ಸೋಮವಾರ, ಮಾರ್ಚ್ 8, 2021
24 °C

‘‘ಮುಂಗಾರುಮಳೆ ನನಗೊಂದು ಪಾಠ...

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

‘‘ಮುಂಗಾರುಮಳೆ ನನಗೊಂದು ಪಾಠ...

*‘ಮುಂಗಾರುಮಳೆ’ಯ ಯಶಸ್ಸು ಎದುರಿಗಿದೆ. ಅದರ ಎರಡನೆಯ ಆವೃತ್ತಿಗೆ ಕೈ ಹಾಕುವುದು ಸವಾಲು ಎನಿಸಲಿಲ್ಲವೇ?

‘ಮುಂಗಾರು ಮಳೆ’ ಹೆಸರೇ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಆ ಹೆಸರನ್ನು ಮತ್ತೆ ಮುಟ್ಟುವುದು ಸುಲಭವಲ್ಲ. ಆ ಚಿತ್ರದ ಗೆಲುವಿಗೆ ಸಂಗೀತವೂ ಮುಖ್ಯ ಕಾರಣ. ಈಗ ಅದೇ ಹೆಸರಿನ ಸಿನಿಮಾ ಮಾಡಲು ಅಗಾಧ ಧೈರ್ಯ ಬೇಕು. ಇದೊಂದು ರೀತಿ ಯುದ್ಧಕ್ಕೆ ಹೋದಂತೆ. ಗೆಲ್ಲಬೇಕು, ಇಲ್ಲವೇ ಸಾಯಬೇಕು. ಆದರೆ ಮುಂಗಾರು ಮಳೆ ಎಷ್ಟು ಹಿಟ್‌ ಆಗಿತ್ತೋ, ಅದೇ ಮಟ್ಟಕ್ಕೆ ಹೊಸ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಗೆದ್ದಿರುವುದು ಖುಷಿ ನೀಡಿದೆ.*ಈ ಗೆಲುವು ನಿರೀಕ್ಷಿತವೇ?

ಗೆಲುವು ನಿರೀಕ್ಷಿತ, ಆದರೆ ಇಷ್ಟೊಂದು ದೊಡ್ಡ ಗೆಲುವು ನಿರೀಕ್ಷಿಸಿರಲಿಲ್ಲ. ‘ಮುಂಗಾರು ಮಳೆ’ಯ ಎದುರು ಚೆನ್ನಾಗಿವೆ ಎನಿಸಿಕೊಂಡರೆ ಗೆದ್ದಂತೆ ಎಂದುಕೊಂಡಿದ್ದೆ. ಅದ್ಭುತವಾಗಿದೆ ಎಂದಾಗ ಆಗಿರುವ ಖುಷಿಯೇ ಬೇರೆ. ಚೆನ್ನಾಗಿ ಆಗಲು ತುಂಬಾ ಶ್ರಮ ಪಟ್ಟಿದ್ದೇವೆ. ಒಂದು ಒಳ್ಳೆಯ ಹಾಡು ಬರಲು ಕಠಿಣ ಶ್ರಮ ಬೇಕು. ಅದು ಎಲ್ಲಾ ಸಿನಿಮಾದಲ್ಲಿಯೂ ಸಾಧ್ಯವಾಗುವುದಿಲ್ಲ. ಅದಕ್ಕೆ ಅಗತ್ಯ ಸಮಯ ನೀಡುವುದಿಲ್ಲ, ಸಹನೆಯುಳ್ಳ ನಿರ್ದೇಶಕರಿರುವುದಿಲ್ಲ. ಇಲ್ಲಿ ನಿರ್ದೇಶಕ ಶಶಾಂಕ್‌ ಉತ್ತಮ ಅಭಿರುಚಿಯುಳ್ಳವರು.

ನನಗೆ ಸಾಕಷ್ಟು ಸಮಯವನ್ನೂ ನೀಡಿರುವುದರಿಂದ ತಾಂತ್ರಿಕತೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ನೀಡಲು ಸಾಧ್ಯವಾಗಿದೆ. ಶಬ್ದಗಳ ಆಯ್ಕೆ, ನಾವು ಬಳಸಿದ ಸಾಧನಗಳು, ಸೌಂಡ್‌ ಎಫೆಕ್ಟ್‌, ಸಾಹಿತ್ಯ ಎಲ್ಲವೂ ನೂರಕ್ಕೆ ನೂರರಷ್ಟು ಚೆನ್ನಾಗಿವೆ. ಇಷ್ಟಾದರೂ, ಜನರಿಗೆ ಇಷ್ಟವಾಗುತ್ತದೆಯೇ ಇಲ್ಲವೇ ಎಂಬ ಭಯ ಇತ್ತು. ಈಗ ನನಗೆ ಬರುತ್ತಿರುವ ಪ್ರತಿಕ್ರಿಯೆಗಳು ನೆಮ್ಮದಿ ನೀಡುತ್ತಿವೆ. ‘ಆಶಿಕಿ2’ನಂತೆಯೇ ಹಾಡುಗಳು ಇದೆ ಎನ್ನುತ್ತಾರೆ. ವೈರಲ್‌ ಆಗಿ ಹರಡುತ್ತಿದೆ.*ಶಶಾಂಕ್‌ ‘ಮುಂಗಾರು ಮಳೆ 2’ ಅವಕಾಶ ನಿಮ್ಮೆದುರು ಇಟ್ಟಾಗ ಹೇಗನ್ನಿಸಿತ್ತು?

ಅಂದು ನನ್ನ ಹುಟ್ಟಿದ ಹಬ್ಬ. ಫೋನ್ ಮಾಡಿದ ಶಶಾಂಕ್ – ನಿಮಗೊಂದು ಗಿಫ್ಟ್‌ ಕೊಡುತ್ತಿದ್ದೇನೆ. ನೀವು ‘ಮುಂಗಾರು ಮಳೆ 2’ ಸಂಗೀತ ನಿರ್ದೇಶಕ ಎಂದರು. ಜನ್ಮದಿನದಂದು ಅದು ನಿಜಕ್ಕೂ ಉಡುಗೊರೆಯ ಖುಷಿಯೇ. ‘ಇದು ನನ್ನ ಮೊದಲ ಸಿನಿಮಾ. ಇದನ್ನು ಮಾಡಿದ ಮೇಲೆಯೇ ಗೆಲ್ಲುತ್ತೇನೆ. ನನಗೆ ಅವಕಾಶಗಳು ಸಿಗುತ್ತವೆ ಎಂದುಕೊಳ್ಳುತ್ತೇನೆ’ ಎಂದು ಶಶಾಂಕ್ ಅವರಿಗೆ ಹೇಳಿದ್ದೆ. ‘ಟೆನ್ಷನ್ ಮಾಡ್ಕೋಬೇಡಿ. ಮಾಮೂಲಿ ಸಿನಿಮಾಗಳಿಗೆ ಮಾಡುವಂತೆಯೇ ಕಂಪೋಸ್‌ ಮಾಡಿ. ‘ಮುಂಗಾರು ಮಳೆ’ ಎಂದು ಭಾರ ಹೊರಬೇಡಿ. ಪ್ರಾಡಕ್ಟ್‌ಗೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ’ ಎಂದು ಪ್ರತಿ ದಿನವೂ ಹೇಳುತ್ತಿದ್ದರು. ಅವರಿಂದ ಯಾವ ಒತ್ತಡವೂ ಇರಲಿಲ್ಲ.*ಒಂದು ಸಿನಿಮಾಕ್ಕೆ ನೂರಾರು ಮಟ್ಟುಗಳನ್ನು ಹಾಕಿದ್ದಿರಿ?

ಚಿತ್ರಕ್ಕೆ ಆರಂಭ ನೀಡಿದ ದಿನದಿಂದಲೇ ಹಾಡುಗಳನ್ನು ಮಾಡತೊಡಗಿದೆವು. ಎಲ್ಲಾ ಟ್ಯೂನ್‌ಗಳೂ ಚೆನ್ನಾಗಿಯೇ ಕೇಳಿಸುತ್ತಿದ್ದವು. ಹಾಗೆಯೇ ಎಷ್ಟೋ ಹಾಡುಗಳು ಅಂತಿಮ ಎಂದು ರೆಕಾರ್ಡಿಂಗ್ ಕೂಡ ಮಾಡಿದ್ದೆವು. ಔಟ್‌ಪುಟ್‌ ಕೇಳುವಾಗ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸಿತ್ತು. ಹೀಗೆ ರೆಕಾಡಿಂಗ್ ಮಾಡಿ ಬೇಡ ಎಂದು ಅದೆಷ್ಟೋ ಟ್ಯೂನ್‌ಗಳನ್ನು ಬದಿಗಿಟ್ಟಿದ್ದೇವೆ. ಫ್ರೇಂ ಮಾಡಬಹುದು ಎನಿಸಿದ್ದನ್ನು ಮಾತ್ರ ಟ್ಯೂನ್ ಮಾಡಿದೆವು.*ಮುಂಗಾರು ಮಳೆ ಗೆದ್ದಿದ್ದು ಮಾಧುರ್ಯದಿಂದ. ಇಲ್ಲಿ ಮಾಧುರ್ಯದ ಜತೆ ಅಬ್ಬರವೂ ಇದೆ?

‘ಸರಿಯಾಗಿ ನೆನಪಿದೆ...’ ಹಾಡಿಗೆ ‘ಅನಿಸುತಿದೆ ಯಾಕೋ ಇಂದು’ ಹಾಡಿನ ಸ್ಪರ್ಶ ಬರಲೇಬೇಕು ಎಂದು ಶಶಾಂಕ್‌ ಮೊದಲ ದಿನವೇ ಹೇಳಿದರು. ಆಗ ನನಗೆ ನಿಯಂತ್ರಣ ಹಾಕಿದಂತೆ ಆಯಿತು. ಅದೇ ರಾಗದಲ್ಲಿ ಮಾಡಬೇಕು, ಆ ಥೀಮ್‌ ಯಾವ ರಾಗದಲ್ಲಿ ಕೂರುತ್ತದೋ ಅದಕ್ಕೆ ಹೊಂದಿಸಬೇಕು. ನನಗೆ ಹೇಗೆ ಬೇಕೋ ಹಾಗೆ ಮಾಡುವಂತಿಲ್ಲ. ಹಳೆಯ ಟ್ಯೂನ್‌ಗೆ ಧಕ್ಕೆ ಬಾರದಂತೆ, ಅದನ್ನು ಸರಿಗಟ್ಟಿಸುವಂತಹ ಟ್ಯೂನ್ ಮಾಡಬೇಕು. ಇದು ಸವಾಲು ಎನಿಸಿತು. ‘ಅನಿಸುತಿದೆ...’ ಎದುರಿಗಿಟ್ಟುಕೊಂಡು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾಗ ಒಳ್ಳೆಯ ಮೆಲೊಡಿ ಸಿಕ್ಕಿತು.ಆ ಹಾಡನ್ನೇ ಮೂರು ರೀತಿ ಮಾಡಿದೆವು. ಒಂದು ಮುಂಗಾರು ಮಳೆಯದ್ದೇ ಟ್ಯೂನ್ ಇತ್ತು. ‘ಅನಿಸುತಿದೆ...’ ಥರವೇ ಇದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಪಾಶ್ಚಾತ್ಯ ಶೈಲಿ ಮಾಡಿದೆವು. ಅದು ತುಂಬಾ ಮಾರ್ಡನ್‌ ಆಗಿದೆ ಎಂದು ಅದರ ಬೇರೆ ವರ್ಷನ್‌ ಮಾಡಿದೆವು. ‘ಗಮನಿಸು ಒಮ್ಮೆ ನೀನು...’ ಹಾಡೂ ಕೂಡ ಸಿನಿಮಾದಲ್ಲಿ ಒಳ್ಳೆಯ ಸಂದರ್ಭದಲ್ಲಿ ಬರುತ್ತದೆ. ಹಾಡು ಕೇಳುವಾಗ ಕಣ್ಣಲಿ ನೀರು ಜಿನುಗುತ್ತದೆ. ‘ನೀನು ಇರದೇ...’ ಹಾಡು ಮೆಲೊಡಿಗಾಗಿ ಹುಟ್ಟಿದ್ದು. ಅದೇ ರೀತಿ ಇಂದಿನ ಟ್ರೆಂಡ್‌ಗೆ ತಕ್ಕನಾದ ಮಾರ್ಡನ್‌ ಆಗಿರುವ ಟ್ಯೂನ್‌ ಕೂಡ ಬೇಕು ಎನಿಸಿತು. ‘ಒಂಟೆ ಸಾಂಗ್‌..’, ‘ಮೈ ಡ್ಯಾಡಿ ಈಸ್‌ ಮೈ ಹೀರೊ...’ ಆ ಪ್ರಕಾರದವು. *‘ಮುಂಗಾರು ಮಳೆ’ಯಲ್ಲಿದ್ದಂತೆ ಭಾವುಕಗೊಳಿಸುವ ಅಂಶ ಸಂಗೀತದಲ್ಲಿ ಇಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ...

ಯಾವುದೇ ಹೋಲಿಕೆಯಲ್ಲಿಯೂ ಮೊದಲ ಭಾಗವೇ ಫ್ರೆಶ್ ಎನಿಸುವುದು. ಮುಂಗಾರು ಮಳೆಯನ್ನು ತುಂಬಾ ಹಚ್ಚಿಕೊಂಡವರು, ಆ ಹಾಡುಗಳ ಗುಂಗನ್ನು ಇನ್ನೂ ಮರೆಯದವರು ಹಾಗೆ ಹೇಳಬಹುದು. ಹೆಚ್ಚಿನವರು ಹೇಳುವುದು ಹಾಡುಗಳಲ್ಲಿ  ತಾಜಾತನವಿದೆ ಎಂದು. ಇನ್ನು ಕೆಲವರು ಅವುಗಳಿಗಿಂತಲೂ ಚೆನ್ನಾಗಿ ಬಂದಿವೆ ಎಂದೂ ಹೇಳಿದ್ದಾರೆ. ಏನೇ ಆಗಿದ್ದರೂ ಇಲ್ಲಿ ಸಮ್ಮಿಶ್ರ ಅಭಿಪ್ರಾಯವಂತೂ ಬಂದಿಲ್ಲ.

ಆಗ ಆ ಸಿನಿಮಾಕ್ಕೆ ಯಾವುದೇ ಒತ್ತಡ ಇರಲಿಲ್ಲ. ಆದರೆ ನೀವು ಅಷ್ಟೊಂದು ಒತ್ತಡಗಳನ್ನು ಇಟ್ಟುಕೊಂಡು, ಯಾವುದಕ್ಕೂ ರಾಜಿಯಾಗದೆ ಒಳ್ಳೆಯ ಸಂಗೀತ ನೀಡಿದ್ದೀರಿ ಎಂದು ಅನೇಕರು ಹೇಳುತ್ತಾರೆ. ಇಂದಿನ ಜಾನರ್‌ಗೆ ಏನು ಬೇಕೋ ಹಾಗೆಯೇ ಬಂದಿದೆ. ಆದರೆ ಪಾರ್ಟ್‌ ಒನ್ ಎನ್ನುವುದು ಯಾವಾಗಲೂ ಮೇಲೆ. ಯಾವಾಗಲೂ ಎರಡನೆಯ ಭಾಗಕ್ಕೆ ‘ಪರವಾಗಿಲ್ಲ’ ಎನ್ನುವ ಮಾತಷ್ಟೇ ಕೇಳುವಾಗ ಇದು ವೈರಲ್‌ ಆಗಿರುವುದು ವಿಶಿಷ್ಟವೇ. ಇದು ದೇವರ ದಯೆ.*‘ಮುಂಗಾರು ಮಳೆ’ಯ ಅನುಭವ ವಿಭಿನ್ನ ಎನಿಸುತ್ತಿದೆಯೇ?

ತುಂಬಾ ಜನ ಹೇಳಿದ್ದು, ಈ ಹಾಡುಗಳು ಅರ್ಜುನ್ ಜನ್ಯ ಮಾಡಿದಂತೆ ಇಲ್ಲ ಎಂದು. ‘ನಿಮ್ಮದೊಂದು ಶೈಲಿ ಇರುತ್ತಿತ್ತು. ಆದರೆ ಇಲ್ಲಿ ಆ ಶೈಲಿಯೇ ಇಲ್ಲ’ ಎಂದಿದ್ದಾರೆ. ಬಹುಶಃ ನಾನು ಸಾಮಾನ್ಯವಾಗಿ ಹಾಡು ಹೊಸೆಯುವಂತೆ ಮಾಡಿದ್ದರೆ ಈ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಹೀಗೆ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದೂ ಅಲ್ಲ. ಚಿತ್ರದ ವಸ್ತು, ನಿರ್ದೇಶಕರು ಯಾವ ರೀತಿ ಕೆಲಸ ತೆಗೆದುಕೊಂಡರು, ಅವರಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತಾ ಹೋದೆ ಎಂಬುದರ ಒಟ್ಟಾರೆ ಫಲಿತಾಂಶವೇ ಒಳ್ಳೆಯ ಹಾಡುಗಳು. ನಾನು ಒಂದು ಗಿಡದಂತೆ. ಯಾರು ನೀರೆರೆಯುತ್ತಾರೋ ಮರದಂತೆ ಬೆಳೆಯುತ್ತೇನೆ. ಕೆಲವರು ನೀರು ಹಾಕದೆ ನೀನೇ ಬೆಳಿ ಎಂದರೆ ಅದು ಸಾಧ್ಯವಿಲ್ಲ.*ನಿಮ್ಮ ಸಂಗೀತದಲ್ಲಿ ಅಬ್ಬರ ಜಾಸ್ತಿ, ಸಾಹಿತ್ಯ ಕೇಳಿಸುವುದಿಲ್ಲ ಎಂಬ ಆರೋಪ ಇದೆ?

ಕೆಲವರು ಹಾಗೆ ನೇರವಾಗಿ ಹೇಳಿದ್ದಾರೆ. ಅದನ್ನು ಕಡಿಮೆ ಮಾಡಲು ಬಹಳ ಬಾರಿ ಪ್ರಯತ್ನಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಆರೋಪ ಮಾಡುವವರು ಹಳೆಯ ಕಾಲಮಾನವದರು. ಆದರೆ ಈಗಿನದ್ದು ಒಂದು ಟ್ರೆಂಡ್‌ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ  ಶಬ್ದಗ್ರಹಣಕ್ಕೆ ಅದರದ್ದೇ ಥಿಯರಿ ಇದೆ. ಸೌಂಡ್‌ ಎಂಜಿನಿಯರಿಂಗ್ ಓದಿಕೊಂಡು ಬಂದವರಿಗೆ ಅದರ ಜ್ಞಾನ ಇರುತ್ತದೆ.ನಾನು ಅದನ್ನು ಓದಿಕೊಂಡು ಬಂದಿರುವನು. ಸುಮ್ಮನೆ ಅಡಕ್–ಪಡಕ್ ಮಾಡಿದ ಕೆಲಸವಲ್ಲ. ಸಾಹಿತ್ಯ ಕೇಳಿಸೊಲ್ಲ, ಅದರಲ್ಲಿ ಅಬ್ಬರವೇ ಜಾಸ್ತಿ ಎಂದಿದ್ದರೆ ನಾನು 60 ಸಿನಿಮಾ ಮಾಡಲು ಆಗುತ್ತಿರಲಿಲ್ಲ. ‘ಮುಂಗಾರು ಮಳೆ’ಯ ಅವಕಾಶವೂ ದೊರಕುತ್ತಿರಲಿಲ್ಲ. ಆದರೆ ನನ್ನಲ್ಲಿನ ದೋಷವನ್ನು ಹೇಳುವುದು ತಪ್ಪಲ್ಲ. ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇನೆ ಮತ್ತು ಮುಂಗಾರು ಮಳೆಯಲ್ಲಿ ತುಂಬಾ ಅಳವಡಿಸಿಕೊಂಡಿದ್ದೇನೆ. ಸಾಹಿತ್ಯ ಮತ್ತು  ಸಂಗೀತ ಪ್ರತ್ಯೇಕವಾಗಿ ಕೇಳಿಸಬೇಕು ಎಂದು ಸಾಕಷ್ಟು ಪ್ರಯತ್ನಿಸಿದ್ದೇನೆ. ಮುಂಗಾರು ಮಳೆ ನನಗೊಂದು ಪಾಠ.*ಈ ಸಿನಿಮಾದ ಕಾರಣದಿಂದ ಸಂಗೀತ ನಿರ್ದೇಶಕನಾಗಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಮೇಲಿನ ನಿರೀಕ್ಷೆಯೂ ಹೆಚ್ಚಿಸಿದೆಯಲ್ಲವೇ?

ನಿಜ. ಈಗ ಎಲ್ಲರೂ ಇದೇ ಮಟ್ಟದ ಹಾಡುಗಳನ್ನು ಬಯಸುತ್ತಾರೆ. ‘ಮುಂಗಾರು ಮಳೆ 2’ಗೆ ಅಂತಹ ಹಾಡು ಮಾಡಿದರು. ಬಳಿಕ ಅಂತಹ ಹಾಡು ಮಾಡಲಿಲ್ಲ ಎನ್ನಬಹುದು. ನನಗೆ ಚಿಕ್ಕ ಅಥವಾ ದೊಡ್ಡ ಸಿನಿಮಾ ದೊಡ್ಡದು ಎಂದೇನಿಲ್ಲ. ನನ್ನ ಕಡೆಯಿಂದ ಎಲ್ಲ ಪ್ರಯತ್ನ ಮಾಡುತ್ತೇನೆ. ನನ್ನಿಂದ ತಮಗೆ ಬೇಕಾದ ಕೆಲಸ ತೆಗೆಸುವವರು ಇರಬೇಕು. ನಾನು ಕೊಟ್ಟಿದ್ದನ್ನು ತೆಗೆದುಕೊಂಡು ಹೋಗುವವರಲ್ಲ.

ಇಲ್ಲಿನ ಅನೇಕರ ಸಮಸ್ಯೆ ಏನೆಂದರೆ, ನಾವು ಹೊಸೆದು ಕೊಟ್ಟ ಹಾಡನ್ನು ಮೂರು ನಾಲ್ಕು ಜನರಿಗೆ ಕೇಳಿಸುತ್ತಾರೆ. ಅವರಾರಿಗೂ ಚಿತ್ರದ ಕಥೆಯಾಗಲೀ ವಸ್ತುವಾಗಲೀ ಗೊತ್ತಿರುವುದಿಲ್ಲ. ಕೆಲವರಿಗೆ ಸಿನಿಮಾ ಬಗ್ಗೆಯೂ ತಿಳಿದಿರುವುದಿಲ್ಲ. ನಾನು ಬೇರೆ ಪ್ರಯತ್ನ ಮಾಡಿದರೆ ಅವರಿಗೆ ಇಷ್ಟವಾಗುವುದಿಲ್ಲ. ಬದಲಿಸುತ್ತೇನೆ ಎಂದರೆ ಕೋಪ ಮಾಡಿಕೊಳ್ಳುತ್ತಾರೆ. ಎಲ್ಲವೂ ಹಾಡಿನ ಮೇಲೆ ತುಂಬ ಪರಿಣಾಮ ಬೀರುತ್ತದೆ.

ಅಗತ್ಯವಿದ್ದಾಗ ನಾನು ಅವರ ಮನೆಗೇ ಹೋಗಿ ಕಂಪೋಸ್‌ ಮಾಡಿ ಕೊಡುತ್ತೇನೆ. ನನ್ನಲ್ಲಿ ಅಹಂಕಾರವಿಲ್ಲ. ದುಡ್ಡಿಗೋಸ್ಕರ ಕೆಲಸ ಮಾಡುವುದಿಲ್ಲ. ನನ್ನಿಂದ ಸಂಪೂರ್ಣ ಕೆಲಸ ತೆಗೆದುಕೊಳ್ಳಿ ಎಂದೇ ಹೇಳುತ್ತೇನೆ. ಎಷ್ಟೋ ಹಾಡುಗಳು ಚೆನ್ನಾಗಿಲ್ಲ ಎಂದು ನನಗೇ ಗೊತ್ತಿರುತ್ತದೆ. ಆದರೂ ಅದು ಚೆನ್ನಾಗಿದೆ ಎಂದು ಅಂತಿಮಗೊಳಿಸಿ ತೆಗೆದುಕೊಂಡು ಹೋಗುತ್ತಾರೆ, ಇನ್ನೂ ಉತ್ತಮ ಪಡಿಸಬಹುದು ಎಂದರೆ ಅದಕ್ಕೆ ಅವಕಾಶ ನೀಡುವುದಿಲ್ಲ.

ಪ್ರಾಜೆಕ್ಟ್‌ ಮುಗಿಸಿ, ಇದ್ದಕ್ಕಿದ್ದಂತೆ ಆಡಿಯೊ ರಿಲೀಸ್‌ಗೆ ಬರಬೇಕು ಎನ್ನುತ್ತಾರೆ. ನನ್ನಿಂದ ಯಾವ ಬಗೆಯ ಕೆಲಸ ತೆಗೆಸಬೇಕು ಎಂಬುದೇ ಅವರಿಗೆ ಸ್ಪಷ್ಟವಾಗಿರುವುದಿಲ್ಲ. ಸಮಯವನ್ನೂ ನೀಡುವುದಿಲ್ಲ. ‘ಮುಂಗಾರು ಮಳೆ 2’ಗೆ ಒಂದು ವರ್ಷ ಸಮಯ ನೀಡಿದರು. ಆಡಿಯೊ ಬಿಡುಗಡೆಗೆ ಎರಡು ದಿನವಿದ್ದಾಗಲೂ ತಿದ್ದಲು ಅವಕಾಶ ನೀಡಿದ್ದರು.ಎಷ್ಟೋ ಡಿಲೀಟ್‌ ಮಾಡಿದ್ದೇವೆ. ಸಮಯ, ಹಣ ವ್ಯರ್ಥ ಮಾಡಿದ್ದೇವೆ. ಹಾಗೆಂದು ಅದಕ್ಕೆ ಯಾರೂ ತಕರಾರು ಮಾಡಿಲ್ಲ. ಇಂತಹ ಒಳ್ಳೆಯ ನಿರ್ದೇಶಕರೊಂದಿಗೆ ಎರಡು ಮೂರು ಸಿನಿಮಾ ಮಾಡಿದರೂ ಸಾಕು, ತೃಪ್ತಿ ಸಿಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.