ಬುಧವಾರ, ಮಾರ್ಚ್ 3, 2021
19 °C

₨ 71.14 ಲಕ್ಷ ಆಸ್ತಿ ತೆರಿಗೆ ಸಂಗ್ರಹ

ಉ.ಮ. ಮಹೇಶ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₨ 71.14 ಲಕ್ಷ ಆಸ್ತಿ ತೆರಿಗೆ ಸಂಗ್ರಹ

ಬೀದರ್: ಮೊದಲ ತಿಂಗಳೇ ಕಂದಾಯ ಪಾವತಿ ಮಾಡಿದರೆ ಶೇ2ರಷ್ಟು ರಿಯಾಯಿತಿ ದೊರೆಯಲಿದೆ ಎಂಬ ನಗರಸಭೆಯ ಹೇಳಿಕೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಏಪ್ರಿಲ್‌ ತಿಂಗಳಲ್ಲಿಯೇ ನಿಗದಿತ ಗುರಿಯ ಶೇ 20.37ರಷ್ಟು ಕಂದಾಯ ಸಂಗ್ರಹ­ವಾಗಿದೆ. ಆದರೆ ನೀರಿನ ಶುಲ್ಕ ವಸೂಲಿಯಲ್ಲಿ ಉತ್ತಮ ಪ್ರಗತಿ ಕಂಡುಬಂದಿಲ್ಲ.2014–15ನೇ ಹಣಕಾಸು ವರ್ಷದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು ಬೇಡಿಕೆ ಬಾಕಿ ಸೇರಿದಂತೆ ಒಟ್ಟು ₨ 3.49 ಕೋಟಿ ಇದ್ದು, ಈ ಪೈಕಿ ಏಪ್ರಿಲ್‌ ತಿಂಗಳಲ್ಲಿ ₨71.1 ಲಕ್ಷ ಕಂದಾಯ ಸಂಗ್ರಹವಾಗಿದೆ. ಇದು ನಿಗ­ದಿತ ಗುರಿಯ ಶೇ 20.37ರಷ್ಟಾಗಿದೆ. ಆದರೆ ನೀರಿನ ತೆರಿಗೆ ವಸೂಲಾ­ತಿಯಲ್ಲಿ ಎಂದಿನಂತೆ ಹಿನ್ನಡೆಯಾಗಿದೆ. 2014–15ನೇ ಸಾಲಿನಲ್ಲಿ ನೀರಿನ ಕಂದಾಯ ಒಟ್ಟು ₨6.61 ಕೋಟಿ ಬಾಕಿ ಇದ್ದು, ಏಪ್ರಿಲ್‌ ತಿಂಗಳಲ್ಲಿ  ಕೇವಲ 1.12ರಷ್ಟು ಅಂದರೆ ₨7.51 ಲಕ್ಷ ಮಾತ್ರವೇ ಸಂಗ್ರಹವಾಗಿದೆ.‘ನೀರಿನ ಕಂದಾಯ ಬಾಕಿ ಪ್ರತಿ ವರ್ಷ ಹೆಚ್ಚುತ್ತಿದೆ. ನೀರಿನ ಕಂದಾಯ ಸಂಗ್ರಹಿಸುವುದೇ ದೊಡ್ಡ ಸಮಸ್ಯೆ­ಯಾಗಿದೆ. ಆಸ್ತಿ ತೆರಿಗೆ ಕಟ್ಟುವಾಗ ಕಡ್ಡಾಯವಾಗಿ ನೀರಿನ ಕಂದಾಯವನ್ನು ವಸೂಲಿ ಮಾಡುವುದು, ಬಾಕಿ ಉಳಿಸಿಕೊಂಡ ಪ್ರಕರಣಗಳಲ್ಲಿ ನೋಟಿಸ್‌ ನೀಡಿ ಸಂಪರ್ಕ ಕಡಿತ ಮಾಡುವುದು ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳ­ಲಾಗುತ್ತಿದೆ’ ಎನ್ನುತ್ತಾರೆ ನಗರಸಭೆಯ ಕಂದಾಯ ಅಧಿಕಾರಿ ಅರುಣ್‌ ಚವಾಣ್‌.‘ಪ್ರಸ್ತುತ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಬಾಕಿ ಉಳಿಸಿಕೊಂಡಿರುವ ಪ್ರಕರಣದಲ್ಲಿ ಖಾತಾ ನೀಡುತ್ತಿಲ್ಲ. ಅಲ್ಲದೆ ನಗರಸಭೆಯಿಂದ ಕೆಲ ಸೌಲಭ್ಯ ಪಡೆಯುವ ಮುನ್ನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರಬಾರದು ಎಂದು ಹೇಳಲಾಗುತ್ತಿದೆ. ಈ ಕ್ರಮಗಳು ಫಲ ನೀಡುತ್ತಿವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. 2014–15ನೇ ಸಾಲಿನಲ್ಲಿ ಬಾಕಿ ಉಳಿದಿದ್ದ ₨5.03 ಲಕ್ಷ ಮತ್ತು ಈ ಆರ್ಥಿಕ ವರ್ಷದ ಗುರಿ ₨3.44 ಕೋಟಿ ಸೇರಿ ಒಟ್ಟು ₨3.49 ಕೋಟಿ  ಆಸ್ತಿ ತೆರಿಗೆ ಬೇಡಿಕೆ ಇತ್ತು.  ಏಪ್ರಿಲ್‌ನಲ್ಲಿಯೇ ತೆರಿಗೆ ಪಾವತಿಸಿದಲ್ಲಿ ಶೇ 2ರಷ್ಟು ರಿಯಾಯಿತಿ ನೀಡುವ ಭರವಸೆ ನೀಡಲಾಗಿತ್ತು ಎಂದರು.ಈಗ ಯೋಜನೆ ಮುಗಿದಿದ್ದು, ಮೇ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವ ಪ್ರಕರಣಗಳಲ್ಲಿ ಈ ಮೊದಲೇ ಪ್ರಕಟಿಸಿದ್ದಂತೆ ಶೇ 2ರಷ್ಟು ದಂಡ ಹಾಕಲಾಗುವುದು. ತೆರಿಗೆ ಪಾವತಿ ವಿಳಂಬವಾದಂತೆ ದಂಡದ ಪ್ರಮಾಣವು ಹೆಚ್ಚಲಿದೆ ಎಂದು ವಿವರಿಸಿದರು. 2013–14 ನೇ ಹಣಕಾಸು ವರ್ಷದಲ್ಲಿ ಬಾಕಿ ಇದ್ದು, ₨24.91 ಲಕ್ಷ ಸೇರಿದಂತೆ ಒಟ್ಟು ₨3.24 ಕೋಟಿ ಗುರಿ ಇತ್ತು. ಈ ಪೈಕಿ ₨3.19 ಕೋಟಿ ತೆರಿಗೆ ಸಂಗ್ರಹ ಮಾಡಿದ್ದು, ಶೇ 98.45ರಷ್ಟು ಸಾಧನೆಯಾಗಿದೆ.ನಗರಸಭೆಯ ಅಂಕಿ–ಅಂಶಗಳ ಪ್ರಕಾರ, ನಗರಸಭೆ ವ್ಯಾಪ್ತಿಯಲ್ಲಿ ಇರುವ ಒಟ್ಟು ನೋಂದಾಯಿತ ಆಸ್ತಿಗಳ ಸಂಕ್ಯೆ 51,158. ಇದರಲ್ಲಿ ಮೌಲ್ಯ­ಮಾಪನ ಮಾಡಿದ ವಸತಿ ಆಸ್ತಿ 27,760, ಮೌಲ್ಯಮಾಪನ ಮಾಡದ 747, ಮೌಲ್ಯಮಾಪನ ಮಾಡಿದ ವಾಣಿಜ್ಯ ಆಸ್ತಿ 3,802, ಮೌಲ್ಯ­ಮಾಪನ ಆಗದ 260 ಆಸ್ತಿಗಳು ಹಾಗೂ ಖಾಲಿ ನಿವೇಶನಗಳು 10,795 ಸೇರಿವೆ.ನೀರಿನ ಕಂದಾಯ ವಸೂಲಿಯೇ ಸಮಸ್ಯೆ: ನಗರಸಭೆ ವ್ಯಾಪ್ತಿಯ ಪರಿಮಿತಿಯಲ್ಲಿ 2014–15ನೇ ಹಣಕಾಸು ವರ್ಷದ ಆರಂಭದಲ್ಲಿ ಇದ್ದಂತೆ ಬಾಕಿ ಉಳಿದಿರುವ ನೀರಿನ ಕಂದಾಯದ ಮೊತ್ತ ₨6.61 ಕೋಟಿ. ಇದೇ ವರ್ಷದಲ್ಲಿ ಏಪ್ರಿಲ್‌ ತಿಂಗಳಲ್ಲಿ ವಸೂಲಿಯಾಗಿರುವ ಮೊತ್ತ ₨7.51 ಲಕ್ಷ. ಅಂದರೆ ಶೇ 1.12 ರಷ್ಟು ಮಾತ್ರ!ಪ್ರತಿ ವರ್ಷ ಹೀಗೆ ಬಾಕಿ ಉಳಿಯುವ ಮೊತ್ತದ ಪ್ರಮಾಣ, ಬಡ್ಡಿ ಸೇರಿದಂತೆ ಹೆಚ್ಚುತ್ತಾ ಹೋಗುತ್ತಿದೆ. ಇದನ್ನು ವಸೂಲಿ ಮಾಡಲು ನಗರಸಭೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ಪ್ರಕರಣ­ಗಳಲ್ಲಿ ಜನವಸತಿ ಮಾಲೀಕರಿಗೂ ಬಾಕಿ ಇರುವುದು ತಿಳಿದಿಲ್ಲ!

ಬಾಕಿ ಇಷ್ಟೊಂದು ಮೊತ್ತ ಉಳಿಯಲು ಏನು ಕಾರಣ? ಕಂದಾಯ ಅಧಿಕಾರಿ ಅರುಣ್‌ ಚವಾಣ್‌ ಪ್ರಕಾರ, ಹಿಂದೆ ಹರ್ಷಗುಪ್ತ ಅವರ ಅವಧಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಾಗ ಅನೇಕ ನಳಗಳು ಅಸ್ತಿತ್ವ ಕಳೆದುಕೊಂಡವು. ಆದರೆ ವಸತಿ ಮಾಲೀಕರು ಈ ಕುರಿತು ಅರ್ಜಿ ನೀಡಿ ಸಂಪರ್ಕ ರದ್ದು ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ದಾಖಲೆಗಳಲ್ಲಿ ಇನ್ನೂ ಆ ನಲ್ಲಿಗಳ ಸಂಪರ್ಕ ಇದೆ. ಬಾಕಿ ಮತ್ತು ಬಡ್ಡಿಯೂ ಹೆಚ್ಚುತ್ತಿದೆ.ಈಗ ಬೇಸಿಗೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿಯೂ ವಿವಿಧೆಡೆ ಕುಡಿಯುವ ನೀರು ಪೂರೈಕೆಯ ಸಮಸ್ಯೆ ಕಾಡುತ್ತಿದೆ. ಸಮಸ್ಯೆ ಇಷ್ಟು ಗಂಭೀರವಾಗಿ ಇರುವಾಗ ನೀರಿನ ಕಂದಾಯ ವಸೂಲಾತಿ ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂಬುದೇ  ನಗರಸಭೆ ಅಧಿಕಾರಿಗಳ ಮುಂದಿನ ದೊಡ್ಡ ಪ್ರಶ್ನೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.