ಶುಕ್ರವಾರ, ಜುಲೈ 30, 2021
20 °C
ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಾಳೆ ಆರಂಭ

27 ರಾಜ್ಯಗಳ ಅಥ್ಲೀಟ್‌ಗಳ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ಜೂನ್ 27ರಿಂದ ಐದು ದಿನಗಳ ಕಾಲ 34ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆಯಲಿದ್ದು, 27 ರಾಜ್ಯಗಳ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಕರ್ನಾಟಕದ 280 ಅಥ್ಲೀಟ್‌ಗಳು ಕಣದಲ್ಲಿದ್ದಾರೆ. ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ರೀತ್ ಅಬ್ರಾಹಂ (ಲಾಂಗ್ ಜಂಪ್), ಲಲಿತಾ ಜಯರಾಮ್ (ಹ್ಯಾಮರ್ ಥ್ರೋ), ಹರೀಶ್ ಶೆಟ್ಟಿ (ಹ್ಯಾಮರ್ ಥ್ರೋ) ಮತ್ತು ಉದಯ್ ಕುಮಾರ್ ಪುತ್ತೂರು (ಪೋಲ್‌ವಾಲ್ಟ್) ರಾಜ್ಯದ ಪ್ರಮುಖ ಸ್ಪರ್ಧಿಗಳು. ಮೊದಲ ದಿನ (ಜೂನ್ 27) ಬೆಳಿಗ್ಗೆ ಆರು ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿದ್ದು, 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿವೆ.`ಕೂಟಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ 150ಕ್ಕೂ ಅಧಿಕ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಇದೇ ವರ್ಷದ ಅಕ್ಟೋಬರ್ 16ರಿಂದ 27ರ ವರೆಗೆ ಬ್ರೆಜಿಲ್‌ನಲ್ಲಿ ಜರುಗಲಿರುವ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಇದೇ ವೇಳೆ ಆಯ್ಕೆ ಮಾಡಲಾಗುವುದು' ಎಂದು ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಸಂಘಟನಾ ಕಾರ್ಯದರ್ಶಿ ಡೇವಿಡ್ ಪ್ರೇಮನಾಥ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ ರೀತ್ ಅಬ್ರಾಹಂ (50+), ಪಂಜಾಬ್‌ನ ಅಜ್ಮೀರ್ ಸಿಂಗ್ (75+, ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ), ದೆಹಲಿಯ ಪಿ.ಎಲ್. ಶರ್ಮ (80+,   ಹೈಜಂಪ್, ಪೋಲ್ ವಾಲ್ಟ್), ಆಂಧ್ರಪ್ರದೇಶದ ಶ್ರೀರಾಮುಲು (85+, 5000ಮೀ., 10000ಮೀ. ಹಾಗೂ 20000ಮೀ) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದೂ ಅವರು ವಿವರಿಸಿದರು.`ಈ ಸಲದ ಕ್ರೀಡಾಕೂಟದಲ್ಲಿ ಅಂಗವಿಕಲ  ಮಾಸ್ಟರ್ಸ್ ಅಥ್ಲೀಟ್‌ಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. 50 ರಿಂದ 60 ಸ್ಪರ್ಧಿಗಳು ಈ ವಿಭಾಗದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈಗಾಗಲೇ 20 ಅಥ್ಲೀಟ್‌ಗಳು ಹೆಸರು ನೋಂದಾಯಿಸಿದ್ದಾರೆ' ಎಂದು ಪ್ರೇಮನಾಥ್ ವಿವರಿಸಿದರು.ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಧರ್ಮವೀರ್ ದಿಲ್ಲಾನ್, ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಎಂ.ಎನ್. ನರಸಿಂಹನ್, ಉಪಾಧ್ಯಕ್ಷರಾದ ಕೆ. ಲಕ್ಷ್ಮಿನಾರಾಯಣ, ಮಂಜುನಾಥ್ ಹಾಗೂ ಕ್ರೀಡಾಕೂಟದ ಸಂಘಟನಾ ಸಮಿತಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಸತ್ಯನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.