ಭಾನುವಾರ, ಏಪ್ರಿಲ್ 18, 2021
31 °C

43 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನ 43 ಗ್ರಾಮಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ, 75 ಡೆಂಗೆ ಪ್ರಕರಣಗಳು ಪತ್ತೆಯಾಗಿರುವುದು ಮತ್ತು ಮೇವಿನ ಕೊರತೆ ವಿಷಯಗಳು ಸೋಮವಾರ ನಡೆದ ತಾಲ್ಲೂಕು ಕೆಡಿಪಿ ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾದವು.ಕುಡಿಯುವ ನೀರಿನ ವಿವರ ನೀಡಿದ ಪಂಚಾಯತ್‌ರಾಜ್ ಎಂಜಿನಿಯರ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿಂಗಪ್ಪ, ಕಳೆದ ವರ್ಷ 89 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. 81 ಕಾಮಗಾರಿ ಕೈಗೊಂಡು 68 ಪೂರ್ಣಗೊಳಿಸಲಾಗಿದೆ. 2011- 12ನೇ ಸಾಲಿನಲ್ಲಿ ್ಙ 4.27 ಕೋಟಿ ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಕೆ. ಬಸವರಾಜನ್, ನಾವು ಏನೂ ಕೊಡದಿದ್ದರೂ ಪರವಾಗಿಲ್ಲ. ನೀರು ಕೊಡದಿದ್ದರೆ ಹೇಗೆ? ಮೊದಲು ನೀರು ಪೂರೈಸಿ ಆ ಮೇಲೆ ಗುಣಮಟ್ಟದ ಬಗ್ಗೆ ವಿಚಾರ ಮಾಡಬೇಕು ಎಂದರು.ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲು ತಕರಾರು ವ್ಯಕ್ತವಾಗುತ್ತಿವೆ. ತಮಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಳಲು ತೋಡಿಕೊಂಡರು.ನೀರಿನ ವಿಷಯದಲ್ಲಿ ರಾಜಕೀಯ ಮಾಡಬೇಡಿ. ನೀರು ಪೂರೈಕೆಗೆ ಯಾರಾದರೂ ಅಡ್ಡಿಪಡಿಸಿದರೆ ಪೊಲೀಸ್ ರಕ್ಷಣೆಯಲ್ಲಿ ಕೆಲಸ ಮಾಡಿ ಎಂದು ತಹಶೀಲ್ದಾರ್ ಸೂಚಿಸಿದರು.ಡೆಂಗೆ ಪ್ರಕರಣ

ಚಿತ್ರದುರ್ಗ ತಾಲ್ಲೂಕಿನಲ್ಲಿ 75 ಡೆಂಗೆ ಪ್ರಕರಣ ಪತ್ತೆಯಾಗಿವೆ. ಚಿತ್ರದುರ್ಗ ನಗರದಲ್ಲಿ 28 ಪ್ರಕರಣಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 47 ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಸಾವಿನ ಪ್ರಕರಣ ವರದಿಯಾಗಿಲ್ಲ. ಆದರೆ, ವ್ಯಾಪಕವಾಗಿ ಹಬ್ಬುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ವಿವರಿಸಿದರ.

ಫಾಗಿಂಗ್ ಯಂತ್ರಗಳ ಕೊರತೆ ಇದೆ. ಕೇವಲ ಎರಡು ಫಾಗಿಂಗ್ ಯಂತ್ರಗಳಿವೆ.ಇದರಿಂದ ಧೂಮೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ತಮಗೆ ವಾಹನದ ವ್ಯವಸ್ಥೆ ಇಲ್ಲದ ಪರಿಣಾಮ ಉಸ್ತುವಾರಿ ತೊಂದರೆ ಆಗುತ್ತಿಲ್ಲ. ಭರಮಸಾಗರದಲ್ಲಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಕೋಗುಂಡಿಯಲ್ಲಿ ಎಚ್1ಎನ್1 ಪತ್ತೆಯಾಗಿದೆ ಎಂದು ವಿವರಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಜತೆ ಚರ್ಚಿಸಿ ಸೂಕ್ತ ಸೌಲಭ್ಯಗಳನ್ನು ಆರೋಗ್ಯಾಧಿಕಾರಿಗೆ ಕಲ್ಪಿಸುವುದಾಗಿ ಶಾಸಕ ಎಸ್.ಕೆ. ಬಸವರಾಜನ್ ಭರವಸೆ ನೀಡಿದರು. ಉಪಾಧ್ಯಕ್ಷೆ ಪ್ರತಿಭಾ ರಮೇಶ್, ಅಧ್ಯಕ್ಷ ಆರ್. ಪರಮೇಶ್ವರ್, ಇಒ ರುದ್ರಮುನಿ ಹಾಜರಿದ್ದರು.ಮೇವಿನ ಕೊರತೆ: ಜಾನುವಾರುಗಳಿಗೆ ಕುತ್ತು

ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಮೇವಿನ ಕೊರತೆಯಾಗಲಿದೆ ಎಂದು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು ತಿಳಿಸಿದರು.ಸೋಮವಾರ ನಡೆದ ತಾಲ್ಲೂಕು ಕೆಡಿಪಿ ಸಭೆಯಲ್ಲಿ ವಿವರ ನೀಡಿದ ಅವರು, ಮುಖ್ಯವಾಗಿ ಚಿತ್ರದುರ್ಗ ಕಸಬಾ ಹೋಬಳಿ ಮತ್ತು ತುರುವನೂರು ಹೋಬಳಿಯಲ್ಲಿ ಮೇವಿನ ಕೊರತೆಯಾಗಲಿದೆ. ಈಗಾಗಲೇ ಮಾಡಿರುವ ಸಮೀಕ್ಷೆಯಂತೆ  ಚಿತ್ರದುರ್ಗ ಕಸಬಾ ಹೋಬಳಿಯಲ್ಲಿ 1,467 ಟನ್ ಹಾಗೂ ತುರುವನೂರು ಹೋಬಳಿಯಲ್ಲಿ 2,402 ಟನ್ ಮೇವಿನ ಕೊರತೆಯಾಗಲಿದೆ. ರಾಜ್ಯಾದ್ಯಂತ ಮಳೆಯ ಕೊರತೆ ಆಗಿರುವುದರಿಂದ ಎಲ್ಲೆಡೆ ಮೇವಿನ ಕೊರತೆಯಾಗಬಹುದು ಎಂದು ತಿಳಿಸಿದರು.ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸುವುದಾದರೆ ದೊಡ್ಡಘಟ್ಟ ಮತ್ತು ಸೀಬಾರದಲ್ಲಿ ಚಾಲನೆ ನೀಡಬಹುದು. ಸುಮಾರು 2ರಿಂದ 3 ಸಾವಿರ ಜಾನುವಾರುಗಳಿಗೆ ಆಶ್ರಯ ಕಲ್ಪಿಸಬಹುದು ಎಂದು ತಿಳಿಸಿದರು.

ಮೇವು ಬೆಳೆಸುವ ನಿಟ್ಟಿನಲ್ಲಿ ನೀರಾವರಿ ಸೌಲಭ್ಯ ಹೊಂದಿರುವ 11 ಸಾವಿರ ರೈತರ ಪೈಕಿ 3 ಸಾವಿರ ರೈತರಿಗೆ ಮೇವಿನ ಕಿಟ್ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಶಾಸಕರ ಬೆಂಬಲಿಗರು!

 ಸೋಮವಾರ ನಡೆದ ಚಿತ್ರದುರ್ಗ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಶಾಸಕ ಎಸ್.ಕೆ. ಬಸವರಾಜನ್ ಬೆಂಬಲಿಗರು ಮತ್ತು ಸಾರ್ವಜನಿಕರು ಸಹ ಪಾಲ್ಗೊಂಡಿದ್ದರು.ಸದಸ್ಯರಲ್ಲದವರು ಹೊರಗೆ ಕಳುಹಿಸಿ ಎಂದು ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಶಾಸಕರಿಗೆ ಕೋರಿದರು. ಆದರೆ, ಶಾಸಕರು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಸಮರ್ಥಿಸಿಕೊಂಡರು.ಅವರು ಸಮಸ್ಯೆಗಳನ್ನು ಹೇಳಲು ಆಗಮಿಸಿದ್ದಾರೆ. ವಿಧಾನಸೌಧದಲ್ಲಿ ಸಾರ್ವಜನಿಕರಿಗೆ ಗ್ಯಾಲರಿ ಇರುತ್ತದೆ ಅದೇ ರೀತಿಯಲ್ಲಿ ಇಲ್ಲಿ ಬಂದಿದ್ದಾರೆ ಎಂದು ವಾದ ಮಂಡಿಸಿದರು.ಶಾಸಕರಿಂದ ಸಾಧ್ಯವಿಲ್ಲ

ನಗರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಚರಂಡಿ ಅವ್ಯವಸ್ಥೆಯಿಂದ ಕೂಡಿದ್ದು, ಯಾವ ಶಾಸಕರಿಂದಲೂ ಸುಧಾರಣೆ ಮಾಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದಾಗ ಸಭೆಯಲ್ಲಿ ನಗುವಿನ ಅಲೆ ಉಂಟಾಯಿತು. ಈ ಚರಂಡಿಗೆ ಕಾಯಕಲ್ಪ ನೀಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 41 ಹುದ್ದೆಗಳು ಖಾಲಿ ಉಳಿದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.ಸಸಿ ವಿತರಣೆಯಲ್ಲಿ ಲೋಪ

ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿ ವಿತರಣೆ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಸಸಿಗಳನ್ನು ವಿತರಿಸಿಯೇ ಇಲ್ಲ. ವಿತರಿಸಿದ್ದರೆ ದಾಖಲೆಗಳನ್ನು ಹಾಜರುಪಡಿಸಿ. ಎಂದು ಅಧ್ಯಕ್ಷರು ಅರಣ್ಯಾಧಿಕಾರಿಗೆ ಸೂಚಿಸಿದರು.ಬಿತ್ತನೆ ಪ್ರಮಾಣ ಕಡಿಮೆ

ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ 53.9 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಕೇವಲ 3.1 ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನಲ್ಲಿ ಹತ್ತಿ ಮತ್ತು ಸೂರ್ಯಕಾಂತಿ ಬಿತ್ತನೆಯಾಗಿದ್ದು, ಮಳೆ ಇಲ್ಲದೆ ಬೆಳೆಗಳು ಬಾಡುತ್ತಿವೆ. ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.