ಭಾನುವಾರ, ಜನವರಿ 26, 2020
28 °C

‘ವೈಜ್ಞಾನಿಕ’ ಪ್ರೇಮಕಥೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಕೋನ ಪ್ರೇಮಕಥೆ, ದುರಂತ ಪ್ರೇಮಕಥೆ, ಸುಖಾಂತ್ಯ ಪ್ರೇಮಕಥೆ ಚಿತ್ರ ನೋಡಿರುವವರಿಗೆ ‘ವೈಜ್ಞಾನಿಕ ಪ್ರೇಮಕಥೆ’ ನೋಡುವ ಭಾಗ್ಯ ಸಿಗಲಿದೆ!‘ವೈಜ್ಞಾನಿಕ ಪ್ರೇಮಕಥೆ’ – ಹಾಗೆಂದರೇನು? ಈ ಪ್ರಶ್ನೆಗೆ ಉತ್ತರ ಕೊಡಲು ನಿರ್ಮಾಪಕ ಗಿರೀಶ್ ಪರದಾಡಿದರು. ಏನೇನೋ ಸಮಜಾಯಿಷಿ ಕೊಟ್ಟರಾದರೂ ಸ್ಪಷ್ಟ ಉತ್ತರಕ್ಕೆ ಸುದ್ದಿಮಿತ್ರರು ಪಟ್ಟು ಹಿಡಿದರು. ಕೊನೆಗೆ ನಿರ್ಮಾಪಕರ ಸಹಾಯಕ್ಕೆ ನಾಯಕ ನಾಗಕಿರಣ್ ಬರಬೇಕಾಯಿತು. ‘ಚಿತ್ರದಲ್ಲಿ ನಾಯಕಿ ಡಾಕ್ಟರ್ ಆಗಿರ್ತಾಳೆ. ಆಕೆ ಮಾತಾಡೋದೆಲ್ಲ ಸೈಂಟಿಫಿಕ್ ಭಾಷೆಯಲ್ಲೇ ಇರ್ತದೆ...’ ಅಂತೆಲ್ಲ ಹೇಳಿ ಅವರನ್ನು ಪಾರು ಮಾಡಿದರು!‘ಲಹರಿ’ ಎಂಬ ಹೆಸರಿನಲ್ಲಿ ಚಿತ್ರೀಕರಣ ಆರಂಭವಾದ ಸಿನಿಮಾ ಈಗ ‘ಕದ್ದಳು ಮನಸನ್ನ...’ ಎಂಬ ನಾಮಕರಣದೊಂದಿಗೆ ಮುಕ್ತಾಯದ ಹಂತ ತಲುಪಿದೆ. ‘ಮುಸ್ಸಂಜೆ ಮಾತು’ ಸಿನಿಮಾದಲ್ಲಿನ ಹಾಡಿನ ಮೊದಲೆರಡು ಶಬ್ದಗಳನ್ನೇ ತೆಗೆದು ಇದಕ್ಕೆ ಹೊಸ ಹೆಸರಿಡಲಾಗಿದೆ. ಕ್ಲೈಮ್ಯಾಕ್ಸ್‌ನ ಮೂರು ದಿನಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ.ಚಿತ್ರದ ಹೆಸರು ಬದಲಾಯಿಸಲು ಕಾರಣವೇನು ಎಂಬ ಪ್ರಶ್ನೆಗೆ ನಾಯಕ ನಾಗಕಿರಣ್‌ರಿಂದ ಸಿಕ್ಕ ಉತ್ತರ: ‘ಪ್ರೇಮಕಥೆಯುಳ್ಳ ಚಿತ್ರದಲ್ಲಿ ನನ್ನದು ರಿಯಲ್ ಎಸ್ಟೇಟ್ ಏಜೆಂಟ್ ಪಾತ್ರ. ನಾಯಕಿ ಡಾಕ್ಟರ್. ನಾನು ಆಸ್ಪತ್ರೆಗೆ ಹೋದಾಗ ಆಕೆ ನನ್ನ ಮನಸ್ಸನ್ನು ಕದಿಯುತ್ತಾಳೆ. ಹೀಗಾಗಿ ಸಿನಿಮಾ ಹೆಸರು ಕದ್ದಳು ಮನಸನ್ನ... ಎಂದು ಬದಲಾಯಿಸಿದೆವು’.ಮೂಲತಃ ತಮಿಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಸೂರ್ಯ, ಕನ್ನಡದಲ್ಲಿ ಸಾಧುಕೋಕಿಲ, ದಯಾಳ್ ಜತೆ ಸೇರಿ ದುಡಿದ ಅನುಭವ ಹೊಂದಿದ್ದಾರೆ. ಈ ಚಿತ್ರದೊಂದಿಗೆ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ. ಯಾವಾವುದೋ ಕಾರಣಗಳಿಂದ ನಿಂತಲ್ಲೇ ನಿಂತುಕೊಂಡಿದ್ದ ಚಿತ್ರವನ್ನು ದಡ ಮುಟ್ಟಿಸಲು ಅವರ ಸ್ನೇಹಿತ ಹಾಗೂ ನಿರ್ದೇಶಕ ಆರ್. ಚಂದ್ರು ನೆರವಾಗಿದ್ದಾರೆ.ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಗಿರೀಶ್ ಬಂಡವಾಳ ಹೂಡಿದ್ದಾರೆ. ‘ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ವಿಭಿನ್ನ ಪ್ರೇಮಕಥೆಯಿದೆ. ಐದು ಹಾಡುಗಳ ಪೈಕಿ ಒಂದನ್ನು ಕೊಡೈಕೆನಾಲ್ ಹಾಗೂ ಮೂರನ್ನು ಮಲೇಷ್ಯಾದಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಮಾಹಿತಿ ನೀಡಿದರು. ನಾಗಕಿರಣ್‌ಗೆ ಮುಕ್ತಭಾನು ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)