ಶುಕ್ರವಾರ, ಮೇ 7, 2021
19 °C

2 ತಿಂಗಳ `ಮೌನ' ಶಾಲಾ ಮಕ್ಕಳ ಕಲರವದಲ್ಲಿ ಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬೇಸಿಗೆ ರಜೆಯ ಅವಧಿಯಲ್ಲಿ ಎರಡು ತಿಂಗಳ ಕಾಲ ಮೌನಕ್ಕೆ ಶರಣಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಮೊಳಗಿದೆ. ರಜೆಯಲ್ಲಿ ಸವಿದ ಖುಷಿಯ ಕ್ಷಣಗಳ ಸವಿನೆನಪು ಹೊತ್ತ ಮಕ್ಕಳು ಶುಕ್ರವಾರ ಮತ್ತೆ ಶಾಲೆಯ ಕಡೆಗೆ ಬಿಡುಬೀಸಾಗಿ ಹೆಜ್ಜೆ ಹಾಕಿದರು.ರಜೆಯ ಅನುಭವಗಳನ್ನು ಗೆಳೆಯರ ಜತೆ ಹಂಚಿಕೊಳ್ಳುವ ಧಾವಂತ ಮಕ್ಕಳ ಮೊಗದಲ್ಲಿ ಹುರುಪಿತ್ತು. ಇನ್ನು ಕೆಲವರಲ್ಲಿ ರಜೆ ಮುಗಿದ ಬಗ್ಗೆ ಬೇಸರದ ಭಾವವೂ ನೆಲೆಯೂರಿತ್ತು. ಆದರೆ, ಹೆಚ್ಚಿನ ಶಾಲೆಗಳಲ್ಲಿ ನಡೆದ ಆರಂಭೋತ್ಸವ ಶೈಕ್ಷಣಿಕ ವರ್ಷದ ಮೊದಲ ದಿನವನ್ನು ಮಕ್ಕಳ ಪಾಲಿಗೆ ಸ್ಮರಣೀಯಗೊಳಿಸಿತ್ತು.ಸಡಗರದ ಸ್ವಾಗತ: ನಗರದ ಬಹುತೇಕ ಶಾಲೆಗಳನ್ನು ಆರಂಭೋತ್ಸವದ ಪ್ರಯುಕ್ತ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಪ್ರಾಥಮಿಕ ಶಾಲೆಯಲ್ಲಿ ಒಂದನೇ ಮತ್ತು ಆರನೇ ತರಗತಿಗೆ ಹಾಗೂ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದನದೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಹೂವು ನೀಡಿ, ಸಿಹಿ ಹಂಚಲಾಯಿತು. ಮಧ್ಯಾಹ್ನದ ಬಿಸಿಯೂಟಕ್ಕೆ ಪಾಯಸದ ಅಡುಗೆ ಉಣಬಡಿಸಲಾಯಿತು. ಪಠ್ಯಪುಸ್ತಕಗಳನ್ನು ಹಾಗೂ ದಾನಿಗಳು ಉಚಿತವಾಗಿ ನೀಡಿದ ಪಠ್ಯ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು. ಅಧ್ಯಾಪಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಆರಂಭೋತ್ಸವದಲ್ಲಿ ಪಾಲ್ಗೊಂಡರು. ನಗರದ ಅಭ್ಯಾಸಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುಲಾಬಿ ಹೂವು ನೀಡಿ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸ್, ಚೀಲ, ಸಿಹಿತಿಂಡಿ, ಉಪಾಹಾರ ಹಾಗೂ ಐಸ್‌ಕ್ರೀಂ ವಿತರಿಸಲಾಯಿತು.

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಸಾ.ರಾ.ಅಬೂಬಕ್ಕರ್, `ಮಕ್ಕಳಲ್ಲಿ ಕೇವಲ ಎಂಜಿನಿಯರ್, ಡಾಕ್ಟರ್ ಆಗುವ ಕನಸು ತುಂಬಿದರೆ ಸಾಲದು. ಮಕ್ಕಳನ್ನು ಮೊದಲು ಮನುಷ್ಯರಾಗುವಂತೆ ಉತ್ತೇಜಿಸಬೇಕು' ಎಂದರು.`ಹಿಂದೆ, ಕಾಪಿ ಬರೆಸಿ, ಅಕ್ಷರವನ್ನು ತಿದ್ದಿ ತೀಡುತ್ತಿದ್ದರು. ಮಗ್ಗಿ ಬಾಯಿಪಾಠ ಮಾಡಿಸುತ್ತಿದ್ದರು. ಈಗಿನ ಮಕ್ಕಳಿಗೆ ಪಠ್ಯಪುಸ್ತಕ ಬಿಟ್ಟು ಬೇರಾವ ಕನ್ನಡ ಪುಸ್ತಕವನ್ನೂ ಓದುವ ಹವ್ಯಾಸ ಇಲ್ಲ. ಕನ್ನಡದ ಸಾಹಿತಿಗಳ ಪುಸ್ತಕವನ್ನು ಕನ್ನಡಿಗರೇ ಓದದಿದ್ದರೆ ಹೇಗೆ? ನಾವು ಯಾವ ರೀತಿಯ ನಾಗರಿಕರನ್ನು ಸೃಷ್ಟಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ' ಎಂದರು.ದ.ಕ. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, `ಇಂಗ್ಲಿಷ್ ಮಾಧ್ಯಮ ಎಂಬ ಮಾಯಾಜಿಂಕೆಯ ಬೆನ್ನುಹತ್ತಿದ್ದೇವೆ. ಕಾಲದ ಓಟದಲ್ಲಿ ಹೀಗಾಗುವುದು ಸಹಜ. ಆದರೆ, ಕನ್ನಡ ಮತ್ತೆಗತವೈಭವಕ್ಕೆ ಮರಳಲಿದೆ' ಎಂದರು.`ಇಂಗ್ಲಿಷ್ ಮಾಧ್ಯಮ ಶಿಕ್ಷಣ ಮೂಲಕ ರೋಬೋಟ್‌ಗಳನ್ನು ಸೃಷ್ಟಿಸುತ್ತಿದ್ದೇವೆ. ನಮ್ಮಲ್ಲಿ ರೈತಾಪಿ ವರ್ಗವನ್ನು, ಹೋಟೆಲ್ ಉದ್ಯಮಿಗಳನ್ನು, ಯೋಧರನ್ನು ನಿರ್ಮಿಸುವ ಶಿಕ್ಷಣ ವ್ಯವಸ್ಥೆ ಇದೆಯಾ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ಐ.ಟಿ- ಬಿ.ಟಿ ಕ್ಷೇತ್ರದ ಹಿಂದೆ ಬಿದ್ದರೆ ಸಾಲದು. ದುಡ್ಡಿನ ಹಿಂದೆ ಬಿದ್ದವರಲ್ಲಿ ಮನಃಶಾಂತಿ ಇದೆಯೇ ಬಗ್ಗೆಯೂ ಯೋಚಿಸಬೇಕು' ಎಂದರು.ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, `ವೈಜ್ಞಾನಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ಪರಂಪರೆಯನ್ನು ಮರೆಯಬಾರದು' ಎಂದರು.

ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಫಿಲೋಮಿನಾ ಲೋಬೊ ಮಾತನಾಡಿ, `ಭವಿಷ್ಯದಲ್ಲಿ ಏನಾಗಬೇಕೆಂಬ ಬಗ್ಗೆ ಎಳೆಯಪ್ರಾಯದಲ್ಲೇ ಖಚಿತ ನಿಲುವು ರೂಪಿಸಿಕೊಳ್ಳಬೇಕು. ಮಕ್ಕಳು ಮಹತ್ವಾಕಾಂಕ್ಷೆಯನ್ನು ಹೊಂದುವಂತೆ ಪ್ರೇರೇಪಿಸಬೇಕು' ಎಂದರು.ಕ.ಸಾ.ಪ ಸದಸ್ಯೆಯರಾದ ವಿಜಯಲಕ್ಷ್ಮಿ ಶೆಟ್ಟಿ, ಹರಿಣಿ, ದೇವಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ, ಪ್ರೌಢಶಾಲಾ ಮುಖ್ಯಶಿಕ್ಷಕಿ ಲತಾ, ವೆಂಕಪ್ಪ, ಅರವಿಂದ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.