ಮಂಗಳವಾರ, ಮಾರ್ಚ್ 9, 2021
18 °C

‘ಪುರ’ ಕೋಟಿಲಿಂಗ ತಾಣವಿದು

ಜೆ.ಸಿ.ಜಾಧವ Updated:

ಅಕ್ಷರ ಗಾತ್ರ : | |

‘ಪುರ’ ಕೋಟಿಲಿಂಗ ತಾಣವಿದು

ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಪುಟ್ಟ ಗ್ರಾಮ ಪುರ. ಕೊಪ್ಪಳ  ಜಿಲ್ಲೆಯ ಕುಷ್ಟಗಿ ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ ಈ ತಾಣ.ಇಲ್ಲಿರುವ ಸೋಮೇಶ್ವರ ದೇವಾಲಯ ಕೋಟಿ ಲಿಂಗಗಳ- ಪುರವೆಂದು ಪ್ರಸಿದ್ಧಿ ಪಡೆದಿದೆ. ಕಲಚೂರಿಗಳ ಆಳ್ವಿಕೆ ಕಾಲದಲ್ಲಿ  ಈ ದೇವಾಲಯ ನಿರ್ಮಾಣಗೊಂಡಿದೆ. ಹಾಗೆಯೇ ಇಲ್ಲಿಯ ಶಿಲಾಶಾಸನ ತಿಳಿಸುವಂತೆ ಇದು 15ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಕೋಟಿ ಲಿಂಗಗಳು ಹಾಗೂ 12 ಶಿಲಾಶಾಸನಗಳು ಈ ದೇವಸ್ಥಾನದ ವೈಶಿಷ್ಟ್ಯ.ಮುಖ್ಯ ದ್ವಾರವನ್ನು ಪ್ರವೇಶಿಸಿದ ಕೂಡಲೇ ಮೊದಲು ಕಾಣಿಸುವುದೇ ‘ಬಾಗಿ ನಡೆದರೆ ಮಾತ್ರ ಭಕ್ತನಿಗೆ ದಾರಿ ನೋಡಯ್ಯ ಎಂಬ ಬರಹ. ಇದರಿಂದ ಇದು ನೆಲ ಮಾಳಿಗೆಯ ದೇವಸ್ಥಾನವೆಂದು ಗೊತ್ತಾಗುತ್ತದೆ. ಕೋಟಿ ಶಿವ ಲಿಂಗಗಳ ಸೋಮೇಶ್ವರ ದೇವಾಲಯ ಒಂದು ಕಾಲದಲ್ಲಿ ಶೈವ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎನ್ನುತ್ತಾರೆ ಪೂಜಾರಿ ರಾಚಯ್ಯ ಸ್ವಾಮ.ಮೂರುಕಾಲಿನ ಮಂಚ: ದೇವಾಲಯ ಪ್ರವೇಶಿಸಿದ ಕೂಡಲೇ ಬಲಭಾಗದಲ್ಲಿ ಮೂರು ಕಾಲಿನ ಸರ್ಪ ಶಿಲಾ ಮಂಚವಿದೆ. ಚತುರ್ಮುಖ ನಂದಿ ವಿಗ್ರಹ, ಶಿವಲಿಂಗಗಳನ್ನು ಹೊತ್ತ ಆನೆ, ಶಿಲಾ ವೃಂದಾವನ, ಕೈಲಾಸನಾಥ ರಥಗಳು, ಬಿಲ್ವ ಪತ್ರಿಗಿಡಗಳು ಶಿಲ್ಪಕಲಾ ಕುಸುರಿಗೆ ಸಾಕ್ಷಿ ಮತ್ತು ಇಲ್ಲಿನ ಪುರಾಣ ದಂತ ಕಥೆಗಳ ಉಬ್ಬು ಶಿಲ್ಪಗಳು ದೃಶ್ಯ ಪುರಾಣ ಕಾಲಕ್ಕೆ ಕರೆದೊಯ್ಯುತ್ತವೆ.ಗೋಕರ್ಣದ ಆತ್ಮಲಿಂಗ ಪ್ರತಿಷ್ಠಾಪನೆಗಾಗಿ ದನಗಾಹಿ ಗಣಪ ಹಾಗೂ ರಾವಣನ ಚಿತ್ರಗಳೂ ಇಲ್ಲಿ ಕಾಣ ಸಿಗುತ್ತವೆ. ಇವುಗಳಲ್ಲದೇ, ಕೇಶವ, ಮಹಿಷಾಸುರ, ಉಗ್ರನರಸಿಂಹ, ಶಿವ, ಚಂದ್ರ, ಸೂರ್ಯ, ಪಾರ್ವತಿ, ಲಕ್ಷ್ಮೀ, ಕೃಷ್ಣ, ಷಣ್ಮುಖ, ಉಮಾಮಹೇಶ್ವರ, ಗಣೇಶ ಇತರ ಚಿಕ್ಕ ಚಿಕ್ಕ ಸುಂದರ ಶಿಲ್ಪಗಳಿವೆ.ಶ್ರವಣಕುಮಾರ, ನಾಗಪುರುಷ, ಗೋಪಾಲಕರು, ಯಕ್ಷರ ಶಿಲ್ಪಗಳು ಇಲ್ಲಿವೆ. ಸಣ್ಣ ಮಂಟಪದ ಸುತ್ತಲೂ ಅನೇಕ ಸಾಲು ಲಿಂಗಗಳಿವೆ. ಇವು ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಕೆಲವು ಏಕ ಲಿಂಗವಾದರೆ, ಇನ್ನು ಕೆಲವು ಹತ್ತಾರು ನೂರಾರು ಲಿಂಗಗಳ ಒಳಗೊಂಡ ಏಕ ಪೀಠವಾಗಿದೆ. ಜತೆಗೆ ಈ ವಿಗ್ರಹಗಳಿಗೆ ಪೂಜಿಸಲು ಇಲ್ಲಿಯೇ ಸಪ್ತ ಬಾವಿಗಳಿವೆ. ಆದರೆ ನಮಗೆ ಕಾಣಿಸಿದ್ದು ಮೂರು ಬಾವಿಗಳು ಮಾತ್ರ.ಗರ್ಭಗುಡಿ ಮುಂದೆ ಕಲ್ಲಿನ ಹರಿವಾಣವಿದೆ. ಎಲ್ಲಾ ಲಿಂಗಗಳ ಸ್ನಾನ ಪೂಜೆಯ ಅನಂತರ ನೈವೇದ್ಯ ಮಾಡುವಾಗ ಈ ಹರಿವಾಣದಲ್ಲಿ ಹಾಕಿ ಒಂದು ಸುತ್ತು ತಿರುಗಿಸಿದರೆ ಅಲ್ಲಿರುವ ಎಲ್ಲಾ ಲಿಂಗಗಳಿಗೆ ಏಕಕಾಲದಲ್ಲಿ ನೈವೇದ್ಯ ಅರ್ಪಿಸಿದಂತೆ. ಅಮರಯ್ಯ ಸ್ವಾಮಿ ಹಿರೇಮಠ ದಂಪತಿ ಹಾಗೂ ಇವರ ಹಲವಾರು ತಲೆಮಾರುಗಳ ಹಿರಿಯರು ಪೂಜಾ ಕೈಂಕರ್ಯ ನೆರವೇರಿಸುತ್ತಾ ಬಂದಿದ್ದಾರೆ.ಕೋಟಿ ಲಿಂಗಗಳಿರುವ ಕರ್ನಾಟಕದ ಏಕೈಕ ದೇವಸ್ಥಾನ ಇದಾಗಿದೆ. ಈ ಭಾಗದ ಜನ- ಜನಿತವಾಗಿರುವ ವಾಣಿಯಂತೆ ‘ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು. ಹಾಗೆಯೇ ಕಣ್ಣು-ಕಾಲು ಎರಡೂ ಇದ್ದವರು ‘ಪುರ’ ನೋಡಬೇಕು’ ಎಂಬ ವಾಣಿ ಇದೆ. ಇಂಥ ವೈಶಿಷ್ಟ್ಯಗಳ ಪುರದ ಕಲಾ ಶ್ರೀಮಂತಿಕೆಯನ್ನು ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.