ಶನಿವಾರ, ಏಪ್ರಿಲ್ 10, 2021
32 °C

2035ರಲ್ಲಿ ಕಾಲೇಜು ಶಿಕ್ಷಣಕ್ಕೆ 3 ಕೋಟಿ ವಿದ್ಯಾರ್ಥಿಗಳ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2035ರಲ್ಲಿ ಕಾಲೇಜು ಶಿಕ್ಷಣಕ್ಕೆ 3 ಕೋಟಿ ವಿದ್ಯಾರ್ಥಿಗಳ ಪ್ರವೇಶ

ಮೈಸೂರು: ‘2035ರ ವೇಳೆಗೆ ಭಾರತದಲ್ಲಿ ಸುಮಾರು 3 ಕೋಟಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆದುಕೊಳ್ಳಬಹುದು  ಎಂದು ಅಂದಾಜಿಸಲಾಗಿದೆ’ ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಟಿ.ರಾಮಸಾಮಿ ಇಲ್ಲಿ ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಭಾನುವಾರ ಜರುಗಿದ 91ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.  ‘ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಸಾಕ್ಷರತಾ ಪ್ರಮಾಣ ಶೇ 64ರಿಂದ 74ಕ್ಕೆ ಏರಿಕೆಯಾಗಿದೆ. ಪೂರ್ವ ಮತ್ತು ಪಶ್ಚಿಮಗಳನ್ನು ಬೆಸೆಯುವ, ಎಲ್ಲರಿಗೂ ಒಳಿತನ್ನು ಉಂಟುಮಾಡುವ ಹೊಸ ಶಿಕ್ಷಣ ಕ್ರಮವೊಂದನ್ನು ಜಾರಿಗೆ ತರಲು 2035ರ ವೇಳೆಗೆ ಇಡೀ ವಿಶ್ವದಲ್ಲೇ ಭಾರತ ಅತ್ಯಂತ ಯೋಗ್ಯವಾದ ನೆಲೆಯಾಗಿರುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.‘ಆಧ್ಯಾತ್ಮ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಭಾರತ ಇಂದಿಗೂ ಜಗತ್ತಿನಲ್ಲಿಯೇ ಅದ್ವಿತೀಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಮೌಲ್ಯಾಧಾರಿತ ಶಿಕ್ಷಣ ನಮ್ಮ ಶಕ್ತಿ. ಶಿಕ್ಷಣದಲ್ಲಿ ನೈತಿಕತೆಯನ್ನು ಮುಂದುವರಿಸಿಕೊಂಡು ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡಬೇಕು. ಸಾರ್ವತ್ರಿಕ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಬೇಕು’ ಎಂದರು.

ಮೈಸೂರು ವಿ.ವಿ ಕುಲಪತಿ ಪ್ರೊ. ವಿ.ಜಿ.ತಳವಾರ್, ಕುಲಸಚಿವ ಪ್ರೊ. ಪಿ.ಎಸ್.ನಾಯಕ್, ಕುಲಸಚಿವ (ಪರೀಕ್ಷಾಂಗ) ಬಿ.ರಾಮು ಹಾಜರಿದ್ದರು.ಅಂಧನ ಉಪನ್ಯಾಸಕ ಕನಸು!

ಮೈಸೂರು
: ಸಾಮಾನ್ಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವುದು ದೊಡ್ಡ ವಿಷಯವೇನಲ್ಲ. ಅಂಧ ವಿದ್ಯಾರ್ಥಿಯೊಬ್ಬ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿರುವುದು ವಿಶೇಷ!ಹೌದು, ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಪಿ.ವಿ.ನಾಗರಾಜ್ ಇಂತಹದೊಂದು ಸಾಧನೆ ಮಾಡಿದ್ದಾರೆ. ಮೈಸೂರು  ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಭಾನುವಾರ ಜರುಗಿದ 91ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರಿಂದ ಚಿನ್ನದ ಪದಕ ಪಡೆದ ನಾಗರಾಜ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡದ್ದು ಹೀಗೆ..ಮೂಲತಃ ಬಳ್ಳಾರಿ ಜಿಲ್ಲೆ ನಮ್ಮೂರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಸರ್ಕಾರಿ ಅಂಧಶಾಲೆ ಮತ್ತು  ಆರೂಢ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದೆ. ಮುಂದೆ ಪದವಿಗೆ ಆಯ್ಕೆ ಮಾಡಿಕೊಂಡಿದ್ದು ಮೈಸೂರಿನ ಮಹಾರಾಜ ಕಾಲೇಜು. ನಾಲ್ಕನೇ  ತರಗತಿಯವರೆಗೆ ಅಲ್ಪಸ್ವಲ್ಪ ಕಣ್ಣು ಕಾಣಿಸುತ್ತಿತ್ತು. ಆದರೆ, ಆ ಮೇಲೆ ನನ್ನ ಪಾಲಿಗೆ ಜಗತ್ತು ಕತ್ತಲಾಯಿತು.ಮಣಿಪಾಲ ಆಸ್ಪತ್ರೆಯ  ವೈದ್ಯರು ಅಂತಿಮವಾಗಿ ಅಂಧಶಾಲೆಯತ್ತ ಬೆರಳು ತೋರಿದಾಗ ಕಣ್ಣೀರೆ ನನ್ನ ಸಹಪಾಠಿಯಾಯಿತು.ಅಂದಿನಿಂದ ಅತ್ಯಂತ ಶಿಸ್ತು, ಪ್ರಾಮಾಣಿಕತೆಯಿಂದ ತುಂಬ ಕಷ್ಟ ಪಟ್ಟು ಅಧ್ಯಯನ ಆರಂಭಿಸಿದೆ. ತಂದೆ ನಿಧನರಾದಾಗ ತಾಯಿ  ಆಸರೆಯಾಗಿ ನಿಂತರು. ನಾನು ತುಂಬ ಓದಬೇಕು, ದೊಡ್ಡ ವ್ಯಕ್ತಿಯಾಗಬೇಕು ಎಂಬುದು ನನ್ನ ತಾಯಿಯ ಆಸೆಯಾಗಿತ್ತು. ಅದೀಗ  ಈಡೇರಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಮೈಸೂರಿನ ವಸುಮತಿ ಅವರು ನನ್ನ ಓದಿಗೆ ನೆರವಾದರು. ಅವರ ಅನುಪಸ್ಥಿತಿಯಲ್ಲಿ ಪದವಿ ಪಡೆಯಲು ಬೇಸರವಾಯಿತು.ಸದ್ಯ ಮೈಸೂರು ವಿ.ವಿಯಲ್ಲಿ ಕನ್ನಡ ಎಂ.ಎ ಓದುತ್ತಿದ್ದೇನೆ. ಮುಂದೆ ಉಪನ್ಯಾಸಕನಾಗುವ ಗುರಿ ಇದೆ. ಬಿ.ಎ ಪದವಿಯಲ್ಲಿ ಭಾಷಾ ವಿಜ್ಞಾನ ವಿಷಯ ಓದಿದ್ದೇನೆ. ಕನ್ನಡ ಹಾಗೂ ಭಾಷಾ ವಿಜ್ಞಾನ ಅಧ್ಯಯನ ಉತ್ತಮ ಉಪನ್ಯಾಸಕನಾಗಲು ಪ್ರೇರಣೆ ನೀಡಿವೆ. ನನ್ನ ತಮ್ಮ ವೀರೇಶ್‌ನಿಗೂ ಕಣ್ಣು ಕಾಣದು. ಆತ ಹುಬ್ಬಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಇಬ್ಬರು ತಂಗಿಯರು ಬಿ.ಎಡ್ ಮತ್ತು ಡಿಪ್ಲೊಮಾ ಓದುತ್ತಿದ್ದಾರೆ.ನೊಂದವರಿಗೆ ಸಹಾಯ ಮಾಡುವುದು ನನ್ನ ಹೆಬ್ಬಯಕೆ. ಈಗಾಗಲೇ ಕಷ್ಟದಲ್ಲಿರುವ ಎಂಟು ಜನರಿಗೆ ರಕ್ತದಾನ ಮಾಡಿದ್ದೇನೆ. ಮುಂದೆಯೂ ಮಾಡಲು ಸಿದ್ಧನಿದ್ದೇನೆ. ಪ್ರಶಸ್ತಿ, ಬಹುಮಾನ ಬಂದಾಗ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಆ ಮಾತಿನ ಸತ್ಯಾಂಶ ಈಗ ಅರಿವಾಗುತ್ತಿದೆ ಎಂದು ಮಾತು ಮುಗಿಸಿದರು.

ಭಾವುಕರಾದ ತಾಯಿ: ನಾಗರಾಜ್ ಅವರ ತಾಯಿ ಸುಲೋಚನಮ್ಮ ಅವರನ್ನು ಮಗನ ಸಾಧನೆ ಕುರಿತು ಕೇಳಿದಾಗ ಕ್ಷಣಹೊತ್ತು ಭಾವುಕರಾಗಿ ಕಣ್ಣೀರಿಟ್ಟರು. ಮಗನ ಬಗ್ಗೆ ಅವರಿಗೆ ಮಾತೇ ಹೊರಡಲಿಲ್ಲ. ಸಾಮಾನ್ಯ ಮಕ್ಕಳು ಪದಕ ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ ನನ್ನ ಮಗ ಅಂಧ ವಿದ್ಯಾರ್ಥಿ. ಅವನು ಪದಕ ಪಡೆದ ಕ್ಷಣ, ಅವನ ಸಾಧನೆ ನನ್ನನ್ನು ಭಾವುಕಳನ್ನಾಗಿ ಮಾಡಿವೆ ಎಂದು ಹೇಳಿದರು.ಐಎಎಸ್ ಅಧಿಕಾರಿಯಾಬೇಕು

ಚಿನ್ನದ ಪದಕದ ಆಸೆ ಇರಲಿಲ್ಲ. 13 ಚಿನ್ನದ ಪದಕ ಬಂದಿರುವುದು ಖುಷಿ ತಂದಿದೆ. ಜ್ಞಾನಸಂಪಾದನೆಗಾಗಿ ಓದಿದೆ. ತಂದೆ ಆರ್.ಕೆ.ಪ್ರಸಾದ್‌ರಾವ್ ಹಾಗೂ ತಾಯಿ ಎನ್.ಟಿ.ನಾಗರತ್ನ ಇಬ್ಬರೂ ಎರಡೆರಡು ಪದವಿ ಪಡೆದಿದ್ದಾರೆ. ಈಗಾಗಲೇ ನೆಟ್ ಮತ್ತು  ಜೆಆರ್‌ಎಫ್ ಪರೀಕ್ಷೆಗಳನ್ನು ಪಾಸಾಗಿದ್ದೇನೆ. ಪಿ.ಎಚ್‌ಡಿ ಮಾಡುತ್ತಲೇ ಐಎಎಸ್ ಮತ್ತು ಐಇಎಸ್ ಪರೀಕ್ಷೆ ತೆಗೆದುಕೊಳ್ಳುವ ಗುರಿ ಇದೆ. ಒಂದು ಮತ್ತು ಎರಡು ಅಂಕಗಳಲ್ಲಿ ಪದಕ ಕಳೆದುಕೊಂಡಿರುವ ನನ್ನ ಸ್ನೇಹಿತರಿಗೆ ಈ ಪದಕಗಳನ್ನು ಅರ್ಪಿಸುತ್ತೇನೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90.72, ಪಿಯುಸಿಯಲ್ಲಿ ಶೇ 84.6 ಹಾಗೂ ಪದವಿಯಲ್ಲಿ ಶೇ 83.4 ಅಂಕ ಪಡೆದಿದ್ದೇನೆ.

 -ರಶ್ಮಿ, ಎಂ.ಎ ಅರ್ಥಶಾಸ್ತ್ರ ವಿದ್ಯಾರ್ಥಿನಿತಂದೆ ತಾಯಿ ಆಶೀರ್ವಾದ

ತಂದೆ, ತಾಯಿಗಳ ಆಶೀರ್ವಾದ ಹಾಗೂ ದೇವರ ದಯೆಯಿಂದ 10 ಚಿನ್ನದ ಪದಕ ಹಾಗೂ 9 ನಗದು ಬಹುಮಾನ ಬಂದಿವೆ. ಶ್ರೀರಂಗಪಟ್ಟಣ ತಾಲ್ಲೂಕು ಎಂ.ಶೆಟ್ಟಿಹಳ್ಳಿಯಲ್ಲಿ ಶಿಕ್ಷಣ ಪೂರೈಸಿದ್ದೇನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 92.64 ಅಂಕ ಪಡೆದು ಶ್ರೀರಂಗಪಟ್ಟಣ ತಾಲ್ಲೂಕಿಗೆ ಪ್ರಥಮ ಬಂದಿದ್ದೆ. ತಂದೆ-ತಾಯಿ ಇಬ್ಬರೂ ಕೃಷಿ ಕೆಲಸದಲ್ಲಿ ತೊಡಗಿಸಿಕೊಂ ಡಿದ್ದಾರೆ. ಮುಂದೆ ಐಎಎಸ್ ಮಾಡುವ ಮಹದಾಸೆ ಇದೆ.

 -ಎಂ.ಆರ್.ಶಿಲ್ಪಶ್ರೀ, ಬಿ.ಎಉಪನ್ಯಾಸಕನಾಗುವ ಹೆಬ್ಬಯಕೆ

ತಂದೆ ಶಿವಣ್ಣೇಗೌಡ ಹಾಗೂ ತಾಯಿ ಯಶೋದಮ್ಮ ಅವರ ಆಶೀರ್ವಾದವೇ ಪದಕ ಪಡೆಯಲು ಕಾರಣ. 6 ಚಿನ್ನದ ಪದಕ ಬಂದಾಗ ಬಹಳ ಖುಷಿಯಾಯಿತು. ಉಪನ್ಯಾಸಕರ ನಿರಂತರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಈಗ ಫೆಲೋಶಿಪ್ ದೊರಕಿದೆ. ಪಿ.ಎಚ್‌ಡಿ ಪದವಿ ಪೂರೈಸಿಕೊಂಡು ಉಪನ್ಯಾಸಕನಾಗಿ ಸೇವೆ ಸಲ್ಲಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ.

 -ಮಹದೇವಕುಮಾರ್, ಎಂಎಸ್ಸಿ, ಸಸ್ಯಶಾಸ್ತ್ರವಿಜ್ಞಾನಿಯಾಗುವ ಗುರಿ

11 ಚಿನ್ನದ ಪದಕ, 4 ನಗದು ಬಹುಮಾನ ದೊರಕಿವೆ ಎಂಬುದನ್ನು ಕೇಳಿ ಕ್ಷಣ ಹೊತ್ತು ಭಾವುಕಳಾದೆ. ಪದಕ ಪಡೆಯಲೇಬೇಕು  ಎಂಬುದು ನನ್ನ ತಂದೆಯ ಆಸೆಯಾಗಿತ್ತು. ನಾನೂ ಕೂಡ ಆರಂಭದಿಂದಲೇ ಪದಕಗಳತ್ತ ಗುರಿಯಿಟ್ಟುಕೊಂಡು ಅಧ್ಯಯನದಲ್ಲಿ ತೊಡಗಿದೆ. ತಂದೆ ಕೆ.ಬಿ.ಗುರುಮೂರ್ತಿ ಪ್ರಾಥಮಿಕ ಶಾಲಾ ಶಿಕ್ಷಕರು. ಬಿಎಸ್‌ಸಿಯಲ್ಲಿ 84.5 ಅಂಕ ಪಡೆದಿದ್ದೆ. ಮುಂದೆ ಸಿಎಸ್‌ಐಆರ್ ಪರೀಕ್ಷೆ ತೆಗೆದುಕೊಂಡು ವಿಜ್ಞಾನಿಯಾಗುವ ಗುರಿ ನನ್ನದು. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಿದ್ದೇನೆ.

 -ಜಿ.ಶೈಲಜಾ, ಎಂಎಸ್ಸಿ, ರಸಾಯನಶಾಸ್ತ್ರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.