ಭಾನುವಾರ, ಜನವರಿ 26, 2020
18 °C

‘ಬದಲಾವಣೆಗೆ ಇತಿಹಾಸದ ನೆನಪೇ ಮೆಟ್ಟಿಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ‘ನಮ್ಮ ಗತಕಾಲ ಹೇಗಿತ್ತು ಎಂಬುದು ನಮಗೆ ಗೊತ್ತಿದ್ದರೆ ಇಂದು ಮತ್ತು ನಾಳೆ ಹೇಗೆ ನಡೆಯಬೇಕು ಎನ್ನುವುದರ ಕುರಿತು ಸ್ಪಷ್ಟ ಕಲ್ಪನೆ ರೂಪುಗೊಳ್ಳಲು ಸಾಧ್ಯ. ಸಾಮಾಜಿಕ ಬದಲಾವಣೆಗೆ ಇತಿಹಾಸದ ನೆನಪು ಅತ್ಯಗತ್ಯ’ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಕೆಳದಿ ಉತ್ಸವ ಆಚರಣಾ ಸಮಿತಿ ಭಾನುವಾರ ಏರ್ಪಡಿಸಿದ್ದ ‘ಕೆಳದಿ ಉತ್ಸವ–2013’ ಉದ್ಘಾಟಿಸಿ ಅವರು ಮಾತನಾಡಿದರು.ಇತಿಹಾಸದ ನೆನಪುಗಳು ಕೇವಲ ಉತ್ಸವಗಳಿಗೆ ಸೀಮಿತವಾಗಬಾರದು. ಕೆಳದಿ ಅರಸರು ಈ ನಾಡಿಗೆ ನೀಡಿರುವ  ಕೊಡುಗೆಯ ಜತೆಗೆ ಈ ಭಾಗದ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ­ರು­ವ ಜನಪದ–ಸಾಂಸ್ಕೃತಿಕ ಕಲೆಗಳ ಅಭ್ಯಾಸ­ಕ್ಕೆ ಉತ್ಸವ ವೇದಿಕೆಯಾಗಲಿ ಎಂದರು.

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಗ್ರಾಮದಲ್ಲಿ ತಯಾರಾ­ಗುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕಬೇಕು. ಈ ವ್ಯವಸ್ಥೆ ರೂಪಿಸಲು ಶಾಸ­ಕರ ನಿಧಿಯಿಂದ ರೂ10ಲಕ್ಷ ನೆರವು ನೀಡಿ ವ್ಯಾಪಾರ ಕೇಂದ್ರಗಳನ್ನು ಆರಂಭಿಸ­­ಲಾಗುವುದು ಎಂದರು.ನಾಣ್ಯ ಹಾಗೂ ಛಾಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಸಮಾಜಕ­ಲ್ಯಾಣ ಸಚಿವ ಎಚ್‌.­ಆಂಜನೇಯ ಮಾತನಾಡಿ, ಕೆರೆ ಕಟ್ಟೆ ಕಟ್ಟಿಸುವ ಮೂಲಕ, ಹಲವು ಸುಧಾ­ರಣೆ­ಗಳನ್ನು ತರುವ ಮೂಲಕ ಕೆಳದಿ ಅರಸರು ಜನಪರ ಆಡಳಿತ ನೀಡಿದ್ದಾರೆ ಎಂದು ಸ್ಮರಿಸಿದರು.ವಸ್ತು ಪ್ರದರ್ಶನವನ್ನು ಉದ್ಘಾಟಿಸಿ­ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌, ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸುವ ಗುತ್ತಿಗೆ­ಯನ್ನು ರಾಜಕಾರಣಿಗಳಿಗೆ ನೀಡಲಾಗಿ­ದೆ ಎಂಬ ಮನೋಭಾವ ದೂರವಾಗಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಮಡಿಕೇರಿ­ಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಸಾಹಿತಿ ಡಾ.ನಾ.ಡಿಸೋಜ ಅವರನ್ನು ಅಭಿನಂದಿಸಲಾಯಿತು.

ಪ್ರತಿಕ್ರಿಯಿಸಿ (+)