ಶುಕ್ರವಾರ, ಜನವರಿ 24, 2020
18 °C

‘ಮಕ್ಕಳಿಗೆ ಚರಿತ್ರೆ ಪರಿಚಯ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾಳಕೊಪ್ಪ: ತಾಳಗುಂದ ಎಂಬುದು ಕೇವಲ ಊರಲ್ಲ, ಪ್ರಣವೇಶ್ವರ ಎನ್ನುವುದು ಕೇವಲ ದೇವರಲ್ಲ ಅದು ಶತಮಾನಗಳಿಂದ ನಡೆದು ಹೋದ ರಾಜಕೀಯ, ಗಲಭೆ, ಶಾಂತಿ, ಕಲೆ, ಸಂಸ್ಕೃತಿ, ಪ್ರಣಯ, ವಿರಸಕ್ಕೆ ಮೂಕಸಾಕ್ಷಿಯಾಗಿದೆ. ಇಂಥ ಸ್ಥಳದಲ್ಲಿ ಬನವಾಸಿಯಲ್ಲಿ ಪ್ರತಿ ವರ್ಷ ನಡೆಯುವ ಕದಂಬೋತ್ಸವವನ್ನು ತಾಳಗುಂದ ಗ್ರಾಮದಲ್ಲೂ ಸಹ ಆಚರಣೆ ಮಾಡಬೇಕು ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.ಹತ್ತಿರದ ಐತಿಹಾಸಿಕ ತಾಣಗಳಾದ ತಾಳಗುಂದ, ಬಳ್ಳಿಗಾವಿ, ಬಂದಳಿಕೆಯ ಪುರಾತನ ದೇವಾಲಯಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಯಾವ ವ್ಯಕ್ತಿಗೆ ತನ್ನ ದೇಶದ ಇತಿಹಾಸ ಗೊತ್ತಿಲ್ಲವೋ ಆ ವ್ಯಕ್ತಿಗೆ ದೇಶದ ಭವಿಷ್ಯ ಕೂಡ ತಿಳಿಯದು, ಇತಿಹಾಸ ಎನ್ನುವುದು ಕೇವಲ ನಾಲ್ಕು ಕಡೆ ಕಲ್ಲಿನಿಂದ ಕಟ್ಟಿದ ಕಟ್ಟಡವಲ್ಲ; ಅದು ಮನುಷ್ಯನಿಗೆ ಮೌನವಾಗಿ ಮಾರ್ಗದರ್ಶನ ಮಾಡುತ್ತಿರುವ ರಾಯಬಾರಿ. ಮಹಾಸಾಮ್ರಾಜ್ಯಗಳು ಹಾಗೂ ಮಹಾ ಸಾಮ್ರಾಟರು ಮಣ್ಣು ಪಾಲಾಗಿದ್ದರ ಬಗ್ಗೆ ಸಾಕ್ಷಿ ನೀಡುತ್ತದೆ.ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ದೊರೆಯುವ ಇತಿಹಾಸದ ಶ್ರೀಮಂತಿಕೆ, ಗುರು ಪರಂಪರೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಕೂಡ ಕಾಣಸಿಗದು. ಅದನ್ನು ಸರ್ಕಾರ ಜನರ ಬಳಿಗೆ ಕೊಂಡೊಯ್ಯ ಬೇಕಾಗಿದ್ದು. ಪಾಶ್ಚಿಮಾತ್ಯ ದೇಶಗಳು ಚರಿತ್ರೆ ಬಗ್ಗೆ ತೋರುವ ಕಾಳಜಿಯನ್ನು ಭಾರತೀಯರು ತೋರಬೇಕಾಗಿದ್ದು. ಸರ್ಕಾರ ಮಕ್ಕಳಲ್ಲಿ ಚರಿತ್ರೆ, ಕಲೆ, ಸಾಹಿತ್ಯದ ಬಗ್ಗೆ ವಿಸ್ತ್ರುತ ಪರಿಚಯ ಮಾಡಿಕೊಡಬೇಕು ಎಂದರು.ಈ ಸಂದರ್ಭ ಅವರು ಕೆಲವು ಶಾಸನಗಳ ಮೇಲೆ ಬೆಳೆದಿದ್ದ ಪಾಚಿಗಳನ್ನು ಸಹ ಸ್ವಚ್ಛಗೊಳಿಸಿದರು.

ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕಿರಣ ಮೂಗೂರು, ವೈಭವ ಶಿವಣ್ಣ, ಕೃಷ್ಣರಾಜ್, ಸಿದ್ದೇಶ್ವರ ಮಾರ್ಗದರ್ಶನ ಮಾಡಿದರು.

ಪ್ರತಿಕ್ರಿಯಿಸಿ (+)