ಭಾನುವಾರ, ಜುಲೈ 25, 2021
25 °C
ಭಾರತೀಯ ರೈಲ್ವೆ ಸಾಗಿ ಬಂದ ದಾರಿ..., ಮಹಾತ್ಮಗಾಂಧಿ, ನೆಹರು ಸಂಚರಿಸಿದ ಮೊದಲ ರೈಲು...

160 ವರ್ಷಗಳ ಅಪರೂಪದ ಛಾಯಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

160 ವರ್ಷಗಳ ಅಪರೂಪದ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು:  ಬೋರಿಬುಂದರ್‌ನಿಂದ ಥಾಣೆವರೆಗೂ 1853 ರಲ್ಲಿ ಸಂಚರಿಸಿದ ಮೊದಲ ಭಾರತೀಯ ರೈಲು, ಸ್ವಾತಂತ್ರ್ಯ ದೊರೆತು ದೇಶ ಇಬ್ಭಾಗವಾದ ಸಂದರ್ಭದಲ್ಲಿ ಅಂಬಾಲಾದಿಂದ ಹೊರಟ ರೈಲು ತುಂಬಿ ತುಳುಕುತ್ತಿರುವ ದೃಶ್ಯ ಅಂದಿನ ದೇಶ ವಿಭಜನೆಯ ಕರಾಳ ಅಧ್ಯಾಯವನ್ನು ನೆನಪಿಸುತ್ತದೆ. ಹೀಗೆ ಅನೇಕ ಛಾಯಾಚಿತ್ರಗಳು ಸ್ವಾತಂತ್ರ್ಯಪೂರ್ವ ಇತಿಹಾಸಕ್ಕೆ ಸಾಕ್ಷಿಯಾಗಿವೆ.ನೈರುತ್ಯ ರೈಲು ವಿಭಾಗವು ನಗರದ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಮಂಗಳವಾರದಿಂದ ಆಯೋಜಿಸಿರುವ ಭಾರತೀಯ ರೈಲ್ವೆಯು ಸಾಗಿಬಂದ 160 ವರ್ಷಗಳ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ ಕಂಡುಬಂದ ನೋಟಗಳು.ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಹುರಿದುಂಬಿಸಲು ರೈಲಿನಿಂದ ಇಳಿಯುತ್ತಿರುವ ಮಹಾತ್ಮ ಗಾಂಧೀಜಿ, ಸುಭಾಸ್ ಚಂದ್ರ ಬೋಸ್ ಅವರು ರೈಲು ನಿಲ್ದಾಣದಲ್ಲಿ ಭಾಷಣ ಮಾಡುತ್ತಿರುವ ದೃಶ್ಯ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್ ಅವರು ಕೈಗೆ ಕೋಳ ತೊಟ್ಟು ರೈಲು ನಿಲ್ದಾಣದಲ್ಲಿ ಕುಳಿತಿರುವ ದೃಶ್ಯ, ಹಳೆಯ ದೆಹಲಿ ರೈಲು ನಿಲ್ದಾಣ, 1906 ರಲ್ಲಿನ ಹೌರಾ ರೈಲು ನಿಲ್ದಾಣ, ಜವಾಹರಲಾಲ್ ನೆಹರು ಅವರು ರೈಲಿಗೆ ಚಾಲನೆ ನೀಡಿದ್ದು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ನಿಲ್ದಾಣವನ್ನು ಪರಿಶೀಲಿಸುತ್ತಿರುವುದು ಇವೆಲ್ಲ ಹಿಂದಿನ ಇತಿಹಾಸವನ್ನು ಮರುನೆನಪು ಮಾಡುತ್ತವೆ.ಸ್ವಾತಂತ್ರ್ಯಪೂರ್ವದ ರೈಲಿನ ಚಿತ್ರಗಳ ಜತೆಗೆ ಅಂದಿನ ಜನಜೀವನವೂ ಛಾಯಾಚಿತ್ರಗಳಲ್ಲಿ ವ್ಯಕ್ತವಾಗುತ್ತದೆ. ಸ್ಟೇಶನ್ ಮಾಸ್ಟರ್ ರೈಲು ನಿಲ್ದಾಣದ ತಮ್ಮ ಕಚೇರಿಯಲ್ಲಿ ಕುಳಿತು ತಲೆಗೆ ರುಮಾಲು ಸುತ್ತಿ, ಕೋಟು ತೊಟ್ಟು ಮೇಣದ ಬತ್ತಿಯಲ್ಲಿ ಕೆಲಸ ಮಾಡುತ್ತಿರುವುದು. ರೈಲಿಗೆ ಸಿಗ್ನಲ್ ನೀಡುತ್ತಿರುವ ಸಿಗ್ನಲ್ ಮೆನ್ ಹೀಗೆ ಹಿಂದಿನ ಜನರ ಸರಳ ಜೀವನ ಕಣ್ಮುಂದೆ ಬಂದು ನಿಲ್ಲುತ್ತದೆ.ನಮ್ಮ ದೇಶದ ಇತಿಹಾಸವನ್ನು ನೆನಪಿಸುವಂತಹ ಒಟ್ಟು 200 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ಮಿತ್ತಲ್ ಅವರು, `ನಮ್ಮ ದೇಶದಲ್ಲಿ 1853 ರಲ್ಲಿ ಮೊದಲ ರೈಲು ಆರಂಭವಾಯಿತು. ಭಾರತೀಯ ರೈಲಿಗೆ 163 ವರ್ಷಗಳ ಇತಿಹಾಸವಿದೆ. ಮೊದಲಿನ ರೈಲು ಮತ್ತು ರೈಲು ನಿಲ್ದಾಣಗಳಿಗಿಂತ ಈಗ ಸಾಕಷ್ಟು ಅಭಿವೃದ್ಧಿ ಹೊಂದಿದೆ' ಎಂದರು.`ರೈಲು ಟಿಕೆಟ್‌ನ ದರವೂ ಕಡಿಮೆ ಇರುವುದರಿಂದ ಹೆಚ್ಚಿನ ಜನರು ರೈಲಿನಲ್ಲಿಯೇ ಸಂಚರಿಸುತ್ತಾರೆ. ನೈರುತ್ಯ ರೈಲ್ವೆ ವಿಭಾಗದಿಂದ ಅನೇಕ ಯೋಜನೆಗಳು ನಡೆಯುತ್ತಿವೆ. ಅದರಿಂದ ಜನರಿಗೆ ಇನ್ನೂ ಹೆಚ್ಚಿನ ಉಪಯೋಗವಾಗಲಿದೆ' ಎಂದರು.ನೈರುತ್ಯ ರೈಲ್ವೆಯ ಪಬ್ಲಿಸಿಟಿ ಇನ್ಸ್‌ಪೆಕ್ಟರ್ ಸಿ.ನರೇಂದ್ರ, `ಆರ್ಕಿವ್ಸ್ ಆಫ್ ಇಂಡಿಯನ್ ರೈಲ್ವೆಯಿಂದ ಈ ಅಪರೂಪದ ಚಿತ್ರಗಳನ್ನು ತರಿಸಲಾಗಿದೆ. ದೇಶದ  ನೈರುತ್ಯ ರೈಲ್ವೆಯ ಎಲ್ಲಾ ವಲಯಗಳಲ್ಲಿ ಪ್ರದರ್ಶನವನ್ನು ಮಾಡಲಾಗುವುದು. ಈಗಾಗಲೇ ಮುಂಬೈ, ದೆಹಲಿಗಳಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿಂದ ಮುಂದೆ ಚೆನ್ನೈನಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಆಗಸ್ಟ್ ತಿಂಗಳ ಕೊನೆಯವರೆಗೆ ಈ ಪ್ರದರ್ಶನವು ದೇಶದ ಎಲ್ಲೆಡೆ ಸಂಚರಿಸಲಿದೆ' ಎಂದು ಮಾಹಿತಿ ನೀಡಿದರು. ಪ್ರದರ್ಶನವು ಉಚಿತವಾಗಿದ್ದು, ಜುಲೈ 1 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ.ಅಂಚೆಚೀಟಿ ಸಂಗ್ರಹ

1937 ರಿಂದ ಮೊದಲ ರೈಲ್ವೆ ಅಂಚೆ ಚೀಟಿಯಿಂದ ತೀರಾ ಇತ್ತೀಚಿನವರೆಗೆ ಅಂಚೆ ಚೀಟಿ ಸಂಗ್ರಹಿಸಿದ್ದೇನೆ. ಇದೊಂದು ಹವ್ಯಾಸ ಅಷ್ಟೆ. ದೇಶದ ಎಲ್ಲ ಭಾಗಗಳಲ್ಲಿ ಕಾರ್ಯ ನಿಮಿತ್ತ ವರ್ಗಾವಣೆಯಾಗುತ್ತದೆ. ಆಗ, ಅಲ್ಲಿ ವಿಶೇಷವೆನಿಸಿದ ರೈಲು ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದೇನೆ. ಒಟ್ಟು 3,000 ಅಂಚೆ ಚೀಟಿಗಳಿವೆ

- ಎಸ್.ಲೂಯಿಸ್ ಅಮುಥನ್, ರೈಲ್ವೆ ಸುರಕ್ಷತಾ ಪಡೆ, ವಿಭಾಗೀಯ ಭದ್ರತಾ ಆಯುಕ್ತಸಾಕಷ್ಟು ಅಭಿವೃದ್ಧಿ

ಹಿಂದೆ ಸಂಚರಿಸುತ್ತಿದ್ದ ರೈಲಿಗಿಂತಲೂ ಈಗ ನಾವು ಸಂಚರಿಸುವ ರೈಲು ಸಾಕಷ್ಟು ಅಭಿವೃದ್ಧಿಯಾಗಿದೆ.  ಮೊದಲು ಸಾಕಷ್ಟು ಪ್ರಮಾಣದ್ಲ್ಲಲಿ ಉಗಿ ಉಗುಳುತ್ತ ಹೋಗುತ್ತಿದ್ದ ರೈಲಿನ ಛಾಯಾಚಿತ್ರ ನೋಡಲು ನಿಜಕ್ಕೂ ಆನಂದವಾಗುತ್ತದೆ.

-ಮೇಘಾ, ವಿದ್ಯಾರ್ಥಿನಿಇತಿಹಾಸದ ಅರಿವು


ಇವು ಅಪರೂಪದ ಛಾಯಾಚಿತ್ರಗಳು. ನಮ್ಮ ದೇಶದ ಹಿಂದಿನ ಇತಿಹಾಸವನ್ನು ತಿಳಿಯಬಹುದು. ನಮ್ಮ ಅನೇಕ ನಾಯಕರು ರೈಲಿನಲ್ಲಿ ಸಂಚರಿಸಿ, ಸ್ವಾತಂತ್ರ್ಯವನ್ನು ಪಡೆಯಲು ಹೋರಾಡಿದ ಅನೇಕ ಅಪರೂಪದ ಕ್ಷಣಗಳ ದರ್ಶನವಾಯಿತು.

-ಶಿಲ್ಪಶ್ರೀ, ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.