ಶುಕ್ರವಾರ, ಮೇ 29, 2020
27 °C

470 ಕೆಜಿ ಏರಿದ ಅರ್ಜುನನೇ ಬಲಭೀಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

470 ಕೆಜಿ ಏರಿದ ಅರ್ಜುನನೇ ಬಲಭೀಮ!

ಮೈಸೂರು: ಹದಿನಾಲ್ಕನೇ ಬಾರಿ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿಗೆ ಕಳೆ ಕಟ್ಟಿದ ಬಲರಾಮ ಕಳೆದ 55 ದಿನಗಳಲ್ಲಿ ತನ್ನ ದೇಹದ ತೂಕವನ್ನು 275 ಕೆಜಿ ಹೆಚ್ಚಿಸಿಕೊಂಡರೆ, ನಾಯಕನನ್ನೇ ಮೀರಿಸಿದ ಅರ್ಜುನ 470 ಕೆಜಿ ತೂಕವನ್ನು ಗಳಿಸಿಕೊಂಡಿದ್ದಾನೆ.ಆಗಸ್ಟ್ 11ರಂದು ಅರಮನೆಗೆ ಆಗಮಿಸಿದ್ದ ಬಲರಾಮ ಬಳಗವನ್ನು 12ರಂದು ತೂಕ ಮಾಡಿದಾಗ ಅಜುರ್ನ ಅತಿ ಹೆಚ್ಚು ಅಂದರೆ 5.055ಕೆಜಿ ತೂಗಿದ್ದ. ಅದೇ 53 ವರ್ಷದ ಬಲರಾಮ 4610 ಕೆಜಿ ತೂಗಿದ್ದ. 55 ದಿನಗಳ ನಂತರ ಅಂದರೆ ಆಯುಧಪೂಜೆ (ಅಕ್ಟೋಬರ್ 5)ದಿನದಂದು ತೂಕ ಮಾಡಿದಾಗ ಬಲರಾಮ 4885 ಕೆಜಿ ಮತ್ತು ಅರ್ಜುನ 5525 ಕೆಜಿ ತೂಗಿ ತಮ್ಮ ಸಾಮರ್ಥ್ಯ ಮೆರೆದರು. ಅರ್ಜುನ ತನ್ನ ಬಲಶಾಲಿ ಪಟ್ಟವನ್ನು ಉಳಿಸಿಕೊಂಡ.ಅದೇ ಅಭಿಮನ್ಯು 240 ಕೆಜಿ ಹೆಚ್ಚುವರಿ ತೂಕವನ್ನು ಗಳಿಸಿದ್ದಾನೆ. 4,760 ಕೆಜಿ ಇದ್ದ ಅಭಿಮನ್ಯು ಈಗ ಬರೋಬ್ಬರಿ 5000 ಕೆಜಿಯಾಗಿ ಅರ್ಜುನನ ನಂತರದ  ಸ್ಥಾನ ಗಳಿಸಿದ್ದಾನೆ.  ಹೆಣ್ಣಾನೆ ಮೇರಿ 270 ಕೆಜಿ ತೂಕವನ್ನು ಏರಿಸಿಕೊಂಡು ತಾನೂ ಕಮ್ಮಿಯಲ್ಲ ಎಂಬುದನ್ನು ಸಾರಿದ್ದಾಳೆ. ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮೇರಿಯು 2980 ಕೆಜಿ ಇದ್ದಳು. ಗರ್ಭಿಣಿಯಾಗಿದ್ದ ಸರಳ ಶಿಬಿರಕ್ಕೆ ಆಗಲೇ ಮರಳಿದ್ದಾಳೆ. 14 ವರ್ಷದ ಆನೆ ಗಂಗೆ ಈ ಬಾರಿಯೂ ತೂಕದ ಯಂತ್ರದ ಮೇಲೆ ನಿಲ್ಲಲು ಸುತರಾಂ ಒಪ್ಪಲಿಲ್ಲ. ಪಟ್ಟದಾನೆಯಾಗಿದ್ದ ಗಜೇಂದ್ರನ ತೂಕ ಮಾಡಲು ಅವಕಾಶವಿರಲಿಲ್ಲ.750 ಕೆಜಿ ಚಿನ್ನದ ಅಂಬಾರಿ ಹೊತ್ತ ಬಲರಾಮ ಮತ್ತು ಸಂಗಡಿಗರು ಸುಮಾರು ಎರಡು ತಿಂಗಳ ಕಾಲ ಅರಮನೆಯ ಆತಿಥ್ಯವನ್ನು ಮನಪೂರ್ತಿ ಸವಿದಿರುವುದನ್ನು ಏರಿರುವ ದೇಹತೂಕ ತೋರಿಸುತ್ತಿದೆ.ವಿದಾಯ ಗೆಳೆಯರೇ: ಭವ್ಯ ಜಂಬೂ ಸವಾರಿಯ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ಮತ್ತೆ ಜಗತ್ತಿನ ತುಂಬ ಹಾರಿಸಿದ ಬಲರಾಮ ಬಳಗ ಭಾನುವಾರ (ಅ. 9) ಮತ್ತೆ ತಮ್ಮ ಶಿಬಿರಗಳಿಗೆ ಮರಳಲಿವೆ. ಆಗಸ್ಟ್ 11ರಂದು ಬಲರಾಮ, ಅರ್ಜುನ, ಗಜೇಂದ್ರ, ಸರಳ, ಮೇರಿ, ಗಂಗೆ, ಅಭಿಮನ್ಯು ಮೊದಲ ತಂಡದಲ್ಲಿ  ಮೈಸೂರು ಅರಮನೆಗೆ ಆಗಮಿಸಿದ್ದರು. ಒಂದು ತಿಂಗಳ ನಂತರ ಮತ್ತೊಂದು ತಂಡವು ಆಗಮಿಸಿತ್ತು.ಪ್ರತಿದಿನವೂ ಅರಮನೆಯಿಂದ ಬನ್ನಿಮಂಟಪದವರೆಗೆ ಈ ಗಜಪಡೆಯು ನಡೆಸುತ್ತಿದ್ದ ತಾಲೀಮು ನಗರದ ಜನರನ್ನು ಬಹುವಾಗಿ ಆಕರ್ಷಿಸಿತ್ತು.ಗುರುವಾರ ವಿಜಯದಶಮಿಯ ಜಂಬೂ ಸವಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಬಲರಾಮ ಬಳಗವು ಮರಳಿ ತಮ್ಮ ಶಿಬಿರಕ್ಕೆ ಸಾಗಲಿವೆ. ಭಾನುವಾರ ಬೆಳಿಗ್ಗೆ 8ರ ಸುಮಾರಿಗೆ ಪೂಜೆ ಸಲ್ಲಿಸಿ ಗಜಪಡೆ ಮತ್ತು ಮಾವುತರ ಕುಟುಂಬಗಳನ್ನು ಬೀಳ್ಕೊಡಲಾಗುತ್ತದೆ.ರಸ್ತೆಗಳು ಭಣಭಣ: ಗುರುವಾರ ಇಡೀ ದಿನ ಜಂಬೂ ಸವಾರಿಯ ವೀಕ್ಷಣೆಗೆ ಜನರಿಂದ ಗಿಜಿಗುಟ್ಟಿದ ಮೈಸೂರಿನ ರಸ್ತೆಗಳು ಶುಕ್ರವಾರ ದೀರ್ಘ ನಿದ್ರೆಗೆ ಜಾರಿದಂತಾಗಿದ್ದವು. ನವರಾತ್ರಿಯ ಸಂಭ್ರಮ ಆರಂಭವಾದಾಗಿನಿಂದಲೂ ಗಡಿಬಿಡಿಯಿಂದ ಕೂಡಿದ್ದ ಊರು ವಿಜಯದಶಮಿಯ ಮಾರನೇ ದಿನ ತಟಸ್ಥವಾದಂತೆ ಕಂಡುಬಂದಿತ್ತು.ಶಾಲೆಗೆ ರಜೆ ಇರುವುದರಿಂದ ಮೈಸೂರು ನೋಡಲು ಉಳಿದುಕೊಂಡಿರುವ ಒಂದಷ್ಟು ಪ್ರವಾಸಿಗರ ದಂಡು ಅರಮನೆ, ಮೃಗಾಲಯ, ಕೆಆರ್‌ಎಸ್‌ಗಳಲ್ಲಿ ಕಂಡುಬಂದಿದ್ದು ಬಿಟ್ಟರೆ ಊರು ಬಹುತೇಕ ಶಾಂತವಾಗಿತ್ತು.ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸಿ ಸುಸ್ತಾಗಿರುವ ಜನರೂ ಮನೆ ಬಿಟ್ಟು ಹೊರಬಂದಿದ್ದೇ ಕಡಿಮೆ. ಮಾರುಕಟ್ಟೆ ಪ್ರದೇಶಗಳೂ ಬಹುತೇಕ ಖಾಲಿ ಖಾಲಿಯಾಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.