ಬುಧವಾರ, ಮೇ 18, 2022
23 °C

13 ಬೇಡಿಕೆ ಮುಂದಿಟ್ಟ ಚಲನಚಿತ್ರ ವಾಣಿಜ್ಯ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರೋದ್ಯಮದ ವ್ಯಾಪಾರ ವಹಿವಾಟುಗಳಿಗೆ ಮೌಲ್ಯವರ್ಧಿತ ತೆರಿಗೆಯಿಂದ ವಿನಾಯಿತಿ, ಕನಿಷ್ಠ 75 ಚಿತ್ರಗಳಿಗೆ ಸಹಾಯಧನ, ಉದ್ದೇಶಿತ ಚಿತ್ರನಗರಿಗೆ 50 ಕೋಟಿ ರೂಪಾಯಿ ನೀಡುವುದು ಸೇರಿದಂತೆ 13 ಬೇಡಿಕೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಕಲ್ಪಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ.ಮಂಡಳಿಯ ಅಧ್ಯಕ್ಷ ಬಸಂತಕುಮಾರ್ ಪಾಟೀಲ ನೇತೃತ್ವದ ನಿಯೋಗವು ಮಂಗಳವಾರ ಇಲ್ಲಿ ಗೃಹ ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿ ಚಿತ್ರೋದ್ಯಮದ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ, ಚಿತ್ರೋದ್ಯಮದ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತಂದು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.ಚಿತ್ರರಂಗದಲ್ಲಿ ದುಡಿದು ಅಶಕ್ತರಾಗಿರುವ ಕಲಾವಿದರ ನೆರವಿಗಾಗಿ ಚಲನಚಿತ್ರೋದ್ಯಮದ ಕ್ಷೇಮನಿಧಿಗೆ ಹೆಚ್ಚುವರಿಯಾಗಿ ನಾಲ್ಕು ಕೋಟಿ ರೂಪಾಯಿ ನೀಡಬೇಕು. ಈಗಾಗಲೇ ಒಂದು ಕೋಟಿ ರೂಪಾಯಿ ಘೋಷಿಸಿದ್ದು, ಇನ್ನೂ ಬಿಡುಗಡೆಯಾಗಿಲ್ಲ. ಹಿಂದಿನ ಬಾಕಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ಈ ಸಲ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿದರು.ಹೆಸರುಘಟ್ಟದಲ್ಲಿ ಚಿತ್ರನಗರಿಗೆಂದು 400 ಎಕರೆ ಜಮೀನು ಮೀಸಲಿಟ್ಟಿದ್ದು, ಆ ಜಾಗದಲ್ಲೇ ಚಿತ್ರನಗರಿಯನ್ನು ಸ್ಥಾಪಿಸಬೇಕು. ಸರ್ಕಾರ ಮತ್ತು ಉದ್ಯಮದ ಸಹಯೋಗದೊಂದಿಗೆ ಆದಷ್ಟು ಬೇಗ ಚಿತ್ರನಗರಿ ನಿರ್ಮಿಸಬೇಕು, ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ಜಾಗ ನೀಡಿದ್ದು, ಆಯವ್ಯಯದಲ್ಲಿ ಹಣ ನೀಡಬೇಕು ಎಂದು ಕೋರಿದರು.ಕಂಠೀರವ ಸ್ಟುಡಿಯೊದಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ನಾಲ್ಕು ಮಹಡಿಗಳನ್ನು ಮೀಸಲಿಟ್ಟು, ಅದಕ್ಕಾಗಿ 10 ಕೋಟಿ ರೂಪಾಯಿ ಮಂಜೂರು ಮಾಡಬೇಕು. ಹೊರಾಂಗಣ ಘಟಕಗಳ ಉಪಕರಣಗಳಿಗೆ ಸಹಾಯಧನ ನೀಡಬೇಕು, ಚಿತ್ರೀಕರಣಕ್ಕೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿಯಡಿ ಚಲನಚಿತ್ರಗಳ ಚಿತ್ರೀಕರಣಕ್ಕೆ ಮಾತ್ರ ಅವಕಾಶ ಕಲ್ಪಿಸುವುದರ ಜೊತೆಗೆ ಪ್ರದರ್ಶನ ತೆರಿಗೆಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರೂ ಆದ ನಟ ಜಗ್ಗೇಶ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.