ಭಾನುವಾರ, ಜನವರಿ 19, 2020
22 °C
ಉನ್ನತ ಶಿಕ್ಷಣ ಸಚಿವರ ಪ್ರತಿಕೃತಿ ದಹನ

‘ಶಿಕ್ಷಣ ಹಕ್ಕು ಕಸಿದ ರಾಜ್ಯ ಸರ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಬಡವ ಹಾಗೂ ಪ್ರತಿಭಾ­ವಂತ  ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣ­ದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ­ದಲ್ಲಿ ರಾಜ್ಯ ಸರ್ಕಾರ ನಿರತ­ವಾಗಿದೆ. ಹಿಂದಿನಂತೆ ಸಿಇಟಿ ಮೂಲಕವೇ ವೃತ್ತಿ ಶಿಕ್ಷಣದ ಸೀಟ್‌ ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡು­ವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆಯನ್ನು ನಡೆಸಿದರು.ಅಪಾರ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿ­ಗಳ ಪ್ರತಿಭಟನಾ ಮೆರವಣಿಗೆಯು  ನಗರದ ವೆಂಕಟಾದ್ರಿ ಕಾಲೇಜಿನಿಂದ ಹೊರಟು ಪ್ರಮುಖ ರಸ್ತೆಗಳ ಮೂಲಕ ತಾಲ್ಲೂಕು ಕಚೇರಿಗೆ ತಲುಪಿತು. ತಾಲ್ಲೂಕು ಕಚೇರಿ ಎದುರು ಉನ್ನತ ಶಿಕ್ಷಣ ಖಾತೆ ಸಚಿವ ಆರ್‌.ವಿ.­ದೇಶಪಾಂಡೆ ಪ್ರತಿಕೃತಿ ದಹಿಸಿದರು.ರಾಜ್ಯ ಸರ್ಕಾರವು ದುರ್ಬಲ ವರ್ಗಗಳ ಸಾಮಾಜಿಕ ನ್ಯಾಯವನ್ನು ವಿಫಲವಾಗಿಸಲು ಯತ್ನಿಸುತ್ತಿದೆ. ಕಾಯ್ದೆಯಿಂದ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದ ವೃತ್ತಿ ಶಿಕ್ಷಣದ ಸೀಟು­ಗಳು ಖಾಸಗಿ ಅವರ ಪಾಲಾಗುತ್ತವೆ. ಇದರಿಂದ ಪ್ರತಿಭಾವಂತರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಪ್ರತಿಭಟ­ನಾ­ಕಾರರು ದೂರಿದರು.ಸರ್ಕಾರವು ಖಾಸಗಿ ಕಾಲೇಜುಗಳ ಮೇಲಿನ ತನ್ನ ಹಿಡಿತವನ್ನು ಸಂಪೂರ್ಣ­ವಾಗಿ ಕಳೆದುಕೊಳ್ಳುತ್ತದೆ. ಖಾಸಗಿ ಸಂಸ್ಥೆ­ಗಳು ಮನಸೋ  ಇಚ್ಚೆ ಶುಲ್ಕಗಳನ್ನು ಪಡೆ­ಯಲು ಅವಕಾಶವಾಗುತ್ತದೆ. ಕಾಮೆಡ್‌–ಕೆ ­ನಡೆಸುವ ಪ್ರವೇಶ ಪರೀಕ್ಷೆ ಯ ಬಗ್ಗೆ ಈಗಾಗಲೇ ಸಾಕಷ್ಟು ದೂರು­ಗಳಿವೆ. ಇತರೆ ರಾಜ್ಯಗಳ ವಿದ್ಯಾರ್ಥಿಗಳು ಕಾಮೆಡ್‌–ಕೆ ಪರೀಕ್ಷೆಯನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ರಾಜ್ಯದ ವಿದ್ಯಾರ್ಥಿಗಳ ಅವಕಾಶಗಳು ಕಡಿಮೆ­ಯಾಗುತ್ತವೆ ಎಂದು ಎಬಿವಿಪಿ ರಾಜ್ಯ ಮುಖಂಡ ಮಂಜುನಾಥರೆಡ್ಡಿ ದೂರಿದರು.ಕಾಮೆಡ್‌–ಕೆ ಹಿಂದೆ ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳಲ್ಲಿ ಅವ್ಯವಹಾರ­ಗಳನ್ನು ನಡೆಸಿ, ವಾಮಮಾರ್ಗಗಳ ಮೂಲಕ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು  ಲಕ್ಷಾಂತರ ರೂಪಾಯಿ­ಗಳಿಗೆ ಸೀಟುಗಳನ್ನು ಮಾರಾಟ ಮಾಡಿ­ಕೊಳ್ಳುತ್ತಿದ್ದವು. ಈಗ ಅದು ಮುಂದು­ವರಿಯುತ್ತದೆ ಎಂದು ಆರೋಪಿಸಿದರು.ಯಾವುದೇ ಕಾರಣಕ್ಕೂ ಕಾಯ್ದೆ­ಯನ್ನು ಜಾರಿಗೊಳಿಸದೆ ಹಿಂದಿನಂತೆಯೇ ವೃತ್ತಿ ಶಿಕ್ಷಣದ ಪ್ರವೇಶ ನೀತಿ ಮುಂದು­ವರಿಸಬೇಕು ಎಂದು ಒತ್ತಾಯಪಡಿಸಿದರು.ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ಸುರೇಶ್‌, ನವಾಜ್‌, ಲಕ್ಷ್ಮಣ್‌ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಬಾಗೇಪಲ್ಲಿ: ಕಾಲೇಜು ಬಂದ್ ಎಚ್ಚರಿಕೆ

ಬಾಗೇಪಲ್ಲಿ: ಸರ್ಕಾರಿ ಸಿಇಟಿ ಮೂಲ­ಕವೇ ವೃತ್ತಿ ಶಿಕ್ಷಣ ಸೀಟು ಹಂಚಿಕೆ, ಶುಲ್ಕಗಳನ್ನು ನಿಗದಿ ಪಡಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಕೆಎಸ್‌­ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾ ಆವರಣದಿಂದ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಎಸ್‌ಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ರಾಜಶೇಖರ ಮಾತನಾಡಿ ಸರ್ಕಾರವು ವೃತ್ತಿ ಶಿಕ್ಷಣವನ್ನು ಮಾರಾ­ಟದ ಸರಕನ್ನಾಗಿ ರೂಪಿಸುತ್ತಿದೆ ಎಂದು ಆರೋಪಿಸಿದರು.ಕಾಯ್ದೆ ಜಾರಿಯಾಗುವುದರಿಂದ ಬಡ, ದಲಿತ, ಹಿಂದುಳಿದ, ಅಲ್ಪ­ಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ­ವಾಗುತ್ತದೆ. ರಾಜ್ಯದಲ್ಲಿ ಖಾಸಗಿ ಕಾಲೇಜು­ಗಳು ಹೆಚ್ಚಾಗಿವೆ. ಸರ್ಕಾರ ಕಾಯಿದೆ ವಾಪಸ್‌ ಪಡೆಯದೆ ಹೋದರೆ ಶಾಲಾ, ಕಾಲೇಜುಗಳನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಎಂ.ಎ.ಪದ್ಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ  ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ ಎಫ್ ಐ) ತಾಲ್ಲೂಕು ಸಮಿತಿ ಮುಖಂಡ­ರಾದ ರಾಘವೇಂದ್ರರೆಡ್ಡಿ, ನರಸಿಂಹ­ಮೂರ್ತಿ, ಅಭಿ, ಶ್ರೀಕಾಂತ್, ಪೃಥ್ವಿ, ಹರಿಕೃಷ್ಣ, ಶರತ್ ಕುಮಾರ್, ಅಶ್ವಿನಿ, ನಂದಿನಿ, ಪ್ರಿಯಾಂಕ, ಭಾಗ್ಯ, ಸುಪ್ರಿಯಾ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಪ್ರತಿಕ್ರಿಯಿಸಿ (+)