ಸೋಮವಾರ, ಆಗಸ್ಟ್ 10, 2020
24 °C
ತಿಂಗಳಿಗೆ ಬೇಕು 70,020 ಕ್ವಿಂಟಲ್ ಅಕ್ಕಿ!

3 ಲಕ್ಷ ಕುಟುಂಬಗಳಿಗೆ `ಅನ್ನ ಭಾಗ್ಯ'

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

3 ಲಕ್ಷ ಕುಟುಂಬಗಳಿಗೆ `ಅನ್ನ ಭಾಗ್ಯ'

ವಿಜಾಪುರ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಒಂದು ರೂಪಾಯಿ ದರದಲ್ಲಿ ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಿಂದ ಜಿಲ್ಲೆಯ ಅಂದಾಜು ಮೂರು ಲಕ್ಷ ಕುಟುಂಬಗಳಿಗೆ  ಪ್ರಯೋಜನ ದೊರೆಯಲಿದೆ.ಈ ವರೆಗೆ ಜಿಲ್ಲೆಯಲ್ಲಿ ಪ್ರತಿ ತಿಂಗಳು 46,000 ಕ್ವಿಂಟಲ್ ಅಕ್ಕಿ ವಿತರಿಸಲಾಗುತ್ತಿತ್ತು. ಹೊಸ  ಯೋಜನೆ ಜಾರಿಯಿಂದ 70,020 ಕ್ವಿಂಟಲ್ ಅಕ್ಕಿಯ ಅವಶ್ಯಕತೆ ಇದೆ. ಅಂದರೆ 30,000 ಕಿಂಟಲ್ ಅಕ್ಕಿ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಣೆಯಾಗಲಿದ್ದು, ಸಂಗ್ರಹವೇ ದೊಡ್ಡ ಸವಾಲಾಗಿದೆ.ಛತ್ತೀಸಗಡದ ಅಕ್ಕಿ ಇನ್ನೂ ಬಂದಿಲ್ಲ. ಈ ಹಿಂದೆ ವಿತರಿಸುತ್ತಿದ್ದ ಅಕ್ಕಿಯನ್ನೇ ಈ ತಿಂಗಳು ವಿತರಿಸುವುದರಿಂದ ಅಕ್ಕಿಯ ಗುಣಮಟ್ಟದಲ್ಲಿ ಬದಲಾವಣೆಯಾಗುತ್ತಿಲ್ಲ.ಹೊಸ ಗೋದಾಮು: `ಕರ್ನಾಟಕ ಆಹಾರ ಪೂರೈಕೆ ನಿಗಮ ಜಿಲ್ಲೆಯಲ್ಲಿ 10 ಗೋದಾಮುಗಳನ್ನು ಹೊಂದಿದೆ. ಈಗ ಹೊಸದಾಗಿ ಎಂಟು ಖಾಸಗಿ ಗೋದಾಮುಗಳನ್ನು ಬಾಡಿಗೆಗೆ ಪಡೆದಿದೆ. ಒಟ್ಟಾರೆ 18 ಗೋದಾಮುಗಳಲ್ಲಿ ಅಕ್ಕಿಯನ್ನು ದಾಸ್ತಾನು ಮಾಡಲಾಗುತ್ತಿದೆ.ಸದ್ಯ 24,500 ಕ್ವಿಂಟಲ್ ಅಕ್ಕಿ ದಾಸ್ತಾನು ಇದ್ದು, 45,500 ಕ್ವಿಂಟಲ್ ಅಕ್ಕಿ ಜಿಲ್ಲೆಗೆ ಹಂಚಿಕೆಯಾಗಿದೆ. ಹೀಗಾಗಿ ಈ ತಿಂಗಳಿಗೆ ಬೇಕಿರುವ ಅಕ್ಕಿಯ ತೊಂದರೆ ಇಲ್ಲ' ಎನ್ನುತ್ತಾರೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶ್ರೀಧರ.ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ 46,907 ಪಡಿತರ ಚೀಟಿಗಳಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕಡು ಬಡವ ಕುಟುಂಬಗಳಿಗೆ ಮಾಸಿಕ 35 ಕೆ.ಜಿ. ಆಹಾರ ಧಾನ್ಯ ನೀಡಬೇಕು ಎಂಬುದು ನಿಯಮ. ಇವರಿಗೆ ತಲಾ ರೂ 3ರ ದರದಲ್ಲಿ 29 ಕೆ.ಜಿ. ಅಕ್ಕಿ, ರೂ.2 ದರದಲ್ಲಿ 6 ಕೆ.ಜಿ. ಗೋಧಿ ವಿತರಿಸಲಾಗುತ್ತಿತ್ತು. ಕುಟುಂಬದ ಸಂಖ್ಯೆ ಎಷ್ಟೇ ಇದ್ದರೂ ಅವರಿಗೆ ರೂ 1 ದರದಲ್ಲಿ 29 ಕೆ.ಜಿ. ಅಕ್ಕಿ ದೊರೆಯಲಿದ್ದು, ಅಕ್ಕಿಯ ಪ್ರಮಾಣದಲ್ಲಿ ಕಡಿತ ಇಲ್ಲ. ಈ ಚೀಟಿದಾರರಿಗೆ ಮಾಸಿಕ ರೂ 58 ಉಳಿತಾಯವಾಗಲಿದೆ.ಬಿಪಿಎಲ್: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿ 2,96,511 ಇದ್ದವು. ಈ ಪೈಕಿ 47,023 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದ್ದು, ಈಗ ಕೇವಲ 2,49,488 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಏಕ ಸದಸ್ಯ ಪಡಿತರ ಚೀಟಿಗಳು 14,954, ಇಬ್ಬರು ಸದಸ್ಯರ ಪಡಿತರ ಚೀಟಿಗಳು 29,057 ಇವುಗಳಲ್ಲಿ ಸೇರಿವೆ.ಬಿಪಿಎಲ್‌ನ ಏಕ ಸದಸ್ಯ ಪಡಿತರ ಚೀಟಿಗಳಿಗೆ 10 ಕೆ.ಜಿ., ಇಬ್ಬರು ಸದಸ್ಯರ ಪಡಿತರ ಚೀಟಿಗೆ 20 ಕೆ.ಜಿ. ಮತ್ತು 3 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರು ಇರುವ ಪಡಿತರ ಚೀಟಿದಾರರಿಗೆ 30 ಕೆ.ಜಿ. ಅಕ್ಕಿ ನೀಡಲಾಗುವುದು. ಈ ಹಿಂದೆಯೂ ಇವರಿಗೆ ಯೂನಿಟ್ ಪದ್ಧತಿ ಜಾರಿಯಲ್ಲಿತ್ತು. ಕನಿಷ್ಠ ನಾಲ್ಕರಿಂದ ಗರಿಷ್ಠ 15 ಕೆ.ಜಿ. ಅಕ್ಕಿಯನ್ನು ರೂ.3ರ ದರದಲ್ಲಿ ವಿತರಿಸಲಾಗುತ್ತಿತ್ತು. ಇವರು ಈಗ ಎರಡು ಪಟ್ಟಿಗಿಂತಲೂ ಹೆಚ್ಚು ಅಕ್ಕಿ ಪಡೆಯಲಿದ್ದಾರೆ.ಇದೇ 10ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿಯ ಜಾಮಿಯಾ ಮಸೀದೆ ರಸ್ತೆಯ ಝಂಡಾ ಕಟ್ಟಾ, 12ಕ್ಕೆ ಅಪ್ಸರಾ ಚಿತ್ರಮಂದಿರ ಹತ್ತಿರದ ಕೊಳೆಗೇರಿ ಹಾಗೂ ಮಧ್ಯಾಹ್ನ 1ಕ್ಕೆ ಬಬಲೇಶ್ವರದಲ್ಲಿ ಈ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸಾಂಕೇತಿಕ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಎಲ್ಲ 813 ನ್ಯಾಯಬೆಲೆ ಅಂಗಡಿಗಳಲ್ಲಿ ಹಂತ ಹಂತವಾಗಿ ಈ ಯೋಜನೆ ಜಾರಿಗೊಳ್ಳಲಿದೆ ಎಂಬುದು ಅಧಿಕಾರಿಗಳ  ವಿವರಣೆ.ಅಂಗಡಿ ಬಂದ್ ಮಾಡುವಂತಿಲ್ಲ: ನ್ಯಾಯ ಬೆಲೆ ಅಂಗಡಿಗಳಿಗೆ ಮಂಗಳವಾರ ರಜೆ. ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 12, ಸಂಜೆ 4ರಿಂದ ರಾತ್ರಿ 8ರ ವರೆಗೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲೇಬೇಕು. ಪಡಿತರ ಧಾನ್ಯಗಳನ್ನು ಮಾತ್ರ ವಿತರಿಸಬೇಕು. ಅದರ ಜೊತೆಗೆ ಒತ್ತಾಯಪೂರ್ವಕವಾಗಿ ಅನ್ಯ ವಸ್ತುಗಳನ್ನು ಮಾರಾಟ ಮಾಡಬಾರದು ಎಂಬುದು ಅಧಿಕಾರಿಗಳ ಸೂಚನೆ.ಇ-ಪಡಿತರ: ನ್ಯಾಯಬೆಲೆ ಅಂಗಡಿಯಲ್ಲಿ ಬಯೊಮೆಟ್ರಿಕ್ಸ್ ಅಳವಡಿಸಿ ಇ-ಪಡಿತರ ವ್ಯವಸ್ಥೆ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೆ ಬೆಂಗಳೂರು, ತುಮಕೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾದೆ.ಪಡಿತರ ಚೀಟಿ ಹೊಂದಿದವರೇ ಸ್ವತಃ ನ್ಯಾಯ ಬೆಲೆ ಅಂಗಡಿಗೆ ಬಂದು ಬಯೊ ಮೆಟ್ರಿಕ್ಸ್ (ಹೆಬ್ಬೆರಳು ಒತ್ತುವುದು) ನೀಡಿದರೆ ಮಾತ್ರ ಪಡಿತರ ದೊರೆಯಲಿದೆ. ಇದರಿಂದ ಅವ್ಯವಹಾರಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಲಂಬು ಮತ್ತು ಹಿರೇಮಠ.ಈ ತಿಂಗಳು ಗೋಧಿ ಇಲ್ಲ!

ಬಿಪಿಎಲ್ ಪಡಿತರ ಚೀಟಿದಾರರಿಗೆ ಈ ತಿಂಗಳು ಗೋಧಿ ಸಿಗುವುದಿಲ್ಲ!1ರಿಂದ 4 ಜನ ಸದಸ್ಯರು ಇರುವ ಬಿಪಿಎಲ್ ಪಡಿತರ ಚೀಟಿದಾರರಿಗೆ ಮಾಸಿಕ 2 ಕೆ.ಜಿ. ಹಾಗೂ ಐದು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರು ಇರುವ ಪಡಿತರ ಚೀಟಿದಾರರಿಗೆ 3 ಕೆ.ಜಿ. ಗೋಧಿಯನ್ನು ರೂ.3ರ ದರದಲ್ಲಿ ನೀಡಲಾಗುತ್ತಿತ್ತು.ಆದರೆ, ಒಂದು ರೂಪಾಯಿ ದರದಲ್ಲಿ ಅಕ್ಕಿ ವಿತರಿಸುವ ಯೋಜನೆಯ ಜಾರಿ ಹಿನ್ನೆಲೆಯಲ್ಲಿ ಈ ತಿಂಗಳು ಬಿಪಿಎಲ್ ಚೀಟಿದಾರರಿಗೆ ಗೋಧಿ ವಿತರಿಸುವುದಿಲ್ಲ. ಅಂತ್ಯೋದಯ ಚೀಟಿದಾರರಿಗೆ ತಿಂಗಳಿಗೆ 6 ಕೆ.ಜಿ. ಅಕ್ಕಿ ವಾಡಿಕೆಯಂತೆ ದೊರೆಯಲಿದೆ.1.95 ಲಕ್ಷ ಪಡಿತರ ಚೀಟಿ ರದ್ದು

ಜಿಲ್ಲೆಯಲ್ಲಿ ಈ ವರೆಗೆ 9,274 ಅಂತ್ಯೋದಯ ಅನ್ನ, 79,942 ಬಿಪಿಎಲ್, 1,06,696 ಎಪಿಎಲ್ ಹೀಗೆ ಒಟ್ಟಾರೆ 1,95,912 ಪಡಿತರ ಚೀಟಿ ರದ್ದು ಪಡಿಸಲಾಗಿದೆ.ಕೆಲ ನೈಜ ಫಲಾನುಭವಿಗಳ ಚೀಟಿಗಳೂ ರದ್ದಾಗಿರುವುದು ಜಿಲ್ಲಾ ಆಡಳಿತದ ಗಮನಕ್ಕೆ ಬಂದಿದೆ. ಇಂತಹ ನೈಜ ಫಲಾನುಭವಿಗಳು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಮತ್ತು ನಗರ-ಪಟ್ಟಣ ಪ್ರದೇಶದವರು ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಬೇಕು.  ಹೊಸ ಅರ್ಜಿ ಸಲ್ಲಿಸಲು ರೂ 50 ಶುಲ್ಕ ಮಾತ್ರ ಪಾವತಿಸ ಬೇಕು. ಹೆಚ್ಚಿನ ಹಣ ಪಡೆದ ವಿಜಾಪುರದ ಪೂಜಾರಿ, ಸಿಂದಗಿಯ ದೇಶಪಾಂಡೆ ಎನ್ನುವವರಿಗೆ ನೀಡಿದ್ದ ಸೇವಾ ಕೇಂದ್ರಗಳನ್ನು ರದ್ದು ಪಡಿಸಲಾಗಿದೆ. ಹೆಚ್ಚಿನ ಹಣ ಪಡೆಯುವ ಸೇವಾ ಕೇಂದ್ರಗಳನ್ನು ರದ್ದು ಪಡಿಸಲಾಗುವುದು.

ಶಿವಯೋಗಿ ಕಳಸದ, ಜಿಲ್ಲಾಧಿಕಾರಿ.ಎತ್ತುವಳಿ ಸಮಸ್ಯೆ

ಧಾನ್ಯದ ಪ್ರಮಾಣ ಹೆಚ್ಚಾಗುವುದರಿಂದ ನಮ್ಮ ಅಂಗಡಿಕಾರರು ಧಾನ್ಯ ಸಂಗ್ರಹಕ್ಕೆ ಹೆಚ್ಚಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಅಕ್ಕಿಯ ಎತ್ತುವಳಿ ಮತ್ತು ವಿತರಣೆಯೇ ಈಗಿನ ದೊಡ್ಡ ಸಮಸ್ಯೆ. ಮೇಲಾಗಿ ನಮ್ಮ ಕಮೀಷನ್ ಸಹ ಹೆಚ್ಚಿಸಬೇಕು.

-ಜ್ಯೋತಿರಾಮ ಪವಾರ. ಅಧ್ಯಕ್ಷ, ವಿಜಾಪುರ ನಗರ ಅಗ್ಗದರದ ಕಾಳಿನ ಅಂಗಡಿಕಾರರ ಸಂಘ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.