ಬುಧವಾರ, ಜೂನ್ 23, 2021
30 °C

25ರಿಂದ ಅಂತರರಾಷ್ಟ್ರೀಯ ವಿಮಾನ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ಸುರಕ್ಷತಾ ನಿಯಮಗಳನ್ನು ಪಾಲಿಸಲು ಮತ್ತು ಸಂಚಾರಿ ಯೋಗ್ಯ ಹಣಕಾಸು ಸಾಮರ್ಥ್ಯ ಹೊಂದಲು ವಿಫಲವಾದಲ್ಲಿ, ಸಂಸ್ಥೆಯ ಪರವಾನಗಿ ರದ್ದುಪಡಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದ್ದರ ನಡುವೆಯೇ, ಕಿಂಗ್‌ಫಿಷರ್ ಏರ್‌ಲೈನ್ಸ್ (ಕೆಎಫ್‌ಎ) ಮಂಗಳವಾರ ತನ್ನ ಎಲ್ಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಈ ತಿಂಗಳ 25ರಿಂದ ಸ್ಥಗಿತಗೊಳಿಸಲು ಮತ್ತು ದೇಶೀಯ ವಿಮಾನ ಸೇವೆಯನ್ನು ಇನ್ನಷ್ಟು ಕಡಿತ ಮಾಡಲು ನಿರ್ಧರಿಸಿದೆ.ತಮಗೆ ಸಮನ್ಸ್ ಜಾರಿ ಮಾಡಿದ್ದ ವಿಮಾನಯಾನ ನಿಯಂತ್ರಕರನ್ನು ಭೇಟಿಯಾದ ನಂತರ ಕೆಎಫ್‌ಎ ಮಾಲೀಕ ವಿಜಯ ಮಲ್ಯ ಸುದ್ದಿಗಾರರ ಜೊತೆ ಮಾತನಾಡಿ, ಈ ನಿರ್ಧಾರ ಪ್ರಕಟಿಸಿದರು. 20 ದೇಶೀಯ ವಿಮಾನಗಳ ಹಾರಾಟ ಮಾತ್ರ ಎಂದಿನಂತೆ ಮುಂದುವರಿಯಲಿದೆ ಎಂದೂ ತಿಳಿಸಿದರು.ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾ ನಿರ್ದೇಶಕ (ಡಿಜಿಸಿಎ) ಇ.ಕೆ. ಭರತ್ ಭೂಷಣ್ ಅವರೊಡನೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಸಿ ಸಂಸ್ಥೆಯ ಹಣಕಾಸು ಸ್ಥಿತಿಗತಿಯ ಬಗ್ಗೆ ವಿವರ ನೀಡಿದ ಮಲ್ಯ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಮತ್ತು ನಿಗದಿತ ವೇಳೆಯನ್ನು ಕಾಯ್ದುಕೊಂಡು ವಿಮಾನಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದಾಗಿ ಡಿಜಿಸಿಎಗೆ ಭರವಸೆ ನೀಡಿರುವುದಾಗಿ ನಂತರ ಹೇಳಿದರು.ಯಾವುದೇ ಪೂರ್ವ ಮಾಹಿತಿ ಇಲ್ಲದೆ ತನ್ನ ವಿಮಾನಗಳ ಹಾರಾಟ ಸಂಖ್ಯೆ ಇಳಿಸಿಕೊಂಡ ಕೆಎಫ್‌ಎಗೆ ಲೈಸೆನ್ಸ್‌ನ್ನು ಏಕೆ ಅಮಾನತು ಮಾಡಬಾರದೆಂದು ಕೇಳಿ ಇತ್ತೀಚೆಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಲ್ಲದೆ, ತಮ್ಮನ್ನು ಭೇಟಿಯಾಗಿ ವಿವರಣೆ ನೀಡುವಂತೆ ಮಲ್ಯರಿಗೆ ಸೂಚಿಸಿದ್ದರು.ಸಚಿವರ ಎಚ್ಚರಿಕೆ: ಈ ಮಧ್ಯೆ, ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ಡಿಜಿಸಿಎ ವರದಿಯನ್ನು ಆಧರಿಸಿ, ಕೆಎಫ್‌ಎ ವಿರುದ್ಧ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು. ಸಂಸ್ಥೆಯು ತನ್ನ ನೌಕರರಿಗೆ ಸಂಬಳ ನೀಡಿಲ್ಲ, ತೈಲ ಕಂಪೆನಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬಾಕಿ ಪಾವತಿಲ್ಲ ಎಂದೂ ಅವರು ಅತೃಪ್ತಿ ವ್ಯಕ್ತಪಡಿಸಿದರು.ಸಾಲದ ಹೊರೆ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಕೆಎಫ್‌ಎ ಸುಮಾರು ರೂ 7,057.08 ಕೋಟಿಗಳ ಸಾಲದ ಹೊರೆಯನ್ನು ಹೊಂದಿದೆ. ಈ ಹಣಕಾಸು ಮುಗ್ಗಟ್ಟಿನಿಂದ ಸಂಸ್ಥೆಯ ಅನೇಕ ವಿಮಾನಗಳು ಕಾರ್ಯನಿರ್ವಹಿಸಲು ವಿಫಲವಾಗಿ ರದ್ದಾಗಿವೆ.  ಆದಾಯ ತೆರಿಗೆ ಇಲಾಖೆಯು ಬಾಕಿ ಪಾವತಿಸಲು ವಿಫಲವಾದ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕೆಎಫ್‌ಎಗೆ ಮತ್ತಷ್ಟು ಆಘಾತ ನೀಡಿರುವುದನ್ನು ಸ್ಮರಿಸಬಹುದು.

 

`ಜೀವದಾನ ನೀಡಿಲ್ಲ~

ಹಣಕಾಸು ಮುಗ್ಗಟ್ಟಿನಲ್ಲಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ (ಕೆಎಫ್‌ಎ)ಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಯಾವುದೇ ಜೀವದಾನ (ಆರ್ಥಿಕ ನೆರವು) ನೀಡಿಲ್ಲ ಎಂದು ಸರ್ಕಾರ ಮಂಗಳವಾರ ರಾಜ್ಯಸಭೆಗೆ ತಿಳಿಸಿತು.`ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಎಫ್‌ಎಗೆ ಯಾವುದೇ ಜೀವದಾನವನ್ನು ವಿಸ್ತರಿಸಿಲ್ಲ~ ಎಂದು ಸಾಲ ಪಾವತಿ ಬ್ಯಾಂಕ್‌ಗಳ ಒಕ್ಕೂಟದ ನಾಯಕನಾದ ಎಸ್‌ಬಿಐ ಸರ್ಕಾರಕ್ಕೆ ತಿಳಿಸಿರುವುದಾಗಿ ಕೇಂದ್ರ ಹಣಕಾಸು ರಾಜ್ಯ ಸಚಿವ ನಮೋ ನಾರಾಯಣ ಮೀನಾ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.`ಎಸ್‌ಬಿಐ ಮತ್ತು ಇತರ ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಸಾಲದ ಒಂದು ಭಾಗವನ್ನು ಈಕ್ವಿಟಿಗೆ ಪರಿವರ್ತಿಸುವ ಮೂಲಕ ಕೆಎಫ್‌ಎಗೆ 1,200 ಕೋಟಿಗಳ ಜೀವದಾನ ನೀಡಿವೆಯೇ~ ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಚಿವರು ಮೇಲಿನಂತೆ ಉತ್ತರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.