ಸೋಮವಾರ, ಜನವರಿ 27, 2020
26 °C

‘ಮಹಾಬೆಳಗು’ ಮೂಡಿಸಿದ ಪಂಚಲಿಂಗ

ಪ್ರಜಾವಾಣಿ ವಾರ್ತೆ/ ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ತಲಕಾಡು (ಮೈಸೂರು):  ಈ ದಿನದ ಬೆಳಗು   ಬರೀ ಬೆಳಗಲ್ಲ. ತಲಕಾಡಿನ ಪಂಚಲಿಂಗ ದರ್ಶನಕ್ಕಾಗಿಯೇ ಮೂಡಿದ ಮಹಾಬೆಳಗು.

ಇದಕ್ಕಾಗಿ ಭಕ್ತರು ಭಾನುವಾರ ರಾತ್ರಿಯಿಂದಲೇ ತಲಕಾಡಿಗೆ ತೆರಳಿ ವೈದ್ಯನಾಥೇಶ್ವರ ದೇವಾಲಯದ ಸುತ್ತ ಕಾದಿದ್ದರು. ಚಾಪೆ ಹಾಸಿಕೊಂಡು ಕುಳಿತು, ನಿಂತು ಬಸವಳಿದರೂ ವೈದ್ಯನಾಥನ ದರ್ಶನಕ್ಕಾಗಿ ಕಾದರು. ಅಸಂಖ್ಯರು ಸೋಮವಾರ ನಸುಕಿನಲ್ಲಿ ಕಾವೇರಿ ನದಿಯಲ್ಲಿ ಮಿಂದು ಬಂದು ಕಾದರು. ಹಾಗೆ ಬರುವ ಮುನ್ನ ನದಿಯ ಬಳಿ ಮರಳಿನ ಶಿವಲಿಂಗು ಮಾಡಿ ಅರಿಸಿನ, ಕುಂಕುಮ ಹಚ್ಚಿ, ಹೂವು ಹಾಕಿದ ಮೇಲೆ ಆರತಿ ಬೆಳಗಿ ಬಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು ದರ್ಶನ ಪಡೆದ ಮೇಲೆ 10 ಗಂಟೆಯ ನಂತರ ವೈದ್ಯನಾಥೇಶ್ವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು. ಅದುವರೆಗೆ ಕಾದಿದ್ದವರು ಒಳಹೋದ ಮೇಲೆ ಭಕ್ತಿಪರವಶರಾಗಿ ‘ಮನದ ಬಯಕೆಗಳೆಲ್ಲ ಈಡೇರಲಿ ಹರನೇ...’ ಎಂದು ಕೈ ಎತ್ತಿ ನಮಿಸಿದರು.

ನಂತರ ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ ಹಾಗೂ ಮಲ್ಲಿಕಾರ್ಜುನ ದೇವರುಗಳನ್ನು ಕಂಡು ಕಣ್ತುಂಬಿಕೊಂಡು ಕೈಮುಗಿದರು. ಇದರಿಂದ ಪಂಚಲಿಂಗ ದರ್ಶನವಾಗಿ ಧನ್ಯರಾದೆವು ಎಂದು ಹರ್ಷಗೊಂಡರು.–ಹೀಗೆ ಸುಮಾರು 3–4 ಲಕ್ಷ ಭಕ್ತರು ಮಧ್ಯರಾತ್ರಿಯವರೆಗೆ ಪಂಚಲಿಂಗ ದರ್ಶನಕ್ಕೆ ಸಾಕ್ಷಿಯಾದರು. ಯಾವುದೇ ಸಂವತ್ಸರದ 5ನೇ ಕಾರ್ತೀಕ ಸೋಮವಾರ ದಿನ ವೃಶ್ಚಿಕ ಅಮಾವಾಸ್ಯೆ ಇದ್ದು, ಕುಹ ಯೋಗ ಬಂದು, ವಿಶಾಖಾ ಅಥವಾ ಅನುರಾಧಾ ನಕ್ಷತ್ರ ಬಂದ ದಿನ ಪಂಚಲಿಂಗ ದರ್ಶನ ಮಾಡಿದರೆ ಶ್ರೇಯಸ್ಸು, ಪುಣ್ಯ ಸಿಗುತ್ತದೆ ಎಂದು ನಂಬಿದವರು ಹಂಬಲಿಸಿ ಬಂದರು.‘ಕಾರ್ತೀಕ ಕಡೆ ಸೋಮವಾರವಾದ (ಡಿ. 2) ದಿನ ವೃಶ್ಚಿಕ ಅಮಾವಾಸ್ಯೆ ಬಂದಿರುವುದರ ಜತೆಗೆ ವಿಶಾಖಾ ಹಾಗೂ ಅನುರಾಧಾ ನಕ್ಷತ್ರಗಳೆರಡೂ ಒಟ್ಟಿಗೇ ಬಂದಿವೆ. ವಿಶಾಖಾ ನಕ್ಷತ್ರ ವೈದ್ಯನಾಥೇಶ್ವರನಿಗೆ ಸಂಬಂಧಿಸಿದರೆ, ಅನುರಾಧಾ ನಕ್ಷತ್ರ ಮನೋನ್ಮಣಿ (ಪಾರ್ವತಿ)ಗೆ ಸಂಬಂಧಪಡುತ್ತದೆ. ಇವೆರಡೂ ಒಟ್ಟಿಗೇ ಬಂದಿದ್ದು ಈ ಬಾರಿಯ ವಿಶೇಷ. ಈ ದಿನ ಮುಹೂರ್ತ ಮುಖ್ಯವಲ್ಲ. ಅಮಾವಾಸ್ಯೆ ಮುಖ್ಯ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಎನ್‌. ಕೃಷ್ಣ ದೀಕ್ಷಿತ್‌ ತಿಳಿಸಿದರು.ಸೋಮವಾರ ನಸುಕಿನ 5.30ಗಂಟೆಗೆ ಗೋಕರ್ಣದ ಸರೋವರದಲ್ಲಿ ಕೃಷ್ಣ ದೀಕ್ಷಿತರು ಸ್ನಾನ ಮಾಡಿ, 5 ಕಳಶದಲ್ಲಿ ಅಗ್ರೋದಕ ತೆಗೆದುಕೊಂಡು ದೇವಸ್ಥಾನದಲ್ಲಿ ಮಹಾಗಣಪತಿ­ಯನ್ನು ಪ್ರಾರ್ಥಿಸಿದರು. ನಂತರ ಮೂಲವಿಗ್ರಹ ವೈದ್ಯನಾಥೇಶ್ವರಸ್ವಾಮಿಗೆ ಏಕಾದಶವಾರ ಅಭಿಷೇಕ ಸಲ್ಲಿಸಿದ ಮೇಲೆ ರುದ್ರಾಭಿಷೇಕ ನಡೆಸಿದರು. ಮಹಾಮಂಗಳಾರತಿಯಾದ ಮೇಲೆ ಅಷ್ಟಾವಧಾನ ಸೇವೆ ಕೈಗೊಂಡರು.ಇದಾದ ಮೇಲೆ ಯಾಗಶಾಲೆಯಲ್ಲಿ ಯಾಗಶಾಲಾರ್ಚನೆ ಹಾಗೂ ಶಿವಯಾಗ ನಡೆಯಿತು. ಜತೆಗೆ, ವಾಸ್ತುಬೀದಿ ಬಲಿಪ್ರದಾನ ಹಾಗೂ ವಾಸ್ತುಬೀದಿ ಉತ್ಸವ ನಡೆದವು. ಈ ಧಾರ್ಮಿಕ ಕಾರ್ಯಕ್ರಮಗಳು ಪೂರ್ಣಗೊಂಡ ಕೂಡಲೇ ವೈದ್ಯನಾಥೇಶ್ವರ ದೇವಾಲಯದಲ್ಲಿದ್ದ ವೈದ್ಯನಾಥೇಶ್ವರ ಹಾಗೂ ಮನೋನ್ಮಣಿ ಉತ್ಸವ ಮೂರ್ತಿಗಳಿಗೆ ಸುಗಂಧರಾಜ, ಸೇವಂತಿಗೆ, ರುದ್ರಾಕ್ಷಿಹಾರ, ಗುಲಾಬಿ ಹೂವು ಹಾಗೂ ಬಿಲ್ವಪತ್ರೆ ಮೂಲಕ ಪೂಜಿಸಲಾಯಿತು.ಇದಕ್ಕೂ ಮೊದಲು ಪಂಚಲೋಹದ ಮೂರ್ತಿಗೆ ಬೆಳ್ಳಿಯ ಕವಚ ಇರುವ ಉತ್ಸವ ಮೂರ್ತಿಗಳಿಗೆ 2009ರ ಪಂಚಲಿಂಗ ದರ್ಶನ ಮಹೋತ್ಸವದ ಕೊಡುಗೆಯಾದ ₨ 3.9 ಲಕ್ಷ ಮೌಲ್ಯದ ಚಿನ್ನದ ಪದಕ ಹಾಕಲಾಯಿತು.ಈ ವೈದ್ಯನಾಥೇಶ್ವರನಿಗೆ ಅಗ್ರಪೂಜೆ ಸಲ್ಲುವ ಕುರಿತು ಕೃಷ್ಣ ದೀಕ್ಷಿತ್ ಅವರು, ಈಶ್ವರನಿಗೆ 5 ಮುಖ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಹಾಗೂ ಈಶಾನ. ಇವುಗಳಲ್ಲಿ 5 ಮುಖ ಇರುವುದು ಕಾವೇರಿ ತೀರದಲ್ಲಿ ಉದ್ಭವವಾಗಿರುವ ವೈದ್ಯನಾಥೇಶ್ವರನಿಗೆ. ಹೀಗಾಗಿ, ವೈದ್ಯನಾಥೇಶ್ವರನಿಗೆ ಅಗ್ರಪೂಜೆ ಎಂದರು.‘1908ರಲ್ಲಿ ಶುರುವಾಗಿರಬಹುದಾದ ಪಂಚಲಿಂಗ ದರ್ಶನ ಮಹೋತ್ಸವವನ್ನು 952ರಿಂದ ನೋಡುತ್ತಿರುವೆ. 1979ರಿಂದ ಪ್ರಚಾರ ಹೆಚ್ಚಾಗಿ ಭಕ್ತರ ಸಂಖ್ಯೆ ಹೆಚ್ಚಿತು. ಮುಂದಿನದು 2026 ಇಲ್ಲವೆ,  2027ರಲ್ಲಿ ಬರಬಹುದು’ ಎಂದು ಅವರು ಭವಿಷ್ಯ ನುಡಿದರು.‘ತಲಕಾಡು ಅಂದರೆ ಪಂಚಲಿಂಗ. ಈ ದಿನದ ದರ್ಶನದಿಂದ ಕಾಶಿಗಿಂತ ಗುಲಗಂಜಿಯಷ್ಟು ಜಾಸ್ತಿ ಪುಣ್ಯ ಸಿಗುತ್ತದೆ’ ಎಂದು ಅರ್ಚಕ ಕೆ.ಎಸ್‌. ವೆಂಕಟಾಚಲ ಹೇಳಿದರು.‘ತಲಕಾಡು ನೋಡಿ ಮ್ಯಾಲ ಆಕಾಶ ಅನಸ್ತದ ಗುಡಿಯ ಹಾಂಗ, ಪ್ರಕಾಶ ಮಹಾಲಿಂಗ, ನೆಲ ಅಗಲ ಪೀಠದಂಗ’ ಎಂದ ಬೇಂದ್ರೆ ಅಜ್ಜನ ಕವಿತೆ ಸಾಲು ನೆನಪಾಗ್ತದ. ಇದರೊಂದಿಗೆ ಇಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವ. ಪ್ರತಿ ವರ್ಷ ಲಕ್ಷ ದೀಪೋತ್ಸವದಲ್ಲಿ ಮನೆಯಾಕೆಯೊಂದಿಗೆ ದೀಪ ಹಚ್ಚುತ್ತಿದ್ದೆ. ಪಂಚಲಿಂಗ ದರ್ಶನಕ್ಕಾಗಿ ತಲಕಾಡಿಗೆ ಬಂದು ಶರಣೆಂದೆ. ನನ್ನಂತೆ ರಾಜ್ಯದವರು ಅಲ್ಲದೇ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಭಕ್ತರೂ ಬಂದಿದ್ದಾರೆ’ ಎಂದು ಒಂದೇ ಉಸಿರಿಗೆ ಹೇಳಿದರು ಹುಬ್ಬಳ್ಳಿಯ ಸಿದ್ದಯ್ಯ ಕಲ್ಮಠ.ತಲಕಾಡಿನಲ್ಲಿ ಇಂದು

ವೈದ್ಯನಾಥೇಶ್ವರ ದೇವಾಲಯ: ತಲಕಾಡು ಪಂಚಲಿಂಗ ದರ್ಶನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು. ಭಕ್ತಿಗೀತೆ– ಮೈಸೂರಿನ ಬಿ.ಎಚ್. ನಾಗರತ್ನಾ. ಸ್ಯಾಕ್ಸೊಫೋನ್‌– ಮೇಲುಕೋಟೆಯ ಎಂ.ಜಿ. ತ್ರಿಲೋಕ್‌. ಜಾನಪದ ಗೀತೆ– ಪಾರ್ವತಮ್ಮ ಅಜ್ಜಳ್ಳಿ ಮಾರಮ್ಮ ಮತ್ತು ತಂಡದಿಂದ. ಡೊಳ್ಳು ಕುಣಿತ– ತಲಕಾಡಿನ ಟಿ.ಎಂ. ಕೃಷ್ಣಮೂರ್ತಿ. ಮ್ಯಾಂಡೋಲಿನ್– ಮೈಸೂರಿನ ಎಂ.ಎಸ್. ಜಾನಕಿರಾಂ. ನೃತ್ಯರೂಪಕ– ಮೈಸೂರಿನ ಕೃಪಾ ಫಡ್ಕೆ. ಹರಿಕಥೆ– ತಲಕಾಡಿನ ಶಿವರುದ್ರಸ್ವಾಮಿ. ದೇವಾಲಯದ ಆವರಣ,   ಬೆಳಿಗ್ಗೆ 9.

ಪ್ರತಿಕ್ರಿಯಿಸಿ (+)