ಬುಧವಾರ, ಮೇ 18, 2022
27 °C

1 ಕಿ.ಮೀ ಕ್ರಮಿಸಲು 26 ಕಿ.ಮೀ ಸುತ್ತುವ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವರದಿ

ರಾಮನಾಥಪುರ:
ವೇದ- ನಾದ ಗ್ರಾಮಗಳು ಎಂದೇ ಕರೆಯಲ್ಪಡುವ ಬಸವಾಪಟ್ಟಣ - ರುದ್ರಪಟ್ಟಣ ನಡುವೆ ಹಾದು ಹೋಗಿರುವ ಕಾವೇರಿ ಹೊಳೆಗೆ ಅಡ್ಡಲಾಗಿ ಸೇತುವೆ ಕಟ್ಟಬೇಕು ಎಂಬ ಸಾರ್ವಜನಿಕರ ಬಹು ವರ್ಷಗಳ ಬೇಡಿಕೆ ಮರೀಚಿಕೆಯಾಗೇ ಉಳಿದಿದೆ.ಕೊಂಕಣ ಸುತ್ತಿ ಮೈಲಾರ: ಬಸವಾಪಟ್ಟಣ ಮತ್ತು ರುದ್ರಪಟ್ಟಣ ಮಧ್ಯೆ ಹಾದು ಹೋಗಿರುವ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿದರೆ ಈ ಎರಡು ಗ್ರಾಮಗಳ ನಡುವಿನ ದೂರ ಕೇವಲ ಒಂದು ಕಿ.ಮೀ. ಸೇತುವೆ ಆಗದಿರುವ ಪರಿಣಾಮ ಬಸವಾಪಟ್ಟಣಕ್ಕೆ ಬರಲು ರಾಮನಾಥಪುರ ಮಾರ್ಗವಾಗಿ 26 ಕಿ.ಮೀ. ದೂರ ಕ್ರಮಿಸಬೇಕು. ರುದ್ರಪಟ್ಟಣದಲ್ಲಿ ಪ್ರತಿವರ್ಷ ಸಂಗೀತೋತ್ಸವ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಇದನ್ನು ನೋಡಲು ಹೋಗಬೇಕೆಂದರೆ ಬಸವಾಪಟ್ಟಣ ಸುತ್ತಲಿನ ಹಳ್ಳಿಗಳ ಜನರು ರಾಮನಾಥಪುರ ಮಾರ್ಗವಾಗಿ ಸುತ್ತಿ ಬಳಸಬೇಕು. ಕೂಗಳತೆ ದೂರದಲ್ಲಿರುವ ನದಿ ಆಚೆಗಿನ ಬೆಟ್ಟಸೋಗೆ ಗ್ರಾಮಸ್ಥರು ರುದ್ರಪಟ್ಟಣಕ್ಕೆ ಹೋಗಿ ಬರಲು ರಾಮನಾಥಪುರ ಇಲ್ಲವೇ ಕೇರಳಾಪುರ ಮಾರ್ಗದ ಸೇತುವೆ ದಾಟಿ ಸುಮಾರು 35 ಕಿ.ಮೀ. ದೂರ ಪ್ರಯಾಸದ ಪ್ರಯಾಣ ಮಾಡಬೇಕು. ಇದು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತಾಗುತ್ತಿದೆ.ಈ ಗ್ರಾಮಗಳ ಜನ ನದಿ ದಾಟಲು ತೆಪ್ಪವನ್ನೇ ಅವಲಂಬಿಸಬೇಕಾಗಿದೆ. ಬೇಸಿಗೆಯಲ್ಲಿ ಹಾಯ್ಗಲ್ಲುಗಳ ಮೇಲೆ ನಡೆದು ನದಿ ದಾಟಬಹುದು. ಮಳೆಗಾಲದಲ್ಲಿ ಐದಾರು ತಿಂಗಳವರೆಗೆ ತುಂಬಿ ಹರಿಯುವ ನದಿಯನ್ನು ದಾಟಲು ತೆಪ್ಪವೇ ಸಂಚಾರ –ಸಾಧನ. ಹೀಗಾಗಿ ಎರಡು ಗ್ರಾಮಗಳ ನಡುವೆ ಸಂಪರ್ಕ ಪ್ರಯಾಸದಾಯಕವಾಗಿದೆ.ದಶಕಗಳ ಕೂಗು: ಇಲ್ಲಿನ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ದಶಕಗಳಿಂದ ಕೇಳಿ ಬರುತ್ತಿದೆ.  ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಮತ್ತು ನಿರ್ಲಕ್ಷ್ಯ ಧೋರಣೆಯಿಂದಾಗಿ ಸೇತುವೆ ನಿರ್ಮಾಣದ ಕೂಗು ಕೂಗಾಗಿಯೇ ಉಳಿದಿದೆ.ವೇದ ಗ್ರಾಮ ಬಸವಾಪಟ್ಟಣ ಮತ್ತು ನಾದ ಗ್ರಾಮ ರುದ್ರಪಟ್ಟಣಕ್ಕೂ ಸಾಂಸ್ಕೃತಿಕ ಮತ್ತು ಐತಿಹಾಸಿಕ ನಂಟು ಇದೆ.ಹಿಂದೆ ಬಸವಾಪಟ್ಟಣ ಆಳುತ್ತಿದ್ದ ಬಸಪ್ಪನಾಯಕ ಹಾಗೂ ರುದ್ರಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ ರುದ್ರಪ್ಪನಾಯಕ ಇವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇತ್ತು ಎನ್ನಲಾಗಿದೆ. ವೇದಧ್ಯಾಯನದಲ್ಲಿ ಪರಿಣಿತರಾಗಿದ್ದ ಬಸವಾಪಟ್ಟಣದ ಕೋಟೆ ನಾಗರಿಕರು ಹಾಗೂ ಶಾಸ್ತ್ರೀಯ ಸಂಗೀತ ಪರಂಪರೆಯ ದಿಗ್ಗಜರನ್ನು ಹೊಂದಿದ್ದ ರುದ್ರಪಟ್ಟಣದ ಗ್ರಾಮಸ್ಥರ ನಡುವಿನ ಸಾಂಸ್ಕೃತಿಕ ನಂಟು, ಸ್ನೇಹ ಸೇತು ಕೂಡ ಗಟ್ಟಿಯಾಗಿ ಬೆಳೆದು ಬಂದಿತ್ತು.ಅಭಿವೃದ್ದಿಗೆ ಹಿನ್ನಡೆ: ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿದ್ದ ಬಸವಾಪಟ್ಟಣದಲ್ಲಿ ವ್ಯಾಪಾರ, ವಹಿವಾಟು ಕುಂಠಿತವಾಗುತ್ತಾ ಅಭಿವೃದ್ದಿ ಕುಂಠಿತಗೊಂಡಿದೆ. ಸಂತೆ ಸೇರಿದಂತೆ ಇತರ ಕೆಲಸಗಳಿಗೆ ರುದ್ರಪಟ್ಟಣ ಸುತ್ತಲಿನ ಗ್ರಾಮಸ್ಥರು ಬಸವಾಪಟ್ಟಣಕ್ಕೆ ಬರಲು ನದಿ ದಾಟಬೇಕು. ಹಾಗಾಗಿ ಬಹುತೇಕ ಜನರು ಅನಿವಾರ್ಯವಾಗಿ ದೂರದ ರಾಮನಾಥಪುರ ಅವಲಂಬಿಸಬೇಕಾದ ಸ್ಥಿತಿ ಬಂದಿದೆ.ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.