ಬುಧವಾರ, ಜನವರಿ 22, 2020
22 °C

‘ಮಾನವನ ನೆಮ್ಮದಿ ಬದುಕು ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ವಿಶ್ವ ಶಾಂತಿಗಾಗಿ 1948ರಲ್ಲಿ ಮಾನವ ಹಕ್ಕು ಘೋಷಣೆಯಾಗಿದ್ದು, ಮಾನವನ ನೆಮ್ಮದಿ ಬದುಕೇ ಇದರ ಧ್ಯೇಯವಾಗಿದೆ. ಪ್ರತಿಯೊಬ್ಬರು ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪಿ.ಜಿ.ಎಂ ಪಾಟೀಲ ಹೇಳಿದರು.ಮಂಗಳವಾರ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ–2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿ ವ್ಯಕ್ತಿಗೂ ಜೀವನ ನಡೆಸುವ ಹಕ್ಕು ಇದೆ. ಉಲ್ಲಂಘನೆ ಸ್ಥಿತಿ ಎದುರಾದಾಗ ರಕ್ಷಣೆ ನೀಡಿ ಪರಿಹಾರ ಕಂಡುಕೊಳ್ಳಬೇಕು. ಮಾನವ ಹಕ್ಕುಗಳನ್ನು ಎಲ್ಲರೂ ಗೌರವಿಸಬೇಕು. ಜಾತಿ, ಮತ, ಭಾಷೆ ಎಂಬ ಕಟ್ಟಳೆಗಳಿಲ್ಲ. ಎಲ್ಲರಿಗೂ ಸಮಾನ ರೀತಿ ಮಾನವ ಹಕ್ಕು ಇದೆ. ಬಡತನ ಸಮಸ್ಯೆಯಿಂದ ಎದುರಿಸುವ ಸಂಕಷ್ಟ, ಜೀತ ಪದ್ಧತಿ, ಅನಿಷ್ಟ ಪದ್ಧತಿಗಳು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ.  ಇಂಥ ಸಂಗತಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕು ಆಯೋಗ ಇವೆ. ನ್ಯಾಯಾಂಗವೂ ಮಾನವ ಹಕ್ಕು ರಕ್ಷಣೆಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಮ್ಮದ್ ಮುಜಾಹಿದ್ ಉಲ್ಲಾ ಮಾತನಾಡಿ, ಮಾನವನನ್ನು ಮಾನವಂತೆಯೇ ಕಾಣಬೇಕು. ಮಾನವ ಹಕ್ಕು ಉಲ್ಲಂಘನೆ ತಡೆಯಬೇಕು. ಮಕ್ಕಳೂ ತಮಗೆ ಅನ್ಯಾಯ ಆಗುತ್ತಿದ್ದರೆ, ಅನ್ಯಾಯ ಆಗುವುದನ್ನು ಕಂಡರೆ ಪ್ರತಿಭಟಿಸಬೇಕು ಎಂದು ಹೇಳಿದರು.ಪ್ರತಿ ವ್ಯಕ್ತಿ ಉತ್ತಮವಾದ ವರ್ತನೆ ಹೊಂದಿರಬೇಕು. ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸಬೇಕು. ಪಾಲಕರು–ಪೋಷಕರು ಮಕ್ಕಳಿಗೆ ಹಿಂಸೆ ನೀಡಬಾರದು. ಸರ್ಕಾರಿ ಶಾಲೆಗಳ ಬಗ್ಗೆ ಉಪೇಕ್ಷೆ ಬೇಡ. ಅಲ್ಲಿಯೂ ಬಹಳ ಸೌಕರ್ಯಗಳಿವೆ. ಕಾನೂನಿನ ಬಗ್ಗೆ ಮಾಹಿತಿ ಪಡೆಯ­ಬೇಕಾದರೆ, ತಿಳಿಯಬೇಕಾದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಬಹುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಮಾತನಾಡಿ, ಯಾವ ದೇಶದಲ್ಲಿ ಕಾಯ್ದೆ, ಕಾನೂನು ಜಾಸ್ತಿ ಇರುತ್ತವೋ ಆ ದೇಶದಲ್ಲಿ ಮಾನವ ನೆಮ್ಮದಿಯಿಂದ ಇಲ್ಲ ಎಂಬುದು ಗೊತ್ತಾಗುತ್ತದೆ. ಈ ದೇಶದಲ್ಲಿ ಪ್ರತಿ ವರ್ಷ ಕಾಯ್ದೆಗಳು ಜಾಸ್ತಿ ಆಗುತ್ತಲೇ ಇವೆ. ತಂದೆ–ತಾಯಿ, ಮಕ್ಕಳು, ಜಾತಿ ಜಾತಿ ನಡುವೆ, ಪಂಗಡ, ಪತಿ ಪತ್ನಿ ಹೀಗೆ ಒಂದಿಲ್ಲೊಂದು ಕಡೆ ನಿತ್ಯ ದೌರ್ಜನ್ಯ ನಡೆಯುತ್ತಲೆ ಇವೆ. ಬೆಳಕಿಗೆ ಬರುತ್ತಿರುವುದು ಕೇವಲ ಶೇ 5ರಿಂದ 10ರಷ್ಟು ಮಾತ್ರ ಎಂದು ವಿಷಾದ ವ್ಯಕ್ತಪಡಿಸಿದರು.ಹಿಂದೆ ಕಾಯ್ದೆ ಇರಲಿಲ್ಲ. ಆದರೆ, ವಿಶ್ವಾಸಪೂರ್ಣ ನಡುವಳಿಕೆ, ದೇವರ ಬಗ್ಗೆ ಭಯ, ನಂಬಿಕೆ ಇತ್ತು. ಈಗ ಕಾಯ್ದೆ ಇವೆ. ಆದರೆ, ಮಾನವ ಹಕ್ಕು ಎಲ್ಲ ರೀತಿಯಿಂದ ಉಲ್ಲಂಘನೆ ಆಗುತ್ತಿದೆ.  ಮುಂದುವರಿದ ದೇಶದಲ್ಲಿ ಮಾನವ ಹಕ್ಕುಗಳ ಬಗ್ಗೆ ಅಪಾರ ಗೌರವವಿದೆ. ಬರೀ ವಿದ್ಯಾವಂತರಾದರೆ ಸಾಲದು ಮಾನವ ಹಕ್ಕುಗಳ ರಕ್ಷಣೆ ಕಾಳಜಿ, ಮಾನವೀಯತೆ ಬೇಕು. ಹಿಂದುಳಿದ ಭಾಗದ ಈ ಜಿಲ್ಲೆಯಲ್ಲಿ ಪ್ರತಿ ಹಂತದಲ್ಲೂ ಮಾನವ ಹಕ್ಕು ಉಲ್ಲಂಘನೆ ಆಗುತ್ತಿದೆ. ಪ್ರಜ್ಞಾವಂತ ನಾಗರಿಕರು ಮಾನವ ಹಕ್ಕು ರಕ್ಷಣೆಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜ, ಜಿಪಂ ಯೋಜನಾಧಿಕಾರಿ ಡಾ.ಟಿ ರೋಣಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಟಿ ಕಲ್ಲಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿ ಬಸವರಾಜ ಬೋರೆಡ್ಡಿ, ಬಾಲ ಕಾರ್ಮಿಕ ವಿಭಾಗ ಅಧಿಕಾರಿ ಮಂಜುನಾಥಶೆಟ್ಟಿ, ಯುನಿಸೆಫ್ ಮಕ್ಕಳ ಹಕ್ಕು ಸಂರಕ್ಷಣಾ ಯೋಜನೆ ಘಟಕದ ಸಂಯೋಜಕ ರಾಘವೇಂದ್ರಭಟ್‌ ಮುಖ್ಯ ಅತಿಥಿಗಳಾಗ ಆಗಮಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಕೃಷ್ಣ ಸಂಗೀತ ವಿದ್ಯಾಲಯ ಮಕ್ಕಳಿಂದ ಸಂಗೀತ ನೆರವೇರಿತು. ಬಸಪ್ಪ ಗದ್ದಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)