ಬುಧವಾರ, ಜೂನ್ 23, 2021
30 °C

‘ಬೆತ್ತಲಾಗುವ ಭರಾಟೆಯಲ್ಲಿ ಜಗವೆಲ್ಲಾ ಕತ್ತಲೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮೇಲ: ಮೋದಿಗಾಗಿ ಬೆತ್ತಲೆ, ರಾಹುಲ್‌ಗಾಗಿ ಬೆತ್ತಲೆ, ಬೆತ್ತಲಾಗುವ ಭರಾಟೆಯಲ್ಲಿ ಜಗವೆಲ್ಲಾ ಕತ್ತಲೆ, ಓ.... ಶ್ರೀ ಸಾಮಾನ್ಯನೆ ನಿನಗಾಗಿ ಯಾರು ಬೆತ್ತಲೆ....!ಹೀಗೆ...ತಮ್ಮ ಕವನದ ಸಾಲುಗಳನ್ನು ರಾಚು ಎಸ್. ಕೊಪ್ಪ ಓದುತ್ತಿದಂತೆ ಕರತಾಡಾನದ ಸದ್ದು ಜೋರಾಗಿ ಕೇಳಿಬರುತ್ತಿತ್ತು.

ಇಲ್ಲಿ ನಡೆಯುತ್ತಿರುವ ವಿಜಾಪುರ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಝಲಕ್‌ ಇದು.ಇಂದಿನ ರಾಜಕೀಯ ಬೋರ್ಡಿಲ್ಲದ ಬಸ್ಸಿನಂತೆ.. ಲಗಾಮಿಲ್ಲದ ಕುದುರೆಯಂತೆ, ದಿಕ್ಕಿಲ್ಲ ದಿಸೆಯಲ್ಲ, ಪೊಳ್ಳು ಮಾತು ಬಾಯೆಲ್ಲ, ಇದು ಇಂದಿನ ರಾಜಕೀಯಣ, ಇಂದಿನ ರಾಜಕೀಯ ಕೊಲೆ, ಸುಲಿಗೆ ಲಂಚ, ಓಟು, ನೋಟು, ಕೋಟಿಗಳ ಸುಖಕ್ಕೆ, ಇದು ಇಂದಿನ ರಾಜಕೀಯಯಾಣ, ಇಂದಿನ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಕುರಿತು ಕವಿತೆ ಓದಿ ಚಪ್ಪಾಳೆ ಗಿಟ್ಟಿಸಿದವರು ಉದಯೋನ್ಮುಖ ಕವಯಿತ್ರಿ ಅನುಪಮಾ ಗುಗ್ಗರಿ, ಜ್ಯೋತಿ ನಂದಿಮಠ ಅವರು ವಾಚಿಸಿದ ಅತ್ಯಾಚಾರ ಕವಿತೆ. ‘ಪತ್ರಿಕೆಗಳಲ್ಲಿ ದಿನಾಲು ಒಂದೇ ಸಮಾಚಾರ...ನೀರೆಯರ ಮೇಲೆ ನಿಲ್ಲದ ಅತ್ಯಾಚಾರ..’ ಕವನವು ಕಳೆದೆರೆಡು ವರ್ಷಗಳಿಂದ ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕರಾಳ ಮುಖವನ್ನು ಪ್ರತಿಬಿಂಬಿಸಿತು.ಮಲ್ಲಿಕಾರ್ಜುನ ಅವಟಿ ವಾಚಿಸಿದ ‘ಮರ್ತಿದ್ದೇನೆ’ ಎಂಬ ಕವನದಲ್ಲಿ ಆಧುನಿಕ ಜಗತ್ತಿನಲ್ಲಿ ಮನುಷ್ಯ ಯಾಂತ್ರಿಕನಾಗಿ ಬದುಕಿನ ರಸಮಯ ಗಳಿಗೆಯಿಂದ ದೂರಾಗುತ್ತಿರುವ ಕುರಿತು, ಮೊಬೈಲ್‌ನಿಂದ ಪತ್ರ ಬರೆಯುವುದನ್ನು ಮರ್ತಿದ್ದೇನೆ.. ಡಾಂಬರ್ ರಸ್ತೆಯ ಮೇಲೆ ನಡೆಯುತ್ತಾ ಮಣ್ಣಿನ ವಾಸನೆ ಮರ್ತಿದ್ದೇನೆ. ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಅರಳುವ ಹೂವುಗಳ ಪರಿಮಳ ಮರ್ತಿದ್ದೇನೆ... ಎಂಬ ಕವಿತೆ ಕ್ಷಣ ಹೊತ್ತು ಸಹೃದಯರನ್ನು ಚಿಂತನೆಗೆ ಹಚ್ಚಿತು.ಆಲಮೇಲದ ಚಂದ್ರಗುಪ್ತ ಚಾಂದಕವಟೆ ಅವರ ‘ನಮ್ಮೂರಿನ ರಸ್ತೆಗಳು’ ಎಂಬ ಕವಿತೆಯಲ್ಲಿ ಸಕ್ಕರೆ ನಾಡು ಆಲಮೇಲದ ಸುತ್ತಮುತ್ತಲಿನ ಹಾಳಾದ ರಸ್ತೆಗಳ ದುಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.ಕವಿಗೋಷ್ಠಿಯಲ್ಲಿ ಈರಣ್ಣ ಪಾಟೀಲ, ಎಂ.ಬಿ. ಮುಜಾವರ, ಪರಶುರಾಮ ಕುಂಬಾರ, ಸುಭಾಷ ನಾಯ್ಕೋಡಿ, ರಾಮನಗೌಡ ಬಿರಾದಾರ, ಸಂತೋಷ ನಿಗಡಿ, ಸಿದ್ದಯ್ಯ ಗಿರಡಿಮಠ, ಜಿ.ಜಿ. ಬರಡೋಲ, ಕವಿತಾ ಹಳ್ಳಿ, ಗಿರಿಜಾ ಸಜ್ಜನ, ಭೀಮರಾಯ ಹೂಗಾರ, ಅನಿಲ ಅಲ್ಯಾಳಮಠ, ಅಂಬಣ್ಣ ಸುಣಗಾರ, ಸೋಮಶೇಖರ ಅಂಗಡಿ, ಶಿವರುದ್ರಪ್ಪ ಗಡೇದ, ಪರಶುರಾಮ ಗುಡ್ಡಳ್ಳಿ, ಸಂತೋಷ ಶಿನರಾಳ, ಸವಿತಾ ಒಡೆಯರ, ಕಾಶಿನಾಥ ಮೊರಬ, ರಮೇಶ ಚವ್ಹಾಣ, ಈರನಗೌಡ ಬಿರಾದಾರ, ಸೋಮಶೇಖರ ಅಂಗಡಿ, ದೇಶಪಾಂಡೆ ಸಹಿತ ಸುಮಾರು 28 ಕವಿ, ಕವಯಿತ್ರಿಯರು ತಮ್ಮ ಕವನ ವಾಚಿಸಿದರುಆದರೇ ಸಭಿಕರ ಗಮನಸೆಳೆದಿದ್ದು ಮಾತ್ರ ಬೆರಳೆಣಿಕೆಯಷ್ಟು ಕವಿತೆಗಳು ಮಾತ್ರ..! ಒಂದಿಬ್ಬರು ಕವಿಗಳು ಭಾರಿ ಚಪ್ಪಾಳೆ ಗಿಟ್ಟಿಸಿದವು.ಕವಿಗೋಷ್ಠಿಯನ್ನು ತಮ್ಮ ಕವನ ವಾಚನ ಮಾಡುವುದರ ಮೂಲಕ ಉದ್ಘಾಟಿಸಿದ ಸಾಹಿತಿ ಜಂಬುನಾಥ ಕಂಚ್ಯಾಣಿ ಮಾತನಾಡಿ, ಒಬ್ಬ ಕವಿ ಸತತ ಅಧ್ಯಯನಶೀಲನಾದಾಗ ನೂರ್ಕಾಲು ಬಾಳುವ ಕವಿತೆಯೊಂದನ್ನು ಸಮುದಾಯಕ್ಕೆ ನೀಡಿ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸಿಬಲ್ಲದು ಎಂದರು.ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಫ.ಗು.ಸಿದ್ದಾಪುರ ಮಾತನಾಡಿ, ಕಾಲಕ್ಕೆ ತಕ್ಕಂತೆ ಕಾವ್ಯವು ತನ್ನ ವೈವಿಧ್ಯಮಯ ವಿಷಯ ವಸ್ತು ಮನೋಧೋರಣೆ, ಪ್ರಕಾರಗಳನ್ನು ಹೊಂದುತ್ತಾ ಚಲನಶೀಲತೆ ಮೈಗೂಡಿಸಿಕೊಂಡಿದೆ. ಸದಾ ಕಾಲಕ್ಕೂ ಸಹೃದಯರ ಮನಸ್ಸನ್ನು ಪರಿವರ್ತನೆ ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದರು.ಎಂ.ಬಿ. ಬಿರಾದಾರ ಸ್ವಾಗತಿಸಿದರು. ಶ್ರೀಶೈಲ ಮಠಪತಿ ನಿರೂಪಿಸಿದರು. ಎಂ.ಎಫ್. ಅರಳಿಮಟ್ಟಿ ವಂದಿಸಿದರು.

ಮುತ್ತುರಾಜ ಹೆಬ್ಬಾಳ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.