ಶನಿವಾರ, ಮಾರ್ಚ್ 6, 2021
21 °C
ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅಭಿಪ್ರಾಯ

‘ಭವಿಷ್ಯದ ಬಗ್ಗೆ ಜಹೀರ್‌ ಚಿಂತಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭವಿಷ್ಯದ ಬಗ್ಗೆ ಜಹೀರ್‌ ಚಿಂತಿಸಲಿ’

ನವದೆಹಲಿ (ಪಿಟಿಐ): ಭಾರತ ತಂಡದ ವೇಗದ ಬೌಲರ್‌ ಜಹೀರ್‌ ಖಾನ್‌ ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಈಗಲೇ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು ಎಂದು ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.ಈ ವರ್ಷದ ಕೊನೆಯಲ್ಲಿ ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರಳಲಿದೆ. ಈ ಸರಣಿಗೆ ತಂಡಕ್ಕೆ ಆಯ್ಕೆಯಾದರೆ ಜಹೀರ್‌ ಪೂರ್ಣ ಸಾಮರ್ಥ್ಯದೊಂದಿಗೆ ಬೌಲ್‌ ಮಾಡುವುದು ಅನುಮಾನ ಎಂದು ಮಾಜಿ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

‘ಇಂಗ್ಲೆಂಡ್‌ನಲ್ಲಿ ನಡೆಯುವ ಐದು ಟೆಸ್ಟ್‌ ಪಂದ್ಯಗಳಲ್ಲಿ ಆಡುವ ಸಾಮರ್ಥ್ಯ ಜಹೀರ್‌ಗೆ ಇದೆಯೇ? ನನಗೆ ಈ ಬಗ್ಗೆ ಭರವಸೆಯಿಲ್ಲ’ ಎಂದು ದ್ರಾವಿಡ್‌ ‘ಕ್ರಿಕ್‌ಇನ್ಫೋ’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.ಗಾಯದ ಸಮಸ್ಯೆಯಿಂದ ಬಳಲಿದ್ದ ಜಹೀರ್‌ ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಅದೇ ರೀತಿ ನ್ಯೂಜಿಲೆಂಡ್‌ನಲ್ಲಿ ನಡೆದ ಎರಡು ಟೆಸ್ಟ್‌ಗಳಲ್ಲಿ ಆಡಿದ್ದರು. ಆದರೆ ಅವರು ಹಿಂದಿನ ಲಯದಲ್ಲಿ ಬೌಲ್‌ ಮಾಡುವಲ್ಲಿ ವಿಫಲರಾಗಿದ್ದರು.

ವೆಲಿಂಗ್ಟನ್‌ನಲ್ಲಿ ನಡೆದ ಕಿವೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಈ ಎಡಗೈ ವೇಗಿ 51 ಓವರ್‌ಗಳನ್ನು ಎಸೆದು ಐದು ವಿಕೆಟ್‌ ಪಡೆದಿದ್ದರು. ಆದರೂ ಸರಣಿಯಲ್ಲಿ ಅವರು ನೀಡಿದ ಒಟ್ಟಾರೆ ಪ್ರದರ್ಶನ ಅಷ್ಟೊಂದು ಪ್ರಭಾವಿ ಎನಿಸಿರಲಿಲ್ಲ.‘ಇಂಗ್ಲೆಂಡ್‌ನಲ್ಲಿ ಆಡಲು ಸಾಧ್ಯವೇ ಎಂಬುದರ ಬಗ್ಗೆ ಜಹೀರ್‌ ಒಂದು ನಿರ್ಧಾರಕ್ಕೆ ಬರಬೇಕು. ಅದರ ಬದಲು ಸರಣಿಗೆ ತೆರಳಿ ಅಲ್ಲಿ ಪರದಾಟ ನಡೆಸುವುದು ಸರಿಯಲ್ಲ’ ಎಂದು ದ್ರಾವಿಡ್‌ ನುಡಿದಿದ್ದಾರೆ. 92 ಟೆಸ್ಟ್‌ಗಳಿಂದ 311 ವಿಕೆಟ್‌ ಪಡೆದಿರುವ ಜಹೀರ್‌ ಅವರು ಕಪಿಲ್‌ ದೇವ್‌ ಬಳಿಕ ಭಾರತ ಕಂಡಂತಹ ಶ್ರೇಷ್ಠ ವೇಗದ ಬೌಲರ್‌ ಎನಿಸಿಕೊಂಡಿದ್ದಾರೆ.‘ಜಹೀರ್‌ ಭಾರತದ ಶ್ರೇಷ್ಠ ವೇಗದ ಬೌಲರ್‌. ಕಪಿಲ್‌ ಬಳಿಕದ ಸ್ಥಾನದಲ್ಲಿ ಅವರು ನಿಲ್ಲುವರು.  ಇಂತಹ ಶ್ರೇಷ್ಠ ಬೌಲರ್‌ವೊಬ್ಬ ಕಳಪೆ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಕಳೆದುಕೊಂಡು ವಿದಾಯ ಹೇಳುವುದನ್ನು ನಾನು ಇಷ್ಟಪಡುವುದಿಲ್ಲ’ ಎಂಬುದು ದ್ರಾವಿಡ್‌ ಹೇಳಿಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.