ಸೋಮವಾರ, ಮಾರ್ಚ್ 1, 2021
23 °C

145 ಲಕ್ಷ ಸ್ಮಾರ್ಟ್‌­ಫೋನ್‌ ಮಾರಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

145 ಲಕ್ಷ ಸ್ಮಾರ್ಟ್‌­ಫೋನ್‌ ಮಾರಾಟ!

ಮೊಬೈಲ್‌ ಇಂಟರ್‌ನೆಟ್‌ ಜನಪ್ರಿ­ಯತೆ ಮತ್ತು ‘3ಜಿ’ ದತ್ತಾಂಶ ಸೇವೆ­ಗಳಿಂದ ದೇಶ­­ದಲ್ಲಿ ಸ್ಮಾರ್ಟ್‌­ಫೋನ್‌ಗಳ ಮಾ­ರಾಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಜನವರಿ–ಮಾರ್ಚ್‌ ತ್ರೈಮಾ­ಸಿ­ಕದಲ್ಲಿ ಒಟ್ಟು 145 ಲಕ್ಷ ಸ್ಮಾರ್ಟ್‌­ಫೋನ್‌ಗಳು ಮಾರಾಟವಾ­ಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 219ರಷ್ಟು ಹೆಚ್ಚಳ!‘3ಜಿ’ ಜಾದೂ

ವಿಶೇಷವೆಂದರೆ ಒಟ್ಟು ಮಾರಾ­ಟವಾದ ಹ್ಯಾಂಡ್‌ಸೆಟ್‌ಗಳಲ್ಲಿ ಅರ್ಧಕ್ಕಿಂ­ತಲೂ ಹೆಚ್ಚಿನವು ‘3ಜಿ’ ಸೌಲಭ್ಯ ಹೊಂದಿ­ರುವ ಫೋನ್‌ಗಳು.

‘ರೂ.2ರಿಂದ ರೂ.3 ಸಾವಿರಕ್ಕೆ ಸ್ಮಾರ್ಟ್‌­ಪೋನ್‌ಗಳು ಲಭಿಸುತ್ತಿವೆ. ಯುವಜನ­ರಲ್ಲಿ ಫೇಸ್‌ಬುಕ್‌, ಟ್ವಿಟರ್‌­ನಂತಹ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚುತ್ತಿದೆ. ಕೈಗೆಟಕುವ ದರದಲ್ಲಿ ‘3ಜಿ’ ಅಂತರ್ಜಾಲ ಸಂಪರ್ಕ ಸೇವೆಯೂ ಲಭ್ಯವಿದೆ.ಜತೆಗೆ ದೊಡ್ಡ ದೃಶ್ಯ ಪರದೆಯ ಫೋನ್‌ಗಳನ್ನು ಖರೀದಿ­ಸ­ಬೇಕೆಂಬ ಪ್ರವೃತ್ತಿ ಕೂಡ ಸ್ಮಾರ್ಟ್‌­ಫೋನ್‌ ಮಾರಾಟಕ್ಕೆ ಪ್ರಮುಖ ಕಾರಣ’ ಎನ್ನುತ್ತದೆ ಸೈಬರ್  ಮೀಡಿ­­ಯಾ ರೀಸರ್ಚ್‌ನ (ಎಸ್‌ಎಂಆರ್‌) ಇತ್ತೀಚಿನ ವರದಿ.ಹಾಗೆ ನೋಡಿದರೆ ಸ್ಮಾರ್ಟ್‌ಫೋನ್‌ ಮಾರಾಟ ತ್ರೈಮಾಸಿಕದಿಂದ ತ್ರೈಮಾ­ಸಿಕಕ್ಕೆ ಶೇ 1.9ರಷ್ಟು ಏರಿಕೆ ಕಂಡಿದೆ. 2013ನೇ ಸಾಲಿನ ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ 142 ಲಕ್ಷ ಸ್ಮಾರ್ಟ್‌ಫೋನ್‌ಗಳು ಮಾರಾಟ­ವಾಗಿದ್ದವು. 2014ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಟ್ಟು 589 ಲಕ್ಷ ಮೊಬೈಲ್‌ ಹ್ಯಾಂಡ್‌ಸೆಟ್‌ಗಳು ಮಾರಾಟ­ವಾಗಿವೆ. 2013ನೇ ಸಾಲಿಗೆ ಹೋಲಿ­ಸಿದರೆ ಇದು ಶೇ 8.9ರಷ್ಟು ಅಧಿಕ ಪ್ರಮಾಣ. ಇದೇ ವೇಳೆ, ಫೀಚರ್‌ ಫೋನ್‌ಗಳ ಮಾರಾಟ ಶೇ 6.5ರಷ್ಟು ಕುಸಿದಿದ್ದು 444 ಲಕ್ಷಕ್ಕೆ ಇಳಿಕೆ ಕಂಡಿದೆ.‘ಮೊಬೈಲ್‌ ಮೂಲಕ ಇಂಟರ್‌ನೆಟ್‌ ದತ್ತಾಂಶ ಬಳಸುತ್ತಿರುವವರೇ ಸ್ಮಾರ್ಟ್‌­ಫೋನ್‌ನ ಪ್ರಮುಖ ಗ್ರಾಹಕರು.  ಬಹುವಿಧ ಉದ್ದೇಶಗಳಿಗಾಗಿ ಇವರು ಸ್ಮಾರ್ಟ್‌­ಫೋನ್‌ ಬಳಸುತ್ತಾರೆ. ತಮ್ಮ ಸೇವಾ ಆಯ್ಕೆ ಬದಲಾದ ಹಾಗೆ ಹ್ಯಾಂಡ್‌ಸೆಟ್‌ ಕೂಡ ಬದಲಿಸುತ್ತಿರು­ತ್ತಾರೆ. ಹೀಗಾಗಿ ಕಡಿಮೆ ದರದಲ್ಲಿ ಹೆಚ್ಚಿನ ತಾಂತ್ರಿಕ ಸೌಲಭ್ಯ ಲಭ್ಯವಿರುವ ಹ್ಯಾಂಡ್‌ಸೆಟ್‌ ಮಾರಾಟ ಸಹಜವಾ­ಗಿಯೇ ಹೆಚ್ಚಿರು­ತ್ತದೆ’ ಎನ್ನು­ತ್ತಾರೆ ‘ಸಿಎಂಆರ್‌’ನ ವಿಶ್ಲೇಷಕ ತರುಣ್‌ ಪಾಠಕ್‌.ಸ್ಯಾಮ್ಸಂಗ್‌ ನಂ.1

ದೇಶದ ಸ್ಮಾರ್ಟ್‌ಫೋನ್‌ ಮಾರು­ಕಟ್ಟೆಯಲ್ಲಿ  ಶೇ 43.2ರಷ್ಟು ಪಾಲಿ­ನೊಂ­ದಿಗೆ ಸ್ಯಾಮ್ಸಂಗ್‌ ನಂ.1 ಸ್ಥಾನದಲ್ಲಿದೆ. ಶೇ 17.5ರಷ್ಟು ಮತ್ತು ಶೇ 5.2ರಷ್ಟು ಪಾಲು ಹೊಂದಿರುವ ಮೈಕ್ರೊಮ್ಯಾಕ್ಸ್‌ ಮತ್ತು ಕಾರ್ಬನ್‌ ಕಂಪೆನಿಗಳು ನಂತರದ ಸ್ಥಾನಗಳಲ್ಲಿವೆ. ದೇಶದಲ್ಲಿ ಒಟ್ಟು  ಮಾರಾಟವಾ­ಗುತ್ತಿರುವ ಎಲ್ಲ ಶ್ರೇಣಿಯ ಮೊಬೈಲ್‌ ಹ್ಯಾಂಡ್‌ಸೆಟ್‌­ಗಳಲ್ಲಿಯೂ ಸಹ ಸ್ಯಾಮ್ಸಂಗ್‌ ಮೊದಲ ಸ್ಥಾನದಲ್ಲಿದೆ. ಸಮಗ್ರ ಮಾರುಕಟ್ಟೆಯಲ್ಲಿ ಅದರ ಪಾಲು ಶೇ 20.3ರಷ್ಟಿದೆ.  ಶೇ 17.6ರಷ್ಟು ಪಾಲು ಹೊಂದಿರುವ ನೋಕಿಯಾ ಮತ್ತು ಶೇ 11.2ರಷ್ಟು ಪಾಲು ಹೊಂದಿರುವ ಮೈಕ್ರೊಮ್ಯಾಕ್ಸ್‌ ನಂತರದ ಸ್ಥಾನಗಳಲ್ಲಿವೆ.72 ಕೋಟಿ ಚಂದಾದಾರರು

ದೇಶದ ‘ಜಿಎಸ್‌ಎಂ’ ಚಂದಾದಾರರ ಸಂಖ್ಯೆ ಏಪ್ರಿಲ್‌ನಲ್ಲಿ 49.7 ಲಕ್ಷದಷ್ಟು ಏರಿಕೆ ಕಂಡಿದ್ದು 72.69 ಕೋಟಿ ತಲು­ಪಿದೆ ಎಂದು ಭಾರತೀಯ ಮೊಬೈಲ್‌ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ. ಮಾರ್ಚ್‌ ಅಂತ್ಯಕ್ಕೆ ‘ಜಿಎಸ್‌ಎಂ’ ಚಂದಾದಾರರ ಸಂಖ್ಯೆ 72.19 ಕೋಟಿ­ಯಷ್ಟಿತ್ತು.ಏಪ್ರಿಲ್‌ನಲ್ಲಿ ಭಾರ್ತಿ ಏರ್‌ಟೆಲ್‌ನ ಬಳಕೆದಾರರ ಸಂಖ್ಯೆ 11.92 ಲಕ್ಷದಷ್ಟು ಹೆಚ್ಚಿದ್ದು, 20.65 ಕೋಟಿಗೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಅತಿ ಹೆಚ್ಚು ಚಂದಾದಾರರನ್ನು ಏರ್‌ಟೆಲ್‌ ಹೊಂದಿ­ದ್ದು ಶೇ 28.42ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.ಶೇ 23.01ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ವೋಡಾಫೋನ್‌ ಬಳಕೆದಾರರ ಸಂಖ್ಯೆ ಏಪ್ರಿಲ್‌ನಲ್ಲಿ 7.31ಲಕ್ಷದಷ್ಟು ಹೆಚ್ಚಿದ್ದು, 16.72 ಕೋಟಿಗೆ ಏರಿಕೆ ಕಂಡಿದೆ. ಐಡಿಯಾ ಸೆಲ್ಯುಲರ್‌ ತನ್ನ ಸೇವಾ ವ್ಯಾಪ್ತಿಗೆ 7.70 ಲಕ್ಷ ಗ್ರಾಹಕರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಬಳಕೆದಾರರ ಸಂಖ್ಯೆಯನ್ನು 13.65 ಕೋಟಿಗೆ ಹೆಚ್ಚಿಸಿಕೊಂಡಿದೆ.ಏರ್‌ಸೆಲ್‌ ಮತ್ತು ಯುನಿನಾರ್‌ ಏಪ್ರಿಲ್‌ನಲ್ಲಿ ಕ್ರಮವಾಗಿ 9.98 ಲಕ್ಷ ಮತ್ತು 9.68 ಲಕ್ಷ ಚಂದಾ­ದಾರರನ್ನು ಸೇರ್ಪಡೆ ಮಾಡಿಕೊಂಡಿವೆ. ವಿಡಿಯೊಕಾನ್‌ 2.95 ಲಕ್ಷ ಚಂದಾದಾ­ರರನ್ನು ಸೇರ್ಪಡೆ ಮಾಡಿಕೊಂಡಿದ್ದು ಗ್ರಾಹಕರ ಸಂಖ್ಯೆಯನ್ನು 52.82 ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ. ‘ಎಂಟಿಎನ್‌­ಎಲ್‌’ ಗ್ರಾಹಕರ ಸಂಖ್ಯೆ 12 ಸಾವಿರದಷ್ಟು ಹೆಚ್ಚಿದ್ದು 32.57 ಲಕ್ಷಕ್ಕೆ ಏರಿಕೆ ಕಂಡಿದೆ. ಆದರೆ, ಸರ್ಕಾರಿ ಸ್ವಾಮ್ಯದ ‘ಬಿಎಸ್­ಎನ್‌ಎಲ್‌’ ಏಪ್ರಿಲ್‌ ತಿಂಗಳ ಚಂದಾ­ದಾರರ ಸಂಖ್ಯೆಯನ್ನೇ ಬಹಿರಂಗಪ­ಡಿಸಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.