್ದೇಶಕ ಮಾತು’ ಎನ್ನುವಂತೆ ಒಂದು ಪುಸ್ತಕ  ತರುವುದು ಉತ್ತಮ. ಗಿರೀಶ ಕಾಸರವಳ್ಳಿ ಅವರಂಥ ಸಿನಿಮಾ ಮಾಸ್ಟರ್‌ಗಳು ಆರಂಭಿಕ ಮತ್ತು ಅಂತಿಮ ಸಿನಿಮಾದ ಬಗ್ಗೆ ಆಡುವ ಮಾತುಗಳನ್ನು ಪುಸ್ತಕದಲ್ಲಿ ದಾಖಲಿಸಬೇಕು. ಆ ಮೂಲಕ ಸಿನಿಮಾ ವಿದ್ಯಾರ್ಥಿಗಳಿಗೆ ಈ ಚಿತ್ರಗಳನ್ನು ಭಾಷೆಯಾಗಿ ಗ್ರಹಿಸಲು ಅನುಕೂಲವಾಗುತ್ತದೆ.

ಇಂಥ ಉತ್ಸವಗಳ ಸಂದರ್ಭದಲ್ಲಿ ಇವತ್ತಿನ ತಂತ್ರಜ್ಞಾನ ಕುರಿತು ಪ್ರದರ್ಶನಗಳು ಇರಬೇಕು. ಉದಾಹರಣೆಗೆ ‘ಲಹರಿ’ ಸಂಸ್ಥೆಯವರು ಸಿನಿಮಾ ಸ್ಟೋರೇಜ್‌ಗಾಗಿ ತಮ್ಮದೇ ಆದ ಟೆಕ್ನಾಲಜಿ ಮಾಡಿದ್ದಾರೆ. ಈ ಮಾದರಿಯ ಹೊಸ ತಂತ್ರಜ್ಞಾನಗಳು ಪ್ರದರ್ಶಿತವಾದರೆ, ತಾಂತ್ರಿಕ ದೃಷ್ಟಿಯಿಂದಲೂ ಉತ್ತಮ. ಮುಂದಿನ ದಿನಗಳಲ್ಲಿ ಹೊಸ ಡಿಜಿಟಲ್ ಮಾದರಿಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.