ಗುರುವಾರ , ಮಾರ್ಚ್ 4, 2021
25 °C
ತಮ್ಮ ಕೊನೆಯ ಒಲಿಂಪಿಕ್ಸ್‌ನಿಂದ ಬರಿಗೈಲಿ ಮರಳಿದ ಭಾರತದ ಶೂಟರ್‌

‘ಶೂಟ್‌ ಆಫ್‌’ನಲ್ಲಿ ಬಿಂದ್ರಾ ಕೈ ತಪ್ಪಿದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶೂಟ್‌ ಆಫ್‌’ನಲ್ಲಿ ಬಿಂದ್ರಾ ಕೈ ತಪ್ಪಿದ ಪದಕ

ರಿಯೊ ಡಿ ಜನೈರೊ:   ‘ನನ್ನ ಕೊನೆಯ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು’ ಎಂದು ಹೇಳಿದ್ದ ಭಾರತದ ಅನುಭವಿ ಶೂಟರ್‌ ಅಭಿನವ್‌ ಬಿಂದ್ರಾ ಅವರಿಗೆ ಸಾಂಬಾ ನಾಡಿನ ಒಲಿಂಪಿಕ್ಸ್‌ನಲ್ಲಿ ಸಿಹಿ ಸಿಗಲಿಲ್ಲ. ಪುರುಷರ 10 ಮೀಟರ್ಸ್‌ ಏರ್ ರೈಫಲ್‌ ವಿಭಾಗದಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.ಅರ್ಹತಾ ಸುತ್ತಿನಲ್ಲಿ ನಿಖರ ಗುರಿ ಹಿಡಿದಿದ್ದ ಬಿಂದ್ರಾ ಅವರು ಫೈನಲ್‌ನ ಆರಂಭದಲ್ಲಿ  ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಎಲ್ಲಾ ಸುತ್ತಿನ ಸ್ಪರ್ಧೆಗಳು ಮುಗಿದಾಗ ಬಿಂದ್ರಾ ಮತ್ತು  ಉಕ್ರೇನ್‌ನ ಸೆರಿಯ್‌ ಕುಲಿಶ್‌   ತಲಾ 163.8 ಪಾಯಿಂಟ್‌ಗಳನ್ನು ಕಲೆ ಹಾಕಿದ್ದರು. ಆದ್ದರಿಂದ ಕಂಚಿನ ಪದಕವನ್ನು ನಿರ್ಧರಿಸುವ ಸಲುವಾಗಿ ಇವರ ನಡುವೆ ‘ಶೂಟ್‌ ಆಫ್‌’ ಪಂದ್ಯ ನಡೆಯಿತು. ಅಲ್ಲಿ ಬಿಂದ್ರಾಗೆ ನಿರಾಸೆ ಕಾಡಿತು.ಪದಕದ ಸುತ್ತಿನ ಹೋರಾಟದಲ್ಲಿ ಬಿಂದ್ರಾ ಮೊದಲ ಎರಡು ಅವಕಾಶಗಳಲ್ಲಿ ಕ್ರಮವಾಗಿ 29.9 ಮತ್ತು 30.2 ಪಾಯಿಂಟ್ಸ್‌ ಕಲೆ ಹಾಕಿ ಗಮನ ಸೆಳೆದಿದ್ದರು.  ಒಂದು ಹಂತದಲ್ಲಿ ಅವರು ಎರಡನೇ ಸ್ಥಾನಕ್ಕೆ ಬಡ್ತಿ ಪಡೆದು  ಪದಕದ ಭರವಸೆ ಮೂಡಿಸಿದ್ದರು.  ಈ ವೇಳೆ ಭಾರತದ ಅಭಿಮಾನಿಗಳು ಸಂಭ್ರಮದಿಂದ ಕೂಗಿ ಬಿಂದ್ರಾ ಅವರಲ್ಲಿ ಹುಮ್ಮಸ್ಸು ತುಂಬಿದರು. ಆದರೆ ಶೂಟ್‌ ಆಫ್‌ನಲ್ಲಿ ನಿರಾಸೆ ಕಾಣುತ್ತಿದ್ದಂತೆ ಅಭಿಮಾನಿಗಳೂ ಬೇಸರಕ್ಕೆ ಒಳಗಾದರು.  ಮೂರು (21.1) ಮತ್ತು ನಾಲ್ಕನೇ (21.5) ಸುತ್ತುಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.  ಐದು, ಆರು ಮತ್ತು ಏಳನೇ ಸುತ್ತುಗಳಲ್ಲಿ ಅವರು ಕ್ರಮವಾಗಿ 20.8, 20.2 ಮತ್ತು 20.1 ಪಾಯಿಂಟ್‌ಗಳನ್ನಷ್ಟೇ ಕಲೆ ಹಾಕಿದರು.ಅರ್ಹತಾ ಸುತ್ತಿನಲ್ಲಿ ಮಿಂಚು: ಐದನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿ ರುವ ಬಿಂದ್ರಾ ಅವರು ಅರ್ಹತಾ ಸುತ್ತಿನಲ್ಲಿ ಒಟ್ಟು 625.7 ಪಾಯಿಂಟ್ಸ್‌ ಕಲೆ ಹಾಕಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ ಹದಿನಾರನೇ ಸ್ಥಾನ ಪಡೆದಿದ್ದರು.ಕಾಂಪ್ರಿಯಾನಿಗೆ ಮೂರನೇ ಪದಕ: ಫೈನಲ್‌ನಲ್ಲಿ ಒಟ್ಟು 206.1 ಪಾಯಿಂಟ್ಸ್‌ ಕಲೆ ಹಾಕಿದ ಇಟಲಿಯ ನಿಕೊಲೊ ಕಾಂಪ್ರಿಯಾನಿ ಒಲಿಂಪಿಕ್ಸ್‌ನಲ್ಲಿ ಒಟ್ಟು ಮೂರನೇ ಪದಕ ಗೆದ್ದ ಸಾಧನೆ ಮಾಡಿದರು. 28 ವರ್ಷದ ಕಾಂಪ್ರಿಯಾನಿ ಲಂಡನ್‌ ಒಲಿಂಪಿಕ್ಸ್‌ನ 50 ಮೀಟರ್ಸ್‌ ರೈಫಲ್‌ 3 ಪೋಸಿಷನ್‌ನಲ್ಲಿ ಚಿನ್ನ ಮತ್ತು 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಸೆರಿಯ್‌ ಕುಲಿಶ್‌ (204.6 ಪಾಯಿಂಟ್ಸ್‌) ಬೆಳ್ಳಿ ಗೆದ್ದರೆ, ರಷ್ಯಾದ ವ್ಲಾಡಿಮಿರ್‌ ಮಸ್ಲೆನಿಕೋವಾ ಕಂಚು ತಮ್ಮದಾಗಿಸಿಕೊಂಡರು.   ‌ನಿರಾಸೆ ಮೂಡಿಸಿದ ನಾರಂಗ್‌: ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಶೂಟರ್‌ ಗಗನ್‌ ನಾರಂಗ್ ಅವರು ಇಲ್ಲಿ ಅರ್ಹತಾ ಸುತ್ತಿನಲ್ಲಿಯೇ ಸೋಲು ಅನುಭವಿಸಿದರು. 

10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದ ಶೂಟಿಂಗ್‌ನಲ್ಲಿ ಅವರು ಒಟ್ಟಾರೆ 23ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ಒಟ್ಟು 60 ಶೂಟರ್‌ಗಳು ಪಾಲ್ಗೊಂಡಿದ್ದರು. ಇದರಲ್ಲಿ ಎಂಟು ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆದಿದ್ದರು. ನಾರಂಗ್ ಮೊದಲ ಸುತ್ತಿನಲ್ಲಿ 105.3 ಪಾಯಿಂಟ್ಸ್‌ ಕಲೆ ಹಾಕಿ ಭರವಸೆ ಮೂಡಿಸಿದ್ದರಾದರೂ ನಂತರ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲರಾದರು.  ನಾರಂಗ್ ನಂತರದ ಸುತ್ತುಗಳಲ್ಲಿ ಕ್ರಮವಾಗಿ 104.5, 102.1, 103.4, 101.6 ಮತ್ತು 104.8 ಪಾಯಿಂಟ್‌ಗಳನ್ನು ಮಾತ್ರ ಕಲೆ ಹಾಕಲು ಶಕ್ತರಾದರು.ಮಹತ್ವದ ಸ್ಪರ್ಧೆಯಲ್ಲಿ ಸೋತರೂ ನಾರಂಗ್ ಅವರಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಇನ್ನೂ ಅವಕಾಶವಿದೆ. ಅವರು 50 ಮೀಟರ್ಸ್‌ ರೈಫಲ್‌ ಪ್ರೊನೊ (ಆಗಸ್ಟ್‌ 12) ಮತ್ತು 50 ಮೀಟರ್ಸ್‌ ತ್ರಿ ಪೋಸಿಷನ್‌ ಪಿಸ್ತೂಲ್‌ (ಆ 14) ಸ್ಪರ್ಧೆಗಳಲ್ಲಿ ಪೈಪೋಟಿ ನಡೆಸಲಿದ್ದಾರೆ.ಟ್ರ್ಯಾಪ್‌ನಲ್ಲಿಯೂ ಕಾಡಿದ ನಿರಾಸೆ: ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಸೆಮಿಫೈನಲ್‌ ಅರ್ಹತೆ ಪಡೆಯುವ ಭರವಸೆ ಮೂಡಿಸಿದ್ದ  ಭಾರತದ ಮಾನವಜಿತ್‌ ಸಿಂಗ್ ಸಂಧು ಮತ್ತು ಕೈನಾನ್‌ ಚೆನಾಯ್‌ ಕೂಡ ನಿರಾಸೆ ಕಂಡರು.ಟ್ರ್ಯಾಪ್‌ ವಿಭಾಗದಲ್ಲಿ ಒಬ್ಬ ಸ್ಪರ್ಧಿಗೆ ಐದು ಅವಕಾಶಗಳು ಇರುತ್ತವೆ. ಒಂದು ಅವಕಾಶದಲ್ಲಿ ಗರಿಷ್ಠ 25 ಪಾಯಿಂಟ್ಸ್ ಗಳಿಸಬಹುದು. ಮಾನವಜಿತ್‌  ಅರ್ಹತಾ ಸುತ್ತಿನಲ್ಲಿ ಮೊದಲ ಮೂರು ಸುತ್ತುಗಳ ಅಂತ್ಯಕ್ಕೆ 68 ಪಾಯಿಂಟ್ಸ್‌ ಪಡೆದಿದ್ದರು. ಈ ಸ್ಪರ್ಧೆ ಸೋಮವಾರವೂ ಮುಂದುವರಿಯಿತು. ಕೊನೆಯ ಎರಡು ಅವಕಾಶಗಳಲ್ಲಿ ಅವರು 25 ಮತ್ತು 22 ಪಾಯಿಂಟ್ಸ್‌ ಗಳಿಸಿ ಒಟ್ಟಾರೆಯಾಗಿ 16ನೇ ಸ್ಥಾನ ಪಡೆದರು.ಮಾನವಜಿತ್ ನಾಲ್ಕನೇ ಸುತ್ತಿನಲ್ಲಿ ಪೂರ್ಣ ಪಾಯಿಂಟ್ಸ್‌ ಪಡೆದಿದ್ದರು. ಆದರೆ ನಾಲ್ಕನೇ ಸುತ್ತಿನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಅವರು ಅರ್ಹತಾ ಹಂತದಲ್ಲಿಯೇ ಹೋರಾಟ ಮುಗಿಸ ಬೇಕಾಯಿತು.ಭಾನುವಾರದ ಅಂತ್ಯಕ್ಕೆ 19ನೇ ಸ್ಥಾನದಲ್ಲಿದ್ದ ಚೆನಾಯ್‌ ಇದೇ ಸ್ಥಾನದಲ್ಲಿ ಸ್ಪರ್ಧೆ ಕೊನೆಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.