ಭಾನುವಾರ, ಮೇ 9, 2021
22 °C
ಪಂಚಾಯತ್‌ ರಾಜ್‌ –20 – ಕರ್ನಾಟಕ ಪಂಚಾಯತ್‌ ಪರಿಷತ್‌ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ ಸಂದರ್ಶನ

‘ಸಾಂತ್ವನ’ ಸೂತ್ರಗಳನ್ನು ಮೀರುವ ಕಾಲ ಬಂದಿದೆ

ಎನ್.ಉದಯಕುಮಾರ್‌ Updated:

ಅಕ್ಷರ ಗಾತ್ರ : | |

ರಾಜಕಾರಣದಲ್ಲಿದ್ದೂ ಸಜ್ಜನಿಕೆ ಮತ್ತು ವಿನಯವಂತಿಕೆ­ಯನ್ನು ಬಿಟ್ಟುಕೊಡದ ವಿರಳ ವ್ಯಕ್ತಿ ಸಿ. ನಾರಾಯಣ­ಸ್ವಾಮಿ. ಪಂಚಾಯತ್‌ ರಾಜ್‌ ವ್ಯವಸ್ಥೆ ಬಗ್ಗೆ ಅಧಿಕಾರ­ಯುತವಾಗಿ ಮಾತನಾಡುವ ಸಾಮರ್ಥ್ಯ ಇರುವ ರಾಜಕಾರಣಿಗಳ ಪೈಕಿ ಇವರೂ ಒಬ್ಬರು. ವೃತ್ತಿಯಲ್ಲಿ ವಕೀಲರಾಗಿರುವ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್‌ ಅಧ್ಯಕ್ಷರಾಗಿ ಅನುಭವ ಸಂಪಾದಿಸಿದವರು.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಒಂದು ಅವಧಿಗೆ ಪ್ರತಿನಿಧಿಸಿದ್ದವರು. ಇವರು ಜಿಲ್ಲಾ ಪರಿಷತ್‌ ಅಧ್ಯಕ್ಷ­ರಾಗಿದ್ದ ಅವಧಿಯಲ್ಲಿ, ದಕ್ಷಿಣ ಭಾರತ ವಲಯದ ಪಂಚಾಯತ್‌ ರಾಜ್‌ ಪ್ರತಿನಿಧಿಗಳ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಿತ್ತು. ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ, ಪಂಚಾಯತ್‌ ರಾಜ್‌ ಸಚಿವಾಲಯದ ಕೇಂದ್ರ ಸಲಹಾ ಸಮಿತಿಯ ಸದಸ್ಯರಾಗಿ ಇವರು ಕೆಲಸ ಮಾಡಿದ್ದಾರೆ.ದೇಶದಲ್ಲಿ ಸಹಕಾರ ಚಳವಳಿಯ ಬಲ­ವರ್ಧನೆಗೆ ಸಂಸದರು ರಚಿಸಿಕೊಂಡಿರುವ ವೇದಿಕೆಯ ಸಂಚಾಲಕರಾಗಿ ಕೂಡ ಕೆಲಸ ಮಾಡಿದ್ದಾರೆ. ಪಂಚಾಯತ್‌ ರಾಜ್‌ ವ್ಯವಸ್ಥೆಯ ಪುನರಾವಲೋಕನಕ್ಕೆ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯ ಸದಸ್ಯರೂ ಆಗಿರುವ ಇವರು, ಪಂಚಾಯ್ತಿ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬುವುದು ಹೇಗೆ ಎಂಬುದರ ಕುರಿತು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.** ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 20 ವರ್ಷಗಳಾಗಿವೆ. ಅಧಿಕಾರ ವಿಕೇಂದ್ರೀಕರಣವನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವ ಅಗತ್ಯ ಇದೆಯೇ?*ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ದೊರೆತಿದೆ. ಆದರೆ ಆ ತಿದ್ದುಪಡಿಗೆ ಮತ್ತಷ್ಟು ತಿದ್ದುಪಡಿಗಳನ್ನು ತರುವ ಅಗತ್ಯ ಇದೆ ಅಂತ, ಎರಡು ದಶಕಗಳ ಅನುಭವದ ಹಿನ್ನೆಲೆಯಲ್ಲಿ ಅನ್ನಿಸತೊಡಗಿದೆ. ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಸ್ಪಷ್ಟನೆ ಬೇಕಾಗಿದೆ. ಕೆಲವನ್ನು ಬದಲಿಸಬೇಕಾಗಿದೆ.ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಗೆ ಸಂಬಂಧಿಸಿದಂತೆ ನಿರ್ದಿಷ್ಟತೆ ಇಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ಮೀಸಲಾತಿ ಇದೆ. ಇದನ್ನು ತಪ್ಪಿಸಿ, ಏಕರೂಪ ವ್ಯವಸ್ಥೆ ತರುವುದು ಒಳ್ಳೆಯದು. ಪರಿಶಿಷ್ಟರಿಗೆ ಜನಸಂಖ್ಯೆಗೆ ಅನು­ಗುಣ­ವಾಗಿ ಮೀಸಲಾತಿ ಅಂತ ಆಗಿದೆ. ಈ ಕುರಿತೂ ಸ್ಪಷ್ಟನೆ ಬೇಕು.**ಆವರ್ತಕ ಮೀಸಲಾತಿಗೆ ಸಂಬಂಧಿಸಿದಂತೆ ಗೊಂದಲ ಇದೆ ಎಂಬ ಭಾವನೆ ಇದೆ. ಇದ್ದರೆ, ಅದನ್ನು ನಿವಾರಿಸುವುದು ಹೇಗೆ?

*ಆವರ್ತಕ  ಮೀಸಲಾತಿಯ ಅವಧಿ ಕುರಿತು ಸ್ಪಷ್ಟತೆ ಇಲ್ಲ. ಅವಧಿ,  ಒಂದೋ ಎರಡೋ ಎಂಬುದರ ಬಗ್ಗೆ ಖಚಿತತೆ ಇಲ್ಲ. ಮೊದಲಿಗೆ, ಇಡೀ ರಾಷ್ಟ್ರದಲ್ಲಿ ಒಂದು ಅವಧಿ (ಐದು ವರ್ಷ) ಎಂದೇ ಭಾವಿಸಿ, ಅದರಂತೆ ಆವರ್ತಕ ಮೀಸಲಾತಿ ಒದಗಿಸಲಾಯಿತು. ಬಳಿಕ ಕೆಲವೊಂದು ರಾಜ್ಯಗಳಲ್ಲಿ ಅದನ್ನು ಎರಡು ಅವಧಿ ಅಂತ ಭಾವಿಸಿ ಅದರಂತೆಯೇ ನಿಗದಿಗೊಳಿಸಿದರು. ಒಂದು ನಿರ್ದಿಷ್ಟ ಮೀಸಲು ಕ್ಷೇತ್ರದಿಂದ ಆರಿಸಿಬಂದ ಸದಸ್ಯ ಜನಪರವಾಗಿ ಕೆಲಸ ಮಾಡಿದರೆ, ಮತ್ತೊಮ್ಮೆ ಅದೇ ಕ್ಷೇತ್ರದಿಂದ ಆರಿಸಿಬರಲು ಅವಕಾಶ ಇರಬೇಕು.  ಇದರಿಂದ ತಳಮಟ್ಟದಲ್ಲಿ ನಾಯಕತ್ವ ಬೆಳೆಯುತ್ತದೆ.   ಕೆಲಸ ಮಾಡಲು ಉತ್ಸಾಹ ಉಳಿಯುತ್ತದೆ. ಆವರ್ತಕ ಮೀಸಲನ್ನು ಎರಡು ಅವಧಿಗೆ ವಿಸ್ತರಿಸುವುದು ಒಳ್ಳೆಯದು ಎಂಬುದು ನನ್ನನ್ನೂ ಒಳಗೊಂಡಂತೆ ಅನೇಕರ ಭಾವನೆ.**ಪಂಚಾಯ್ತಿ ವ್ಯವಸ್ಥೆ ಎಷ್ಟು ಹಂತದ್ದಾಗಿದ್ದರೆ ಆಡಳಿತ ಮತ್ತು ಅಭಿವೃದ್ಧಿಗೆ ಹಿತಕರ?

*ಈ ಕುರಿತ ಗೊಂದಲವನ್ನೂ ಸಂವಿಧಾನ ತಿದ್ದುಪಡಿ ಮೂಲಕವೇ ನಿವಾರಿಸಬೇಕಾಗಿದೆ. ಯಾವ ರಾಜ್ಯದ ಜನಸಂಖ್ಯೆ 20 ಲಕ್ಷ ಮೀರಿದೆಯೋ  ಅಲ್ಲಿ ಮೂರು ಹಂತದ ವ್ಯವಸ್ಥೆ ಇರಬೇಕು ಎಂದು 73ನೇ ತಿದ್ದುಪಡಿ ಕಡ್ಡಾಯಗೊಳಿಸಿದೆ. ಹೀಗಾಗಿ ಈ ವ್ಯವಸ್ಥೆ ಅಳವಡಿಸಬೇಕಾದುದು  ರಾಜ್ಯಗಳಿಗೆ ಅನಿವಾರ್ಯ. ನಮ್ಮ ರಾಜ್ಯ­ದಲ್ಲಿ ಜಿಲ್ಲಾ ಪರಿಷತ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿತ್ತು. ಜಿಲ್ಲಾ ಮಟ್ಟದಲ್ಲಿ ಒಂದು ಜಿಲ್ಲಾ ಸರ್ಕಾರ, ಗ್ರಾಮ ಹಂತದಲ್ಲಿ ಗ್ರಾಮ ಸರ್ಕಾರ ಇತ್ತು. ನಡುವೆ ಸಮನ್ವಯದ ಕೊಂಡಿಯಾಗಿ ತಾಲ್ಲೂಕು ಪಂಚಾಯ್ತಿ ಸಮಿತಿ ಇತ್ತು. ಯೋಜನೆ ರೂಪಿಸುವುದು ಹಾಗೂ ಕಾರ್ಯಕ್ರಮಗಳ ಜಾರಿಯಲ್ಲಿ ಹೊಂದಾ­ಣಿಕೆ ಇತ್ತು. ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿತ್ತು.ಮೂರು ಹಂತದ ಈಗಿನ ವ್ಯವಸ್ಥೆಯಲ್ಲಿ  ಚುನಾಯಿತ ಪ್ರತಿ­ನಿಧಿಗಳ ಶಕ್ತಿ ಕುಂದಿದೆ. ಅಧಿಕಾರಶಾಹಿ ದಿನೇ ದಿನೇ ಬಲಗೊಳ್ಳುತ್ತಿದೆ. ಹಿಂದಿದ್ದ ಜಿಲ್ಲಾ ಪರಿಷತ್, ಮಂಡಲ ಪಂಚಾಯ್ತಿ ವ್ಯವಸ್ಥೆ ಪರಿಣಾಮಕಾರಿ ಆಗಿತ್ತು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಹಣ ಇಲ್ಲ, ಅಧಿಕಾರ ಇಲ್ಲ. ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ನಡುವೆ ಘರ್ಷಣೆಗೆ  ಎಡೆಮಾಡಿದೆ ಎಂಬ ದೂರುಗಳಿವೆ. ಜಿಲ್ಲಾ ಮಟ್ಟದಲ್ಲಿ ಶಾಸಕರಿಗೆ ಪದನಿಮಿತ್ತ ಸ್ಥಾನಮಾನ ನೀಡಲಾಗಿದೆ. ಆದರೆ, ಸಂವಿಧಾನ ತಿದ್ದುಪಡಿ ಅನ್ವಯ ಇದು ಕಡ್ಡಾಯವಲ್ಲ. ರಾಜ್ಯ ವಿಧಾನಮಂಡಲಗಳು ಅವರಿಗೆ ಇಂತಹ ಅವಕಾಶ ಕಲ್ಪಿಸಿಕೊಡ­ಬಹುದು ಇಲ್ಲವೇ ಬಿಡಬಹುದು. ಶಾಸಕರಿಗೆ ಜಿಲ್ಲಾ ಪಂಚಾಯ್ತಿ­ಯಲ್ಲಿ ಪದನಿಮಿತ್ತ ಸ್ಥಾನ ಒದಗಿಸುವುದಾದರೆ, ಸಂಸದರಿಗೆ ವಿಧಾನಸಭೆಯಲ್ಲಿ ಅಂತಹ ಅವಕಾಶ ಏಕೆ ಬೇಡ ಎಂಬ ಪ್ರಶ್ನೆ ಮುಂದೊಂದು ದಿನ ಏಳಲೂಬಹುದು. ಈ ಎಲ್ಲ ಇತಿಮಿತಿಗಳನ್ನು ಒರೆಗೆ ಹಚ್ಚಲು ಕಾಲ ಈಗ ಪಕ್ವವಾಗಿದೆ.  **ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ಎಲ್ಲ ರಾಜ್ಯಗಳಲ್ಲೂ ದೊರೆತಿಲ್ಲ. ಒಂದೊಂದು ಕಡೆ ಒಂದೊಂದು ರೀತಿ–ನೀತಿ ಇದೆ. ಈ ಗೊಂದಲ ಬಗೆಹರಿಸುವುದು ಹೇಗೆ?

*ಸಂವಿಧಾನ ತಿದ್ದುಪಡಿ ಮೂಲಕವೇ ಈ ಗೊಂದಲವೂ ನಿವಾರಣೆ ಆಗಬೇಕಾಗಿದೆ. ಪಂಚಾಯ್ತಿ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯಗಳು ಜಾರಿಗೊಳಿಸುವ ಕಾಯ್ದೆಯಲ್ಲಿ  ಹಿಂದುಳಿದ ವರ್ಗಗಳಿಗೆ  ಕಡ್ಡಾಯ­ವಾಗಿ ಮೀಸಲಾತಿ ನೀಡಬೇಕು ಅಂತ ಸಂವಿಧಾನ ಹೇಳುವುದಿಲ್ಲ. ಪರಿಶಿಷ್ಟರಿಗೆ ಮೀಸಲಾತಿ ಕಡ್ಡಾಯಗೊಳಿಸಿದಂತೆ ಹಿಂದುಳಿದವರಿಗೆ ಕಡ್ಡಾಯ ಮಾಡಿಲ್ಲ. ಆಯಾ ರಾಜ್ಯಗಳ ವಿಧಾನಮಂಡಲಗಳು ಇಷ್ಟಪಟ್ಟರೆ ಮೀಸಲಾತಿ ಕಲ್ಪಿಸಬಹುದು. ಇಲ್ಲದೇ ಇದ್ದರೆ ಇಲ್ಲ.1983ರಲ್ಲಿ ರೂಪಿಸಿದ ಕರ್ನಾಟಕ ಜಿಲ್ಲಾ ಪರಿಷತ್, ಮಂಡಲ ಪಂಚಾಯ್ತಿ ಕಾಯ್ದೆಯಲ್ಲಿ  ಹಿಂದುಳಿದ ವರ್ಗಗಳಿಗೆ  ಮೀಸಲಾತಿ ಕಲ್ಪಿಸಲಾಯಿತು.   ಅದಕ್ಕೆ  ಕುಟುಂಬದ ವಾರ್ಷಿಕ ವರಮಾನ ಮಾನ­ದಂಡವಾಗಿತ್ತು. ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ವರಮಾನ ಉಳ್ಳವರೆಲ್ಲಾ  ಹಿಂದುಳಿದವರ ವ್ಯಾಪ್ತಿಗೆ ಬಂದರು. ಆದಾಯ ಈ ಮಿತಿಯೊಳಗೆ ಇದೆ ಎಂದು  ತಹಶೀಲ್ದಾರರಿಂದ ಆದಾಯ ದೃಢೀಕರಣ ಪತ್ರ ಪಡೆದ ಎಲ್ಲರಿಗೂ ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶ ಇತ್ತು.ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಗ ಪತ್ರಿಕೆಗಳಲ್ಲಿ ಬಹಳ ದಿನ ಟೀಕೆಗಳು ಕಾಣಿಸಿಕೊಂಡ ಪ್ರಸಂಗ ಒಂದಿದೆ. ಕೇಂದ್ರ­ದಲ್ಲಿ ಮಂತ್ರಿ­ಯಾಗಿ­ದ್ದ­ವರೊಬ್ಬರ  ಪುತ್ರ ಇದೇ ರೀತಿ ಆದಾಯ ಪತ್ರ ಪಡೆದು ಮೀಸಲು ಸೌಲಭ್ಯದಡಿ  ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಪಂಚಾಯತ್‌ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿದರು. ಆ ಸಮಿತಿ ಶಿಫಾರಸುಗಳ ಅನ್ವಯ ಹಿಂದುಳಿದವರು ಎಂಬುದಕ್ಕೆ ಮೀಸಲು ವ್ಯಾಖ್ಯಾನ ಬದಲಾಯಿತು.  ಬಿಸಿಎಂ– ಎ ಮತ್ತು ಬಿಸಿಎಂ–ಬಿ ಎಂಬ ವರ್ಗೀಕರಣ ಜಾರಿಗೆ ಬಂತು. ‘ಎ’ ವಿಭಾಗದಲ್ಲಿ 192 ಜಾತಿಗಳು ಬರುತ್ತವೆ. ‘ಬಿ’ ವಿಭಾಗದಲ್ಲಿ ಆರು ಸಮುದಾಯಗಳು ಸೇರುತ್ತವೆ. ಮತೀಯ ಅಲ್ಪಸಂಖ್ಯಾತರೂ ಸೇರುತ್ತಾರೆ. ಇದಕ್ಕೆ ಆದಾಯ ಮಿತಿ ಇದೆ.**ಹಿಂದುಳಿದವರನ್ನು ಎರಡು ವರ್ಗವಾಗಿ ವಿಂಗಡಿಸಿದ್ದು ಏಕೆ?

*ಅದೊಂದು ಜಾಣ ನಡೆ. ಮೀಸಲಾತಿ ಪ್ರಮಾಣ ಶೇ 50  ದಾಟಬಾರದು ಎಂದು ಬೇರೆ ಬೇರೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆ ತೀರ್ಪುಗಳು ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದ್ದವು. ರಾಜಕೀಯ ಮೀಸಲಾತಿ ಚರ್ಚೆಗೆ ಒಳಗಾಗಿರಲಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ  ಆಗಿದ್ದ ಸರ್ಕಾರ ಎರಡು ವರ್ಗ ಮಾಡಿತು. ಹಿಂದುಳಿದವರ ಮೀಸಲಾತಿಯೊಂದಿಗೆ ಪರಿಶಿಷ್ಟರ ಮೀಸಲಾತಿ ಸೇರಿಸಿದರೆ ಶೇ 50ರ ಅಂಚಿಗೆ ಬಂದಿತ್ತು. ಇನ್ನೂ ಹೆಚ್ಚಿಗೆ ಮಾಡಿದರೆ ನ್ಯಾಯಾಲಯದಿಂದ ವಜಾ ಆಗುವ ಸಾಧ್ಯತೆಯನ್ನು ಗ್ರಹಿಸಿ ಈ ಸೂತ್ರ ಅಳವಡಿಸಿದರು. ಅಕಸ್ಮಾತ್‌ ಯಾರಾದರೂ ನ್ಯಾಯಾಲ­ಯದ ಮೆಟ್ಟಿಲು ಹತ್ತಿದರೆ, ‘ಬಿ’ ವರ್ಗದ ಮೀಸಲು ಹೋದರೂ ಹೋಗಲಿ. ‘ಎ’ ವರ್ಗದ್ದಾದರೂ ಉಳಿಯುತ್ತದೆ ಅಂತ ಹೀಗೆ ಮಾಡಿದರು.**ಸಂಸದರ ಕೈಗೊಂದು  ನಿಧಿ, ಶಾಸಕರ ಕೈಗೊಂದು ನಿಧಿ ಸಿಕ್ಕಿದೆ. ಈ ಹಣ ಬಳಕೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಏನು?

*ಪಿ.ವಿ.ನರಸಿಂಹ ರಾವ್‌ ಪ್ರಧಾನಿಯಾಗಿದ್ದಾಗ  ಸಂಸದರನ್ನು ಖುಷಿಪಡಿಸುವ ಸಲುವಾಗಿ ಈ ಯೋಜನೆ ತಂದರು. ನಾನು ಸಂಸದನಾಗಿದ್ದೇ ಇದನ್ನು ವಿರೋಧಿಸಿದೆ.  ನಗರ ಮತ್ತು ಗ್ರಾಮೀಣಾ­ಭಿವೃದ್ಧಿ ಸ್ಥಾಯಿ ಸಮಿತಿಯಲ್ಲಿ ನಾನೂ ಇದ್ದೆ. ಅಲ್ಲಿ ಈ ವಿಷಯ ಚರ್ಚೆಗೆ ಬಂದಾಗ ‘ಒಲ್ಲದು’ ಎಂದು ನಿರ್ಣಯ ಮಾಡಿಸಿದೆವು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಅನುದಾನವನ್ನು ಕಡಿತಗೊಳಿಸಿ, ಅದನ್ನು  ಸಂಸದರ ನಿಧಿಗೆ ಕೊಡುತ್ತಿರುವುದು ಸರಿಯಲ್ಲ ಅಂತ ಹೇಳಿದೆವು.ಸಂಸದರ ನಿಧಿ ಮೊತ್ತ ಈಗ ಐದು ಕೋಟಿ ರೂಪಾಯಿ ಆಗಿದೆ. ಈ ಸವಲತ್ತು ಶಾಸಕರಿಗೂ ವಿಸ್ತರಣೆಯಾಯಿತು. ಬೇರೊಂದು ಬಗೆಯಲ್ಲಿ ಪಂಚಾಯ್ತಿ ಮಟ್ಟಕ್ಕೂ ಇಳಿದಿದೆ. ಅನುದಾನವನ್ನು ಸದಸ್ಯರ ಸಂಖ್ಯೆ ಅನುಸಾರ ಹಂಚಿಕೆ ಮಾಡುವ ರೀತಿಯಲ್ಲಿ ಮಾತು ಕೇಳಿಬರುತ್ತಿದೆ. ಇದು ಅಭಿವೃದ್ಧಿಯನ್ನು ಹಳ್ಳ ಹಿಡಿಸುವ ಪ್ರಯತ್ನ.**ಈಗ ಎಲ್ಲವೂ ಅಧಿಕಾರಿ ಕೇಂದ್ರಿತ ಎಂಬ ದೂರಿದೆ...

*ಪಂಚಾಯತ್‌ ರಾಜ್‌ ಕಾಯ್ದೆ ಬದಲಾದಂತೆ ನೌಕರಶಾಹಿಯ ನೇಮಕ, ಅಧಿಕಾರ, ನಿಯಂತ್ರಣ ವ್ಯವಸ್ಥೆಯೂ ಬದಲಾಯಿತು. ಜಿಲ್ಲಾ ಪರಿಷತ್‌ ಗಳಿಗೆ ಗ್ರೂಪ್‌ ಎ ಮತ್ತು ಬಿ ವರ್ಗದ ಅಧಿಕಾರಿಗಳು  ನಿಯೋಜನೆ ಮೇಲೆ ಬರುತ್ತಿದ್ದರು. ಸಿ ಮತ್ತು ಡಿ ದರ್ಜೆ ಸಿಬ್ಬಂದಿಯನ್ನು ನೇಮಕ ಮಾಡುವ, ಎಲ್ಲ ವರ್ಗದ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾ ಪರಿಷತ್‌ಗೆ  ಇತ್ತು. 1993ರ ಕಾಯ್ದೆ ಅನ್ವಯ ಈ ಎಲ್ಲ ಆಡಳಿತಾತ್ಮಕ ಅಧಿಕಾರಗಳನ್ನು ಕಿತ್ತುಹಾಕಿದರು.ಈಗ ಡಿ ದರ್ಜೆ ನೌಕರರನ್ನು  ನೇಮಿಸುವ ಅಧಿಕಾರ ಕೂಡ ಇಲ್ಲ.  ವರ್ಗಾವಣೆ ಮಾಡುವ ಅಧಿಕಾರ ಇಲ್ಲವೇ ಇಲ್ಲ. ಸಿಇಒಗೆ ದತ್ತವಾಗಿರುವ ಅಧಿಕಾರ ಕೂಡ ಕಾಯ್ದೆ ಕೊಟ್ಟದ್ದಲ್ಲ. ಸರ್ಕಾರದ ಆದೇಶದ ಮೂಲಕ ದಕ್ಕಿರುವುದು. ಯಾವ ಕ್ಷಣ ಬೇಕಾದರೂ ಅದನ್ನು ಹಿಂದಕ್ಕೆ ಪಡೆಯಬಹುದು. ಈ ಹಿಂದೆ ಮಂಡಲ ಪಂಚಾಯ್ತಿಗೆ ಕಾರ್ಯದರ್ಶಿಯನ್ನು ನೇಮಕ ಮಾಡಬೇಕಾಗಿದ್ದರೆ ಪಂಚಾಯ್ತಿ ಅಧ್ಯಕ್ಷರೊಂದಿಗೆ ಸಮಾಲೋಚಿಸಿ  ನೇಮಕ ಮಾಡಬೇಕಾಗಿತ್ತು. ಸಿಬ್ಬಂದಿಯ  ವೇತನ ಜಿಲ್ಲಾ ಪರಿಷತ್‌ನಿಂದಲೇ ಬಿಡುಗಡೆ ಆಗುತ್ತಿತ್ತು.  ಸ್ವಾಯತ್ತತೆ  ಇತ್ತು. ಈಗಿನ ವ್ಯವಸ್ಥೆಯಲ್ಲಿ  ಗ್ರಾಮ ಪಂಚಾಯ್ತಿಗೆ ಅಷ್ಟೋ ಇಷ್ಟೋ ಅಧಿಕಾರ ಇದೆ. ಸಿಬ್ಬಂದಿ ಮೇಲೆ ನಿಯಂತ್ರಣ ಇದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗೆ ಆಡಳಿತಾತ್ಮಕ ಅಧಿಕಾರ ಏನೇನೂ ಇಲ್ಲ. **ಮೀಸಲಾತಿ ನಿಗದಿ ಗೊಂದಲ ನಿವಾರಿಸುವುದು ಹೇಗೆ?

*ಮೀಸಲಾತಿ ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕೊಟ್ಟರೆ ಗೊಂದಲ ನಿವಾರಣೆ ಆಗಬಹುದು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಲ್ಲಿ ರಾಜಕೀಯ ಹಸ್ತಕ್ಷೇಪ ಆಗುತ್ತಿರುವುದು ನಿಜ. ತಮ್ಮ ಪಕ್ಷಕ್ಕೆ ಬಹುಮತ ಇಲ್ಲದ ಕಡೆ ಅಧಿಕಾರ ಕೈಗೆ ತೆಗೆದುಕೊಳ್ಳಲು ಆಡಳಿತಾರೂಢ ಮುಖಂಡರು ಹುನ್ನಾರ ನಡೆಸುವುದು ಬಹಿರಂಗ ಸತ್ಯ.ಸರ್ಕಾರ ಕೆಲವೊಮ್ಮೆ ಚುನಾವಣಾ ಆಯೋಗವನ್ನೂ ತನ್ನ ಅಧೀನದ ಮತ್ತೊಂದು ಇಲಾಖೆ ಅಂತ ಭಾವಿಸಿ, ಮನಸೋ ಇಚ್ಛೆ ನಡೆದುಕೊಂಡ ನಿದರ್ಶನಗಳಿವೆ. ನಿವೃತ್ತಿಯ ಅಂಚಿಗೆ ಬಂದ ಅಧಿಕಾರಿಯನ್ನು ಅಲ್ಲಿಗೆ ನೇಮಿಸುವ ಮೂಲಕ ಬೇಳೆ ಬೇಯಿಸಿಕೊಳ್ಳುವ ಷಡ್ಯಂತ್ರಗಳು ಕೂಡ ಆಗಿವೆ. ಅವರಾದರೂ ಅಷ್ಟೇ; ತಗ್ಗಿಬಗ್ಗಿ ನಡೆದುಕೊಳ್ಳುತ್ತಾರೆ. ತಮ್ಮನ್ನು ನೇಮಿಸಿದ ಆಡಳಿತ ಪಕ್ಷದ ಋಣ ತೀರಿಸುವ ಮನಸ್ಥಿತಿಯಲ್ಲೇ ಕೆಲಸ ನಿರ್ವಹಿಸುತ್ತಾರೆ. ಸಾಂವಿಧಾನಿಕ ಸಂಸ್ಥೆಗಳ ಘನತೆ ಕುಗ್ಗಿಸುವ, ಅವುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಇವೆಲ್ಲ, ಬದ್ಧತೆ ಇಲ್ಲದವರು ಮಾಡುವ ಕೆಲಸ.20 ತಿಂಗಳ ಸಾಂತ್ವನ ಸೂತ್ರ

ಗ್ರಾಮಾಂತರ ಪ್ರದೇಶದಲ್ಲಿ ಅಧಿಕಾರ ಎಂಬುದು ಮೇಲ್ವರ್ಗ ಮತ್ತು ಪ್ರಭಾವಿಗಳ ಕೈಯಲ್ಲೇ ಇತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಿದ ಸಂದರ್ಭದಲ್ಲಿ  ಯಾವುದೇ ಒಂದು ವರ್ಗದ ಪ್ರತಿನಿಧಿಗೆ ಪೂರ್ಣಾವಧಿಗೆ ಅಂದರೆ ಐದೂ ವರ್ಷಕ್ಕೆ ಅಧ್ಯಕ್ಷನೋ, ಉಪಾಧ್ಯಕ್ಷನೋ ಆಗಲು ಅವಕಾಶ ಮಾಡಿಕೊಟ್ಟರೆ ಮೇಲ್ವರ್ಗದವರ ಕಣ್ಣು ಕೆಂಪಾಗಬಹುದು.ಇದು, ಸಾಮಾಜಿಕ ಸಂಘರ್ಷಕ್ಕೂ ಎಡೆಮಾಡಿಕೊಡಬಹುದು ಎಂಬ ಭಾವನೆ­ಯಿಂದ ಒಡಮೂಡಿದ ‘ಸಾಂತ್ವನ’ ಸೂತ್ರವೇ 20 ತಿಂಗಳ ಅವಧಿ. ಐದು ವರ್ಷಗಳ ಅವಧಿಯನ್ನು ಮೂರು ಭಾಗವಾಗಿ ವಿಂಗಡಿಸಿ,  ಅಧಿಕಾರಸೂತ್ರ ಹಿಡಿಯುವ ಅವಕಾಶವನ್ನು ಪರಿಶಿಷ್ಟರು, ಹಿಂದುಳಿದವರು ಮತ್ತು ಇತರರ ನಡುವೆ ಹಂಚಿಕೆ ಆಗುವಂತೆ ಮಾಡಲಾಗಿದೆ. ಹಿಂದುಳಿದವರಿಗೆ ಮೀಸಲಾತಿ ಒದಗಿಸುವ ಕ್ರಾಂತಿಕಾರಕ ನಿರ್ಧಾರಕ್ಕೆ ಎಲ್ಲ ವರ್ಗಗಳ ಜನರ  ತಾತ್ವಿಕ ಒಪ್ಪಿಗೆ ಪಡೆಯುವ ಸದಾಶಯ ಈ ತೀರ್ಮಾನದ ಹಿಂದೆ ಇತ್ತು.ಒಮ್ಮೆ ಒಪ್ಪಿಗೆ ದೊರೆತರೆ ಅವಧಿ ವಿಸ್ತರಿಸ ಬಹುದು ಎಂಬ ಉದ್ದೇಶವೂ ಇತ್ತು. ಈ ಕುರಿತು ಈಗ ಮರುಪರಿಶೀಲನೆ ಆಗುವುದು ಒಳ್ಳೆಯದು.  ಜಿಲ್ಲಾ ಪರಿಷತ್ ವ್ಯವಸ್ಥೆಯಲ್ಲಿ  ನಮಗೆ ಐದು ವರ್ಷಗಳ ಪೂರ್ಣಾವಧಿಗೆ ಅವಕಾಶ ದೊರೆತ ಕಾರಣ ಒಂದಷ್ಟು ಕೆಲಸ ಮಾಡಲು ಸಾಧ್ಯವಾಯಿತು. ಈಗ ಯಾರದೋ ಬೆಂಬಲ ಮತ್ತು ಇನ್ನೇನೋ ಕಾರಣಕ್ಕೆ 20 ತಿಂಗಳ ಅವಧಿಯನ್ನೇ ಇಬ್ಬರಿಗೋ ಮೂವರಿಗೋ ಹಂಚಿಕೊಡುವ ಪರಿಪಾಠ ಶುರುವಾಗಿದೆ.  ಇದು ಒಳ್ಳೆಯ ಬೆಳವಣಿಗೆಯಲ್ಲ’.ಬದ್ಧತೆ ಮತ್ತು ಬೆರಗು

ಅಧಿಕಾರ ವಿಕೇಂದ್ರೀಕರಣಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸಿ­ಕೊೀಡಲು ಪ್ರಯತ್ನಿಸಿದವರಲ್ಲಿ ರಾಜೀವ್‌ ಗಾಂಧಿ ಮೊದಲಿಗರು. ಸಂವಿಧಾನದ  64ನೇ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಒಂದು ಮತದಿಂದ ಬಿದ್ದುಹೋಗದೇ ಇದ್ದಿದ್ದರೆ ಈ ಪ್ರಯತ್ನದ ಪೂರ್ಣ ಶ್ರೇಯ ಅವರಿಗೇ ದಕ್ಕುತ್ತಿತ್ತು.ಪಂಚಾಯತ್‌ ರಾಜ್‌ ವ್ಯವಸ್ಥೆ­ಯನ್ನು ಬಲಪಡಿಸಲು ರಾಜೀವ್‌  ಕಟಿಬದ್ಧರಾಗಿದ್ದರು. ಆದರೆ ಅವರದೇ ಪಕ್ಷ ಕರ್ನಾಟಕ­ದಲ್ಲಿ ಈ ವ್ಯವಸ್ಥೆಯನ್ನು  ದುರ್ಬಲ­ಗೊಳಿ­ಸಲು ಹುನ್ನಾರ ನಡೆಸಿತ್ತು.1989ರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗಿ, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಆಗ ಬಹುತೇಕ ಜಿಲ್ಲಾ ಪರಿಷತ್‌ಗಳು ಜನತಾ ಪರಿವಾರದ ತೆಕ್ಕೆಯಲ್ಲಿತ್ತು. ಅವಧಿ ಮುಗಿಯಲು 1992ರ ವರೆಗೂ ಕಾಯಬೇಕಾಗಿತ್ತು. ಅಲ್ಲಿಯವರೆಗೂ ಯಾಕೆ ಬಿಡಬೇಕು ಅಂತ 1990ರಲ್ಲಿ ಸರ್ಕಾರ, ಸುಗ್ರೀವಾಜ್ಞೆ ಮೂಲಕ ಜಿಲ್ಲಾ ಪರಿಷತ್‌ಗಳ ಅವಧಿ  ಮೊಟಕು­ಗೊಳಿಸಿ ಆಡಳಿತಾಧಿಕಾರಿಗಳನ್ನು ನೇಮಿಸಲು ಪ್ರಯತ್ನಿಸಿತು. ಆಗ ಎಸ್.ಬಂಗಾರಪ್ಪ  ಅವರು ಮುಖ್ಯಮಂತ್ರಿ.ಆ ಸುಗ್ರೀವಾಜ್ಞೆ ವಿರುದ್ಧ ನಾವು ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿ, ಅದಕ್ಕೆ ತಡೆಯಾಜ್ಞೆ ತಂದೆವು.   ಸರ್ಕಾರಕ್ಕೆ ಮುಜುಗರ ಆಯಿತು. ಸುಗ್ರೀವಾಜ್ಞೆಯನ್ನು ಕಾನೂನೇ ಮಾಡಿಬಿಡೋಣ, ಆಗ ತಡೆಯಾಜ್ಞೆ ತಾನಾಗಿಯೇ ತೆರವಾಗುತ್ತದೆ ಅಂತ  ಭಾವಿಸಿ ಅದೊಂದೇ ವಿಷಯ ಇಟ್ಟುಕೊಂಡು  ವಿಧಾನಮಂಡಲದ ವಿಶೇಷ ಅಧಿವೇಶನ ಕರೆದರು.ನಾನು, ಮೈಸೂರಿನ ವೃಷಭೇಂದ್ರಪ್ಪ, ರಾಯಚೂರಿನ ಸುರೇಶ್‌ ರೆಡ್ಡಿ ಸೇರಿದಂತೆ ಐವರು ದೆಹಲಿಗೆ ಹೋದೆವು. ಅಧಿವೇಶನ ಸೇರಲು ನಾಲ್ಕೈದು ದಿನ ಮಾತ್ರ ಉಳಿದಿತ್ತು.  ಮಣಿಶಂಕರ್ ಅಯ್ಯರ್ ಜತೆ  ಮೊದಲಿಂದಲೂ ಸಂಪರ್ಕ ಇತ್ತು. ಅವರ ಮೂಲಕ ರಾಜೀವ್‌ ಗಾಂಧಿ ಅವರನ್ನು ಭೇಟಿಯಾಗಲು ತೀರ್ಮಾನಿಸಿದೆವು.ರಾಜೀವ್‌ ಟೈಮ್‌ ಕೊಟ್ಟರು. ನಡುರಾತ್ರಿ ಜೀನ್ಸ್‌ ತೊಟ್ಟು ತೋಟದ ಮನೆಗೆ ಹೋಗಲು ಅಣಿಯಾಗಿದ್ದರು. ಅರ್ಜಿ ಕೊಡಲು ಅವಕಾಶ ಕೊಟ್ಟರೆ ಸಾಕು ಎಂಬುದು ನಮ್ಮ ಇರಾದೆ ಆಗಿತ್ತು. ಆದರೆ ನಾವು ಭಾವಿಸಿದ್ದೇ ಬೇರೆ. ನಡೆದದ್ದೇ ಬೇರೆ. 40ರಿಂದ 45 ನಿಮಿಷ ಮಾತನಾಡಿದರು. ನಮ್ಮ ಅನಿಸಿಕೆಗಳನ್ನು ಸಮಾಧಾನದಿಂದ ಕೇಳಿಸಿಕೊಂಡರು. ನೋಟ್‌ ಪ್ಯಾಡ್‌ನಲ್ಲಿ ಎಲ್ಲವನ್ನೂ ಗುರುತು ಹಾಕಿಕೊಂಡರು.ನಿಮ್ಮದೇ ಪಕ್ಷದ ಸರ್ಕಾರ, ನಿಮ್ಮ ಆಶಯಕ್ಕೆ ವಿರುದ್ಧವಾಗಿ  ಕರ್ನಾಟಕದಲ್ಲಿ ನಡೆದುಕೊಳ್ಳುತ್ತಿದೆ ಅಂತ ವಿವರಿಸಿದೆವು. ‘ನೋಡೋಣ... ಈ ವಿಷಯದಲ್ಲಿ ಏನು ಮಾಡಲು ಸಾಧ್ಯವೋ...’ ಅಂತ ಹೇಳಿ ನಮ್ಮನ್ನು ಕಳಿಸಿದರು.ಸೋಮವಾರ ಬಂತು. ಅಧಿವೇಶನ ನಡೆಯಲಿತ್ತು. ಡಿ.ಬಿ.ಚಂದ್ರೇಗೌಡ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು. ಎಂ.ಸಿ.ನಾಣಯ್ಯ ಪರಿಷತ್‌ನಲ್ಲಿ ನಾಯಕರು. ನಾವು ಕೆಲವರು ಲಾಬಿ ಹತ್ತಿರ ಹೋದೆವು. ಕರೆಗಂಟೆ ಮೊಳಗಿತು. ಅಧಿವೇಶನ ಶುರು. ಸದಸ್ಯರು ಒಳಗೆ ಹೋದರು. ಐದೇ ನಿಮಿಷ. ಅಧಿವೇಶನ ಮುಂದಕ್ಕೆ ಹೋಯಿತು. ಎಲ್ಲರೂ ಎದ್ದು  ಹೊರಬಂದರು.ವಿಶೇಷ ಅಧಿವೇಶನವನ್ನು ವರಿಷ್ಠರ ಸೂಚನೆ ಮೇರೆಗೆ ಮುಂದೂಡಿದ ಪ್ರಸಂಗ ಬಹುಶಃ ಇದೇ ಇರಬೇಕು.

ಬಳಿಕ ಗೊತ್ತಾಯಿತು. ಮಣಿಶಂಕರ್‌ ಅವರಿಗೆ ರಾಜೀವ್‌ ಗಾಂಧಿ ಆ ಕ್ಷಣದಲ್ಲೇ ಸೂಚಿಸಿದ್ದರು– ಮುಖ್ಯಮಂತ್ರಿಯವರಿಗೆ ತಕ್ಷಣ  ಫೋನ್‌ ಮಾಡಿ ಅಧಿವೇಶನ ಮುಂದೂಡುವಂತೆ ತಿಳಿಸಿ ಎಂದು. ರಾಜೀವ್‌ ಬದ್ಧತೆ ನಮ್ಮನ್ನು  ಬೆರಗಾಗಿಸಿತು’.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.