ಬುಧವಾರ, ಜೂನ್ 16, 2021
23 °C
ಸಿಪಿಐ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಸಲಹೆ

‘ಸೀರೆ, ಕುಪ್ಪಸ ಆಮಿಷ ಒಡ್ಡಿದರೆ ಪೊರಕೆ ಸೇವೆ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ವೇಳೆ ಮತ ಸೆಳೆಯಲು ಕುಂಕುಮ, ಬಳೆ, ಸೀರೆ, ಕುಪ್ಪಸದ ಆಮಿಷ ತೋರಿಸಲು ಬಂದರೆ ಮಹಿಳೆಯರು ಅವರಿಗೆ ಪೊರಕೆ ಸೇವೆ ಮಾಡಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಕರೆ ನೀಡಿದರು.ನಗರದಲ್ಲಿ ಭಾನುವಾರ ಸಿಪಿಐ ಹಮ್ಮಿಕೊಂಡಿದ್ದ ಮಹಿಳಾ ಕಾರ್ಯಕರ್ತರ ಸಮಾ­ವೇಶದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ ಸೀರೆ, ಕುಪ್ಪಸ ತಂದು­ಕೊಡು­ವುದು ಅವರ ಕೈಹಿಡಿದ ಪತಿಯರ ಕರ್ತವ್ಯ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ ಸೆಳೆ­ಯಲು ಸೀರೆ, ಕುಪ್ಪಸದ ಆಮಿಷ­ವೊಡ್ಡುವುದು ಮಹಿಳೆಯರ ಸ್ವಾಭಿಮಾನಕ್ಕೆ ಕುಂದು ತಂದಂತೆ. ಮಹಿಳೆಯರು ಜಾಗ್ರತರಾಗಿ, ತಮ್ಮ ಸ್ವಾಭಿ­ಮಾನಕ್ಕೆ ಯಾವುದೇ ಪಕ್ಷಗಳು ಧಕ್ಕೆ ತರುವ ಪ್ರಯತ್ನ ನಡೆಸಿದರೆ ಪಾಠ ಕಲಿಸಬೇಕು ಎಂದರು.ಯಾವುದೇ ಸರ್ಕಾರಗಳು ಮಹಿಳೆಯರನ್ನು ‘ಪುರುಷರ ಯಶಸ್ಸಿನ ಹಿಂದೆ ಮಹಿಳೆ ಇದ್ದಾಳೆ’ ಎಂದು ಬಣ್ಣಿಸುತ್ತಾ ಕಾಲ ದೂಡುತ್ತಿವೆಯೇ ಹೊರತು ಮಹಿಳೆಯರಿಗೆ ಅಗತ್ಯ ಸವಲತ್ತು ಒದಗಿಸಿ ಅವರನ್ನು ಸ್ವಾವಲಂಬಿಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದು ವಿಷಾದಿಸಿದರು.ಲೋಕಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿ ವಿಜಯ್‌­ಕುಮಾರ್‌ ಮಾತನಾಡಿ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರ ಸಂಘಟನೆ ಹುಟ್ಟಿ 12 ವರ್ಷ ಕಳೆದಿವೆ. ಇವರ ಸಮಸ್ಯೆಗೆ ಈವರೆಗೆ ಹಲವು ಹೋರಾಟಗಳನ್ನು ಪಕ್ಷ ನಡೆ­ಸಿದ್ದು, ಸಾಕಷ್ಟು ಯಶಸ್ಸು ಪಡೆದಿದ್ದೇವೆ. ಅಂಗನ­ವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರ ಇಡೀ ಕುಟುಂಬಗಳು ಬೆಂಬಲಿಸಿದರೆ ಸಾಕು ಈ ಚುನಾ­ವಣೆಯಲ್ಲಿ ಗೆಲುವು ಸುಲಭ­ ಎಂದರು.ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯವರು ಬಂದೂಕು ಹಿಡಿದು ಬಲಪ್ರಯೋಗಕ್ಕೆ ಬಂದಾಗ ಮೊದಲ ಬಾರಿಗೆ ಪಕ್ಷ ಬಿ.ಕೆ.ಸುಂದರೇಶ್‌ ನೇತೃತ್ವದಲ್ಲಿ ಹೋರಾಟ ನಡೆಸಿ ಅರಣ್ಯವಾಸಿಗಳ ಬೆಂಬಲಕ್ಕೆ ನಿಂತಿತು. ನಗರದಲ್ಲಿ ತಲೆ ಎತ್ತಿರುವ ದಿಢೀರ್‌ ನಗರ, ಶಾಂತಿನಗರದಲ್ಲಿ ಬಡವರು ನೆಲೆ ಕಳೆದು­ಕೊಳ್ಳಲು ಪಕ್ಷದ ಹೋರಾಟವೇ ಮುಖ್ಯ ಕಾರಣ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷ ಹಲವು ಜನಪರ ಹೋರಾಟಗಳನ್ನು ನಡೆಸಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜನತೆ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು, ಮುಖಂಡರಾದ ರಘು, ಶಿವಕುಮಾರ್‌, ಇಂದುಮತಿ ಇನ್ನಿತರರು ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.