ಮಂಗಳವಾರ, ಜನವರಿ 28, 2020
21 °C
ನಗರ ಸಂಚಾರ

2.5 ವರ್ಷ : ಕಾಮಗಾರಿ ಪ್ರಗತಿಯಲ್ಲಿ

ಕೆ.ನರಸಿಂಹಮೂರ್ತಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:  ಈ ಮೇಲ್ಸೇತುವೆ ಕಾಮಗಾರಿ ಮುಗಿಯೋಕೆ ಇನ್ನೂ ಎಷ್ಟು ವರ್ಷ ಬೇಕು? ಅಲ್ಲಿಯವರೆಗೂ ನಾವು ಬವಣೆ ಪಡುತ್ತಲೇ ಇರಬೇಕೆ?–ನಗರದ ಸಾವಿರಾರು ಮಂದಿ ಈ ಪ್ರಶ್ನೆಯನ್ನು ಎರಡೂವರೆ ವರ್ಷದಿಂದ ಕೇಳುತ್ತಲೇ ಇದ್ದಾರೆ. ರೈಲ್ವೆ ಅಧಿಕಾರಿಗಳು ಮಾತ್ರ ‘ಇಂದು– ನಾಳೆ’ ಎಂದು ಹೇಳುತ್ತಲೇ ಇದ್ದಾರೆ. ಮೇಲ್ಸೇತುವೆ ನಿರ್ಮಾಣ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.ಇದಕ್ಕೆ ನಗರದ ಜನರ ದುರದೃಷ್ಟ ಕಾರಣವೇ,  ಇಲಾಖೆಗಳ ನಡುವಿನ ಸಮನ್ವಯ ಕೊರತೆ ಕಾರಣವೇ,  ರೈಲ್ವೆ ಇಲಾಖೆ ನಿಧಾನಗತಿ ಕಾರ್ಯವೈಖರಿ ಕಾರಣವೇ ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರಕಿಲ್ಲ.ನಗರದ ಕ್ಲಾಕ್ ಟವರ್ ವೃತ್ತದಿಂದ ಈದ್ಗಾ ಮೈದಾನದವರೆಗೆ ರೈಲು ಮೇಲ್ಸೇತುವೆ ನಿರ್ಮಾಣ ಕಾಮಗಾರಿ. ಶುರುವಾಗಿದ್ದು 2011ರ ಜೂನ್ 26ರಂದು. ಆಸುಪಾಸಿನ ಜನರಿಗೆ, ವಾಹನ ಸವಾರರಿಗೆ ಯಾವುದೇ ಮಾಹಿತಿ ನೀಡದೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ದಿಢೀರನೆ ಶುರು ಮಾಡಲಾಯಿತು. ಕಾಮಗಾರಿ ಶುರುವಾದಾಗ ಪೂರ್ಣಗೊಳಿಸಲು ಗಡುವು ಇದ್ದದ್ದು 9 ತಿಂಗಳು ಮಾತ್ರ. ಅಂದರೆ, 2012ರ ಮಾರ್ಚ್‌ಗೆ ಮೇಲುಸೇತುವೆ ನಿರ್ಮಾಣ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಬದಲಿಗೆ ಗಡುವು ವಿಸ್ತರಣೆಗೊಂಡು, ಬರೋಬ್ಬರಿ ಎರಡೂವರೆ ವರ್ಷವೂ ಮುಗಿದಿದೆ.ಈಗ 2014ರ ಹೊಸ್ತಿಲಲ್ಲಿರುವ ಜನ ಮತ್ತೆ ಹಳೆ ಪ್ರಶ್ನೆಯನ್ನು ಹೊಸದಾಗಿ ಕೇಳುತ್ತಿದ್ದಾರೆ: ಮೇಲುಸೇತುವೆ ಮೇಲೆ ನಾವು ಸಂಚರಿಸುವುದು ಯಾವಾಗ ,ನಮ್ಮ ಕಷ್ಟಗಳು ತಪ್ಪುವುದು ಯಾವಾಗ?ರೂ 5ರಿಂದ 9 ಕೋಟಿ

ಗಡುವು ವಿಸ್ತರಣೆಗೊಂಡಂತೆಯೇ ಕಾಮಗಾರಿ ವೆಚ್ಚವೂ ಹೆಚ್ಚಾಗಿದೆ ಎಂಬುದನ್ನೂ ಗಮನಿಸಬೇಕು. ಕಾಮಗಾರಿಯನ್ನು ಆರಂಭಿಸುವ ಸಂದರ್ಭದಲ್ಲಿ ರೂ5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಬೇಕಾಗಿತ್ತು. ಆದರೆ ಈಗ ಅದು ಸುಮಾರು ರೂ 9 ಕೋಟಿವರೆಗೂ ಹೆಚ್ಚಿದೆ.

ಎರಡೂವರೆ ವರ್ಷದ ಅವಧಿಯಲ್ಲಿ ಕಬ್ಬಿಣ, ಸಿಮೆಂಟು, ಮರಳು ಮತ್ತಿತರೆ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಏರಿದೆ. ಹೀಗಾಗಿ ಇದು ಇಲಾಖೆಗೆ, ಗುತ್ತಿಗೆದಾರರಿಗೂ ನಷ್ಟದ ಬಾಬತ್ತೇ ಆಗಿದೆ. ಈ ನಷ್ಟದ ಪರಿಣಾಮ ಏನು ಎಂದು ಕೇಳಿದರೆ, ಜನ ಇನ್ನೊಂದಷ್ಟು ದಿನ ಕಾಯುವುದಷ್ಟೇ ಎಂದು ನಿರಾಸೆ  ನಿಟ್ಟುಸಿರು ಬಿಡುತ್ತಾರೆ.ಸಮನ್ವಯದ ಕೊರತೆ

ಕಾಮಗಾರಿಯನ್ನೇನೋ ಏಕಾಏಕಿ ಶುರು ಮಾಡಲಾಯಿತು. ಆದರೆ ಅದಕ್ಕೆ ಮುನ್ನ ಸೇತುವೆ ನಿರ್ಮಾಣಕ್ಕೆ ಬೇಕಾದ ಸ್ಥಳಾವಕಾಶಕ್ಕಾಗಿ ಆಸುಪಾಸಿನ ಕಟ್ಟಡಗಳನ್ನು ತೆರವು ಮಾಡಿಕೊಡಬೇಕಾಗಿತ್ತು. ಅದು ಲೋಕೋಪಯೋಗಿ ಇಲಾಖೆ ಕೆಲಸ. ಆದರೆ ಇಲಾಖೆ ಸರಿಯಾದ ಸಮಯಕ್ಕೆ ಸಹಕರಿಸದ ಪರಿಣಾಮವಾಗಿ ಕಾಮಗಾರಿ ವಿಳಂಬವಾಯಿತು. ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿರುತ್ತಿತ್ತು ಎನ್ನುತ್ತವೆ ಮೂಲಗಳು.ಈಗಲೂ ಸೇತುವೆಯ ಕೆಲವೆಡೆ ಮನೆಗಳನ್ನು ತೆರವು ಮಾಡಿಕೊಟ್ಟಿಲ್ಲ. ಹೀಗಾಗಿ ಸೇತುವೆ ಬದಿಗಳಲ್ಲಿ ಚರಂಡಿ ನಿರ್ಮಿಸುವ ಕೆಲಸ ನಡೆದಿಲ್ಲ. ಅದಕ್ಕೆ ಸ್ಥಳಾವಕಾಶ ಮಾಡಿಕೊಡದಿದ್ದರೆ ನಾವು ಸೇತುವೆಯನ್ನು ನಿರ್ಮಿಸಿಕೊಟ್ಟು ವಾಪಸಾಗುತ್ತೇವೆ ಎನ್ನುತ್ತವೆ ಗುತ್ತಿಗೆದಾರರ ಮೂಲಗಳು.ಕಾಮಗಾರಿ ಶುರುವಾಗುವ ಸಂದರ್ಭದಲ್ಲಿ ಕೇಂದ್ರದಲ್ಲಿ ರೈಲ್ವೆ ಇಲಾಖೆ ಸಹಾಯಕ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ಸೇತುವೆ ನಿರ್ಮಾಣದ ಯೋಜನೆಗೆ ಕೆಲವು ಹೊಸ ಅಂಶಗಳನ್ನು ಸೇರಿಸಿದರು. ಅದನ್ನು ಕೂಡ ಮಾಡಲಾಗುತ್ತಿದೆ ಎಂಬುದು ಮೂಲಗಳ ನುಡಿ.ಹೆಚ್ಚಿದ ಒತ್ತಡ

ಮೇಲು ಸೇತುವೆಯನ್ನು ಎಷ್ಟು ಸಾಧ್ಯವಾದರೆ ಅಷ್ಟು ಬೇಗ ನಿರ್ಮಿಸಿಕೊಡಬೇಕು ಎಂದು ದಿನವೂ ಗುತ್ತಿಗೆದಾರರ ಮೇಲೆ ರೈಲ್ವೆ ಇಲಾಖೆ ಅಧಿಕಾರಿಗಳು ಒತ್ತಡವನ್ನೂ ಹೇರುತ್ತಿದ್ದಾರೆ. ಟೇಕಲ್ ರಸ್ತೆಯ ರೈಲ್ವೆ ಕ್ರಾಸಿಂಗ್ ಗೇಟ್ ಬಳಿ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿವೆ. ನಡೆಯುತ್ತಿವೆ.ಅವುಗಳಿಗೆ ಉತ್ತರ ರೂಪದಲ್ಲಿ, ಕ್ಲಾಕ್ ಟವರ್ ಬಳಿಯ ಮೇಲುಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದು ಇಲಾಖೆ ಪ್ರಮುಖ ಉದ್ದೇಶ. ಒಮ್ಮೆ ಮೇಲುಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಟೇಕಲ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಜನರೂ ಸಮಾಧಾನಗೊಳ್ಳುತ್ತಾರೆ. ನಂತರ ಆ ಕ್ರಾಸಿಂಗ್‌ನಲ್ಲಿ ಯಾವುದೇ ಸೇತುವೆ ನಿರ್ಮಿಸುವ ಪ್ರಮೇಯವೇ  ಇರುವುದಿಲ್ಲ ಎಂಬುದು ಇಲಾಖೆ ಲೆಕ್ಕಾಚಾರ.ಪೂರ್ಣ ಯಾವಾಗ?

ಈ ಎಲ್ಲದ್ದರ ನಡುವೆ ಮೇಲುಸೇತುವೆ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಡಿಸೆಂಬರ್ ಕೊನೇ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಭರವಸೆ ಹೊಂದಿವೆ. ರಾಷ್ಟ್ರೀಯ ಹೆದ್ದಾರಿ ಕಡೆಗೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕ್ಲಾಕ್ ಟವರ್ ಕಡೆಗಿನ ಕಾಮಗಾರಿ ಕೊನೇ ಹಂತದಲ್ಲಿದೆ. ಡಾಂಬರು ಹಾಕಬೇಕು ಮತ್ತು ರಸ್ತೆ ವಿಭಜಕಗಳನ್ನು ಅಳವಡಿಸಬೇಕು. ಉಳಿದಂತೆ ಸೇತುವೆಯ ಎರಡೂ ಬದಿಯಲ್ಲಿ ತಡೆಗೋಡೆಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ ಎಂಬುದು ಮೂಲಗಳ ಮಾಹಿತಿ.ಚರಂಡಿ ನಿರ್ಮಾಣ ನನೆಗುದಿಗೆ

ಸದ್ಯಕ್ಕೆ ಸೇತುವೆಯ ಎರಡೂ ಬದಿ ಓಡಾಡಿದವರಿಗೆ ಅಲ್ಲಿ ಚರಂಡಿ ನಿರ್ಮಾಣವಾಗದಿರುವುದು ಎದ್ದು ಕಾಣುತ್ತದೆ. ಸೇತುವೆಯ ಕೆಳಗೆ ಎರಡೂ ಬದಿಯಲ್ಲಿ ಜನ ಸಂಚರಿಸಲು ಅನುಕೂಲವನ್ನೂ ಕಲ್ಪಿಸಿಲ್ಲ. ಕಟ್ಟಡಗಳು ಹಾಗೇ ಉಳಿದಿವೆ. ಅವುಗಳನ್ನು ತೆರವು ಮಾಡುವ ಕೆಲಸವಾಗದಿದ್ದರೆ ಸೇತುವೆ ಇರುತ್ತದೆ ಅಷ್ಟೆ. ಅದರಿಂದ ಲಭಿಸಬೇಕಾದ ಎಲ್ಲ ಅನುಕೂಲಗಳೂ ಜನರಿಗೆ ಲಭಿಸುವುದಿಲ್ಲ. ನಿರ್ದಿಷ್ಟ ಕೋಮಿನ ಜನರನ್ನು ಓಲೈಸುವ ಸಲುವಾಗಿ ಸೇತುವೆ ನಿರ್ಮಾಣಕ್ಕೆ ಬೇಕಾದ ಜಾಗದಿಂದ ಅವರನ್ನು ತೆರವುಗೊಳಿಸುವ ಪ್ರಯತ್ನವನ್ನು ಮಾಡದೇ ಇರುವುದು ಸರಿಯಲ್ಲ ಎಬುದು ಮೂಲಗಳ ಅಭಿಪ್ರಾಯ.

ಪ್ರತಿಕ್ರಿಯಿಸಿ (+)