ಶನಿವಾರ, ಜನವರಿ 18, 2020
20 °C
‘ಸಾಹಿತ್ಯ ಸಮೃದ್ಧಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಕ್ಷರ

‘ಲೇಖಕನ ಜಾತಕ ವಿಮರ್ಶೆ ಸಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃತಿಗಳಲ್ಲಿರುವ ಮೂಲಧಾತುವನ್ನು ಚರ್ಚೆಯ ವಿಷಯವಾಗಿಸಿಕೊಳ್ಳದೇ,  ಲೇಖಕನ ವೈಯಕ್ತಿಕ ನಿಲುವನ್ನು ವಿಮರ್ಶಾ ವಲಯ ಪ್ರಶ್ನಿಸುತ್ತಿರುವುದು ಬೇಸರದ ಸಂಗತಿ’ ಎಂದು ರಂಗಕರ್ಮಿ ಕೆ.ವಿ.ಅಕ್ಷರ ವಿಷಾದ ವ್ಯಕ್ತಪಡಿಸಿದರು.‘ಅಂಕಿತ ಪುಸ್ತಕ’ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿ.ಪಿ ಅಶೋಕ ಅವರ ‘ಸಾಹಿತ್ಯ ಸಮೃದ್ಧಿ’, ಗಜಾನನ ಶರ್ಮ ಅವರ ‘ಮೈಸೂರು ವಿಶ್ವವಿದ್ಯಾಲಯದ ರೂವಾರಿ ಸರ್ ಎಂ.ವಿಶ್ವೇಶ್ವರಯ್ಯ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಲೇಖಕನ ಹೆಸರೇ ಅರಿಯದೇ ಕೃತಿಯಲ್ಲಿದ್ದ ವಿಚಾರ­ಗಳನ್ನು ಮಾತ್ರ ವಿಮರ್ಶೆ ಮಾಡುವ ಕಾಲ­ವೊಂದಿತ್ತು. ಈಗ ಲೇಖಕನ ಕೃತಿ ಸಂಪೂರ್ಣ ಅಲಕ್ಷಿಸಿ, ಆತನ ಪೂರ್ವಾಪರ ವಿಚಾರಗಳ ಕುರಿತು ವಿಮರ್ಶೆ ಮಾಡಲಾಗುತ್ತಿದೆ. ಇದೊಂದು ಬಗೆಯಲ್ಲಿ ಲೇಖ­ಕನ ಜಾತಕ ವಿಮರ್ಶೆ’ ಎಂದು ವ್ಯಂಗ್ಯವಾಡಿದರು.‘ನನಗೆ ಇಷ್ಟವಾಗುವ ಹಾಗೂ ಹಿಡಿಸದ ಕೃತಿಗಳ ಬಗ್ಗೆ ಇದ್ದ ಉಗ್ರ ಧೋರಣೆಯನ್ನು ಸಡಿಲಿಸಿ, ಹದವಾಗಿ ಚಿಂತಿಸಲು  ಟಿ.ಪಿ.ಅಶೋಕ ಅವರೇ ಪ್ರೇರಣೆ’ ಎಂದು ತಿಳಿಸಿದರು.‘ಅಶೋಕ ಮತ್ತು ನನ್ನ  ನಡುವೆ ಹಲವು ವರ್ಷಗಳ ಸ್ನೇಹವಿದೆ. ಅವರ  ವಿಮರ್ಶಾ ಕೃತಿಗಳಲ್ಲಿ  ಸ್ಪಷ್ಟವಾದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ನಿಲುವು ಪ್ರಕಟವಾಗುವುದಿಲ್ಲ ಏಕೆ? ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ’ ಎಂದು ಹೇಳಿದರು.

‘ಜಾಗತೀಕರಣ ಹಾಗೂ ಕೋಮುವಾದದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಅಶೋಕ ಅವರು ಏನನ್ನೂ ಬರೆ­ದಿಲ್ಲ. ಆದರೆ, ಪ್ರಸಕ್ತ ವಿದ್ಯಮಾನಗಳಿಗೆ ಪರೋಕ್ಷ ಮಾರ್ಗವೆಂಬಂತೆ ಮರುಕಥನವನ್ನು ಒದಗಿಸುವ ಮೂಲಕ ಸ್ಪಂದಿಸುವ ಕಲೆ ಅವರಿಗೆ ಸಿದ್ಧಿಸಿದೆ’ ಎಂದು ಶ್ಲಾಘಿಸಿದರು.ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್, ‘ ಒಬ್ಬ ವ್ಯಕ್ತಿ ಹಾಗೂ ಪ್ರಾದೇಶಿಕತೆಯ ಬಗ್ಗೆ ಒಂದೇ ಏಟಿಗೆ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಸರ್.ಎಂ.ವಿ ಕುರಿತ ಈ ಕೃತಿಯು ಹೊರಗೆಡಹುತ್ತದೆ’ ಎಂದು ಹೇಳಿದರು. ‘ಯುವರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ವಿಶ್ವೇಶ್ವರಯ್ಯ ಅವರಲ್ಲಿ ಅಡಗಿದ್ದ ಮೇರು ಪ್ರತಿಭೆಯನ್ನು ಗುರುತಿಸಿ, ಅವರ ಸಾಮರ್ಥ್ಯಕ್ಕೆ ಅನುಗುಣವಾದ ಜವಾಬ್ದಾರಿ ವಹಿಸಿದ್ದರು’ ಎಂದು ತಿಳಿಸಿದರು. ವಿಮರ್ಶಕ ಜಿ.ಬಿ.ಹರೀಶ, ‘ಟೀಕಾಕಾರರು ನಿಸ್ವಾರ್ಥ ಸೇವೆಯ ಮೂರ್ತಸ್ವರೂಪದ ಚೌಕಟ್ಟಿ ನಲ್ಲಿಯೇ ವಿಶ್ವೇಶ್ವರಯ್ಯ ಅವರ ಬಗ್ಗೆ ಮಾತನಾಡಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)