ಭಾನುವಾರ, ಮೇ 22, 2022
21 °C

102 ಪ್ರಕರಣ ಇತ್ಯರ್ಥ: ಭಾಸ್ಕರ್‌ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: `ನಗರದಲ್ಲಿ ನಡೆದ ಎರಡು ದಿನಗಳ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ 102 ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್‌ರಾವ್ ಹೇಳಿದರು.ಬಾಕಿ ಇರುವ ಪ್ರಕರಣಗಳ ಪೈಕಿ 33 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಉಳಿದ ಪ್ರಕರಣಗಳ ಬಗೆಗೆ ಸಂಬಂಧಪಟ್ಟವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಂಗಳವಾರ ಒಟ್ಟು 62 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 56 ಅರ್ಜಿಗಳನ್ನು ಬಗೆಹರಿಸಲಾಗಿದೆ. ಬುಧವಾರ ಮಧ್ಯಾಹ್ನದವರೆಗೆ 14 ಅರ್ಜಿಗಳು ಬಂದಿದ್ದು, ಇದರಲ್ಲಿ 13 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.ಮ್ಯುಟೇಶನ್ ಹಾಗೂ ಜಮೀನು ಸರ್ವೇಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಚರಂಡಿ ಶುಚಿಗೊಳಿಸುವುದು ಹಾಗೂ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಿ ಮರಳಿ ಶಾಲೆಗೆ ಸೇರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.30 ರಿಂದ 35 ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಚ್ಚಳಿಕೆ ಬರೆಸಿಕೊಂಡಿದ್ದು, ಪ್ರಕರಣಗಳನ್ನು ವಿಲೇವಾರಿ ಮಾಡಲು ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.ರಾಜ್ಯ ಲೋಕಾಯುಕ್ತದಲ್ಲಿ ಕಳೆದ ಫೆಬ್ರುವರಿ ಅಂತ್ಯದವರೆಗೆ ಒಟ್ಟು 14,500 ಅರ್ಜಿಗಳು ಬಾಕಿ ಉಳಿದಿದ್ದವು. ಈ ಪೈಕಿ 4,558 ಲೋಕಾಯುಕ್ತಕ್ಕೆ ಸೇರಿದ್ದು, ಇನ್ನುಳಿದವು ಉಪ ಲೋಕಾಯುಕ್ತಕ್ಕೆ ಸೇರಿವೆ. ಲೋಕಾಯುಕ್ತದಲ್ಲಿ ಇರುವ ಅರ್ಜಿಗಳ ಪೈಕಿ 1,500 ಅರ್ಜಿಗಳನ್ನು ಬಗೆಹರಿಸಲಾಗಿದೆ. ಬರುವ ಡಿಸೆಂಬರ್‌ವರೆಗೆ 2011-12 ರ ವರೆಗಿನ ಅರ್ಜಿಗಳನ್ನು ಪರಿಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದರು.ಅತೃಪ್ತಿ: ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ನಗರದ ಮೆಟ್ರಿಕ್ ನಂತರದ ಎಸ್.ಸಿ.,ಎಸ್.ಟಿ. ಬಾಲಕಿಯರ ವಸತಿ ನಿಲಯದ ಅವ್ಯವಸ್ಥೆ ಬಗೆಗೆ ಅತೃಪ್ತಿ ವ್ಯಕ್ತಪಡಿಸಿದರು.ಬುಧವಾರ ಬೆಳಿಗ್ಗೆ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಮೇಲ್ವಿಚಾರಕಿ ಇರಲಿಲ್ಲ. 31 ಜನ ಬಾಲಕಿಯರಿಗೆ ಎರಡು ಕೋಣೆಗಳು ಮಾತ್ರ ಇದ್ದು, ಒಂದು ಕೊಣೆಯಲ್ಲಿ 15 ಜನ ವಾಸಿಸುವ ಪರಿಸ್ಥಿತಿ ಇದೆ. ಮಕ್ಕಳಿಗೆ ಸಾಬೂನು ಹಾಗೂ ತಲೆಗೆ ಹಚ್ಚಿಕೊಳ್ಳಲು ಎಣ್ಣೆ ಸಹ ನೀಡದಿರುವ ಬಗ್ಗೆ ದೂರುಗಳು ಕೇಳಿ ಬಂದವು. ವಸತಿ ನಿಲಯ ವ್ಯವಸ್ಥೆ ಸುಧಾರಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಮೆಟ್ರಿಕ್ ಪೂರ್ವ ಎಸ್.ಸಿ.,ಎಸ್.ಟಿ. ಬಾಲಕರ ವಸತಿ ನಿಲಯದಲ್ಲಿ ಉತ್ತಮ ವ್ಯವಸ್ಥೆ ಕಂಡು ಬಂದಿತು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.