ಬುಧವಾರ, ಏಪ್ರಿಲ್ 21, 2021
31 °C

18 ದಸಂಸ ಕಾರ್ಯಕರ್ತರ ಬಂಧನ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ನಗರಕ್ಕೆ ಶನಿವಾರ ಆಗಮಿಸಿದ್ದ ಜಗದೀಶ ಶೆಟ್ಟರ್ ಅವರಿಗೆ ಎದುರಾಗಿದ್ದು ಮಾತ್ರ ಪ್ರತಿಭಟನೆ ಹಾಗೂ ಮನವಿಗಳ ಮಹಾಪೂರ!

ಜಿಲ್ಲಾಡಳಿತ ಭನವದ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಶೆಟ್ಟರ್ ತಮ್ಮ ಭಾಷಣ ಆರಂಭ ಮಾಡುತ್ತಿದ್ದಂತೆಯೇ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದ ಕಾರ್ಯಕರ್ತರು ವೇದಿಕೆಯ ಮುಂಭಾಗದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಸ್ಥಳದಲ್ಲಿದ್ದ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರು. ಆದರೂ, ಕಾರ್ಯಕರ್ತರು ಸಿಎಂ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ 18 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಎ.ಜೆ. ಸದಾಶಿವ ಆಯೋಗ ಸಲ್ಲಿಸಿದ ವರದಿಯನ್ನು ಸದನದಲ್ಲಿ ಅನುಮೋದಿಸಿ, ಅನುಷ್ಠಾನಗೊಳಿಸುವಂತೆ ಕೇಂದ್ರಕ್ಕೆ ವರದಿ ಕಳುಹಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷ ಕಳೆದರೂ ಒಳಮೀಸಲಾತಿಯ ವರ್ಗೀಕರಣ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜ್ಯದ ಪರಿಶಿಷ್ಟರಿಗೆ ಮಾಡಿದ ದೊಡ್ಡ ಅನ್ಯಾಯ. ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸದೇ ಹೋದರೆ ರಾಜ್ಯದಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಗುಡಿಸಲು ನಿವಾಸಿಗಳಿಗೆ ಈ ಕೂಡಲೇ ಹಕ್ಕುಪತ್ರ ವಿತರಣೆ ಮಾಡಬೇಕು. ಬಗರ್‌ಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಲು ಆದೇಶ ನೀಡಬೇಕು. ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಭವನದ ಜಾಗವನ್ನು ನಗರದ ಮಧ್ಯಭಾಗಕ್ಕೆ ಸ್ಥಳಾಂತರಿಸಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ರಾಜ್ಯ ಸಂಘಟನಾ ಸಂಚಾಲಕ ಆಲೂರು ನಿಂಗರಾಜ್, ಬಿ. ದುಗ್ಗಪ್ಪ, ಕೆ.ಎಂ. ಅಂಜಿನಪ್ಪ, ಪುಣಬಗಟ್ಟಿ ನಿಂಗಪ್ಪ, ಹೂವಿನಮಡು ಅಂಜಿನಪ್ಪ, ಎಂ. ರವಿ, ಕಬ್ಬಳ್ಳಿ ಮೈಲಪ್ಪ, ಚಿಕ್ಕನಹಳ್ಳಿ ಬಿ. ಹನುಮಂತಪ್ಪ, ಸಮೀವುಲ್ಲಾ, ವಾಸುದೇವ್, ಆನಗೋಡು ಸುರೇಶ್, ಬೆಳವನೂರು ದೇವೇಂದ್ರಪ್ಪ, ಅಳಗವಾಡಿ ನಿಂಗರಾಜ್ ನೇತೃತ್ವ ವಹಿಸಿದ್ದರು.ಅಸಂಘಟಿತ ವಲಯಕ್ಕೆ ಸೇರಿಸಿ...

ಮಂಡಕ್ಕಿಭಟ್ಟಿ ಕಾರ್ಮಿಕರನ್ನು ಅಸಂಘಟಿತ ವಲಯಕ್ಕೆ ಸೇರಿಸುವ ಮೂಲಕ ಅವರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಂಡಕ್ಕಿಭಟ್ಟಿ ಕಾರ್ಮಿಕರ ಫೆಡರೇಷನ್ ಕಾರ್ಯಕರ್ತರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಕಾರ್ಮಿಕರಿಗೆ ಅಪಘಾತ ಪರಿಹಾರ ವಿಮೆ ನೀಡಬೇಕು. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಆಶ್ರಯಮನೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಮಹ್ಮದ್ ಶೌಖತ್, ಸೈಯದ್, ಖಾಜಾಪೀರ್, ಆವರಗೆರೆ ವಾಸು, ಬಿ.ಎಸ್. ಅಬ್ದುಲ್ ರೆಹಮಾನ್ ಇದ್ದರು.ಕನಿಷ್ಠ ಕೂಲಿ ನೀಡಿ: ಸರ್ಕಾರ ಆಶಾ ಕಾರ್ಯಕರ್ತರಿಗೆ ರೂ. 500 ಭತ್ಯೆ ಬಜೆಟ್‌ನಲ್ಲಿ ಪ್ರಕಟಿಸಿತ್ತು. ಅದು ಕೂಡಲೇ ಕಾರ್ಯಕರ್ತೆಯರಿಗೆ ಸಿಗುವಂತೆ ಕ್ರಮ ಕೈಗೊಂಡು ಆದೇಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆಶಾ ಕಾರ್ಯಕರ್ತೆಯರ ಫೆಡರೇಷನ್‌ನ ಕಾರ್ಯಕರ್ತರು ಸಿಎಂಗೆ ಮನವಿ ಸಲ್ಲಿಸಿದರು.ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ಒಂದೇ ರೀತಿಯ ಸಮವಸ್ತ್ರ ಮತ್ತು ಔಷಧಿ ಕಿಟ್ ಕೊಡಬೇಕು.  ಕಾರ್ಯಕರ್ತೆಯರನ್ನು ಸರ್ಕಾರಿ ಆರೋಗ್ಯ ಇಲಾಖೆ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಆವರಗೆರೆ ವಾಸು, ಐರಣಿ ಚಂದ್ರು, ಎಚ್.ಕೆ. ರಾಮಚಂದ್ರಪ್ಪ, ಯಶೋದಮ್ಮ, ರೂಪಾ, ಹಾಲಮ್ಮ, ಗೀತಾ, ಮಂಜುಳಾ ಇದ್ದರು.ಭಾರತ ಕಮ್ಯುನಿಸ್ಟ್ ಪಕ್ಷ

ನಗರದಲ್ಲಿ ಟೆಕ್ಸ್‌ಟೈಲ್  ಪಾರ್ಕ್‌ಗಾಗಿ ಮೀಸಲಿಟ್ಟ ಪ್ರದೇಶದಲ್ಲಿ ಕೂಡಲೇ ಟೆಕ್ಸ್‌ಟೈಲ್‌ಗೆ ಸಂಬಂಧಿಸಿದ ಉದ್ಯಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಸಿಎಂಗೆ ಮನವಿ ಸಲ್ಲಿಸಿದರು.ಜಿಲ್ಲೆಯಲ್ಲಿ ವಿಮಾನನಿಲ್ದಾಣ ನಿರ್ಮಿಸಬೇಕು. ನಗರದಲ್ಲಿ ರಸ್ತೆ ವಿಸ್ತರಣೆ ಕಾರ್ಯವನ್ನು ಜಿಲ್ಲಾಡಳಿತ  ಮುಂದೂಡುತ್ತಿದೆ. ತಕ್ಷಣ ಕ್ರಮ ಕೈಗೊಂಡು ರಸ್ತೆ ವಿಸ್ತರಣೆ ಮಾಡಬೇಕು. ದಾವಣಗೆರೆಯನ್ನು ಎರಡನೇ ರಾಜಧಾನಿಯಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.